ಮಾಧ್ಯಮಗಳು ದೇಶವನ್ನು ಉಳಿಸಲೂಬಹುದು. ಆಳಿ ಅಳಿಸಲೂಬಹುದು. ಆತ್ಮನಿರ್ಭರ ಭಾರತ ಆತ್ಮ ದುರ್ಬಲ ಆಗಿರುವುದಕ್ಕೆ ಕಾರಣವೆ ಮಾಧ್ಯಮ, ಮಧ್ಯವರ್ತಿಗಳ ವ್ಯವಹಾರ ಜ್ಞಾನ. ಜೀವನದ ಮೂರನೆಯ ಭಾಗವಾದ ವ್ಯವಹಾರ ರಾಜಕೀಯ ಕ್ಷೇತ್ರ ಹಾಗು ಧಾರ್ಮಿಕ ಕ್ಷೇತ್ರ ಆವರಿಸಿಕೊಂಡು ಹಣಕ್ಕಾಗಿ ದೇಶವನ್ನೇ ಸಾಲಕ್ಕೆ ತಳ್ಳಿ ವಿದೇಶದವರ ಹಿಂದೆ ನಡೆದಿರೋದನ್ನು ಸಾಮಾನ್ಯಜ್ಞಾನದಿಂದ ತಿಳಿಯಬಹುದಷ್ಟೆ.
ಪ್ರಜಾಪ್ರಭುತ್ವದ ಪ್ರಜೆಗಳಿಗೆ ಪ್ರಜಾಧರ್ಮವನ್ನು ತಿಳಿಸದ ಶಿಕ್ಷಣ ವಿದೇಶಿಗಳ ಕೈಗೊಂಬೆಯಾಗಿರೋದು ಭಾರತೀಯರಿಗೆ ನುಂಗಲಾರದ ತುತ್ತಾಗುತ್ತಿದೆ. ಶಿಕ್ಷಣವೇ ಮಾನವನ ಜೀವ.ಆ ಜೀವವೆ ಪರಕೀಯರ ವಶದಲ್ಲಿದ್ದರೆ ಸ್ವಾತಂತ್ರ್ಯ ಯಾರಿಗೆ? ನಿಜ, ಜೀವನದಲ್ಲಿ ವ್ಯವಹಾರವಿರಬೇಕು.
ಆದರೆ ಅದರಿಂದ ನಮ್ಮ ಆತ್ಮಹತ್ಯೆ ಜೀವಹತ್ಯೆ ಆದರೆ ಯಾವ ಉಪಯೋಗವಿಲ್ಲ. ಮಾಧ್ಯಮಗಳು ಪ್ರಸಾರ ಮಾಡೋ ವಿಷಯಗಳಲ್ಲಿಯೇ ವಿಷ ತುಂಬಿದ್ದರೆ,ಭ್ರಷ್ಟಾಚಾರ ತುಂಬಿದ್ದರೆ ನಕಾರಾತ್ಮಕ ಶಕ್ತಿಯಿದ್ದರೆ ಅದು ಮನೆ ಮನೆಯೊಳಗಿರುವ ಮಕ್ಕಳು ಮಹಿಳೆಯರವರೆಗೆ ತಲುಪಿಸಿಕೊಂಡು ಹಣ,ಹೆಸರು, ವಾದ ವಿವಾದಗಳಾಗುತ್ತದೆ.
ಆದರೆ ನಿಜವಾದ ಸಾತ್ವಿಕ ಸತ್ಯನಾಶವಾದಾಗ ದೈವತ್ವ,ದೈವಶಕ್ತಿ ಎಲ್ಲಿರುತ್ತದೆ? ಪ್ರತಿಯೊಂದುಕಥೆ,ಪುರಾಣಗಳಾಗಲಿ, ರಾಜಕೀಯ ವಿಶ್ಲೇಷಣೆ ಗಳಾಗಲಿ ಪ್ರಜಾಪ್ರಭುತ್ವದ ಪರವಿರಬೇಕಿತ್ತು. ಈಗಿದು ರಾಜಪ್ರಭುತ್ವದ ಪರವಾಗುತ್ತಿದೆ. ಅಂದರೆ ಯಾರು ಆಳುತ್ತಿರುವರೋ ಅವರ ಮಾತೇ ವೇದವಾಕ್ಯ.
