ಕನ್ನಡ ಭಾಷೆಯು ಅತ್ಯಂತ ಪುರಾತನ ಭಾಷೆಯಾಗಿದ್ದು,ಇದು ಪ್ರತಿಯೊಬ್ಬ ಕನ್ನಡಿಗನಿಗೂ ತಾಯಿ ಸಮಾನ. ಕನ್ನಡದ ಬಗ್ಗೆ ಅಸಡ್ಡೆ ತೋರಿದರೆ ಕನ್ನಡಿಗರು ಭವಿಷ್ಯದಲ್ಲಿ ಭಾರೀ ಅನಾಹುತ ಎದುರಿಸಬೇಕಾದೀತು ಎಂದು ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಎಚ್ಚರಿಕೆ ನೀಡಿದರು.
ಕೆ.ಆರ್.ನಗರ ತಾಲ್ಲೂಕಿನ ಚುಂಚನಕಟ್ಟೆ ಹೋಬಳಿ ಹೊಸೂರಿನಲ್ಲಿ ಶ್ರೀ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯು ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜ್ಯದ ಏಳುಕೋಟಿ ಜನಸಂಖ್ಯೆ ಪೈಕಿ ಸುಮಾರು ಮೂರು ಕೋಟಿಯಷ್ಟು ಕನ್ನಡಿಗರು ಬೆಂಗಳೂರು ಹಾಗೂ ರಾಜ್ಯದ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದಾರೆ.
ಇವರೆಲ್ಲರೂ ತಮ್ಮ ಮಕ್ಕಳನ್ನು ಚಿಕ್ಕಂದಿನಿಂದಲೂ ಆಂಗ್ಲಭಾಷಾ ಶಾಲೆಗಳಲ್ಲಿ ಓದಿಸುತ್ತಿದ್ದಾರೆ. ಮಕ್ಕಳ ಭವಿಷ್ಯ ಮುಖ್ಯವೆಂದು ಹೇಳುತ್ತಾ ಕನ್ನಡ ಭಾಷೆಗೆ ತಿಲಾಂಜಲಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ತೀವ್ರಗೊಂಡಿದ್ದು,ಇನ್ನು ಕೆಲವೇ ವರ್ಷಗಳಲ್ಲಿ ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಭೀತಿ ತಲೆದೋರಿದೆ.
ಇನ್ನು ರಾಜ್ಯದ ಬೆಳಗಾವಿ, ಕೊಡಗು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ ಗಡಿಜಿಲ್ಲೆಗಳ ಸುಮಾರು ಒಂದು ಕೋಟಿ ಕನ್ನಡಿಗರು ಪರರಾಜ್ಯಗಳ ಭಾಷೆ ಹಾಗೂ ಜನರ ಹಾವಳಿಗೆ ಸಿಲುಕಿ ತತ್ತರಿಸಿದ್ದಾರೆ. ಜೊತೆಗೆ ರಾಜ್ಯದ
ಬ್ಯಾಂಕ್ ಗಳು, ಕೇಂದ್ರ ಸರ್ಕಾರಿ ಕಚೇರಿಗಳು, ರೈಲ್ವೆನಿಲ್ದಾಣಗಳಲ್ಲಿ ಪರಭಾಷಾ ಹಾವಳಿ ತೀವ್ರಗೊಂಡಿದೆ. ಕನ್ನಡ ಬಾರದಿರುವ ಬ್ಯಾಂಕ್ ಸಿಬ್ಬಂದಿಗಳಿಂದಾಗಿ ಗ್ರಾಮೀಣ ಜನರು ಅಪಾರ ತೊಂದರೆ ಎದುರಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕನ್ನಡ ರಾಜ್ಯೋತ್ಸವ ಎಂದರೆ ಕನ್ನಡಿಗರ ಮನೆಯ ಹಬ್ಬ.ತಾಯಿ ಭುವನೇಶ್ವರಿ ಎಲ್ಲರ ಮನೆಯ-ಮನದ ಅಧಿದೇವತೆ. ಈ ಪವಿತ್ರ ದಿನದಂದು ಕನ್ನಡ ನಾಡು-ನುಡಿ ಉಳಿವಿಗಾಗಿ ಎಲ್ಲರೂ ಕನ್ನಡದ ದೀಕ್ಷೆ ತೊಡಬೇಕು. ಕನ್ನಡ ನಾಡು-ನುಡಿಯ ಉಳಿವಿಗಾಗಿ ಸಪ್ತ ಸೂತ್ರಗಳನ್ನು ಅನುಸರಿಸಬೇಕು ಎಂದು ನುಡಿದ ಡಾ.ಭೇರ್ಯ ರಾಮಕುಮಾರ್ ಕನ್ನಡಿಗರೆಲ್ಲರೂ ಕನ್ನಡದಲ್ಲೇ ಮಾತನಾಡಬೇಕು.
