ಸೋಮಾರಿತನದ ಮುಕ್ತಾಯದಲ್ಲಿ . . . . .?

Must Read

ತಲೆಯ ಮೇಲೆ ಸೂರಿಲ್ಲ. ಒಂದು ವೇಳೆ ಇದ್ದರೂ ಮಳೆ ಬಂದರೆ ಸೋರುತ್ತದೆ. ಚಳಿಯಿದ್ದರೆ ಬೆಚ್ಚಗಿರಲು ಹೊದಿಕೆಗಳಿಲ್ಲ. ಬೆಳಕು ಹರಿದರೆ ಹಸಿದ ಹೊಟ್ಟೆ ತಾಳ ಹಾಕುತ್ತದೆ. ಹರಿದ ಬಟ್ಟೆ ನಾಲ್ಕು ಜನಗಳ ನಡುವೆ ಮರ್ಯಾದೆ ತೆಗೆಯುತ್ತದೆ. ಹೀಗಿದ್ದಾಗ್ಯೂ ಕ್ಯಾರೆ ಅನ್ನದೇ ಸೋಮಾರಿತನಕ್ಕೆ ಅಂಟಿಕೊಳ್ಳುವುದು. ನಿಜಕ್ಕೂ ನಾಚಿಕೆಗೇಡಿನ ಸಂಗತಿ ಅಲ್ಲದೇ ಮತ್ತೇನು? ಅವರಿವರಿಗೆ ಬಿಟ್ಟಿ ಉಪದೇಶ ನೀಡುತ್ತ ಒಂದೆಡೆ ಬಿದ್ದಿರುವುದು ಎಷ್ಟು ಸರಿ? ಇದು ಸಾಲದೆಂಬಂತೆ, ನಾನು ಮನಸ್ಸು ಮಾಡಿದರೆ ಮುಗಿದು ಹೋಯಿತು. ಏನು ಬೇಕಾದ್ದು ಮಾಡುತ್ತೇನೆಂಬ ಒಣ ಜಂಭದ ಮಾತು ಬೇರೆ. ದಿನೇ ದಿನೇ ಆಲಸ್ಯತನದ ಬೇರು ಕೆಳಕ್ಕೆ ಇಳಿಯುತ್ತಿದ್ದಂತೆ ಬದುಕು ಕಂಗಾಲಾಗುತ್ತದೆ. ಕಂಗಾಲಾಗಿ ಬಿದ್ದ ಬದುಕಿಗೆ ಎದ್ದು ನಿಲ್ಲಲು ಶಕ್ತಿ ಇಲ್ಲದಾಗುತ್ತದೆ. ಆಗ ಜೋಲು ಮುಖ ಹೊತ್ತು ಮೂಕನಾಗಿ ಕುಳಿತುಕೊಳ್ಳುವುದೊಂದೇ ಬಾಕಿ.

