Homeಸುದ್ದಿಗಳುಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ ;  ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ -...

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ ;  ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ – ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ

ಬೆಳಗಾವಿ- ಮುಂದೆ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ನಾನು ಸ್ಪರ್ಧೆ ಮಾಡುವುದಿಲ್ಲ. ಈ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳು ಕೇವಲ ಊಹಾಪೋಹಗಳಷ್ಟೆ ಎಂದು ಬೆಮುಲ್ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸೋಮವಾರದಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬೆಳಗಾವಿ ಹಾಲು ಒಕ್ಕೂಟದಿಂದ ಕರ್ನಾಟಕ ಹಾಲು ಮಹಾ ಮಂಡಳಿಗೆ ನಿರ್ದೇಶಕನಾಗಿ ಆಯ್ಕೆಯಾಗುತ್ತೇನೆ. ಆದರೆ ಖಂಡಿತವಾಗಿಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ಮೂರು ವರ್ಷ ಕೆಎಂಎಫ್ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ತೃಪ್ತಿ ಮತ್ತು ಹೆಮ್ಮೆ ಇದೆ. ರಾಜ್ಯದಲ್ಲಿರುವ ನಮ್ಮೆಲ್ಲ ಹೈನುಗಾರರಿಗೆ ಸಂಸ್ಥೆಯಿಂದ ಸಾಕಷ್ಟು ಪ್ರಯೋಜನಗಳನ್ನು ದೊರಕಿಸಿಕೊಡಲಾಗಿದೆ. ಸಂಸ್ಥೆಯ ಸರ್ವತೋಮುಖ ಬೆಳವಣಿಗೆಗೆ ಎಲ್ಲರ ಸಹಕಾರದಿಂದ ಶ್ರಮಿಸಲಾಗಿದೆ. ನಾನು ಅಧ್ಯಕ್ಷನಿದ್ದ ಸಂದರ್ಭದಲ್ಲಿ ವಾರ್ಷಿಕ ೧೫ ಸಾವಿರ ಕೋಟಿ
ರೂಪಾಯಿಯಿಂದ ೨೦ ಸಾವಿರ ಕೋಟಿ ರೂಪಾಯಿವರೆಗೆ ವಹಿವಾಟನ್ನು ಮಾಡಿರುವ ಸಾಧನೆ ನನಗೆ ತೃಪ್ತಿ ತಂದಿದೆ. ರಾಜ್ಯದಲ್ಲಿರುವ ಎಲ್ಲ ೧೪ ಜಿಲ್ಲಾ ಹಾಲು ಒಕ್ಕೂಟಗಳ ಪ್ರಗತಿಗೂ ಸಹ ಪ್ರಾಮಾಣಿಕವಾಗಿ ದುಡಿದಿದ್ದೇನೆ. ರಾಜ್ಯದಲ್ಲಿ ಬಿಜೆಪಿ ನಂತರ ಅಧಿಕಾರಕ್ಕೆ ಏರಿದ ಕಾಂಗ್ರೆಸ್ ಪಕ್ಷವು‌ ನನ್ನ ತರುವಾಯ ಭೀಮಾನಾಯಿಕ ಅವರನ್ನು ಕೆಎಂಎಫ್ ಅಧ್ಯಕ್ಷರನ್ನಾಗಿ ನೇಮಕ ಮಾಡಿಕೊಂಡಿತು. ಆ ನಂತರದ ಬೆಳವಣಿಗೆಯಲ್ಲಿ ಕೆಎಂಎಫ್ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡು ಬೆಳಗಾವಿ ಜಿಲ್ಲಾ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೇನೆ. ಅದರಲ್ಲೂ ಅಕ್ಟೋಬರ್‌ ತಿಂಗಳಲ್ಲಿ ಜರುಗುವ ಬಿಡಿಸಿಸಿ ಬ್ಯಾಂಕಿನ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮತ್ತೇ ತಮ್ಮ ಮುಂದಾಳುತನದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವತ್ತ ನನ್ನ ಚಿತ್ತ ಇದೆ ಎಂದು ಅವರು ತಿಳಿಸಿದರು.

