ಪ್ರೀತ್ಸೇ ಪ್ರೀತ್ಸೇ……ಕಣ್ಣು ಮುಚ್ಚಿ ನನ್ನ ಪ್ರೀತ್ಸೇ…ಮನಸು ಬಿಚ್ಚಿ ನನ್ನ ಪ್ರೀತ್ಸೆ ಅನ್ನುವ ಹಾಡು ಮನೋಜನ ಮೊಬೈಲ್ ನಲ್ಲಿ ರಿಂಗಣಿಸುತ್ತಿದ್ದರೆ ಬೆಡ್ಡಿನ ಮೇಲೆ ಅಂಗಾತವಾಗಿ ಬಿದ್ದಿದ್ದ ಮೊಬೈಲ್ ಬಿದ್ದಲ್ಲೇ ಬ್ಯಾಟರಿ ಮುಗಿದು ಜೀವ ಕಳೆದುಕೊಳ್ಳುವ ಹಂತಕ್ಕೆ ತಲುಪಿತ್ತು ಸಂಶಯ ಬಂದ ಸಂಜೀವ ಮನೋಜನ ಪೋಷಕರಿಗೆ ತಿಳಿಸಿದಾಗ ಮನೆಗೆ ಬಂದು ಬೆಡ್ ರೂಮಿನ ಬಾಗಿಲು ಒಡೆದು ನೋಡಿದರೆ ಒಳಗೆ ಮನೋಜ್ ಸೀಲಿಂಗ್ ಪ್ಯಾನಿಗೆ ಅಕ್ಕನ ವೇಲಿನಿಂದ ಕುಣಿಕೆ ಮಾಡಿ ನೇಣಿಗೆ ಶರಣಾಗಿದ್ದ….
ಇನ್ನೊಂದು ಕಡೆ ಇದೇ ತಿಂಗಳು ಗದಗ ಜಿಲ್ಲೆಯ ಗಜೇಂದ್ರಗಡದ ನರೆಗಲ್ ಗ್ರಾಮದಲ್ಲಿ ಅಪ್ಪಣ್ಣ ಗೊರಕಿ ಎಂಬ ಯುವಕ ಮತ್ತು ಲಲಿತ ಹಲಗೇರಿ ಎಂಬ ನವವಿವಾಹಿತ ಮಹಿಳೆ ಪೋಷಕರು ತಮ್ಮ ಪ್ರೀತಿಗೆ ಅಡ್ಡಿಯಾಗಿ ಒತ್ತಾಯದಿಂದ ಬೇರೊಬ್ಬ ಯುವಕನ ಜೊತೆ ಮದುವೆ ಮಾಡಿಸಿದ್ದಕ್ಕೆ ನೊಂದ ಪ್ರೇಮಿಗಳಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದರು.
ಹೀಗೆ ನೋಡುತ್ತ ಹೋದರೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಯಾಸಿನ್ ಬಾಗೋಡೆ ಎಂಬ ಯುವಕ ಮತ್ತು ಹೀನಾ ಕೌಸರ್ ಅನ್ನುವ ಯುವತಿಯ ಜೋಡಿ ಕೊಲೆಯೊಂದು ನಡೆದು ಹೋಗಿತ್ತು ಕೊಲೆಗಾರನನ್ನ ಹುಡುಕುತ್ತ ಹೊರಟ ಪೋಲಿಸರಿಗೆ ಕೊಲೆಯ ಹಿಂದಿನ ಕರಾಳ ಸತ್ಯವೊಂದು ಪತ್ತೆಯಾಗಿತ್ತು ಹೀನಾ ಕೌಸರ್ ಇದಕ್ಕೂ ಮೊದಲು ತೌಫಿಕ್ ಖ್ಯಾಡಿ ಅನ್ನುವ ಯುವಕನನ್ನ ಮದುವೆಯಾಗಿ ನಂತರದಲ್ಲಿ ಹಿರಿಯರ ಸಮ್ಮುಖದಲ್ಲಿ ತಲಾಖ್ ನೀಡಿ ಯಾಸೀನ್ ಬಾಗೋಡೆಯನ್ನ ಮದುವೆ ಆಗಿದ್ದಳು ಇದರಿಂದ ಉರಿದುಹೋಗಿದ್ದ ತೌಪಿಕ್ ಇಬ್ಬರನ್ನು ನಿರ್ದಯವಾಗಿ ಕೊಚ್ಚಿ ಕೊಲೆ ಮಾಡಿದ್ದ…
ಕಲಬುರ್ಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಾಗಣಗೇರಾ ಗ್ರಾಮದ ಶಶಿಕಲಾ ಹಾಗೂ ಅದೇ ಗ್ರಾಮದ ಗೊಲ್ಲಾಳ ಎಂಬ ಯುವಕ ನೇಣಿಗೆ ಶರಣಾಗಿದ್ದು ವರಸೆಯಲ್ಲಿ ಇಬ್ಬರೂ ಅಣ್ಣ ತಂಗಿ ಆಗಿದ್ದರು ಅವರಿಬ್ಬರ ಪ್ರೀತಿಯನ್ನ ಅವರ ಕುಟುಂಬದವರಷ್ಟೇ ಅಲ್ಲ ಈ ಸಮಾಜ ಕೂಡ ಒಪ್ಪಲು ಸಾಧ್ಯವಿರಲಿಲ್ಲ.