ಅನ್ಯಭಾಷಿಕರಿಗೆ ಕನ್ನಡ ಕಲಿಸಬೇಕು.ತಮ್ಮ ಮಕ್ಕಳಿಗೆ ಪ್ರೌಢ ಶಾಲಾ ಹಂತದವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕೊಡಿಸಬೇಕು. ಬ್ಯಾಂಕ್ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿಯೇ ಸಹಿ ಹಾಕಬೇಕು. ಕನ್ನಡದಲ್ಲಿಯೇ ವ್ಯವಹರಿಸಬೇಕು. ಕನ್ನಡ ಪತ್ರಿಕೆ ಹಾಗೂ ಕನ್ನಡ ಪುಸ್ತಕಗಳನ್ನು ಓದಬೇಕು. ಕನ್ನಡ ಚಲನಚಿತ್ರಗಳನ್ನೇ ನೋಡಬೇಕು.ಕನ್ನಡ ಹಾಡುಗಳನ್ನೇ ಹಾಡಬೇಕು.ವಿದೇಶ ಯಾತ್ರೆ ಮಾಡುವ ಬದಲು ಕನ್ನಡ ನಾಡಿನ ಎಲ್ಲಾ ಪ್ರವಾಸೀ ಕ್ಷೇತ್ರಗಳನ್ನೂ ಪ್ರವಾಸ ಮಾಡಬೇಕು. ಕನ್ನಡ ರಾಜ್ಯೋತ್ಸವ ದಿನದಂದು ಇವೆಲ್ಲವನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ನಿರ್ಧಾರ ಮಾಡಬೇಕು. ಆ ಮೂಲಕ ಕನಗನಡ ನಾಡು-ನುಡಿಯನ್ನು ಮುಂದಿನ ಪೀಳಿಗೆಗೂ ಉಳಿಸುವ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಹಳೆಯೂರು ಗ್ರಾಮ ಹಿರಿಯ ಸಾಹಿತಿಗಳಾದ ಪ್ರೊ.ಎಚ್ಚೆಸ್ಕೆ ಅವರ ಜನ್ಮಸ್ಥಳ ವಾಗಿದ್ದು,ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಹಳೆಯೂರು ಗ್ರಾಮದ ಪ್ರಮುಖ ರಸ್ತೆ ಅಥವಾ ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡುವಂತೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಳೆಯೂರು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಹೆಚ್.ಆರ್.ಮಹೇಶ್ ಅವರಿಗೆ ಭೇರ್ಯ ರಾಮಕುಮಾರ್ ಮನವಿ ಮಾಡಿದರು.
ಹಳೆಯೂರು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಹೆಚ್. ಆರ್.ಮಹೇಶ್ ಅವರು ಮುಖ್ಯ ಅತಿಥಿ ಗಳಾಗಿ ಮಾತನಾಡಿ ಗ್ರಾಮಪಂಚಾಯ್ತಿ ಯ ಮುಂದಿನ ಸಾಮಾನ್ಯ ಸಭೆಯಲ್ಲಿ ಸರ್ವಸದಸ್ಯರ ಒಪ್ಪಿಗೆ ಪಡೆದು ಹಳೆಯೂರು ಗ್ರಾಮದ ರಸ್ತೆಯೊಂದಕ್ಕೆ ಪ್ರೊ.ಎಚ್ಚೆಸ್ಕೆ ಅವರ ಹೆಸರು ನಾಮಕರಣ ಮಾಡುವುದಾಗಿ ಪ್ರಕಟಿಸಿದರು. ರಾಜ್ಯದಲ್ಲಿ ಪರಭಾಷೆಗಳ ಹಾವಳಿ ತಪ್ಪಿಸಲು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆದವರು ಒತ್ತಾಯಿಸಿದರು.
ಮೈಸೂರಿನ ವಕೀಲರಾದ ಪ್ರಣೀತ್ ಅವರು ಮಾತನಾಡಿ ಕನ್ನಡ ಸಾಹಿತ್ಯಕ್ಕೆ ಏಳು ಜ್ಞಾನ ಪೀಠ ಪ್ರಶಸ್ತಿಗಳು ಸಂದಿವೆ. ಇದು ಅಂತರಾಷ್ಟ್ರೀಯ ಮಟ್ಟದಲ್ಲೂ ಬಾಷೆಯ ಗೌರವವನ್ನು ಹೆಚ್ಚಿಸಿದೆ. ಬ್ಯಾಂಕ್ ನೌಕರರು ರಾಜ್ಯಕ್ಕೆ ನೇಮಕಗೊಂಡ ಆರು ತಿಂಗಳ ಒಳಗಾಗಿ ಕನ್ನಡ ಕಲಿಯಬೇಕು. ಇಲ್ಲದಿದ್ದರೆ, ಅವರ ವಿರುದ್ದ ಕ್ರಮಕೈಗೊಳ್ಳಬೇಕು ಒತ್ತಾಯಿಸಿದರು.
