ಬೆಳಗಾವಿಯ ಕುರಿತು ಹೆಮ್ಮೆ ಪಡುವಂತಹ ಹಲವು ಸಂಗತಿಗಳಿವೆ. ೧೮೫೭ ರಲ್ಲಿ ಝಾಂಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಕ್ಕಿಂತ ೩೩ ವರ್ಷ ಮೊದಲು ಕಿತ್ತೂರು ರಾಣಿ ಚೆನ್ನಮ್ಮ ೧೮೨೪ ರಲ್ಲಿಯೇ ಬ್ರಿಟಿಷರ ವಿರುದ್ಧ ಹೋರಾಡಿದ ವಿಷಯ ರಾಷ್ಟ್ರೀಯ ಇತಿಹಾಸದಲ್ಲಿ ದಾಖಲಾಗಬೇಕಾಗಿದೆ. ಬೆಳವಡಿಯ ಮಲ್ಲಮ್ಮ ರಾಣಿ ಮೊದಲ ಮಹಿಳಾ ಸೈನ್ಯ ಕಟ್ಟಿ ಛತ್ರಪತಿ ಶಿವಾಜಿಯ ಸೈನ್ಯವನ್ನೇ ಹಿಮ್ಮೆಟ್ಟಿಸಿ ಶಿವಾಜಿಯ ಮೆಚ್ಚುಗೆ ಪಡೆದ ಸಂಗತಿ ಸಣ್ಣದೇನಲ್ಲ.
ಮುಂದೆ ಸರಿಯಾಗಿ ನೂರು ವರ್ಷಗಳ ನಂತರ ೧೯೨೪ ರಲ್ಲಿ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯ ಏಕೈಕ ಕಾಂಗ್ರೆಸ್ ಮಹಾಧಿವೇಶನ ಬೆಳಗಾವಿಯಲ್ಲಿ ಜರುಗಿತು. ಗಾಂಧಿಯವರು ಕಾಂಗ್ರೆಸ್ ಸಂಸ್ಥೆಯ ಅಧ್ಯಕ್ಷರೂ ಆಗಿದ್ದುದೂ ಅದೊಂದೇ ಸಲ. ಈ ಅಧಿವೇಶನ ಹಲವು ವೈಶಿಷ್ಟ್ಯಗಳನ್ನು ಹೊಂದಿತ್ತು. ಅಧಿವೇಶನ ನಡೆದ ಸ್ಥಳಕ್ಕೆ ವಿಜಯನಗರವೆಂದೂ, ಅ ಸಂದರ್ಭಕ್ಕೆಂದೇ ನಿರ್ಮಿಸಲಾದ ಬೃಹದಾಕಾರದ ಬಾವಿಗೆ ಪಂಪಾಸರೋವರವೆಂದೂ ಹೆಸರಿಡಲಾಗಿತ್ತು. ಅಧಿವೇಶನದ ಸ್ವಾಗತ ಗೀತೆಯನ್ನು ಹಾಡುವವರಲ್ಲಿ ಆಗಿನ್ನೂ ಹನ್ನೆರಡು ವರುಷದವರಾದ ಖ್ಯಾತ ಸಂಗೀತ ಕಲಾವಿದರಾದ ಡಾ. ಗಂಗೂಬಾಯಿ ಹಾನಗಲ್ ಅವರೂ ಒಬ್ಬರಾಗಿದ್ದರು ಮತ್ತು ಹುಯಿಲಗೋಳ ನಾರಾಯಣರು ತಾವು ಬರೆದ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಹಾಡನ್ನು ತಾವೇ ಮೋಹನ ರಾಗದಲ್ಲಿ ಪ್ರಸ್ತುತ ಪಡಿಸಿದ್ದರು.
ಹಿರಿಯ ಕನ್ನಡ ಮುಖಂಡರೂ ಸ್ವಾತಂತ್ರ್ಯ ಹೋರಾಟಗಾರೂ ಆಗಿದ್ದ ಕರ್ನಾಟಕ ಸಿಂಹ ಗಂಗಾಧರರರಾವ್ ದೇಶಪಾಂಡೆ ಮತ್ತು ಯಾಳಗಿ ಕುಟುಂಬದವರ ನೇತೃತ್ವದಲ್ಲಿ ಆ ಅಧಿವೇಶನ ಅಭೂತಪೂರ್ವ ರೀತಿಯಲ್ಲಿ ನಡೆದು ಬೆಳಗಾವಿಗೆ ಕೀರ್ತಿ ತಂದಿತು. ಅಧಿವೇಶನಕ್ಕಾಗಿ ತೋಡಿದ ಬಾವಿಯನ್ನು ಕಾಂಗ್ರೆಸ್ ಬಾವಿಯೆಂದೇ ಕರೆಯಲಾಗುತ್ತಿದೆ. ಅಲ್ಲದೇ ಮಹಾತ್ಮಾ ಗಾಂಧೀಜಿಯವರು ಬೆಳಗಾವಿ ಸಮೀಪದ ಹುದಲಿಯಲ್ಲಿ ವಾಸ್ತವ್ಯವನ್ನು ಹೂಡಿದ ನೆನಪಿಗಾಗಿ ಅಲ್ಲಿ ಗಾಂಧೀಜಿಯವರ ಸ್ಮಾರಕವನ್ನೂ ನಿರ್ಮಿಸಲಾಗಿದೆ. ಗಾಂಧಿಜಿಯವರ ಧ್ಯೇಯೋದ್ದೇಶಗಳ ಅನುಷ್ಠಾನಕ್ಕೆ ದೇಶದ ಆರು ಕಡೆ ಆಶ್ರಮಗಳನ್ನು ನಿರ್ಮಿಸಲಾಗಿತ್ತು . ಅವುಗಳಲ್ಲಿ ಹುದಲಿ ಸಮೀಪದ ಕುಮರಿ ಆಶ್ರಮವೂ ಒಂದು ಎನ್ನುವುದು ಗಮನಾರ್ಹ.