ರಾಮನಗರದ ಹೊರ ವಲಯದ ಕುಂಬಾಪುರ ರೈಲ್ವೆ ಗೇಟ್ ಬಳಿ ಶನಿವಾರ ನಡೆದಿದ್ದ ಘಟನೆಯೊಂದರಲ್ಲಿ ಪ್ರೇಮಿಗಳಿಬ್ಬರು ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು
ನೆಲಮಂಗಲದ ನಿವಾಸಿ ಹತ್ತೊಂಭತ್ತು ವರ್ಷದ ನವ್ಯ ಮತ್ತು ಇಪ್ಪತ್ತು ವರ್ಷದ ಹರ್ಷವರ್ಧನ ಮೃತ ಪ್ರೇಮಿಗಳಾಗಿದ್ದರು. ಬೈಕ್ ನಲ್ಲಿ ಬಂದ ಪ್ರೇಮಿಗಳಿಬ್ಬರೂ ರೈಲ್ವೆ ಗೇಟ್ ಬಳಿ ಬೈಕ್ ನಿಲ್ಲಿಸಿ ಹಳಿ ಮೇಲೆ ಮಲಗಿದ್ದು ಇಬ್ಬರ ಮೇಲೆ ರೈಲು ಹರಿದ ಪರಿಣಾಮ ಅವರ ದೇಹಗಳು ಛಿದ್ರ ಛಿದ್ರವಾಗಿದ್ದವು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಚನ್ನಪಟ್ಟಣ ರೈಲ್ವೆ ಪೊಲೀಸರು, ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು
ಬೆಂಗಳೂರಿನ ಕೊತ್ತನೂರು ಠಾಣೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್ ಒಂದರ ಫ್ಲ್ಯಾಟ್‌ನಲ್ಲಿ ಬೆಂಕಿ ಹಚ್ಚಿಕೊಂಡು ಇಪ್ಪತ್ತು ವರ್ಷದ ಸೌಮಿನಿ ದಾಸ್ ಹಾಗೂ ಇಪ್ಪತ್ತೊಂಭತ್ತು ವರ್ಷದ ಅಬಿಲ್ ಅಬ್ರಾಹಂ ಆತ್ಮಹತ್ಯೆ ಮಾಡಿಕೊಂಡಿದ್ದರು. ‘ಪಶ್ಚಿಮ ಬಂಗಾಳದ ಸೌಮಿನಿ ದಾಸ್ ಹಾಗೂ ಕೇರಳದ ಅಬಿಲ್, ಪರಸ್ಪರ ಪ್ರೀತಿಸುತ್ತಿದ್ದು ಒಂದೇ ಫ್ಲ್ಯಾಟ್‌ನಲ್ಲಿ ಲೀವಿಂಗ್ ಟುಗೆದರ್ ಆಗಿ ಸಹಜೀವನ ನಡೆಸುತ್ತಿದ್ದವರು ಇದ್ದಕ್ಕಿದ್ದಂತೆ ಇಬ್ಬರೂ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದರು.
ಡಿಸೆಂಬರ್ ಹದಿಮೂರು 2023 ರಲ್ಲಿ ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೌಕಿ ತಾಂಡಾದ ಹದಿನೆಂಟು ವರ್ಷದ ಆಕಾಶ್ ಮತ್ತು ಹದಿನೈದು ವರ್ಷದ ರಾಧಿಕಾ ಎಂಬ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದರು. ಮೃತ ಆಕಾಶ್ ಚಿತ್ತಾಪುರ ತಾಲೂಕಿನ ಕೊಲ್ಲೂರು ಗ್ರಾಮದ ನಿವಾಸಿಯಾಗಿದ್ದು, ರಾಧಿಕಾ ರಾಂಪೂರ್ ಹಳ್ಳಿಯ ನಿವಾಸಿಯಾಗಿದ್ದಳು. ಇಬ್ಬರೂ ಅಪ್ರಾಪ್ತ ಪ್ರೇಮಿಗಳು ಅಕ್ಕ ಪಕ್ಕದ ನಿವಾಸಿಗಳಾಗಿದ್ದು, ಕಳೆದೊಂದು ವರ್ಷದಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತ್ತಿದ್ದ ಮುಂದೆ ಎದುರಾಗುವ ಪೋಷಕರ ನಿರಾಕರಣೆ ಅವರನ್ನು ಆತ್ಮಹತ್ಯೆಯ ಹಾದಿ ತುಳಿಯುವಂತೆ ಮಾಡಿತ್ತು.
