ಸಿಂದಗಿ: ಓದುಗರ ಅಪೇಕ್ಷೆ ಅಭಿರುಚಿಗೆ ತಕ್ಕಂತೆ ವಿತರಕರು ಅವರ ಮನೆ ಬಾಗಿಲಿಗೆ ಸೂರ್ಯೋದಯಕ್ಕೂ ಮುನ್ನ ಪತ್ರಿಕೆ ತಲುಪಿಸುವ ಕಾರ್ಯ ಶ್ಲಾಘನೀಯವಾದುದು ಎಂದು ಯುವ ಸಾಹಿತಿ ಅಶೋಕ ಬಿರಾದಾರ ಹೇಳಿದರು.
ಪಟ್ಟಣದ ಶಾಂತವೀರ ನಗರದ ಮಂದಾರ ಶಿಕ್ಷಣ ಸಂಸ್ಥೆಯಲ್ಲಿ ಪತ್ರಿಕಾ ವಿತರಕರ ದಿನದಂದು ಪತ್ರಿಕಾ ವಿತರಕ ಸೇನಾನಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಜಗತ್ತಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳುವಂತೆ ಮಾಡುವಲ್ಲಿ ಇವರ ಕಾರ್ಯ ಗಮನಾರ್ಹವಾಗಿದೆ. ಇವರು ಮಾಡುತ್ತಿರುವುದು ಕೆಲಸವಲ್ಲ ಸೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಸಿದ್ಧಲಿಂಗ ಚೌಧರಿ ಮಳೆ ಗಾಳಿ ಚಳಿ ಎನ್ನದೇ ವರ್ಷಪೂರ್ತಿ ದುಡಿಯುವ ಪತ್ರಿಕಾ ಸೇನಾನಿಗಳ ಕಾರ್ಯ ಶ್ಲಾಘನೀಯವಾದದ್ದು ಪತ್ರಿಕೆಗಳು ಹುಟ್ಟಿದಾಗಿನಿಂದ ವಿತರಕರ ಕಾರ್ಯವು ಆರಂಭಗೊಂಡಿದೆ. ಅಂದಿನಿಂದ ಇಂದಿನವರೆಗೆ ಅದೆಂಥದ್ದೇ ಕಷ್ಟ ಬಂದರೂ, ಮನೆಯಲ್ಲಿ ಮದುವೆ ಮುಂಜಿ ಕಾರ್ಯಕ್ರಮವಿರಲಿ, ಸಂಬಂಧಿಕರ ಕಾರ್ಯಕ್ರಮವಿರಲಿ ವಿತರಕರಿಗೆ ಹೋಗುವುದು ಆಗುವುದಿಲ್ಲ. ಪತ್ರಿಕೆಗಳು ಮತ್ತು ಓದುಗರ ನಡುವಿನ ಸೇತುವೆಯಾಗಿರುವ ಇವರು ಹಲವು ದಶಕಗಳಿಂದಲೂ ಈ ಸೇವೆ ಉಳಿಸಿಕೊಂಡು ಬಂದಿದ್ದಾರೆ. ಆರ್ಥಿಕವಾಗಿ ಲಾಭ ನಷ್ಟ ಲೆಕ್ಕ ಹಾಕುವುದಿಲ್ಲ. ಓದುಗರಾದ ನಾವೆಲ್ಲ ಸೂರ್ಯೋದಯ ಆಗುತ್ತಿದ್ದಂತೆ ಬಾಗಿಲಿಗೆ ಪತ್ರಿಕೆಗಾಗಿ ಕಾಯುತ್ತೇವೆ. ವೈಯಕ್ತಿಕ ಜಂಜಾಟಗಳನ್ನು ಬದಿಗಿಟ್ಟು ಮನೆ ಮನೆಗಳಿಗೆ ಸುದ್ದಿ ಮುಟ್ಟಿಸುವ ಎಲ್ಲ ಪತ್ರಿಕಾ ವಿತರಕರಿಗೆ ಒಂದು ಸೆಲ್ಯೂಟ್ ಹೇಳಲೇಬೇಕು ಎಂದರು.
ಈ ಸಂದರ್ಭದಲ್ಲಿ ವಿತರಕರಾದ ನಿಂಗಣ್ಣ ಯಾಳಗಿ, ಲಿಂಗಣ್ಣ ಜಕ್ಕನಗೌಡ, ಗಂಗಾಧರ ಮಡಿಕೇಶ್ವರ, ಶಂಕರ ಮೋದಿ, ಶಿವಲಿಂಗ ಹೂಗಾರ, ಮುತ್ತು ಪೂಜಾರಿ ಮತ್ತು ಜಗದೇವಪ್ಪ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಕ ಸಾಹಿತಿ ಬಸವರಾಜ ಅಗಸರ ಸ್ವಾಗತಿಸಿ ನಿರೂಪಿಸಿದರು. ಉಪನ್ಯಾಸಕ ಮಹಾಂತೇಶ ನೂಲನವರ ವಂದಿಸಿದರು ಸಭಿಯಾ ಮರ್ತುರ, ಸೋಮಶೇಖರ, ಅಭಿಷೇಕ ಚೌಧರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.