ಮೂಡಲಗಿ: ಮಹಾನ್ ಮಾನವತಾವಾದಿ, ಮಹಾನ್ ಚಾರಿತ್ರ್ಯ ವಂತ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಬಿಟಿಟಿ ಕಮೀಟಿ ಆಯೋಜನೆಯಲ್ಲಿ ಪಟ್ಟಣದ ಸಮಸ್ತ ಮುಸ್ಲಿಂ ಬಾಂಧವರು ಸಡಗರ, ಸಂಭ್ರಮದಿಂದ ಈದ್ ಮಿಲಾದ್ ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆ ಪಟ್ಟಣದ ಜಾಮೀಯ ಮಸೀದಿ ಆವರಣದಲ್ಲಿ ಸಮಾಜದ ಮುಖಂಡರು, ಸಮಸ್ತ ಮುಸ್ಲಿಂ ಬಾಂಧವರು, ಶಾಲಾ ಮಕ್ಕಳು ಪಾಲ್ಗೊಂಡು ಭವ್ಯ ಮೆರವಣಿಗೆ ಚಾಲನೆಗೊಂಡು ಮಕ್ಕಾ ಮದೀನಾ ರೂಪಕಗಳ ಅಲಂಕೃತ ವಾಹನದಲ್ಲಿ ಪ್ರವಾದಿ ಅವರ ಕುರಿತು ಹಾಡು ಹಾಡುತ್ತ ಕಣ್ಮನ ಸೆಳೆದ ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಮೂಡಲಗಿಯ ಜನನಿಬಿಡ ಶ್ರೀ ಕಲ್ಮೇಶ್ವರ ವೃತ್ತಕ್ಕೆ ಆಗಮಿಸಿ ಪವಾಡ ಪುರುಷ ಶ್ರೀ ಕಲ್ಮೇಶ್ವರ ಪುತ್ಥಳಿಗೆ ಬೃಹತ್ ಹೂಮಾಲೆ ಅರ್ಪಿಸಿ ಭಾವೈಕ್ಯತೆಗೆ ಸಾಕ್ಷಿಯಾದ ಮೆರವಣಿಗೆಗೆ ನೆರೆದ ಜನ ಸಮೂಹ ಪ್ರಶಂಸೆ ವ್ಯಕ್ತಪಡಿಸಿದರು.
ಮೆರವಣಿಗೆಯ ದಾರಿಯುದ್ದಕ್ಕೂ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಗೋಲ್ಡನ್ ವಾಚ್ ಸೆಂಟರ್ ವತಿಯಿಂದ ಸಾರ್ವಜನಿಕರಿಗೆ ತಂಪು ಪಾನೀಯ ವಿತರಿಸಲಾಯಿತು. ಅಲ್ಲಿಂದ ಮೆರವಣಿಗೆ ಜಾಮಿಯಾ ಮಸೀದಿಗೆ ತೆರಳಿ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು . ಸಂಜೆ ಪ್ರವಾದಿ ಪೈಗಂಬರರ ಕುರಿತು ಪ್ರವಚನ ಕಾರ್ಯಕ್ರಮ ಜರುಗಿತು.
ಮುಸ್ಲಿಂ ಬಾಂಧವರಿಗೆ ಶುಭ ಕೋರಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಈದ್ ಮಿಲಾದ್ ಹಬ್ಬವು ಮುಸ್ಲಿಂ ಬಾಂಧವರಿಗೆ ಎಲ್ಲ ರೀತಿಯಿಂದಲೂ ಒಳ್ಳೆಯದು ಆಗಲಿ.. ಸಾಮರಸ್ಯ ಬದುಕನ್ನು ಅನುಸರಿಸುವ ಮೂಲಕ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬದುಕಿ ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಶಾಂತಿ ನೆಮ್ಮದಿ ಸೌಹಾರ್ದತೆ ಮೂಡಲು ಪ್ರವಾದಿಯವರು ನೀಡಿರುವ ಸಂದೇಶವನ್ನು ಪಾಲಿಸಿ ಅದರಂತೆ ಬದುಕಲು ಪ್ರಯತ್ನಿಸಿ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಸಂದೇಶದ ಮೂಲಕ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಬಿ ಟಿ ಟಿ ಕಮೀಟಿಯ ಮುಖಂಡರಾದ ಶರೀಪ ಪಟೇಲ್, ಮಲೀಕ ಕಳ್ಳಿಮನಿ, ಸಲೀಮ ಇನಾಮದಾರ, ರಾಜು ಅತ್ತಾರ, ಅಜೀಜ ಡಾಂಗೆ, ಗಫಾರ್ ಡಾಂಗೆ, ಅನ್ವರ್ ನದಾಫ್, ಹಸನಸಾಬ ಮುಗುಟಖಾನ, ಅಮೀರ್ ಹಮ್ಜಾ ಥರಥರಿ, ಇಮಾಮ್ ಹುಸೇನ್ ಮುಲ್ಲಾ, ದಸ್ತಗೀರಸಾಬ ನದಾಫ್, ಸಾಹೇಬ್ ಪೀರಜಾದೆ, ಮಲೀಕ ಅತ್ತಾರ, ಮೆಹಬೂಬ ಲಾಡಖಾನ, ಯಂಗ್ ಕಮೀಟಿಯ ಯುವಕರು, ಧರ್ಮ ಗುರುಗಳು ಸೇರಿದಂತೆ ಅನೇಕ ಗಣ್ಯರು, ಮುಖಂಡರು, ಮುಸ್ಲಿಂ ಬಾಂಧವರು ಇದ್ದರು.