ಇವೆಲ್ಲ ಪ್ರೇಮಿಗಳ ಆತ್ಮಹತ್ಯೆಯ ಒಂದಷ್ಟು ಉದಾಹರಣೆಗಳಷ್ಟೇ
ನಿತ್ಯವೂ ಒಂದಲ್ಲ ಒಂದು ಕಡೆ ಸಾಯಬಾರದ ವಯಸ್ಸಿನಲ್ಲಿ ಸಾವಿಗೆ ಶರಣಾದ ನೇಣಿನ ಕುಣಿಕೆಗೆ ಬಿದ್ದ,ರೈಲು ಹಳಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ,ಮತ್ತು ವಿಷ ಸೇವಿಸಿ ಅಥವಾ ನದಿಗೆ ಹಾರಿ ಜೀವಬಿಟ್ಟ ಎಷ್ಟೋ ಯುವಕ ಯುವತಿಯರ ದುರಂತ ಸಾವಿನ ಸುದ್ದಿಗಳು ತೀರ ಸಹಜವೆಂಬಂತೆ ನಮ್ಮ ನಿಮ್ಮೆಲ್ಲರ ಕಿವಿಗೆ ಬೀಳುತ್ತಲೇ ಇರುತ್ತವೆ.
ಬದುಕು ಅಂದ ಮೇಲೆ ಈಜಬೇಕು ಈಜಿ ಜಯಿಸಬೇಕು ಅನ್ನುವ ಧೈರ್ಯವೇ ಇಲ್ಲದ ಇಂದಿನ ಯುವಕ ಯುವತಿಯರು ಸಣ್ಣ ಪುಟ್ಟ ಕಾರಣಗಳಿಗೆಲ್ಲ ಆತ್ಮಹತ್ಯೆಯ ಹಾದಿ ತುಳಿಯುವದು ಒಂದು ಕಡೆಯಾದರೆ ತನ್ನ ಪ್ರೀತಿ ತನಗೆ ಸಿಗುವದಿಲ್ಲ ಅಂತಲೋ,ಅವರ ಮನೆಯಲ್ಲಿ ವಿರೋಧ ವ್ಯಕ್ತವಾಯಿತು ಅಂತಲೋ ,ತಮ್ಮ ಮದುವೆಯನ್ನ ಈ ಸಮಾಜ ಒಪ್ಪುವದಿಲ್ಲ ಅಂತಲೋ,ಅಥವಾ ತನ್ನ ಪ್ರೇಮ ನಿವೇದನೆ ರಿಜೆಕ್ಟ್ ಆಯಿತು ಅಂತಲೋ,ತನ್ನ ಪ್ರೇಯಸಿ ಅಥವಾ ಪ್ರಿಯಕರ ಮದುವೆಯಾಗುವದಾಗಿ ನಂಬಿಸಿ ಕೈ ಕೊಡುತ್ತಿದ್ದಾನೆ ಅಂತಲೋ ಒಬ್ಬರನ್ನೊಬ್ಬರು ಇರಿದು ಸಾಯಿಸುವ ಅಥವಾ ಅವರನ್ನು ಕೊಂದು ತಾವೂ ಕೂಡ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಗಳು ನಮ್ಮ ಕಿವಿಗೆ ಬಿದ್ದಾಗೆಲ್ಲ ಸದ್ಯ ನಮ್ಮ ಮಕ್ಕಳ ಬದುಕು ಹೀಗಾಗದಿರಲಿ ಅನ್ನುವ ಪ್ರಾರ್ಥನೆ ಬಹುತೇಕ ಎಲ್ಲ ತಂದೆ-ತಾಯಿಗಳದ್ದಾಗಿರುತ್ತದೆ.
