ಬೀದರ: ಮತ ಎಣಿಕೆ ಕಾಲಕ್ಕೆ ಹಾಗೂ ನಂತರ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತೆಯಾಗಿ ಜಿಲ್ಲೆಯಾದ್ಯಂತ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮೇ.13ರಂದು ಬೆಳಿಗ್ಗೆ 6 ಗಂಟೆಯಿಂದ ಮೇ.14 ರ ಬೆಳಿಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿದ್ದು ಯಾವುದೇ ಸಭೆ ಸಮಾರಂಭ, ಘೋಷಣೆ ಕೂಗದಂತೆ, ಐದಕ್ಕಿಂತ ಹೆಚ್ಚು ಜನ ಸೇರದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಗೆದ್ದ ಅಭ್ಯರ್ಥಿ ಪರ ಸಂಭ್ರಮಾಚರಣೆಗೂ ಜಿಲ್ಲಾಡಳಿತದಿಂದ ಬ್ರೇಕ್ ಹಾಕಲಾಗಿದೆ. ಮೇ.13ರ ಬೆಳಿಗ್ಗೆ 6 ಗಂಟೆಯಿಂದ 24 ಗಂಟೆಗಳ ಕಾಲ ಯಾವುದೇ ಸಂತೆ, ಜಾತ್ರೆಗಳನ್ನ ನಡೆಸದಂತೆ ಕೂಡ ಆದೇಶ ಹೊರಡಿಸಲಾಗಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ನಗರದ ಗುಂಪಾ ಮಾರ್ಗವಾಗಿ ಸಂಚರಿಸುವವರಿಗೆ ಮಾರ್ಗ ಬದಲಾವಣೆ, ಬೊಮ್ಮಗುಂಡೇಶ್ವರದಿಂದ ಗುಂಪಾ ಕಡೆಗೆ ಹೋಗುವ ಸವಾರರರಿಗೆ ಮಾರ್ಗ ಬದಲಾವಣೆ.
ಮೈಲೂರು ಕ್ರಾಸ್, ಬಾಂಬೆ ಬಿಲ್ಡಿಂಗ್, ಜೆಎನ್‌ಡಿಇ ಕಾಲೇಜ್, ಮೈಲೂರ ಮಾರ್ಗವಾಗಿ ಗುಂಪಾಗೆ ತೆರಳುವಂತೆ ಸೂಚನೆ ನೀಡಲಾಗಿದೆ. ಗುಂಪಾ ರಿಂಗ್ ರಸ್ತೆ, ಮೈಲೂರ, ಜೆಎನ್‌ಡಿಇ ಕಾಲೇಜ್, ಬಾಂಬೆ ಬಿಲ್ಡಿಂಗ್, ಮೈಲೂರು ಕ್ರಾಸ್ ಮಾರ್ಗವಾಗಿ ಬೊಮ್ಮಗುಂಡೇಶ್ವರ ವೃತ್ತಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
ನಾಳೆ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಮತ ಏಣಿಕೆ ಕೇಂದ್ರದ ಸುತ್ತ ಓರ್ವ ಎಸ್‌ಪಿ, ಅಡಿಷನಲ್ ಎಸ್‌ಪಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 4 ಡಿಎಸ್‌ಪಿ, 19 ಸಿಪಿಐ, 37 ಪಿಎಸ್‌ಐ, 60 ಎಎಸ್‌ಐ ಹಾಗೂ 387 ಪುರುಷ ಮತ್ತು ಮಹಿಳಾ ಪೇದೆ ನಿಯೋಜನೆ. 2 ಐಟಿಬಿಪಿ, 3 ಕೆಎಸ್ಆರ್‌ಪಿ, 11 ಡಿಎಆರ್, 2 ಡಿ ಸ್ಕ್ವಾಡ್ ತಂಡಗಳಿಂದ ಭದ್ರತೆ ಒದಗಿಸಲಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