ಬದುಕಿನ ಬಾಗಿಲು ಬಾರಿಸಿದ ಎಲ್ಲ ಅವಕಾಶಗಳಿಗೆ ಸೋಮಾರಿತನದ ಗೂಡಿನಲ್ಲಿದ್ದುಕೊಂಡೇ ನಾಳೆ ಬಾ ಎಂದು ಹೇಳಿ ಕಳುಹಿಸಿದ್ದಾಗಿದೆ. ಗೆಲುವಿನ ದಾರಿ ಎಂದಿಗೂ ಕಠಿಣವೆಂದು ತಿಳಿದು ಮುಂದಿಡಿದ್ದೂ ಆಗಿದೆ.
ನಮ್ಮಲ್ಲಿ ಬಹುತೇಕರು ತಮಗರಿವಿಲ್ಲದೇ ಆಲಸ್ಯತನದ ಮನೆಯಲ್ಲಿ ಕಾಲು ಚಾಚಿಕೊಂಡು ಕುಳಿತು ತಮ್ಮ ಜೀವನವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಖಾಲಿ ಮೆದುಳು ದೆವ್ವದ ಕಾರ್ಖಾನೆಯಿದ್ದಂತೆ. ಇಲ್ಲ ಸಲ್ಲದ್ದನ್ನು ಯೋಚಿಸುತ್ತ ಕೆಲಸದತ್ತ ಮುಖ ಮಾಡದೇ ಇದ್ದರೆ ಬದುಕು ದುರ್ಬರ ಖಂಡಿತ. ಕೆಲಸವಿಲ್ಲದೇ ವ್ಯರ್ಥ ಸಮಯ ಕಳೆಯುವುದು ಜೀವನವನ್ನು ಜಿಡ್ಡುಗಟ್ಟಿಸುತ್ತದೆ. ನಾವು ಮಾಡುವ ಕೆಲಸಗಳು ನಮ್ಮ ಜೀವನದ ದಿಕ್ಕನ್ನು ಬದಲಿಸುತ್ತವೆ. ಆದ್ದರಿಂದ ಕೆಲಸವನ್ನು ಸರಿಯಾಗಿ ಆರಿಸಿಕೊಂಡು ಅದರಲ್ಲಿ ತೊಡಗಿಕೊಳ್ಳಬೇಕು. ಕೆಲವರು ಹೇಳುವ ಪ್ರಕಾರ ಮನಸ್ಸು ಮಾಡಿದರೆ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಬಹುದು.

ಆದರೆ ಆ ಕೆಲಸದಲ್ಲಿ ಹುದುಗಿಕೊಂಡಿರುವ ಸಮಸ್ಯೆಗಳು ಭಯ ಹುಟ್ಟಿಸುತ್ತವೆ. ಇದು ಸಮಸ್ಯೆಗಳ ಬಗೆಗಿರುವ ಅಜ್ಞಾನವನ್ನು ತೋರಿಸುತ್ತದೆ. ವಾಸ್ತವದಲ್ಲಿ ಸಮಸ್ಯೆಗಳು ಸಾಧ್ಯತೆಗಳನ್ನು ತೆರೆಯುತ್ತವೆ. ಆಲಸ್ಯತನದಿಂದ ಹೊರಬರಲು ಸಹಾಯ ಮಾಡುತ್ತವೆ. ಸಮಸ್ಯೆಯ ಗರ್ಭದಲ್ಲಿ ಬದುಕಿನ ಸನ್ನಿವೇಶವನ್ನು ಬದಲಿಸುವ ಅವಕಾಶಗಳು ಇರುತ್ತವೆ ಎಂಬುದನ್ನು ಮರೆಯುವಂತಿಲ್ಲ. ಅವಕಾಶಗಳನ್ನು ನಿರಾಕರಿಸುವುದೆಂದರೆ ಬದುಕನ್ನೇ ನಿರಾಕರಿಸಿದಂತೆ.
ನಮ್ಮ ಬಳಿ ಎಷ್ಟಿದೆಯೆಂದು ಅರಿಯದೇ ನಿರ್ಲಕ್ಷ್ಯತನದಿಂದ ಖಾಲಿ ಮಾಡುವುದೊಂದೇ ಅದು ಸಮಯ. ಪ್ರತಿಕ್ಷಣವನ್ನೂ ಪೋಲು ಮಾಡುತ್ತ ಬಂದಿದ್ದೇ ಆಯಿತು. ಸಮಯದ ಜೊತೆ ನಡೆದರೆ ಸಮಯವು ನಮ್ಮ ಜೊತೆ ನಡೆಯುತ್ತದೆ ಎಂಬ ಮಾತಿಗೆ ಬೆನ್ನು ತೋರಿಸಿ ಕಾಲ ನೂಕಿದ್ದೇ ಆಯಿತು. ಪರೀಕ್ಷೆಯಲ್ಲಿ ಪಾಸಾಗಬೇಕೆಂಬ ಬಯಕೆ ಹೊತ್ತ ವಿದ್ಯಾರ್ಥಿ ಓದದೇ ಸುಮ್ಮನೇ ಕಾಲ ಕಳೆದರೆ ಪಾಸಾಗುವ ಪವಾಡ ನಡೆಯದು. ಕನಸು ಕಾಣುವುದು ಮನುಷ್ಯನ ಸಹಜ ಗುಣ. ಆದರೆ ಕೇವಲ ಕನಸು ಕಾಣುತ್ತಲೇ ಇದ್ದರೆ ಅದು ನನಸಾಗುವುದಾದರೂ ಹೇಗೆ?