ಪೂನಾ,ಬೆಂಗಳೂರು,ಮುಂಬೈ,ದೆಹಲಿ ಆಗ್ರಾದಂತಹ ದೊಡ್ಡ ಪಟ್ಟಣಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಇಂತಹ ಘಟನೆಗಳು ಈಗೀಗ ಹಳ್ಳಿಯಲ್ಲೂ ಕೂಡ ನಡೆದಿರುತ್ತವೆ ಅನ್ನುವದಕ್ಕೆ ತಾಜಾ ಉದಾಹರಣೆಗಳು ಸಾಕಷ್ಟಿವೆ
ಇನ್ನು ಜನಪದದ ಹೆಸರಿನಲ್ಲಿ ಬರುತ್ತಿರುವ ಬಹುತೇಕ ಹಾಡುಗಳಲ್ಲಿ ಅನೈತಿಕ ಸಂಬಂಧವನ್ನು ಪ್ರೇರೇಪಿಸುವ ಮತ್ತು ಕಾಮದ ಮತ್ತನ್ನು ನವಿರೇಳಿಸುವ ಅರ್ಥದ ಹಾಡುಗಳೇ ಹೆಚ್ಚಾಗಿರುವ ದಿನಗಳ ನಡುವೆ ಪ್ರೀತಿ ಕುರುಡು ಪ್ರೇಮ ಕುರುಡು ಅನ್ನುವದರಿಂದ ಹಿಡಿದು ಚಕ್ಕರ್ ಹಾಕು ಚಕ್ಕರ್ ನಿನ್ನ ಜಾಬಿಗೆ ಅನ್ನುವ ಮತ್ತು ಹಿತ್ತಲಕ್ ಕರಿಬ್ಯಾಡ ಮಾವ ಅನ್ನುತ್ತಲೆ ಮೊದಲು ಮಕ್ಕಳಾಗ್ಬೇಕು ಆಮ್ಯಾಲ್ ಮದಿವಿ ಆಗಬೇಕು ಅನ್ನುವ ಅಶ್ಲೀಲ ಹಾಡಿನ ತನಕ ಸಿನೆಮಾ ರಂಗವೂ ಕೂಡ ಹಸಿ ಬಿಸಿ ದೃಶ್ಯಗಳನ್ನೆ ಹೊತ್ತು ತಂದು ಪ್ರೇಮ ಅಂದರೆ ಕಾಮ ಅನ್ನುವದನ್ನೇ ತಲೆಗೆ ಬಿತ್ತುತ್ತ ಇರುವಾಗ ಮತ್ತು ನೋಡ್ ತಮ್ಮ ಅವ್ರ ಜಾತಿ ಬ್ಯಾರೆ ನಿಮ್ ಜಾತಿ ಬ್ಯಾರೇ ಸುಮ್ಮನ್ ನಾವು ಹೇಳಿದಷ್ಟು ಕೇಳು ಇಲ್ಲಂದ್ರ ಇಬ್ರ ಮನ್ಯಾಗೂ ಹೆಣಾ ಬೀಳತಾವು ನೋಡು ಅನ್ನುವದನ್ನೆ ಮುಂದಿಟ್ಟುಕೊಂಡು ಪ್ರೇಮಿಗಳನ್ನ ಅಗಲಿಸುವ ಮಹಾನ್ ಕಾರ್ಯಕ್ಕೆ ಪೋಷಕರು ಜಾತಿ ಧರ್ಮದ ನೆಪವೊಡ್ಡಿ ಕೈ ಹಾಕುತ್ತಿರುವದರ ಪರಿಣಾಮವಾಗಿಯೂ ಸಾವಿಗೆ ಶರಣಾಗುವ ಅದೆಷ್ಟೋ ಯುವ ಪ್ರೇಮಿಗಳ ಕರುಣಾಜನಕ ಕಥೆ ಕೇಳಿದಾಗೆಲ್ಲ ಅಯ್ಯೋ ದುರ್ವಿಧಿಯೇ ಅನ್ನಿಸದೇ ಇರದು.
ತಾವು ಪ್ರೀತಿಗೆ ಅಡ್ಡಲಾಗಿ ಜಾತಿಯ ಗೋಡೆ ಕಟ್ಟಲು ಹೊರಟಾಗ,ಕಟ್ಟು ಪಾಡು ಅಂತೆಲ್ಲ ಒಂದಷ್ಟು ಒತ್ತಡಗಳನ್ನು ಮಕ್ಕಳ ಮೇಲೆ ಹೇರಲು ಹೊರಟಾಗ ತಮ್ಮ ಮಕ್ಕಳು ಬಾರದ ಲೋಕಕ್ಕೆ ತೆರಳಿದ ಬಳಿಕ ಮುಗಿಲು ಮುಟ್ಟುವ ಪೋಷಕರ ಆಕ್ರಂದನ ಹಾಗೂ ಅಯ್ಯೋ ಮಗಳೇ ಅಂತಲೋ ಮಗನೇ ಯಾಕಪ್ಪ ಹಿಂಗ್ ಮಾಡಕೊಂಡಬಿಟ್ಟೆ ಅಂತಲೋ ಸುರಿಸುವ ಕಣ್ಣೀರು ಎಲ್ಲವೂ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆಯೇ ಆಗುತ್ತಿದೆ.
ಪ್ರೀತಿ ಅಂದರೆ ಪರಸ್ಪರ ಒಬ್ಬರನ್ನೊಬ್ಬರು ಸುಖವಾಗಿ ಇಡುವದು ಮತ್ತು ತಮ್ಮ ಪ್ರೀತಿ ಪಾತ್ರರ ಸಂತೋಷಕ್ಕಾಗಿ ನೋವು ನುಂಗಿಯಾದರೂ ನಗುತ್ತ ಇರುವದು….
ತಾನು ಪ್ರೀತಿಸಿದ ಹುಡುಗ ಅಥವಾ ಹುಡುಗಿಗೆ ಒಳ್ಳೆಯದಾಗಲಿ ಅಂತ ಹರಸುವದು ಅನ್ನುವದನ್ನೇ ಮರೆತು ನನ್ನ ಬಿಟ್ಟು ನೀನು ಅದ್ ಹ್ಯಾಗ್ ಬದುಕ್ತಿಯಾ ನೋಡ್ತೀನಿ ಅನ್ನುವ ಛಲಕ್ಕೆ ಬೀಳುವ ಯುವಕ ಯುವತಿಯರು ಬಹುತೇಕ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿ ಜೀವ ಬಿಡುವದೋ ಅಥವಾ ಮತ್ತೊಬ್ಬರ ಜೀವವನ್ನ ಅನಾಮತ್ತು ಬಲಿ ಪಡೆಯುವದೋ ನಡೆಯುತ್ತಲೇ ಇರುತ್ತದೆ.
ಅದರಲ್ಲೂ ಹಿಂದೂ ಮುಸ್ಲಿಂ ಹೆಸರಿನಲ್ಲಿ ಅಪ್ಪಟ ಪ್ರೇಮವನ್ನೂ ಸಹ ಲವ್ ಜಿಹಾದ್ ಅನ್ನುವವರ ನಡುವೆಯೇ ಮುಸ್ಲಿಂ ಯುವಕರನ್ನು ಮದುವೆಯಾದ ಹಿಂದೂ ಯುವತಿಯರು,ಹಾಗೂ ಹಿಂದೂ ಯುವಕರನ್ನು ಮದುವೆಯಾದ ಮುಸ್ಲಿಂ ಯುವತಿಯರು ಬುರ್ಕಾ ಧರಿಸದೇ,ಕುಂಕುಮ ಅಳಿಸದೆ,ಹೆಸರು ಬದಲಾಯಿಸಿಕೊಳ್ಳದೆ ಅವರ ಮನೆಯ ಮಗಳಂತೆಯೇ ಬದುಕುತ್ತಿರುವ ಅದೆಷ್ಟೋ ಉದಾಹರಣೆಗಳು ಈ ಸಮಾಜದ ಮಿತಿಗಳಿಗೆ ಹೆದರಿ ತಾವು ಸುಖವಾಗಿ ಇರುವದನ್ನೂ ಕೂಡ ಹೇಳಿಕೊಳ್ಳಲಾಗದೆ ಉಳಿದ ಪರಿಣಾಮವಾಗಿ ಅಲ್ಲೊಂದು ಇಲ್ಲೊಂದು ನಡೆದ ಕ್ರೌರ್ಯಗಳು ಮಾನವೀಯತೆಯ ಹೃದಯ ಇರುವವರಿಂದ ಖಂಡಿಸಲ್ಪಡುವದು ನಿಜವಾದರೂ ರಾಜಕೀಯ ದಾಳಕ್ಕೆ ಸಿಲುಕಿ ಬೇರೆಯದೇ ರೂಪು ಪಡೆಯುತ್ತಿರುವದು ವಿಪರ್ಯಾಸವೇ ಸರಿ.
ಓರಗೆಯಲ್ಲಿ ಅಣ್ಣ ತಂಗಿ ಆದವರ ನಡುವೆ ಅಷ್ಟೇ ಅಲ್ಲದ ಸಮಾಜ ಒಪ್ಪದ ಸಂಭಂಧಗಳ ನಡುವೆಯೂ ಅಂಕುರಿಸುವ ಪ್ರೇಮವೆಂಬುದು ಹೀಗೆ ಜೀವ ಬಿಡುವಂತೆ ಮಾಡುತ್ತದೆ ಅನ್ನುವದರಿಂದ ಹಿಡಿದು ಕೇವಲ ಕಣ್ಣ ಕಣ್ಣ ಸಲುಗೆಯಿಂದ ಆರಂಭವಾಗಿ,ಚಾಟಿಂಗ್ ಡೇಟಿಂಗ್ ಅಂತೆಲ್ಲ ಆರಂಭವಾಗುವ ಒಂದಷ್ಟು ಪ್ರೇಮ ಕಥೆಗಳು ಆರಂಭವಾಗುವಾಗ ನೆನಪಾಗದ ಜಾತಿ,ಧರ್ಮ,ಮತ್ತು ಆಸ್ತಿ ಅಂತಸ್ತಿನ ಸ್ಟೇಟಸ್ಸುಗಳೆಲ್ಲ ಆನಂತರದ ದಿನಗಳಲ್ಲಿ ಧುತ್ತನೇ ಎದುರು ನಿಂತು ನಕ್ಕಾಗ ಇನ್ನು ಮುಂದೆ ನನ್ನ ಮರೆತು ಬಿಡು ಬಂಗಾರಾ…ಪ್ಲೀಜ್ ನನ್ನ ಅರ್ಥ ಮಾಡ್ಕೋ ಅಂತ ಒಬ್ಬರ ಬಾಯಿಂದ ಹೊರಟ ತಕ್ಷಣವೇ ತೀರ ಜೀವಬಲಿ ಪಡೆಯುವಷ್ಟರ ಮಟ್ಟಿಗೆ ಅಥವಾ ಪ್ರೇಮ ನಿರಾಕರಣೆ ಆದ ತಕ್ಷಣವೇ ಮಾನ ಹರಣದ ಪ್ರಯತ್ನ,ಯಾಸಿಡ್ ದಾಳಿ,ಕೊಲೆ ಪ್ರಯತ್ನ, ಅಥವಾ ಭೀಬತ್ಸವಾಗಿ ಇರಿದು ಕೊಲ್ಲುವಷ್ಟು ಅಥವಾ ತಮ್ಮ ಬದುಕನ್ನೇ ಕೊನೆಗಾಣಿಸಿಕೊಳ್ಳುವಷ್ಟು ಮನುಷ್ಯನಲ್ಲಿ ರಾಕ್ಷಸೀ ಗುಣಗಳು ಹುಟ್ಟುತ್ತಿರುವದು ಕೇವಲ ಅವರು ನನ್ನವರಾಗಬೇಕು ಅನ್ನುವ ಸ್ವಾರ್ಥದ ವಿಜ್ರಂಭನೆಯಿಂದಲೇ ಅನ್ನುವದನ್ನ ಅಲ್ಲಗಳೆಯಲು ಆಗುವದಿಲ್ಲ.
ಅದರಲ್ಲೂ ತ್ರಿಕೋನ ಪ್ರೇಮ ಕಥೆಗಳು ಈಗೀಗ ರೇಜಿಗೆ ಹುಟ್ಟಿಸುವಷ್ಟು ಚಿತ್ರರಂಗದ ತೆರೆಯ ಮೇಲೆ ಅಪ್ಪಳಿಸತೊಡಗಿದ ಮೇಲೆ ತಾನು ಪ್ರೀತಿಸಿದವರನ್ನು ಹರಸಿ ಹಾರೈಸುವದನ್ನು ಬಿಟ್ಟು ತಾವು ಗುಂಡಿಟ್ಟುಕೊಂಡೋ,ಬೆಟ್ಟದ ತುದಿಯಿಂದಲೋ,ಅಪಾರ್ಟಮೆಂಟಿನಿದಲೋ ಜಿಗಿದು ಸಾಯುವ ಅಥವಾ ತಮ್ಮ ಪ್ರೀತಿ ನಿರಾಕರಿಸಿದವರನ್ನು ಕೊಲ್ಲಲು ಹವಣಿಸುವ ದೃಶ್ಯಗಳನ್ನೇ ಕ್ಲೈಮ್ಯಾಕ್ಸ ಅಂತ ತೋರಿಸಿದ ಮೇಲೆ ಈಗಷ್ಟೇ ಎಳಸು ಪ್ರೇಮದ ನವಿರು ಅನುಭವದ ಯುವಕ ಯುವತಿಯರು ದಾರಿ ತಪ್ಪದೆ ಇನ್ನೇನು ತಾನೇ ಆಗಲು ಸಾಧ್ಯ?
ಆಯ್ತು ಆಗೋದೆಲ್ಲ ಆಗಿ ಹೋಯ್ತು ನಮ್ ಪಾಲಿಗೆ ಸತ್ತೋದ್ರಿ ಅನಕೋತಿವಿ ಎಲ್ಲಾದ್ರೂ ದೂರ ಹೋಗಿ ಬದುಕಿಕೊಳ್ಳಿ ಅನ್ನುವ ಅಥವಾ ಬದಲಾವಣೆ ಅಸಾಧ್ಯ ಅಂತ ಇರುವದನ್ನ ಒಪ್ಪಿಕೊಂಡು ಮಕ್ಕಳನ್ನು ಆಶಿರ್ವದಿಸಿ ಎಡವಿದ ಮಕ್ಕಳು ಹಾದಿ ತಪ್ಪದಂತೆ ಕಾಯ್ದುಕೊಳ್ಳುವ ಪೋಷಕರ ಕೊರತೆಯ ನಡುವೆ ತಮ್ಮ ಮಗ ಅಥವಾ ಮಗಳು ಪ್ರೀತಿಸಿದ ಯುವಕ ಅಥವಾ ಯುವತಿಯನ್ನೋ ಅಥವಾ ತಮ್ಮದೇ ಕರುಳ ಕುಡಿಯನ್ನೋ ಸಮಾಜದಲ್ಲಿನ ಘನತೆಯ ಹೆಸರಿನಲ್ಲಿ ಮರ್ಯಾದಾ ಹತ್ಯೆ ಮಾಡಿರುವ ಘಟನೆಗಳನ್ನು ಕೂಡ ನಾವು ಖಂಡಿಸಲೇಬೇಕು.
