spot_img
spot_img

ಮತ್ತೆ ಬಂದಿದೆ ಹೋಳಿ ಹಬ್ಬ

Must Read

spot_img
- Advertisement -

ಪಾಲ್ಗುಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಹೋಳಿ ಹಬ್ಬ ಆಚರಿಸುವುದು ವಾಡಿಕೆ.ಪಾಲ್ಗುಣ ಹುಣ್ಣಿಮೆಯ ಸಂದರ್ಭದಲ್ಲಿ ಗಿಡಮರಗಳು ಚಿಗುರಿನಿಂದ ಕಂಗೊಳಿಸುತ್ತಿರುತ್ತವೆ. ಇದು ವಸಂತನ ಆಗಮನದ ಸೂಚಕವಾಗಿದೆ

ಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ. ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ.ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ ಹೋಳಿ.ಕಾಮವು ಕ್ಷಣಿಕ ಪ್ರೇಮವು ಶಾಶ್ವತ,ಕಾಮವು ದೈಹಿಕ,ಪ್ರೇಮವು ಮಾನಸಿಕ..ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿಹಬ್ಬ.

ಇದನ್ನು ವಸಂತೋತ್ಸವ,ರಂಗಪಂಚಮಿ,ಫಗ್ವಾ,ಡೋಲ್ ಯಾತ್ರಾ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ. ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ. ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಅಹಮದ್‌ನಗರ, ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳು ದೊರೆತಿವೆ. ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.

- Advertisement -

ಹೋಳಿ ಹಬ್ಬ ಕುರಿತಂತೆ ಎರಡು ದೃಷ್ಟಾಂತಗಳು ಬಳಕೆಯಲ್ಲಿವೆ. ಶಿವರಾತ್ರಿ ಅಮವಾಸೆಯಿಂದ ಹೋಳಿ ಹುಣ್ಣಿಮೆಗೆ ಹದಿನೈದರಿಂದ ಇಪ್ಪತ್ತು ದಿನಗಳ ಅಂತರ. ಪರಮಾತ್ಮನು ತುಂಗಭದ್ರಾ ನದಿಯ ದಡದಲ್ಲಿ ಇರುವ ಹೇಮಗಿರಿ ಪರ್ವತದ ಶಿಖರದಲ್ಲಿ ತಪಸ್ಸು ಮಾಡುವಾಗ ಅವನ ತಪಸ್ಸನ್ನು ಭಂಗ ಮಾಡಿ ಮದುವೆಯಾಗಲು ಪಾರ್ವತಿಯು ಕಾಮದೇವನಲ್ಲಿ ಮೊರೆ ಹೋಗುತ್ತಾಳೆ.

ಆಗ ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಸ್ಥಳಕ್ಕೆ ಬಂದು ತನ್ನ ಬಾಣಗಳಿಂದ ತಫೋಭಂಗಗೊಳಿಸುತ್ತಾನೆ ಇದರಿಂದ ಕೋಪೆಗೊಂಡ ಶಿವನು ತನ್ನ ಉರಿಗಣ್ಣಿನಿಂದ ಕಾಮನನ್ನು ಸುಟ್ಟು ಭಸ್ಮ ಮಾಡುತ್ತಾನೆ. ಗಂಡನನ್ನು ಕಳೆದುಕೊಂಡ ರತಿಯನ್ನು ಸಮಾಧಾನಪಡಿಸುವುದು ಪಾರ್ವತಿಗೆ ಕಷ್ಟವಾಗುತ್ತದೆ. ಆಗ ಪಾರ್ವತಿಯು ಕೂಡ ಘೋರ ತಪಸ್ಸನ್ನಾಚರಿಸಿ ಪರಶಿವನನ್ನು ಒಲಿಸಿಕೊಂಡಳಲ್ಲದೇ ಕಾಮನಿಗೆ ಮರುಜನ್ಮ ಕೊಡಿಸುವಳು.ತನ್ನಿಮಿತ್ತ ಹೋಳಿ ಆಚರಣೆ ಬಂದಿದೆ ಎಂಬುದು ಪ್ರತೀತಿ.