ವಾಸ್ತವತೆಯ ಅರಿವಿಲ್ಲದೆ ಜನಸಾಮಾನ್ಯರ ಸಾಮಾನ್ಯ ಜ್ಞಾನವಿಲ್ಲದೆ ಹೊರಗಿನಿಂದ ಓದಿಕೊಂಡು, ನೋಡಿಕೊಂಡು ತಮ್ಮದೇ ಆದ ವಿಚಾರವನ್ನು ಜನರಿಗೆ ತಲುಪಿಸುವಾಗ ಮೂಲ ಸತ್ಯ,ಧರ್ಮ ಹಿಂದುಳಿಯುತ್ತದೆ.ಯಾರು ಧರ್ಮವನ್ನು ರಕ್ಷಿಸುವರೋ ಅವರನ್ನು ಧರ್ಮ ರಕ್ಷಿಸುತ್ತದೆ.ಎಂದರೆ ಧರ್ಮ ಯಾವುದು? ಎಲ್ಲಿದೆ?
“ಮಾನವಜನ್ಮ ದೊಡ್ಡದು ಹಾಳುಮಾಡದಿರಿ ಹುಚ್ಚಪ್ಪಗಳಿರಾ” ದಾಸರ ಈ ಗೀತೆಗೆ ಪಾಶ್ಚಿಮಾತ್ಯರ ಸಂಗೀತ ಸಂಯೋಜನೆ ಮಾಡಿದರೆಸಾಧನೆ.ಆದರೆ ಅದರ ಮೂಲದ ಶಾಸ್ತ್ರೀಯ ಸಂಗೀತ ಇಂದಿನ ಯುವ ಪೀಳಿಗೆಗೆ ಇಷ್ಟವಾಗೋದಿಲ್ಲ ಎಂದಾಗ ನಮ್ಮ ಮಕ್ಕಳ ಒಳಗಿನ ಶಕ್ತಿ ಯಾವುದಿದೆ? ಯಾಕೆ ಭಾರತೀಯತೆ ನಮ್ಮ ದೇಶದಲ್ಲಿ ಹಿಂದುಳಿಯುತ್ತಿದೆ?
ಈ ವಿಚಾರಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡದೆ, ಪರಕೀಯರನ್ನು ಎತ್ತಿ ಏಣಿಗೇರಿಸುವ ಕೆಲಸ ಮಾಡಿ, ಜನಸಾಮಾನ್ಯರ ಸಾಲ ಬೆಳೆಸಿದರೆ ಸರ್ಕಾರ ಎಷ್ಟು ದಿನಗಳವರೆಗೆ ಉಚಿತ ಶಿಕ್ಷಣ, ಸಾಲ,ಸೌಲಭ್ಯ, ಭಾಗ್ಯಗಳನ್ನು ನೀಡಬಹುದು? ಎಷ್ಟು ಪಡೆದರೂ ಅದೊಂದು ಸಾಲದ ರೂಪದಲ್ಲಿ ನಿಂತು ಶೂಲವಾಗಿ ಕಾಡುತ್ತಿರುವ ಆಧ್ಯಾತ್ಮ ಸತ್ಯವನ್ನು ತಿಳಿದಾಗಲೆ ಜನರ ಸಮಸ್ಯೆಗಳಿಗೆ ಪರಿಹಾರವಿದೆ.