ಆಲಸ್ಯತನದಲ್ಲಿ ಮೈಮರೆತರೆ ನಮ್ಮಲ್ಲಿರುವ ಕತೃತ್ವ ಶಕ್ತಿ ಮಾಯವಾಗುತ್ತದೆ. ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ. ಕರ್ತೃತ್ವ ಶಕ್ತಿ ಎಲ್ಲೆದೆಯೆಂದು ಹುಡುಕಬೇಕಾಗುತ್ತದೆ. ಸಿಗದೇ ಹೋದಾಗ ಮರುಗಬೇಕಾಗುತ್ತದೆ. ದೈವ ದೇವರುಗಳ ಮೊರೆ ಹೋಗಬೇಕಾಗುತ್ತದೆ. ತಪ್ಪಿದ ದಾರಿ ದೊಡ್ಡ ದುರಂತವನ್ನು ತಂದೊಡ್ಡುತ್ತದೆ. ಕೆಲಸ ಮಾಡುವುದನ್ನು ಮರೆಯುವ ಮುನ್ನ ಆಲಸ್ಯತನ ತೊರೆಯಬೇಕು. ಸೋಮಾರಿತನದ ಮುಕ್ತಾಯದಲ್ಲಿ ಉತ್ಸಾಹದ ಉಗಮ ಸ್ಥಾನವಿದೆ. ಒಮ್ಮೆ ಉತ್ಸಾಹದ ನದಿ ಉಕ್ಕೇರಹತ್ತಿದರೆ ಬದುಕು ಮನೋಹರವಾಗುತ್ತದೆ. ಊಹೆಗೂ ಮೀರಿದ ಚೆಂದದ ಜೀವನ ತಾನಾಗಿಯೇ ಬಳಿ ಬಂದು ನಿಲ್ಲುತ್ತದೆ.
==========================================================

ಜಯಶ್ರೀ. ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ ೯೪೪೯೨೩೪೧೪೨

Latest News

ಕವನ : ಸಾವಿರದ ವಿಶ್ವಮಾನ್ಯಳು

ಸಾವಿರದ ವಿಶ್ವಮಾನ್ಯಳು.ಹಸಿರನು ಉಸಿರಾಗಿಸಿಕೊಂಡವಳು ಬಿಸಿಲಿನ ಬೇಗೆ-ಧಗೆ ನಿವಾರಕಳು ಪರಿಸರಪ್ರೇಮಿ ಪ್ರಿಯರ ಪ್ರೇರಕಳು ಕೋಟಿ ಮರನೆಟ್ಟ ಕೋಟ್ಯಧೀಶಳು./1/ಸಕಲ ಜೀವರಾಶಿಯ ಮಾತೆಯಿವಳು ಮಕ್ಕಳಂತೆ ಮರಗಳ ಪೋಷಿಸಿಹಳು ಪಯಣಿಗರ ದಣಿವು ಪರಿಹರಿಸಿದವಳು ನಾಡಿನ ಜೀವಜಾಲಕೆ ತಂಪನೆರೆದಿಹಳು/2/ಮರಗಳು ಮರುಗುತ ರೋಧಿಸುತಲಿಹವು ವ್ರೃಕ್ಷಮಾತೆಯ...

More Articles Like This

error: Content is protected !!
Join WhatsApp Group