- Advertisement -

ಹಿರಣ್ಯಕಶ್ಯಪನ ತಂಗಿ ಹೋಲಿಕಾ ತನಗೆ ಬೆಂಕಿಯಿಂದ ಮರಣ ಬರಬಾರದೆಂದು ವರ ಪಡೆದಿದ್ದಳು.ಇದನ್ನು ಹಿರಣ್ಯಕಶಿಪು ತನ್ನ ಮಗ ಪ್ರಹ್ಲಾದನನ್ನು ಪರಿವರ್ತಿಸಲು ಎಲ್ಲ ಪ್ರಯತ್ನಗಳನ್ನು ಮಾಡಿ ಸೋತಾಗ ತನ್ನ ತಂಗಿಯ ತೊಡೆಯ ಮೇಲೆ ಕುಳ್ಳಿರಿಸಿ ಸುತ್ತಲೂ ಅಗ್ನಿಯನ್ನು ಉರಿಸಲು ಆ ಅಗ್ನಿಯಲ್ಲಿ ಹೋಲಿಕಾ ತನ್ನ ರಾಕ್ಷಸೀ ಪ್ರವೃತ್ತಿಯಿಂದ ಆಹುತಿಯಾಗುತ್ತಾಳೆ. ತನ್ನ ಭಕ್ತಿಯಿಂದ ಪ್ರಹ್ಲಾದ ಭಗವಂತನಿಂದ ರಕ್ಷಿಸಲ್ಪಡುವನು. ಅವಳ ನೆನಪಿಗೆ ಹೋಲಿ ಹಬ್ಬ ಆಚರಣೆ ಬಂತೆಂದು ಹೇಳುವರು.

ಕಾಮನ ಪ್ರತಿಷ್ಟಾಪನೆ ಗ್ರಾಮೀಣ ಪ್ರದೇಶದಲ್ಲಿ ಬಹಳ ವಿಜೃಂಭಣೆಯಿಂದ ಜರುಗುತ್ತದೆ. ಊರಿನ ಪ್ರತಿ ಓಣಿ(ಗಲ್ಲಿಗಳಲ್ಲಿ)ಗಳಲ್ಲಿ ಒಂದೊಂದು ನಿಗದಿತ ಸ್ಥಳದಲ್ಲಿ ಕಾಮನ ಕಟ್ಟೆಯೆಂಬ ಸ್ಥಳದಲ್ಲಿ ರತಿಮನ್ಮಥರ ಮೂರ್ತಿಗಳನ್ನು ಪ್ರತಿಷ್ಟಾಪನೆ ಮಾಡುವರು. ಇದು ದೈವದ ಕಾಮಣ್ಣ ಇದು ಸರ್ಕಾರಿ ಕಾಮಣ್ಣ ಎಂಬಂತೆ ಆಯಾ ಗ್ರಾಮದ ಗಲ್ಲಿ ಗಲ್ಲಿ ಹೆಸರಿನಲ್ಲಿ ಒಂದೊಂದು ಹೆಸರಿನಿಂದ ಕಾಮನನ್ನು ಪ್ರತಿಷ್ಟಾಪಿಸುತ್ತಾರೆ. ಈ ಸಂದರ್ಭ ವಯಸ್ಸಿನ ಬೇಧವಿಲ್ಲದೇ ಹಲಗೆ ಬಾರಿಸುತ್ತ

ಕಾಮಣ್ಣನ ಕಟ್ಟುವ ಕರಿಬಿದರ ಸವರುತ್ತ,
ಕಾಮಣ್ಣಗ ಬಾಸಿಂಗ ಕಟ್ಟುವ ನಮ್ಮ ಕಾಮ
ಇನ್ನೆರಡ ದಿವಸ ಇರಲಿಲ್ಲೋ.”

ಎಂದು “:ಲಬೋ ಲಬೋ ಲಬೋ” ಎಂದು ಹೊಯ್ಯುಕೊಳ್ಳುವ ಈ ಆಚರಣೆ ನಿಜಕ್ಕೂ ವಿಶಿಷ್ಟವಾದುದು.ಇಲ್ಲಿ ಅಶ್ಲೀಲತೆಯಂಥಹ ಪದಗಳು ಬಳಕೆಯಾದರೂ ಕೂಡ ಕಾಮ ಮತ್ತು ರತಿಯರ ಸ್ವಭಾವ ಗುಣಗಳನ್ನು ಹೊಗಳುತ್ತ ಗಂಡು-ಹೆಣ್ಣು ವೇಷ ಧರಿಸಿ ಸವಾಲ್-ಜವಾಬ್ ರೀತಿ ಪದಗಳನ್ನು ಹೇಳುತ್ತ ಖುಷಿಯಿಂದ ಗಂಡಸರು ಆಚರಿಸುವ ಈ ಹೋಳಿ ಕಾಮನನ್ನು ಕೂಡ್ರಿಸಿ ಮನೆಯಲ್ಲಿ ಸಿಹಿ ಅಡುಗೆ ಮಾಡಿ ನೈವೇದ್ಯೆ ಮಾಡಿ ಮರುದಿನ ಕಟ್ಟಿಗೆಯ ಮೇಲೆ ಕಾಮನನ್ನು ಕುಳ್ಳಿರಿಸಿ ದಹನ ಮಾಡುವ ಮೂಲಕ ಹಬ್ಬ ಆಚರಣೆ ವಿಶಿಷ್ಟವಾದುದು.