ಇಲ್ಲಿ ಎಲ್ಲಾ ಭಾರತೀಯರಾಗದಿದ್ದರೂ ಭಾರತ ದೇಶ ವಿದೇಶ ದ ಮಧ್ಯೆ ನಿಂತಿರುವ ಮಾಧ್ಯಮಗಳು ಭಾರತೀಯರಾಗಿ ಸತ್ಯವನ್ನು ಜನರಿಗೆ ತಿಳಿಸಿ ಆತ್ಮನಿರ್ಭರ ಭಾರತದಕಡೆಗೆ ನಡೆಸಿದರೆ ಸಾಕಷ್ಟು ಬದಲಾವಣೆ ಮನುಕುಲಕ್ಕೆ ಆಗುತ್ತದೆ. ವಿದೇಶಿಗಳೂ ಮಾನವರೆ. ಆದರೆ ಅವರಲ್ಲಿರುವ ವಿಜ್ಞಾನ,ವಿಶೇಷಜ್ಞಾನ ಆಧ್ಯಾತ್ಮದ ಕಡೆ ನಡೆಯದ ಕಾರಣ ತಮ್ಮನ್ನು ತಾವು ಆಳಿಕೊಳ್ಳಲಾಗದೆ ಭಾರತೀಯರನ್ನು ಆಳಲು ಬರುತ್ತಾರೆ.
ಪವಿತ್ರವಾಗಿದ್ದ ದೇಶವೀಗ ಅಪವಿತ್ರವಾಗುತ್ತಿರುವುದಕ್ಕೆ ಕಾರಣವೆ ಶಿಕ್ಷಣ ಈ ಶಿಕ್ಷಣಕ್ಷೇತ್ರ ಶುದ್ದವಾದರೆ ಆತ್ಮನಿರ್ಭರ ಭಾರತ. ಇದಕ್ಕೆ ಮಾಧ್ಯಮಗಳ ಸಹಕಾರ ಅಗತ್ಯವಿದೆ. ಇಲ್ಲಿ ಮಾಧ್ಯಮ ತನ್ನ ಸ್ವಾರ್ಥ ಕ್ಕೆ ಕಟ್ಟುಬೀಳದೆ ಪ್ರಜೆಯಾಗಿ ದೇಶದ ಪರನಿಂತು ಆಧ್ಯಾತ್ಮ ಅರ್ಥ ಮಾಡಿಕೊಳ್ಳಲು ಸತ್ಯ ತಿಳಿಯಬೇಕಷ್ಟೆ. ಸತ್ಯವೆ ದೇವರು. ದೇವರನ್ನು ಹೊರಗೆ ಬೆಳೆಸೋದರಿಂದ. ಹೆಚ್ಚು ಹೆಚ್ಚು ದೇವಸ್ಥಾನ ಬೇಕಿದೆ. ದೇವಸ್ಥಾನದ ಬದಲಿಗೆ ಶಿಕ್ಷಣ ಕೇಂದ್ರಗಳಾಗಿ ಮಾನವೀಯತೆ,ನೈತಿಕತೆ,ಧಾರ್ಮಿಕತೆ ತಿಳಿಸುವುದರಿಂದ ಮಾನವೀಯತೆ ಬೆಳೆಯುತ್ತದೆ.
ಮೊದಲೇ ಪುರಾಣ,ಇತಿಹಾಸ,ಶಾಸ್ತ್ರ, ವೇದಾಭ್ಯಾಸವನ್ನು ತುಂಬಿ ಮಕ್ಕಳಲ್ಲಿದ್ದ ಸಾಮಾನ್ಯಜ್ಞಾನ ಗಮನಿಸದೆ ತಡೆದರೆ ಇದೊಂದು ರಾಜಕೀಯವಾಗಿರುತ್ತದೆ. ಅವರವರ ಸತ್ಯಕ್ಕೆ ಧರ್ಮಕ್ಕೆ, ಜ್ಞಾನಕ್ಕೆ ಅವರೆ ರಾಜರು. ಈಗಿದು ಪ್ರಜೆಗೆ ಅಗತ್ಯವಾಗಿದೆ.ಮುಂದಿನ ಪೀಳಿಗೆಗೆ ನಾವೇನು ಕೊಟ್ಟು ಬಿಟ್ಟು ಹೋಗುತ್ತಿದ್ದೇವೆಂದರೆ ಕೇವಲ ಸಾಲ ಮಾತ್ರ. ಭೌತಿಕದಲ್ಲಿ ಮಾಡಿಕೊಂಡ ಆಸ್ತಿ ಅನುಭವಿಸಲೂ ಜ್ಞಾನವಿರಬೇಕಲ್ಲವೆ? ಅದನ್ನು ದುರ್ಬಳಕೆ ಮಾಡಿಕೊಂಡು ಮನರಂಜನೆಯ ಜೀವನದಲ್ಲಿ ಮೈಮರೆತರೆ ಆತವಂಚನೆಯ ಫಲ ಜೀವ ಅನುಭವಿಸಲೇಬೇಕು.
