ಮಾಜಿ ಸಚಿವ ಚೌಹಾಣ್ ಪುತ್ರ ಪ್ರತೀಕ ಪ್ರಕರಣ
ಬೀದರ – ಮಾಜಿ ಸಚಿವ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ನಿಶ್ಚಿತಾರ್ಥ ವಿವಾದ ಮತ್ತು ಹಲ್ಲೆ ಲೈಂಗಿಕ ಕಿರುಕುಳ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಆರೋಪ-ಪ್ರತ್ಯಾರೋಪ, ಕೇಸ್-ಕೌಂಟರ್ ಕೇಸ್‌ಗೆ ಸಾಕ್ಷಿಯಾಗಿದೆ.
ನಿನ್ನೆಯಷ್ಟೇ ಸಂತ್ರಸ್ತ ಯುವತಿಯ ಚಾಟಿಂಗ್, ವಿಡಿಯೋ ಹಿಸ್ಟರಿ ಬಿಡುಗಡೆ ಮಾಡಿದ್ದ ಮಾಜಿ ಸಚಿವ ಪ್ರಭು ಚೌಹಾಣ್ ಯುವತಿ ವಿರುದ್ದವೇ ಆರೋಪಗಳನ್ನು ಮಾಡಿದ್ದರು. ಇದರ ಬೆನ್ನಲ್ಲೇ ಇವತ್ತು ಸಂತ್ರಸ್ತ ಯುವತಿ ಸುದ್ದಿಗೋಷ್ಠಿ ನಡೆಸಿ, ಸಚಿವ ಹಾಗೂ ಸಚಿವರ ಪುತ್ರನ ವಿರುದ್ಧವೇ ಮುಗಿ ಬಿದ್ದಿದ್ದು, ಪೊಲೀಸ್ ಇಲಾಖೆಯ ವಿರುದ್ಧವೂ ಸಂತ್ರಸ್ತ ಯುವತಿಯ ಕುಟುಂಬಸ್ಥರು ಅಸಮಾಧಾನ ಹೊರ ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯುವತಿ, ನಮಗೆ ಹೆದರಿಕೆಯಾಗುತ್ತಿದೆ. ನಮ್ಮನ್ನು ಏನು ಮಾಡಲೂ ಅವರು ಹೇಸುವುದಿಲ್ಲ. ನಮಗೆ ನ್ಯಾಯ ಸಿಗದಿದ್ದರೆ ನಮ್ಮ ಕುಟುಂಬವೇ ಸರ್ವನಾಶವಾಗುತ್ತದೆ ನಮಗೆ ನ್ಯಾಯ ಬೇಕು ಎಂದು ಅಲವತ್ತುಕೊಂಡಿದ್ದಾಳೆ.
ಹೌದು, ಶಾಸಕ ಪ್ರಭು ಚೌಹಾಣ್ ಪುತ್ರ ಪ್ರತೀಕ್ ಚೌಹಾಣ್ ತನ್ನನ್ನು ಮದ್ವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದು, ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಅಂತಾ ನಿನ್ನೆ ಬೀದರ್‌ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತ ಯುವತಿ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದಳು. ಅತ್ಯಾಚಾರ ಕೇಸ್ ದಾಖಲಾದ ಹಿನ್ನೆಲೆ ಪೊಲೀಸರು ಸಂತ್ರಸ್ತ ಯುವತಿಯನ್ನ ಬ್ರಿಮ್ಸ್ ಆಸ್ಪತ್ರೆಗೆ ಕರೆದೊಯ್ದು, ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಸಂತ್ರಸ್ತೆಯ ಮೆಡಿಕಲ್ ಟೆಸ್ಟ್ ಮುಗಿದ ಬಳಿಕ ಬೀದರ್‌ನ ಜೆಎಂಎಫ್‌ಸಿ ನ್ಯಾಯಧೀಶರಾದ ಕಾಡಪ್ಪ ಹುಕ್ಕೇರಿ ಅವರ ಮುಂದೆ ಪ್ರಕರಣದ ಕುರಿತು ಸವಿಸ್ತಾರವಾದ 164 ಹೇಳಿಕೆ ದಾಖಲಿಸಿದ್ದಾರೆ. ಬಳಿಕ ಸಂತ್ರಸ್ತ ಯುವತಿ, ತಾಯಿ ಹಾಗೂ ಸಹೋದರನೊಂದಿಗೆ ಸುದ್ದಿಗೋಷ್ಠಿ ನಡೆಸಿ ಘಟನೆಯನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ನಿಶ್ಚಿತಾರ್ಥಕ್ಕೂ ಮೊದಲು ಬೆಂಗಳೂರು, ಮಹಾರಾಷ್ಟ್ರದ ಲಾತೂರ್ ಸೇರಿದಂತೆ ಹಲವು ಕಡೆ ಸುತ್ತಾಡಿರುವ ಬಗ್ಗೆ, ಖಾಸಗಿ ಹೋಟೆಲ್‌ನಲ್ಲಿ ತಂಗಿ ಒತ್ತಾಯ ಪೂರ್ವಕವಾಗಿ ಪ್ರತೀಕ್ ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಅಂತಾ ಮಾಜಿ ಸಚಿವ ಪ್ರಭು ಚೌಹಾಣ್ ಹೇಳಿಕೆಗೆ ಪತ್ಯುತ್ತರ ನೀಡಿದ್ರು. ಅಷ್ಟೇ ಅಲ್ಲ 2024 ನವೆಂಬರ್‌ನಲ್ಲಿ ಹಲ್ಲೆ ಮಾಡಿದ್ದ ಅಂತಾ ಆರೋಪಿಸಿರುವ ಯುವತಿ ಹಲ್ಲೆಯ ಬಳಿಕ ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋಗಳನ್ನ ಯುವತಿ ರಿವೀಲ್ ಮಾಡಿದ್ದಾಳೆ…
– ಇನ್ನು ನಿನ್ನೆಯಷ್ಟೇ ಸುದ್ದಿ ಗೋಷ್ಠಿ ನಡೆಸಿದ್ದ ಮಾಜಿ ಸಚಿವ ಪ್ರಭು ಚೌಹಾಣ್ ಹಿರಿಯರ ಸಮ್ಮುಖದಲ್ಲಿ ನೆಂಟಸ್ತನ ಕ್ಯಾನ್ಸಲ್ ಆಗಿತ್ತು. ಆದ್ರೆ, ಈಗ ನನ್ನ ಹಾಗೂ ನನ್ನ ಕುಟುಂಬದ ಹೆಸರು ಕೆಡಿಸುವ ಸಲುವಾಗಿ ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ರಾಜಕೀಯ ಪಿತೂರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಜೊತೆಗೆ ಯುವತಿ ಬೇರೊಬ್ಬರೊಂದಿಗೆ ಚಾಟಿಂಗ್, ವಿಡಿಯೋ ಕಾಲ್ ಮಾಡ್ತಿದ್ದಾಳೆ ಅಂತಾ ಫೋಟೋಗಳನ್ನ ರಿವೀಲ್ ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿದ ಸಂತ್ರಸ್ತ ಯುವತಿ ಭಗವಂತ ಖೂಬಾ ಯಾರು ಅಂತಾ ನನಗೆ ಗೊತ್ತಿಲ್ಲ. ಭಗವಂತ ಖೂಬಾ ಸೋತರೆ, ಟಿಕೆಟ್ ಸಿಗದಿದ್ರೆ ಗ್ರ್ಯಾಂಡ್ ಆಗಿ ಮದ್ವೆಯಾಗೋಣ ಅಂತಾ ಪ್ರತೀಕ ಹೇಳಿದ್ದರು. ಇನ್ನೂವರೆಗೂ ಮದ್ವೆ ನಿಶ್ಚಯ ಮಾಡಿಲ್ಲ. ಜೊತೆಗೆ ನಿಶ್ಚಿತಾರ್ಥ ಕ್ಯಾನ್ಸಲ್ ಆಗಿಲ್ಲ. ಪ್ರತೀಕ್ ಹಾಗೂ ನಾನು ಇಬ್ಬರು ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಆಗಿ ಲವ್ ಮಾಡಿದ್ವಿ. ಪ್ರತೀಕ್ ನನ್ನ ಬಗ್ಗೆ ಎರಡು ವರ್ಷ ಸ್ಟಡಿ ಮಾಡಿದ್ದಾನೆ. ನನ್ನ ಮೊಬೈಲ್ ಅವರ ಬಳಿಯೇ ಇದ್ವು. ಈಗಲೂ ನನ್ನ ಮೊಬೈಲ್ ಅವರ ಬಳಿಯೇ ಇದ್ದು, ಎಂಗೇಜ್ಮೆಂಟ್‌ನಲ್ಲಿ 500 ಗ್ರಾಂ ಬಂಗಾರ ಹಾಗೂ ಒಂದು ಕಾರು ವರದಕ್ಷಿಣೆ ಕೇಳಿದ್ದರು ಎಂದು ಯುವತಿ ಆರೋಪಿಸಿದ್ದಾಳೆ…
– ಇಷ್ಟೆಲ್ಲದರ ಮಧ್ಯೆ ಸಂತ್ರಸ್ತ ಯುವತಿ ಪ್ರತೀಕ್ ಚೌಹಾಣ್ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ದೂರು ದಾಖಲಿಸುತ್ತಿದ್ದಂತೆ, ಅತ್ತ ಮಾಜಿ ಸಚಿವ ಪ್ರಭು ಚೌಹಾಣ್ ಸಂಬಂಧಿ ಮುರಳೀಧರ ಎಂಬುವವರು ಸಂತ್ರಸ್ತ ಯುವತಿಯ ತಂದೆ-ತಾಯಿ ಸೇರಿದಂತೆ ಎಂಟು ಜನರ ವಿರುದ್ಧ ಹೊಕ್ರಾಣ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ.
ಇತ್ತ ಪೊಲೀಸರು ಸಂತ್ರಸ್ತ ಯುವತಿಯಿಂದ 164 ಹೇಳಿಕೆ ದಾಖಲಿಸಿಕೊಂಡಿದ್ದು, ಪೊಲೀಸರು ಯಾವೆಲ್ಲಾ ಕ್ರಮಕ್ಕೆ ಮುಂದಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ವರದಿ : ನಂದಕುಮಾರ ಕರಂಜೆ, ಬೀದರ