ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದ ಆರಾಧ್ಯ ದೈವ ಶ್ರೀ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರದ ರಜತಮಹೋತ್ಸವದ ಹಿನ್ನೆಲೆಯಲ್ಲಿ ರವಿವಾರ ಸಾಯಂಕಾಲ ಶ್ರೀ ಹುಚ್ಚೇಶ್ವರ ಸ್ಬಾಮೀಜಿ ಅವರ ಅಡ್ಡಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಶ್ರೀಮಠದಲ್ಲಿ ಬೆಳಿಗ್ಗೆ ವಿವಿಧ ಪೂಜೆ, ಧಾರ್ಮಿಕ ಕಾರ್ಯಗಳು ನೆರವೇರಿದವು. ಸಾಯಂಕಾಲ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾನಪದ ಕಲಾಮೇಳಗಳಾದ ಚಂಡೆವಾದ್ಯ, ಡೊಳ್ಳು ಕುಣಿತ, ಕರಡಿ ಮಜಲು ವಾದ್ಯ ಮೇಳಗಳೊಂದಿಗೆ ಪೂಜ್ಯರ ಪಲ್ಲಕ್ಕಿ ಮೆರವಣಿಗೆ ಸಂಭ್ರಮದಿoದ ನಡೆಯಿತು.
ಶ್ರೀಮಠದಿಂದ ಆರಂಭಗೊಂಡ ಪಲ್ಲಕ್ಕಿ ಮೆರವಣಿಗೆಯಲ್ಲಿ ಪಟ್ಟಣದ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ಕುಂಭ, ಕಳಸಾರತಿಯೊಂದಿಗೆ ಪಾಲ್ಗೊಂಡಿದ್ದರು. ಮೆರವಣಿಗೆಯು ೨ಕಿ.ಮೀ ಉದ್ದ ಹರಡಿಕೊಂಡಿತ್ತು. ಬಸ್‌ನಿಲ್ದಾಣ, ಅಗಸಿಬಾಗಲು, ಚೌಡೇಶ್ವರ ದೇವಸ್ಥಾನ, ಪಪಂ ಕಾರ್ಯಾಲಯ, ಜುಮ್ಮಾಮಸೀದಿ,
ಗಾಂಧಿಚೌರಕ, ಕನಕೇರಿಭಾವಿ, ದುರ್ಗಿಪೇಟ ಮೂಲಕ ಶ್ರೀಮಠಕ್ಕೆ ತಲುಪಿ ಮೆರವಣಿಗೆ ಮುಕ್ತಾಯಗೊಂಡಿತು.
ಮೆರವಣಿಗೆಯ ಮಾರ್ಗದುದ್ದಕ್ಕೂ ರಸ್ತೆಯನ್ನು ರಂಗೋಲಿಗಳಿಂದ ಅಲಂಕಾರ ಮಾಡಲಾಗಿತ್ತು. ಜುಮ್ಮಾಮಸೀದಿ ಬಳಿ ಶ್ರೀಗಳಿಗೆ ಹೂವು ಸಮರ್ಪಿಸಿದರು. ಗಾಂಧಿಚೌಕ್ ಬಳಿ ಮಹಾತ್ಮಾಗಾಂಧಿ ತರುಣ ಸಂಘದವರು ಪಾನಕ ನೀಡಿದರು.
ಮೆರವಣಿಗೆ ಚಾಲನೆಯ ಸಂದರ್ಭದಲ್ಲಿ ಪಟ್ಟಾಧಿಕಾರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮುರಗೇಶ ಕಡ್ಲಿಮಟ್ಟಿ, ಪಪಂ ಅಧ್ಯಕ್ಷ ರಮೇಶ ಜಮಖಂಡಿ, ಹಿರಿಯರಾದ ಶಂಕರಲಿಂಗಪ್ಪ ಮಂಕಣಿ, ಯಲ್ಲಪ್ಪ ಮಜ್ಜಗಿ, ಹುಚ್ಚಪ್ಪ ಸಿಂಹಾಸನ, ದೇವಿಪ್ರದಾದ ನಿಂಬಲಗುಂದಿ, ಯಲ್ಲಪ್ಪ ವಡ್ಡರ, ಬಸವರಾಜ ಕುಂಬಳಾವತಿ, ಸಂಗಣ್ಣ ಮನ್ನಿಕೇರಿ, ನಾಗೇಶ ಹುಲ್ಲೂರ, ಚಂದು ಕುರಿ, ಗುರು ಪಾಟೀಲ, ಮಂಜುನಾಥ ಭಜಂತ್ರಿ, ನಭಿಸಾಬ ತಹಶೀಲ್ದಾರ, ಬಸವರಾಜ ದಂಡಾವತಿ, ಹುಚ್ಚಪ್ಪ ಸಿರಗುಂಪಿ, ಈರಣ್ಣ ಬೆಲ್ಲದ, ಬಸವಂತಪ್ಪ ಬೆಲ್ಲದ ಸೇರಿದಂತೆ ಶ್ರೀಮಠದ ಸಮಿತಿಯವರು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಕಡೆಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಹಾಗೂ ಗ್ರಾಮಸ್ಥರು ಉತ್ಸವದಲ್ಲಿ ಭಾಗಿಯಾಗಿದ್ದರು.