ನಿವೃತ್ತ ಸೈನಿಕರಾದ ಮಧುಕುಮಾರ್ ಅವರು ಮಾತನಾಡಿ ಕನ್ನಡ ನಾಡಿನ ಯುವಜನತೆ ಭಗತ್ ಸಿಂಗ್,ಚಂದ್ರಶೇಖರ್ ಆಜಾದ್ ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸೈನ್ಯಕ್ಕೆ ಸೇರಿ ರಾಷ್ಟ್ರ ರಕ್ಷಣೆ ಮಾಡಬೇಕು. ಆಗ ಯುವಜನತೆಗೆ ಆರೋಗ್ಯವೂ ದೊರಕುತ್ತದೆ,ಆರ್ಥಿಕ ಸ್ವಾವಲಂಬನೆಯೂ ಉಂಟಾಗುತ್ತದೆ ಎಂದು ಕಿವಿಮಾತು ನುಡಿದರು.
ಭಗತ್ ಸಿಂಗ್ ಯೂತ್ ಫೌಂಡೇಶನ್ ಅಧ್ಯಕ್ಷರಾದ ಹೆಚ್.ಎಸ್.ಯೋಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಾಜೇಶ್ ಪ್ರಸ್ತಾವಿಕವಾಗಿ ಮಾತನಾಡಿದರು.ತಾಲ್ಲೂಕು ಬಿಜೆಪಿ ಮುಖಂಡ ರಾದ ಧರ್ಮ ಹೊಸೂರು ವೇದಿಕೆಯಲ್ಲಿ ಮಾತನಾಡಿ ಸಂಸ್ಥೆಯ ಕಾರ್ಯಗಳನ್ನು ಶ್ಲಾಘಿಸಿದರು. ಸಂಸ್ಥೆಯ ಕಾರ್ಯದರ್ಶಿ ರಕ್ಷಿತ್ ಸ್ವಾಗತಿಸಿದರು. ಖಜಾಂಚಿ ಕೃಷ್ಣಯ್ಯ ಕಾರ್ಯಕ್ರಮ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ಸ್ವಾಮಿಗೌಡ ವಂದಿಸಿದರು.
ಇದೇ ಸಂದರ್ಭದಲ್ಲಿ ಭಗತ್ಸಿಂಗ್ ಯೂತ್ ಫೌಂಡೇಶನ್ ನ ತಾಲ್ಲೂಕು ಘಟಕದ ಪ್ರಧಾನ ಸಂಘಟನಾ ಕಾರ್ಯದರ್ಶಿ ಯಾಗಿ ಹೆಚ್.ಕೆ.ಧರ್ಮಣ್ಣಗೌಡ, ಚುಂಚನಕಟ್ಟೆ ಹೋಬಳಿ ಸಂಚಾಲಕರಾಗಿ ಗೌತಮ್ ಗೌಡ, ಕಸಬಾ ಹೋಬಳಿ ಸಂಚಾಲಕರಾಗಿ ಶಿವಕುಮಾರ್,ಹುಣಸೂರು ತಾಲ್ಲೂಕು ಗಾವಡಗೆರೆ ಹೋಬಳಿ ಸಂಚಾಲಕರಾಗಿ ನಟರಾಜ್ ಮುಳ್ಳೂರು ಅಧಿಕಾರ ಸ್ವೀಕರಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳಾದ ಚೆಲುವನ್, ರಾಜೇಶ್, ರಾಕೇಶ್, ಮೋಹನ್, ಪ್ರಮೋದ್, ಧರ್ಮ ಹೊಸೂರು ಕೃಷ್ಣಯ್, ಸ್ವಾಮಿಗೌಡ ಹಾಗೂ ರಕ್ಷಿತ್ ಇವರುಗಳು ನೇತ್ರದಾನಕ್ಕೆ ತಮ್ಮ ಒಪ್ಪಿಗೆ ಪತ್ರಗಳನ್ನು ನೀಡುವ ಮೂಲಕ ನೇತ್ರದಾನ ಮಾಡಿದರು.