ಮೂಡಲಗಿ : ಅಯ್ಯಪ್ಪನ ಸೇವೆ ಮಾಡಿದಂತೆ ನಿಮ್ಮ ನಿಮ್ಮ ಮಕ್ಕಳಿಗೆ ಹೊಟ್ಟೆ ತುಂಬಿಸಿ, ತಲೆಗೆ ವಿದ್ಯೆಯನ್ನು ತುಂಬಿಸಿದಲ್ಲಿ ಮುಗ್ಧ ಮಕ್ಕಳಲ್ಲಿ ಆ ಅಯ್ಯಪ್ಪ ಸ್ವಾಮಿಯನ್ನು ಕಾಣಬಹುದು ಎಂದು ಸುಣಧೋಳಿಯ ಜಡಿಸಿದ್ದೇಶ್ವರ ಮಠದ ಶಿವಾನಂದ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಬಸವ ಮಂಟಪದಲ್ಲಿ ಜರುಗಿದ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯಿಂದ 28ನೇ ವರ್ಷದ ಮಹಾಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಹದಿನೆಂಟು ಮೆಟ್ಟಿಲುಗಳನ್ನು ಏರಿ ಮಲೆಯಲ್ಲಿ ನೆಲೆಯಾಗಿರುವ ಅಯ್ಯಪ್ಪ ಸ್ವಾಮಿಯನ್ನು ಕಂಡೊಡನೆ ಭಕ್ತರ ಮನದಲ್ಲಿ ಭಕ್ತಿಯ ಪ್ರವಾಹವೇ ಹರಿದು ಹೋಗುತ್ತಿರುತ್ತದೆ. ಸ್ವಾಮಿಯೇ ಶರಣಂ ಅಯ್ಯಪ್ಪಾ ಎಂದು ಕೂಗುವ ಭಕ್ತರ ಕರೆಗೆ ಅಯ್ಯಪ್ಪಸ್ವಾಮಿ ಕಿವಿಗೊಡದೇ ಇರಲಾರರು ಎಂಬಂಥ ಭಕ್ತಿಯ ಸೆಲೆ ಅಲ್ಲಿ ಉದ್ಭವವಾಗಿರುತ್ತದೆ. ಮಾಲಾಧಾರಿಗಳು ತಿಂಗಳುಗಳ ಕಾಲ ವೃತಾಧಾರಿಗಳಾಗಿ ಸ್ವಾಮಿಯ ಸೇವೆಯನ್ನು ಮಾಡಿದ್ದಕ್ಕೆ ಸಾರ್ಥಕವಾಯಿತು ಎಂಬ ತೃಪ್ತಿ ಮನದಲ್ಲಿ ಮೂಡುತ್ತದೆ. ಹಾಗೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಉತ್ತಮ ಆಚಾರ ವಿಚಾರಗಳನ್ನು ನೀಡಿದಲ್ಲಿ ಆ ಮಕ್ಕಳಲ್ಲಿ ಸಾಕ್ಷಾತ್ ಸ್ವಾಮಿಯನ್ನೇ ಕಾಣಬಹುದೆಂದು ಹೇಳಿದರು.
ಮುನ್ಯಾಳ- ರಂಗಾಪೂರ ಮಠದ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಶಬರಿಮಲೆ ದೇವಸ್ಥಾನವೆಂದರೆ ಏಕತೆ, ಸಮಾನತೆ ಮತ್ತು ಪ್ರಪಂಚದ ಎಲ್ಲ ಒಳ್ಳೆಯತನಗಳ ಸಂಕೇತವಾಗಿರುವ ಅಯ್ಯಪ್ಪ ಸ್ವಾಮಿಯ ಮಹಾಪೂಜೆಯನ್ನು ಪಟ್ಟಣದಲ್ಲಿ ಆಯೋಜಿಸಿ, ಭಕ್ತಿ -ಭಾವದಿಂದ ಎಲ್ಲ ಮಾಲಾಧಾರಿಗಳು ಹೂವಿನಿಂದ ಅಲಂಕರಿಸಿದ ಮಂಟಪ ಹಾಗೂ ಸ್ವಾಮಿಯ ಮೂರ್ತಿಯ ಪೂಜೆ ನೋಡಿದರೆ ಸಾಕ್ಷಾತ್ ಶಬರಿಮಲೆಯ ಅಯ್ಯಪ್ಪ ಸ್ವಾಮಿಯೇ ಪ್ರತ್ಯಕ್ಷನಾಗಿ ಪಟ್ಟಣದ ಜನರಿಗೆ ದರ್ಶನ ನೀಡಿದ್ದಾನೆ ಎಂದರು.
ಅಯ್ಯಪ್ಪ ಸ್ವಾಮಿಯ ಸನ್ನಿಧಾನದ ರವಿ ನೇಸೂರ ಗುರುಸ್ವಾಮಿಗಳು ಸ್ವಾಮಿಯ ಮೂರ್ತಿಗೆ ಅಭಿಷೇಕ ಮಾಡುವ ಮೂಲಕ ಹದಿನೆಂಟು ಮೆಟ್ಟಿಲುಗಳ ಪೂಜೆಯನ್ನು ಸಲ್ಲಿಸಿದರು. ಸ್ವಾಮಿಯ ಆಭರಣದ ಮೆರವಣಿಗೆಯೂ ಜನರ ಕಣ್ಮನ ಸೆಳೆಯಿತು.
ಮಹಾಪೂಜೆ ನಿಮಿತ್ಯವಾಗಿ ಅಯ್ಯಪ್ಪ ಸ್ವಾಮಿಯ ಆನೆ ಅಂಬಾರಿ ಹಾಗೂ ವಿವಿಧ ವಾದ್ಯಮೇಳ ಗಳು, ಕನ್ನಿಸ್ವಾಮಿಗಳ ಕುಂಭಮೇಳಗಳದೊಂದಿಗೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಭವ್ಯ ಮೆರವಣಿಗೆ ಜರುಗಿತು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ದುಂಡಪ್ಪ ಮಹಾರಾಜರು, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಹಾಗೂ ಗುರ್ಲಾಪೂರ , ಹಳ್ಳೂರ, ಮೀರಾಪರಟ್ಟಿ, ಸೈದಾಪೂರ, ಮುಗಳಖೋಡ, ಇಟನ್ಯಾಳ, ಕಂಕಣವಾಡಿ, ಸವಸುದ್ದಿ, ಮುನ್ಯಾಳ ಸೇರಿದಂತೆ ಅನೇಕ ಗ್ರಾಮಗಳ ಅಯ್ಯಪ್ಪ ಸನ್ನಿಧಾನದ ಗುರುಸ್ವಾಮಿಗಳು ಮಾಲಾಧಾರಿಗಳು ಭಾಗವಹಿಸಿದರು. ಬಿ.ಬಿ. ಸಸಾಲಟ್ಟಿ, ಎನ್.ಜಿ.ಹೆಬ್ಬಾಳ ಶಿಕ್ಷಕರು ನಿರೂಪಿಸಿ ವಂದಿಸಿದರು.