ಈಗಲೇ ಪೋಷಕರು ಎಚ್ಚರವಾದರೆ ಉತ್ತಮ. ಪೋಷಕರೆಂದಾಕ್ಷಣ ಕೇವಲ ಸಣ್ಣ ಮಕ್ಕಳ ಪೋಷಕರಾಗೋದಿಲ್ಲ. ದೇಶದ ಪೋಷಣೆ ಮಾಡುವುದು ಎಲ್ಲರ ಧರ್ಮ ಕರ್ಮವಾಗಿದೆ. ನಾನ್ಯಾರು ಪ್ರಶ್ನೆಗೆ ಉತ್ತರ ನಮ್ಮ ಹೆಸರನ್ನಷ್ಟೆ ತಿಳಿಸಬಹುದು. ಆಳವಾಗಿರುವ ಸರಿಉತ್ತರ ಹುಡುಕುವುದಕ್ಕೆ ರಾಜಯೋಗಬೇಕು. ಈಗಿನ ರಾಜಕೀಯದಲ್ಲಿ ಕಷ್ಟವಿದೆ. ಹಾಗಾಗಿ ನಾವ್ಯಾರು? ಪ್ರಶ್ನೆಗೆ ಉತ್ತರ ನಾವು ಭಾರತೀಯರಾಗುತ್ತದೆ. ನಮ್ಮೊಳಗೆ ಭಾರತಮಾತೆ ಇರುವಳೆ? ಅವಳ ಧರ್ಮ, ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಭಾಷೆ ನಮ್ಮಲ್ಲಿ ಎಷ್ಟಿದೆ? ನಮ್ಮ ಮಕ್ಕಳಲ್ಲಿ ಎಷ್ಟಿದೆ? ಈ ವಿಚಾರದ ಬಗ್ಗೆ ಚಿಂತನೆ ನಡೆಸಲು ಮನೆಯೊಳಗೆ ಸಾಧ್ಯ.
ಹೊರಗೆ ಬಂದಂತೆ ಪರಕೀಯರೆ ಕಾಣೋದು. ಹೀಗಾಗಿ ಮಕ್ಕಳು ಮಹಿಳೆಯರನ್ನು ಕೊರೊನ ಮನೆಯ ಒಳಗೆ ಕೂರಿಸಿತ್ತು. ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಹಾಗೆ ಮತ್ತೆ ಹೊರಗೆ ಬಂದು ಹಿಂದಿನಂತೆಯೇ ಕ್ರಾಂತಿಯ ವಿಚಾರ, ಭ್ರಷ್ಟಾಚಾರ, ಅಸತ್ಯ,ಅನ್ಯಾಯವನ್ನು ಪ್ರಚಾರಮಾಡುತ್ತಿದ್ದರೆ ಶಾಂತಿ ಎಲ್ಲಿರುತ್ತದೆ? ಭಾರತ ದೇಶ ಶಾಂತಿಯಿಂದ ಆಧ್ಯಾತ್ಮ ದ ಕಡೆ ನಡೆದಿತ್ತು. ಈಗ ಎಲ್ಲಿದೆ ಶಾಂತಿ? ಯಾರಲ್ಲಿದೆ? ನಮ್ಮೊಳಗೇ ಅಡಗಿದ್ದ ಸತ್ಯ ಧರ್ಮ,ಶಾಂತಿ,ಸಮಾಧಾನ ಬಿಟ್ಟು ಹೊರಗೆ ನಡೆದ ಮನಸ್ಸಿಗೆ ತಿರುಗಿ ಮನೆ ಸೇರಲು ಕಷ್ಟವಾಗುತ್ತಿದೆ. ಯೋಗದ ದೇಶ ಭೋಗದ ಕಡೆಗೆ ನಡೆದು ರೋಗಕ್ಕೆ ಬಲಿಯಾಗುತ್ತಿದೆ.