ರತಿಯ ಅಳುವ ಕಂಡು ಕಳವಳವೋ ಮನದಾಗ
ಅಳಬ್ಯಾಡೋ ರತಿಯೇ ನನ್ನ ಸೊಸೆಯೇ ನಿನ ಕಾಮ
ನಿನ್ನ ಮನದಾಗ ಇರತಾನೋ

ಬೆಳಗಾಗುವಷ್ಟರಲ್ಲಿ ಒಂದು ಕಂಬವನ್ನುನೆಟ್ಟು ಆ ಕಂಬದ ಮಧ್ಯಕ್ಕೆ ಒಂದು ಕರಿ ಬಾಸಿಂಗವನ್ನು ಕಟ್ಟುತ್ತಾರೆ. ಊರಲ್ಲೆಲ್ಲ ಕದ್ದು ತಂದಿರುವ ಕಟ್ಟಿಗೆಯನ್ನು ಒಟ್ಟುತ್ತಾರೆ. ಅಲ್ಲಿ ಕಾಮನನ್ನು ಪೂಜಿಸುತ್ತಾರೆ. ಮನೆಯಲ್ಲಿ ಹೋಳಿಗೆ ಮಾಡಿ ಕಾಮನಿಗೆ ಪೂಜಿಸಿ ಎಡೆಯನ್ನು (ನೈವೇದ್ಯ) ಹಿಡಿಯುತ್ತಾರೆ. ಹೀಗೆ ಕಾಮ ಜನಮನದಿಂದ ಪೂಜೆಗೊಂಡು ಅಗ್ನಿ ಸ್ಪರ್ಶಕ್ಕೊಳಗೊಳ್ಳುವುದು ಸಂಪ್ರದಾಯ ತಲಾತಲಾಂತರದಿಂದ ಬೆಳೆದು ಬಂದಿದೆ. .ಹಿಂದಿನ ದಿನಗಳಲ್ಲಿ ಅರಿಸಿನ ಬೇವು.ವಿವಿಧ ಹೂವುಗಳ ರಸ. ಮೆಹೆಂದಿ ಸೊಪ್ಪು. ಮುಂತಾದವುಗಳನ್ನು ಉಪಯೋಗಿಸಿ ಬಣ್ಣವನ್ನು ತಯಾರಿಸಲಾಗುತ್ತಿತ್ತು, ಇದು ಶರೀರದ ಮೇಲೆ ಯಾವುದೇ ದುಷ್ಪರಿಣಾಮವನ್ನುಂಟು ಮಾಡುತ್ತಿರಲಿಲ್ಲ. ಇಂದು ರಾಸಾಯನಿಕವನ್ನು ಬಳಸಿ ಬಣ್ಣ ತಯಾರಿಸಲಾಗುತ್ತಿರುವುದರಿಂದ ಇದು ಶರೀರದ ಮೇಲೆ ದುಷ್ಪರಿಣಾಮವನ್ನುಂಟು ಮಾಡುವ ಕಾರಣ ಎಚ್ಚರಿಕೆ ಅಗತ್ಯ ಎಂಬ ಸಂದೇಶ ಎಲ್ಲೆಡೆ ಕಾಣುತ್ತೇವೆ.

ಆದರೂ ಕೂಡ ಇತ್ತೀಚಿನ ವರ್ಷಗಳಲ್ಲಿ ಸಾವಯವ ಬಣ್ಣ ತಯಾರಿಕೆ ಸಾಗಿದೆ. ಇದು ಮಾರುಕಟ್ಟೆಯ ರಾಸಾಯನಿಕ ಬಣ್ಣಕ್ಕಿಂತ ಸ್ವಲ್ಪ ದುಬಾರಿ ಎನಿಸಿದರೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದು. ಇಂತಹ ಬಣ್ಣಗಳಿಗೆ ಬೇಡಿಕೆ ಹೆಚ್ಚುವ ದಿಸೆಯಲ್ಲಿ ಜನರು ಸಾವಯವ ಬಣ್ಣವನ್ನು ಖರೀದಿಸಿದರೆ ತಯಾರಕರಿಗೂ ಕೂಡ ಅನುಕೂಲವಾಗುವುದು.

ಇಂಥ ಸಂದರ್ಭ ಕಾಮನನ್ನು ಸುಟ್ಟ ಬೆಂಕಿಯ ಕೆಂಡವನ್ನು ಕೆಲವು ಜನ ತಮ್ಮ ಮನೆಗೆ ತರುತ್ತಾರೆ.