Gಕೆಎಂಎಫ್ ಅಧ್ಯಕ್ಷರು ಯಾರು ಬೇಕಾದರೂ ಆಗಲಿ. ನಾನೇನೂ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವದಿಲ್ಲ. ಆದರೆ, ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷನಾಗಿದ್ದುಕೊಂಡು ಕೆಎಂಎಫ್ ನಿರ್ದೇಶಕನಾಗಿ ಪುನರಾಯ್ಕೆಯಾಗುತ್ತೇನೆ. ಇದರಲ್ಲಿ ಯಾವ ಸಂದೇಹವೂ ಇಲ್ಲ ಎಂದು ಅವರು ಹೇಳಿದರು.
ಬಮೂಲ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ.ಕೆ.ಸುರೇಶ್ ಅವರು ಪ್ರವೇಶ ಪಡೆಯುತ್ತಿದ್ದಂತೆಯೇ ಎಲ್ಲರ ಚಿತ್ತ ಬೆಳಗಾವಿ ರಾಜಕಾರಣದತ್ತ ವಾಲುತ್ತಿದೆ. ಡಿ.ಕೆ.ಸುರೇಶ್ ಅವರ ಎದುರಾಳಿಯಂತೆ ಕೆಲ ಮಾಧ್ಯಮಗಳು ಬಿತ್ತರಿಸುತ್ತಿವೆ. ಆದರೆ, ಇನ್ನೆರಡು ತಿಂಗಳಲ್ಲಿ ನಡೆಯುವ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆಯ ಆಕಾಂಕ್ಷಿಯೂ ಅಲ್ಲ. ಸ್ಪರ್ಧೆ ಮಾಡುವ ಯಾವ ಇರಾದೆಯೂ ನನ್ನ ಮುಂದಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.

ಸರ್ಕಾರದ್ದೇ ಅಂತಿಮ- ರಾಜ್ಯದಲ್ಲಿ ಯಾವ ಸರ್ಕಾರ ಅಸ್ತಿತ್ವದಲ್ಲಿರುತ್ತದೆಯೋ ಅದರ ಪ್ರತಿನಿಧಿಗಳಿಗೆ ಅಧಿಕಾರ ನೀಡುವುದು ವಾಡಿಕೆಯಾಗಿದೆ. ಕೆಎಂಎಫ್, ಅಪೆಕ್ಸ್ ಬ್ಯಾಂಕ್ ಮತ್ತು ಮಾರ್ಕೆಟಿಂಗ್ ಸೊಸಾಯಿಟಿಗಳು ಅಧಿಕಾರ ನಡೆಸುತ್ತಿರುವ ಸರ್ಕಾರದ ಬೆಂಬಲವಿರುತ್ತದೆ. ಹೀಗಾಗಿ ಈ ಮೂರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾಂಗ್ರೆಸ್ಸಿಗರೇ ಅಧಿಕಾರದಲ್ಲಿರುತ್ತಾರೆ. ಹೀಗಾಗಿ ಕೆಎಂಎಫ್ ಅಧ್ಯಕ್ಷ ಸ್ಥಾನದ ಸ್ಪರ್ಧೆಯಲ್ಲಿ ಇರಲಾರೆ. ಮುಂದೆ ನಮ್ಮ ಬಿಜೆಪಿ ಸರ್ಕಾರ ಬಂದ ಮೇಲೆ ಖಂಡಿತವಾಗಿಯೂ ಸ್ಪರ್ಧೆ ಮಾಡುತ್ತೇನೆ. ನನ್ನ ಗುರಿ ಇರುವುದು ಬೆಮುಲ್ ಮೇಲೆ. ಇದನ್ನೇ ರಾಜ್ಯದಲ್ಲಿಯೇ ದೊಡ್ಡ ಸಂಸ್ಥೆಯನ್ನಾಗಿ ಮಾಡುವುದೇ ಮುಖ್ಯ ಕನಸು ಆಗಿದೆ. ರೈತರ ಸಹಕಾರದಿಂದ ಬೆಮುಲ್ ಅಭಿವೃದ್ಧಿ ಮಾಡಿ ಅದನ್ನು ಮಾದರಿಯನ್ನಾಗಿ ಮಾಡುವ ಸಂಕಲ್ಪ ಮಾಡಿರುವದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು.

RELATED ARTICLES

Most Popular

error: Content is protected !!
Join WhatsApp Group