ಪ್ರೀತಿಸಿದವರು ಕೈ ಕೊಟ್ಟ ತಕ್ಷಣಕ್ಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಸಾವನ್ನು ಆಹ್ವಾನಿಸಿಕೊಳ್ಳುವ ಅಥವಾ ಕುಡಿತದ ದಾಸರಾಗಿ ತಮ್ಮನ್ನು ತಾವೇ ಭಗ್ನ ಪ್ರೇಮಿ ಅಂತ ಭಾವಿಸುವ ಮತ್ತು ಬದುಕಿನ ಬಗ್ಗೆ ನಿರರ್ಥಕ ಭಾವ ಹೊತ್ತು ಭಾವ ಶೂನ್ಯರಾಗಿ,ಹೆತ್ತವರ ಮತ್ತು ಒಡಹುಟ್ಟಿದವರ ಮನಸ್ಸು ನೋಯಿಸುವದಕ್ಕಿಂತ ತಮ್ಮ ಪ್ರೇಮ ವೈಫಲ್ಯದ ನೋವು ನುಂಗಿ ನಕ್ಕು ಬದುಕುವ ಹಕ್ಕು ಎಲ್ಲರಿಗೂ ಇದೆ ಅನ್ನುವದನ್ನ ತಿಳಿಸುವ ಪ್ರಯತ್ನಗಳು ಮಾತ್ರ ನಿರಂತರವಾಗಿ ನಡೆಯಬೇಕಿದೆ.
ಅಂದ ಹಾಗೆ ಪ್ರೀತಿ ಮಧುರ ತ್ಯಾಗ ಅಮರ ಅನ್ನುವದನ್ನ ಕೇವಲ ಹುಡುಗ ಹುಡುಗಿಯರಿಗಷ್ಟೇ ಪಾಠ ಮಾಡದೆ ಅವರ ಪೋಷಕರಿಗೂ ಕೂಡ ಪಾಠ ಮಾಡಬೇಕಾದ ಅನಿವಾರ್ಯತೆಯ ಅರಿವು ನಮ್ಮಲ್ಲಿ ಜಾಗೃತವಾದಗಲಷ್ಟೇ ಹೆತ್ತು ಹೊತ್ತು ಕಷ್ಟಬಿದ್ದು ತಮ್ಮ ಮಕ್ಕಳನ್ನು ಮುದ್ದು ಮಾಡಿ ಬೆಳೆಸಿದ ಪೋಷಕರು ತಮ್ಮ ಮಕ್ಕಳು ಯಾರನ್ನೋ ಪ್ರೀತಿಸಿದರು,ತಮಗೆ ತಿಳಿಸದೆ ಓಡಿ ಹೋಗಿ ಮದುವೆಯಾದರು,ಅಂತರ್ಜಾತಿಯ ರಜಿಸ್ಟರ್ ಮ್ಯಾರೇಜ್ ಆದರೂ ಅನ್ನುತ್ತ ಕೊರಗುವ ಬದಲು ಮತ್ತು ಅವರ ಜೀವವನ್ನು ಬಲಿ ಪಡೆಯುವ ಬದಲು ಅವರು ಮಾಡಿದ ತಪ್ಪನ್ನು ಕ್ಷಮಿಸಿದರಷ್ಟೇ ತಮ್ಮ ಮಕ್ಕಳನ್ನು ಜೀವಂತವಾಗಿ ನೋಡಲು ಸಾಧ್ಯ..
ಇದರ ನಡುವೆಯೇ ತೀರ ಕೊಲೆಯಂತಹ ಹೇಯ ಕೃತ್ಯ ನಡೆಸುವ ನರಭಕ್ಷಕ ವ್ಯಾಘ್ರಗಳಂತಹ ಕುತ್ಸಿತ ಮನಸ್ಸಿನ ವ್ಯಕ್ತಿಗಳಿಗೆ ಕಠಿಣ ಶಿಕ್ಷೆ ಯನ್ನು ನೀಡಿದ ಉದಾಹರಣೆಗಳು ಕೂಡ ಹೆಚ್ಚು ಹೆಚ್ಚು ಪ್ರಚಾರಕ್ಕೆ ಬಂದು ತೀರ್ಪು ತಡವಾದಷ್ಟೂ ಅಪರಾಧಿಗೆ ರಕ್ಷಣೆಯ ಅವಕಾಶಗಳು ಹೆಚ್ಚುತ್ತವೆ ಅನ್ನುವದನ್ನು ಅರಿತು ತ್ವರಿತವಾಗಿ ವಿಚಾರಣೆ ನಡೆಸಿ ಶಿಕ್ಷೆ ನೀಡಿದಾಗಲಷ್ಟೇ ಕಾನೂನಿನ ಅರಿವು ಜನಸಾಮಾನ್ಯರಲ್ಲಿ ಕನಿಷ್ಠ ಪಕ್ಷ ಪ್ರೀತಿ ಪ್ರೇಮದ ಹೆಸರಿನಲ್ಲಿ ನಡೆಯುವ ಕೊಲೆ,ಯಾಸಿಡ್ ದಾಳಿ,ಮತ್ತು ಸ್ನೇಹಿತನಿಂದಲೇ ಅತ್ಯಚಾರದಂತಹ ಪ್ರಕರಣಗಳಿಗೆ ನಾವು ನೀವೆಲ್ಲ ಕಡಿವಾಣ ಹಾಕಬಹುದು.
