ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಗಳ ಸ್ನಾನ, ದಾನ ಮತ್ತು ಧ್ಯಾನ ಮಾಡುವುದರಿಂದ ಪುಣ್ಯ ಫಲಗಳು ಪ್ರಾಪ್ತಿಯಾಗುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹಾಗೆ ನೋಡಿದರೆ ವರ್ಷದಲ್ಲಿ 12 ಹುಣ್ಣಿಮೆಗಳು ಬರುತ್ತವೆ ಮತ್ತು ಹುಣ್ಣಿಮೆಯ ದಿನ ಪೂರ್ಣ ಚಂದ್ರೋದಯ ಗೋಚರಿಸುತ್ತದೆ. ಹುಣ್ಣಿಮೆಯ ದಿನದಂದು ಚಂದ್ರದೇವನನ್ನು ಪೂಜಿಸುವುದರಿಂದ ಅಪೇಕ್ಷಿತ ಫಲವನ್ನು ಪಡೆದುಕೊಳ್ಳಬಹುದು.
ಪೂರ್ಣಿಮಾ ತಿಥಿ ಪ್ರಾರಂಭ – 09:42 PM ಫೆಬ್ರವರಿ 15, 2022 ರಂದು.
ಪೂರ್ಣಿಮಾ ತಿಥಿ ಮುಕ್ತಾಯ – 10:25 PM ಫೆಬ್ರವರಿ 16, 2022 ರಂದು.
ಲಲಿತಾ ಜಯಂತಿ
ಲಲಿತಾ ಜಯಂತಿ ದಿನಾಂಕ – ಬುಧವಾರ, ಫೆಬ್ರವರಿ 16, 2022 ರಂದು.
ಮಾಘ ಮಾಸದ ಪೌರ್ಣಮಿಯ ದಿನದಂದು ‘ಲಲಿತಾ ಜಯಂತಿ’ಯನ್ನು ಆಚರಿಸಲಾಗುತ್ತದೆ. ಲಲಿತಾ ಎಂದರೆ ‘ಲಾಲಿತ್ಯ’ ದಿಂದಿರುವವಳು ಎಂದು ಅರ್ಥ. ಶಕ್ತಿ ಸ್ವರೂಪಿಣಿಯಾದ ‘ಲಲಿತೆ’ ಗೆ ಇಡೀ ಜಗತ್ತೇ ಒಂದು ಆಟದ ಮೈದಾನ ಮತ್ತು ಆ ತಾಯಿ ಈ ಜಗತ್ತಿನ ಆಟವನ್ನು ಆನಂದದಿಂದ ಆಡುತ್ತಾಳೆ. ಆಕೆ ತನ್ನ ಭಕ್ತರ ಶುದ್ಧ ಭಕ್ತಿಗೆ ಓಗೊಟ್ಟು ಶೀಘ್ರತಮವಾಗಿ ಅವರ ಸಂಕಷ್ಟಗಳನ್ನು ಪರಿಹರಿಸಲು ಬರುತ್ತಾಳೆ ಎನ್ನುವುದು ನಂಬಿಕೆ.
ಭಕ್ತರು ಮುಂಜಾನೆಯೇ ಎದ್ದು ಆ ತಾಯಿಯ ಈ ‘ಲಲಿತಾ’ ಸ್ವರೂಪಕ್ಕೆ ಪೂಜಿಸುತ್ತಾರೆ. ನಂತರ ಭಕ್ತರು ಆ ದಿನವೆಲ್ಲ ಕಟ್ಟುನಿಟ್ಟಾದ ಉಪವಾಸವಿದ್ದು, ದಿನದ ಅಂತ್ಯದಲ್ಲಿ ಮತ್ತೆ ಆ ತಾಯಿಯ ಪೂಜೆ ಗೈದು ದಿನವನ್ನು ಅಂತ್ಯಗೊಳಿಸುತ್ತಾರೆ. ಉತ್ತರ ಭಾರತದಲ್ಲಿ ‘ಲಲಿತಾ’ ದೇವಿಯ ಪೂಜೆ ಮತ್ತು ಪ್ರಾರ್ಥನೆಗಾಗಿ ದೇವಾಲಯಗಳಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದು ಸೇರುತ್ತಾರೆ.
ಆದರೆ ‘ಲಲಿತಾ’ ಎಂದರೆ ಯಾರು? ಶಕ್ತಿ ಸ್ವರೂಪಿಣಿಯಾದ ದೇವಿಯೇ ‘ಲಲಿತಾ’. ಆಕೆಯ ಅತೀಸೌಂದರ್ಯ ರೂಪ ಮತ್ತು ಸ್ವರ ಮಾಧುರ್ಯಕ್ಕೆ ಮನಸೋತು, ಕಾಮೇಶ್ವರನ ಸ್ವರೂಪದಲ್ಲಿದ್ದ ಸಾಕ್ಷಾತ್ ಪರಮಶಿವನು ಆಕೆಯಿಂದ ದೃಷ್ಟಿ ತೆಗೆಯಲಾರದಂತಾದನಂತೆ. ಆ ತಾಯಿ ದಶಮಹಾವಿದ್ಯೆ ಅಥವಾ ಹತ್ತು ಪ್ರಮುಖ ದೇವೀ ಸ್ವರೂಪಗಳಲ್ಲಿ ಒಬ್ಬಳು. ದಕ್ಷ ಯಜ್ಞದ ಸಮಯದಲ್ಲಿ ‘ಸತಿ’ ಯ ಮರಣಾನಂತರ ಪರಮ ಶಿವನು ಘೋರ ತಪಸ್ಸಿನಲ್ಲಿ ನಿರತನಾದನಂತೆ. ದೇವತೆಗಳನ್ನು ಪೀಡಿಸುತ್ತಿದ್ದ.