ಕಾರಣವಿಷ್ಟೇ ಆ ಕೆಂಡದಿಂದ ಮನೆಯ ಒಲೆಯನ್ನು ಹೊತ್ತಿಸಿದರೆ ವರ್ಷದುದ್ದಕ್ಕೂ ಅವರ ಮನೆ ಅಡುಗೆ ಹುಲುಸಾಗುತ್ತದೆ ಎಂಬ ನಂಬಿಕೆ.ಅಷ್ಟೇ ಅಲ್ಲ ಆ ದಿನ ಹೋಳಿಗೆ ಮಾಡುತ್ತಾರೆ ಅದನ್ನು ಹೆಂಗಸರು ಹೇಳುವ ರೀತಿ ಹೀಗಿದೆ “ ಹೊಯ್ಕೊಂಡ ಬಾಯಿಗೆ ಹೋಳಿಗೆ-ತುಪ್ಪ” ಎಂದು ಚೇಷ್ಟೆ ಮಾಡಿ ಉಣಬಡಿಸುವರು.

ಇನ್ನೂ ಕೆಲವರು ಈ ಕಾಮನ ಬೆಂಕಿಯಲ್ಲಿ ಕಡಲೆ ಹುರಿದುಕೊಳ್ಳುವರು. ಈ ಕಡಲೆ ತಿಂದರೆ ಬಾಯಿಯಲ್ಲಿನ ಹಲ್ಲುಗಳು ಗಟ್ಟಿಯಾಗುತ್ತವೆ ಎಂಬ ನಂಬಿಕೆ. ಕಾಮನ ಬೂದಿಯನ್ನು ಮನೆಗೆ ಒಯ್ದು ಆ ವರ್ಷದ ಮೊದಲ ಮಳೆಯ ನಂತರ ಬಿತ್ತುವ ಬೀಜದಲ್ಲಿ ಆ ಬೂದಿಯನ್ನು ಬೆರೆಸಿ ಬಿತ್ತನೆ ಮಾಡಿದರೆ ಬೆಳೆ ಚನ್ನಾಗಿ ಬರುತ್ತದೆ ಎಂಬ ಪ್ರತೀತಿ ಇದೆ.

ಕಾಮದಹನ ಸಂದರ್ಭ ತೆಂಗಿನ ಕಾಯಿಯನ್ನು ಕಾಮನ ತಲೆಯನ್ನು ಗುರಿಯಾಗಿಸಿಕೊಂಡು ಎಸೆಯುವರು. ಆಗ ಅವನ ರುಂಡವು ಯಾವ ದಿಕ್ಕಿನತ್ತ ಬೀಳುತ್ತದೆಯೋ ಆ ದಿಕ್ಕಿನಲ್ಲಿ ಮಳೆ-ಬೆಳೆ ಬಹಳ ಆಗುತ್ತದೆ ಎನ್ನುವುದು ವಾಡಿಕೆ.ಕಾಮ ಸತ್ತ ಐದು ದಿನಕ್ಕೆ ಮಳೆಯಾಗುತ್ತದೆ. ಅದು ಕಾಮಣ್ಣನ ಬೂದಿ ತೋಯಿಸುತ್ತದೆ.ಅದು ಕಾಮನ ಕಣ್ಣೀರು ಎಂಬುದು ಗ್ರಾಮೀಣ ಜನರ ನಂಬಿಕೆ.


ವೈ.ಬಿ.ಕಡಕೋಳ(ಶಿಕ್ಷಕರು)
ಮಾರುತಿ ಬಡಾವಣೆ, ಸಿಂದೋಗಿ ಕ್ರಾಸ್.

- Advertisement -
- Advertisement -

Latest News

ಕವಿರತ್ನ ಕಾಳಿದಾಸ ಪ್ರಶಸ್ತಿ ಪುರಸ್ಕೃತ ಯಲ್ಲಾಲಿಂಗ ವಾಳದಗೆ ಸತ್ಕಾರ

ಮೂಡಲಗಿ: ತಾಲೂಕಿನ ಶಿವಾಪುರ(ಹ) ಗ್ರಾಮದ ಯುವ ಮುಖಂಡ ಮತ್ತು ಸಮಾಜ ಸೇವಕ ಯಲ್ಲಾಲಿಂಗ ವಾಳದ ಗೆ ಕವಿರತ್ನ ಕಾಳಿದಾಸ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ರಾಮದುರ್ಗ ತಾಲೂಕಿನ ಸುರೇಬಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group