ಇಂದಿನ ಯುವಕ ಯುವತಿಯರಿಗೆ ಅಮರ ಪ್ರೇಮಿಗಳೆಂದರೆ ಸಲೀಂ-ಅನಾರ್ಕಲಿ, ಶಹಜಹಾನ್ -ಮುಮ್ತಾಜ್ ಅಷ್ಟೆ ಅಲ್ಲ ಸ್ವಾಮೀ ಬಾಜೀರಾವ್ ಮಸ್ತಾನಿ,ಪೃಥ್ವಿರಾಜ್ ಚವ್ಹಾಣ ಹಾಗೂ ಸಂಯುಕ್ತೆ, ಮತ್ತು ಪಂಜಾಬಿನ ಅಮರ ಪ್ರೇಮ ಕಥೆಗಳಲ್ಲಿ ಒಂದಾದ ಮಹಿವಾಲ್ ಮತ್ತು ಸೋಹ್ನಿಯದ್ದು ಕೂಡ ಅನ್ನುವದನ್ನ ಇಂದಿನ ಯುವಪೀಳಿಗೆಗೆ ಪರಿಚಯಿಸುವದರ ಜೊತೆಗೆ ಪ್ರೀತಿ ಮತ್ತು ಪ್ರೇಮವೆಂದರೆ ಕೇವಲ ಒಬ್ಬರನ್ನೊಬ್ಬರು ಕಾಮಿಸುವದಲ್ಲ ಮತ್ತು ಅವಕಾಶ ಸಿಕ್ಕಾಗ ದೇಹ ಬೆಸೆಯುವದಕ್ಕೆ ಹವಣಿಸುವದಲ್ಲ,ಅವರು ತಮಗೆ ಸಿಗಲಿಲ್ಲ ಅಂತ ಪರಿತಪಿಸುವದಲ್ಲ,
ಅದರ ಹೊರತಾಗಿಯೂ ನೀನು ನನಗೆ ಸಿಕ್ಕರೆ ನಿನ್ನೊಂದಿಗಿರುತ್ತೇನೆ ಇಲ್ಲವಾದರೆ ನಿನ್ನ ನೆನಪಿನಲ್ಲಿ ಬದುಕುತ್ತೇನೆ ಅಂತ ಅವರಿಗಷ್ಟೇ ಪಿಸುಗುಟ್ಟಿ ಎಲ್ಲೇ ಇರು….ಹೇಗೆ ಇರು… ಎಂದೆಂದಿಗೂ ನೀ ಸುಖವಾಗಿರು….. ಅನ್ನುತ್ತ…….ನೀ ನಡೆವ ದಾರಿಯಲ್ಲಿ ನಗೆ ಹೂವು ಬಾಡದಿರಲಿ… ಈ ಬಾಳ ಬುತ್ತಿಯಲ್ಲಿ ಸಿಹಿ ಪಾಲು ನಿನಗಿರಲಿ, ಕಹಿ ಎಲ್ಲ ನನಗಿರಲಿ…. ಅಂತ ಹೃದಯಸ್ಪರ್ಶಿ ಯಾಗಿ ಒಬ್ಬರನ್ನೊಬ್ಬರು ಹರಸಿ-ಹಾರೈಸಿ ಅವರ ನೆನಪುಗಳಲ್ಲಿ ಮಧುರವಾಗಿ ಉಳಿದುಹೋಗುವದು ಮತ್ತು ನಿಧಾನಕ್ಕೆ ಅವರ ಬದುಕಿನ ತೆರೆಯ ಮರೆಗೆ ಸರಿದು ಹೋಗಿ ಅವರನ್ನು ಸ್ವಚ್ಚಂಧವಾಗಿ ಬದುಕಲು ಬಿಟ್ಟು ತಾವು ಕೂಡ ಬದುಕುವದು ಅಂತ ಅದು ಯಾವಾಗ ಅರ್ಥವಾಗುತ್ತದೆಯೋ ಬಲ್ಲವರಾರು??
ದೀಪಕ್ ಶಿಂಧೇ
9482766018