‘ತಾರಕಾಸುರ’ ನೆಂಬ ರಾಕ್ಷಸನನ್ನು ಸಂಹಾರಮಾಡುವ ಸಲುವಾಗಿ, ಪರಶಿವ ಮತ್ತು ಗೌರಿ ನಡುವಿನ ಪ್ರಣಯದಿಂದ ಒಬ್ಬ ಮಗನನ್ನು ಪಡೆಯಲು, ದೇವತೆಗಳು ಪರಶಿವನನ್ನು ತಪಸ್ಸಿನಿಂದ ಎಬ್ಬಿಸುವ ಪ್ರಯತ್ನವನ್ನು ಮಾಡುತ್ತಿದ್ದರು. ಆದರೆ ಪರಮ ಶಿವನು ತನ್ನ ತಪಸ್ಸಿನಿಂದ ವಿಮುಖನಾಗಲಿಲ್ಲ. ಶಿವನ ತಪೋಭಂಗ ಮಾಡಲು, ಅವನ ಮೇಲೆ ಕಾಮನ ಬಾಣಗಳನ್ನು ಬಿಡಲು ದೇವತೆಗಳು ‘ಮನ್ಮಥ’ ನನ್ನ ಮೊರೆ ಹೊಕ್ಕರು. ತನ್ನ ತಪಸ್ಸಿಗೆ ಭಂಗ ಉಂಟುಮಾಡಿದ ಮನ್ಮಥನನ್ನು, ಪರಮಶಿವನು ತನ್ನ ಮೂರನೆಯ ಕಣ್ಣನ್ನು ತೆರೆದು ಸುಟ್ಟು ಭಸ್ಮ ಮಾಡಿದ.
ಸುಟ್ಟುಹೋದ ಮನ್ಮಥನ ಚಿತಾಭಸ್ಮದಿಂದ ಜನಿಸಿದ ‘ಭಾಂಡಾಸುರ’ ನೆಂಬ ರಕ್ಕಸನೂ ಸಹ ದೇವತೆಗಳನ್ನು ಪೀಡಿಸತೊಡಗಿದ. ನಾರದರ ಸಲಹೆಯ ಮೇರೆಗೆ ದೇವತೆಗಳು ನಿರಾಕಾರ ಬ್ರಹ್ಮನ ಸಹಾಯವನ್ನು ಬೇಡಿದರು. ಆ ನಿರ್ಗುಣ ಬ್ರಹ್ಮನು ಪರಮೇಶ್ವರ ಮತ್ತು ಪರಾಶಕ್ತಿಯ ರೂಪವನ್ನು ಧರಿಸಿದನು. ದೇವತೆಗಳು ಆ ದಿವ್ಯ ದಂಪತಿಗಳನ್ನು ತಮ್ಮನ್ನು ಪೀಡಿಸುತ್ತಿರುವ ‘ಭಾಂಡಾಸುರ’ ನಿಂದ ರಕ್ಷಿಸಬೇಕೆಂದು ಬೇಡಿದರು.
ಆದ್ದರಿಂದ ಅವರಿಬ್ಬರೂ ಕಾಮೇಶ್ವರ ಮತ್ತು ಲಲಿತಾ ದೇವಿಯ ರೂಪಧರಿಸಿ ‘ಭಾಂಡಾಸುರ’ ನನ್ನ ಸಂಹರಿಸಿ ಮನ್ಮಥನನ್ನು ಜೀವಂತಗೊಳಿಸಿದರು. ಇದರಿಂದ ಪರಮಶಿವನು ತನ್ನ ತಪಸ್ಸಿನಿಂದ ಹೊರಬಂದು ಗೌರಿಯನ್ನು ಪತ್ನಿಯಾಗಿ ಸ್ವೀಕರಿಸಿದನು. ಅವರ ಮಗನಾದ ಕಾರ್ತಿಕೇಯನು ತಾರಕಾಸುರನ ಸಂಹಾರಮಾಡಿ ಸಕಲ ದೇವತೆಗಳನ್ನು ಸಂಕಟದಿಂದ ಪಾರುಮಾಡಿದನು ಇಂತಹ ದೈವೀ ಶಕ್ತಿ ಸ್ವರೂಪಿಣಿಯಾದ ತಾಯಿ ‘ಲಲಿತೆ’ಯನ್ನು ಲಲಿತಾ ಜಯಂತಿಯ ದಿನ ನಾವು ಪೂಜಿಸುತ್ತೇವೆ ಮತ್ತು ಆರಾಧಿಸುತ್ತೇವೆ. ಈ ವ್ರತವನ್ನು ಮಾಡುವವರಿಗೆ ಮತ್ತು ಅವರ ಕುಟುಂಬದವರಿಗೆ ಸಕಲ ಸಂಪತ್ತು, ಅರೋಗ್ಯ ಮತ್ತು ಸಂತೋಷಗಳು ಲಭಿಸುತ್ತವೆ.
🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ
L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387