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬೆಳಗಾವಿ ಜಿಲ್ಲೆ ಮುಂಚೂಣಿಯಲ್ಲಿತ್ತು. ಲೋಕಮಾನ್ಯ ಬಾಲಗಂಗಾಧರ ಟಿಳಕರ ಶಿಷ್ಯರಾದ ಗಂಗಾಧರರಾವ್ ದೇಶಪಾಂಡೆಯವರು ೧೯೦೫-೦೬ ರಲ್ಲಿಯೇ ಕರ್ನಾಟಕದಲ್ಲಿ ಹೋರಾಟದ ಕಿಡಿ ಹೊತ್ತಿಸಿದರು. ಬೆಳಗಾವಿ ಜಿಲ್ಲೆಯಲ್ಲಿ ಬ್ರಿಟಿಷರೇ ನಡುಗುವಂತೆ ಉಗ್ರ ಚಳವಳಿ ನಡೆಯಿತು. ಸಹಸ್ರಾರು ಜನ ಜೈಲು ಶಿಕ್ಷೆ ಅನುಭವಿಸಿದರು. ಟಿಳಕರ ಕರೆಯಂತೆ ಅಂದು ಬೆಳಗಾವಿಯಲ್ಲೂ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಯಿತು ಮತ್ತು ಅದು ಶತಮಾನದ ನಂತರವೂ ಮುಂದುವರಿದು ಬೆಳಗಾವಿಯ ಆಕರ್ಷಣೆಗಳಲ್ಲೊಂದಾಗಿದೆ.
ಬ್ರಿಟಿಷರ ಅವಧಿಯಲ್ಲಿ ಬೆಳಗಾವಿಯಲ್ಲಿ ಸ್ಥಾಪಿಸಿದ ವ್ಯಾಕ್ಸಿನ್ ಡಿಪೋ ಒಂದು ವಿಶೇಷ ತಾಣ. ೧೯೦೪ ರಲ್ಲಿ ಟಿಳಕವಾಡಿ ಭಾಗದಲ್ಲಿ ಆರಂಭವಾದ ಈ ಡಿಪೋದಲ್ಲಿ ಅಗಿನ ಭಯಾನಕ ಮೈಲಿ ರೋಗಕ್ಕೆ ಇಂಜಕ್ಷನ್ ತಯಾರಿಸುವ ಕೆಲಸ ನಡೆದು ಲಕ್ಷಾಂತರ ಜನರ ಪ್ರಾಣ ಉಳಿಸಲು ನೆರವಾಯಿತು.ಅಲ್ಲಿ ೪೦ ದಶಲಕ್ಷದಷ್ಟು ಮೈಲಿ ಇಂಜಕ್ಷನ್ ಗಳನ್ನು ತಯಾರಿಸಲಾಗಿದೆ. ಆ ಪ್ರದೇಶದಲ್ಲಿ ಉಪಯುಕ್ತ ಔಷಧೀಯ ಸಸ್ಯಗಳನ್ನು ಬೆಳೆಸಲಾಯಿತು. ಈಗಲೂ ಆ ಪ್ರದೇಶವನ್ನು ಕಾದಿಡಲಾಗಿದೆ. ಹಾಗೆಯೇ ಕ್ಯಾಂಪ್ ಪ್ರದೇಶದ ಮರಾಠಾ ಲೈಟ್ ಇನ್ಫೆಂಟ್ರಿ ಮತ್ತು ಸಾಂಬ್ರಾ ಬಳಿಯ ಏರ್ ಫೋರ್ಸ್ ವಿಮಾನ ತರಬೇತಿ ಕೇಂದ್ರಗಳು ಬೆಳಗಾವಿಯ ಮಹತ್ವ ಹೆಚ್ಚಿಸಿವೆ. ಸುಮಾರು ಬೆಳಗಾವಿ ನಗರದ ಅರ್ಧ ಭಾಗದಲ್ಲಿ ವ್ಯಾಪಿಸಿಕೊಂಡಿರುವ ಕ್ಯಾಂಪ್ ಏರಿಯಾ ಮಿಲಿಟರಿಯಿಂದ ಸಂರಕ್ಷಿತ ಪ್ರದೇಶವಾಗಿದ್ದು ದಟ್ಟ ಗಿಡಮರಗಳಿಂದ ಕೂಡಿ ಬೆಳಗಾವಿಯ ವಾತಾವರಣವನ್ನು ಆಹ್ಲಾದಕರವಾಗಿಸಿದೆ. ೧೯೬೧ ರಲ್ಲಿ ನಡೆದ ಗೋವಾ ವಿಮೋಚನಾ ಹೋರಾಟದಲ್ಲೂ ಬೆಳಗಾವಿಯಿಂದ ಅಸಂಖ್ಯಾತ ಜನರು ಪಾಲ್ಗೊಂಡು ಹೋರಾಡಿದ್ದು ಸ್ಮರಣಾರ್ಹ.
( ಸಶೇಷ)
ಎಲ್ ಎಸ್ ಶಾಸ್ತ್ರಿ