ಆರೋಗ್ಯ ಎಂದರೆ ಆರು ಯೋಗ್ಯರೀತಿಯಲ್ಲಿ ಬಳಸುವುದಾಗಿತ್ತು. ಅರಿಷಡ್ವರ್ಗವೆಂಬ ಅಸುರೀ ಶಕ್ತಿ ಇಂದು ಮಿತಿಮೀರಿ ಮಾನವನೊಳಗಿದ್ದೇ ಆಡಿಸುತ್ತಿದೆ. ಇದರಿಂದಾಗಿ ನಮ್ಮ ನೆಮ್ಮದಿ ಹಾಳಾಗುತ್ತಿದೆ. ಜೀವಕ್ಕೆ ಶಾಂತಿ,ತೃಪ್ತಿ ಸಿಕ್ಕದೆ ಮುಕ್ತಿ ಪಡೆಯಲಾಗದ ಸಮಸ್ಯೆಯ ಕೂಪವಾಗಿದೆ ಎನ್ನಬಹುದು. ಎಲ್ಲರಿಗೂ ಒಂದೇ ಸಮಸ್ಯೆ ಇರೋದಿಲ್ಲ. ಎಲ್ಲರ ಅನುಭವವೂ ಒಂದೇ ಸಮನಾಗಿಲ್ಲ ಎಲ್ಲರಲ್ಲಿಯೂ ಒಂದೆ ದೇವರಿಲ್ಲ. ಎಲ್ಲರಿಗೂ ಸುಖವಿಲ್ಲ ಆದರೆ, ಎಲ್ಲಾ ಒಂದೆ ದೇಶದೊಳಗಿರುವುದು ಸತ್ಯ.
ಎಲ್ಲಾ ಸಂಸಾರವೂ ಸಮಾಜದ ಒಂದು ಭಾಗವೆ, ಎಲ್ಲಾ ಒಂದೇ ಭೂಮಿ ಮೇಲಿರುವ ಮಾನವರೆ. ಆದರೆ ಈಗ ಎಲ್ಲರ ಶಿಕ್ಷಣ ಒಂದೇ ರೀತಿ, ನೀತಿ, ಸಂಸ್ಕೃತಿ ಹೊಂದಿರದೆ ಇರುವ ಕಾರಣವೆ ಭಿನ್ನಾಭಿಪ್ರಾಯ, ದ್ವೇಷ, ಅಸೂಯೆ ಕ್ರಾಂತಿ ಹೆಚ್ಚಾಗಲು ಕಾರಣ. ಇದಕ್ಕೆ ಪರಿಹಾರ ಏಕರೀತಿ ಶಿಕ್ಷಣದಲ್ಲಿಯೇ ಮಾನವೀಯತೆಯನ್ನು, ಭಾರತೀಯತೆಯನ್ನು ಯೋಗ ಶಕ್ತಿಯನ್ನು, ಆತ್ಮಶಕ್ತಿಯನ್ನು ಬೆಳೆಸಿದರೆ ಮುಂದಿನ ಪೀಳಿಗೆಯಾದರೂ ಉತ್ತಮ ಜೀವನ ನಡೆಸಿ ಮಾನವರಾಗಬಹುದು.
ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು