ನಾವು – ನಮ್ಮವರು
ಶಿವಾನಂದ ಕಲಕೇರಿ ಅವರು ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ವಿಶ್ವಸ್ಥರು ಮತ್ತು ನಮ್ಮ ವೇದಿಕೆಯ ಬಗೆಗೆ ಅಭಿಮಾನ ಮತ್ತು ಕಳಕಳಿ ಹೊಂದಿರುವ ಸರಳತೆಯ ಸಾಕಾರಮೂರ್ತಿಯಂತಿರುವ ಸರ್ಕಾರಿ ಅಧಿಕಾರಿ . ನಮ್ಮ ಎಲ್ಲ ಕೆಲಸ ಕಾರ್ಯಗಳಲ್ಲಿ ಯಾವತ್ತೂ ತಮ್ಮ ಸಾರಥ್ಯವನ್ನು ವಹಿಸುವ ಒಬ್ಬ ಅಪ್ಪಟ ಬಸವಾಭಿಮಾನಿ ಮತ್ತು ಯಾವುದೇ ಪ್ರಚಾರವಿಲ್ಲದೆ, ಸದ್ದುಗದ್ದಲವಿಲ್ಲದೆ ತಮ್ಮ ಕೆಲಸ ಕಾರ್ಯಗಳನ್ನು ಅತ್ಯಂತ ಶಿಸ್ತುಬದ್ಧವಾಗಿ ತೂಗಿಸಿಕೊಂಡು ಹೋಗುವ ಒಬ್ಬ ದಕ್ಷ ಅಧಿಕಾರಿ ಎಂದು ಹೇಳಬಹುದು.
ಶಿವಾನಂದ ಹಣಮಂತರಾಯ ಕಲಕೇರಿ ಅವರು ಜುಲೈ 21 1971 ರಲ್ಲಿ ಜನಿಸಿದರು. ಇವರ ತಂದೆಯವರು ದಿ. ಹಣಮಂತರಾಯ ಕಲಕೇರಿ, ನಿ. ಶಾಲಾ ಶಿಕ್ಷಕರು, ಇವರ ತಾಯಿ ಯವರು ದಿ. ಗಿರಿಜಾ. ಎಚ್. ಕಲಕೇರಿ , ಪ್ರೌಢಶಾಲಾ ಶಿಕ್ಷಕಿ.
ಶಿವಾನಂದ ಕಲಕೇರಿ ಅವರ ತಂದೆಯವರು ಅಪ್ಪಟ ಶರಣ ಸಂಪ್ರದಾಯವಾದಿಗಳು.ತಮ್ಮ ವೈಜ್ಞಾನಿಕ ದೃಷ್ಟಿಕೋನ ಮತ್ತು ವೈಚಾರಿಕ ಚಿಂತನೆಯಿಂದ ಹಲವು ಮನಸ್ಸುಗಳಿಗೆ ಸ್ಪೂರ್ತಿಯಾಗಿದ್ದರು.ಅವರು ಸೌಮ್ಯವಾದಿ, ಸುಶಿಕ್ಷಿತ, ಸಜ್ಜನ, ಶಿಸ್ತಿನ ವ್ಯಕ್ತಿ. 21 ನೆಯ ಶತಮಾನದಲ್ಲಿ ಮಾಚಿದೇವನ ಅವತಾರಿಯಂತೆ ಎಂದು ಅವರನ್ನು ಎಲ್ಲರೂ ಕೊಂಡಾಡುತ್ತಾರೆ. ಇವರು ಬಸವ ತತ್ವ ಪ್ರಚಾರಕರು ಮತ್ತು ಮಹಾದಾನಿಗಳು. ” ಲಕ್ಷಕ್ಕೊಬ್ಬ ಭಕ್ತ -ಕೋಟಿಗೊಬ್ಬ ಶರಣ ” ಎಂಬಂತೆ ಶ್ರೇಷ್ಠ ಶರಣರು. ತನು-ಮನ-ಧನ ಸೇವೆ ಸಲ್ಲಿಸುತ್ತಾ ಕಾಯಕ ದಾಸೋಹಗಳನ್ನು ತಮ್ಮ ಜೀವನದುದ್ದಕ್ಕೂ ಆಚರಿಸುತ್ತಾ ಬಸವ ಕೃಪೆಗೂ ಪಾತ್ರರಾಗಿದ್ದರು. ಚಿಕ್ಕವರಿದ್ದಾಗ ಶಿವಾನಂದ ಅವರ ತಂದೆ ಅವರಿಗೆ ಅಂದಿನ ದಿನಗಳಲ್ಲಿ ದಕ್ಷ ಐ.ಎ.ಎಸ್ ಅಧಿಕಾರಿಗಳಾಗಿದ್ದವರ ಕಾರ್ಯಕ್ಷಮತೆ ಕುರಿತು ಹೇಳುತ್ತಿದ್ದರು. ಆದಕಾರಣ ಬಾಲ್ಯದಲ್ಲಿಯೇ ಮುಂದೊಂದು ದಿನ ಐ.ಎ.ಸ್ ಅಧಿಕಾರಿ ಆಗಬೇಕೆಂಬ ಉತ್ಕಟ ಹಂಬಲ ಶಿವಾನಂದ ಅವರಲ್ಲಿ ಮೂಡಿತ್ತು.
ಶಿವಾನಂದ ಅವರ ತಂದೆ ತಾಯಿಗಳು ” ಸತಿಪತಿ ಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂಬುದನ್ನು ಆಚರಣೆಯಿಂದಲೇ ಸಾಧಿಸಿ ಸಾಕ್ಷೀಕರಿಸಿದ ಋಷಿ ಸದೃಶರು” ಇವರಿಗೆ ಇಬ್ಬರು ಮಕ್ಕಳು. ಶಿವಾನಂದ ಮತ್ತು ಸವಿತಾ. ಇವರ ತಂದೆ -ತಾಯಿ ಇಬ್ಬರೂ ಉತ್ತಮ ಆದರ್ಶ ಮತ್ತು ದಕ್ಷ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಹಲವಾರು ವಿದ್ಯಾರ್ಥಿಗಳ ಪ್ರೀತಿಗೆ ಪಾತ್ರರಾಗಿದ್ದರು. ಮಕ್ಕಳ ಬೆಳವಣಿಗೆಗೆ ನೀಡುವ ಎಲ್ಲಾ ಅವಕಾಶಗಳನ್ನು ನೀಡಿ, ಕಳಪೆ ಸಾಧನೆಯಲ್ಲೂ ಸಹ ಧೃತಿ ಗೆಡದಂತೆ ಆತ್ಮವಿಶ್ವಾಸ ತುಂಬಿ ಪ್ರೋತ್ಸಾಹಿಸುತ್ತಿದ್ದರು. ಹಲವಾರು ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಕಲಕೇರಿ ದಂಪತಿಗಳು ಊಟ ವಸತಿ ಹಾಗೂ ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುತ್ತಿದ್ದರು. ಅವರ ಮನೆ ಒಂದು ರೀತಿ ದಾಸೋಹ ಭವನವಾಗಿತ್ತು.
ಶಿವಾನಂದ ಕಲಕೇರಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆ, ಢವಳಗಿ,ತಾ. ಮುದ್ದೇಬಿಹಾಳದಲ್ಲಿ ಮುಗಿಸಿ ದರು. ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ವಿಜಯಪುರದ ಸೈನಿಕ ಶಾಲೆಯ ಪ್ರವೇಶಾತಿಯಲ್ಲಿ ಉನ್ನತ ಅಂಕ ಗಳಿಸಿ ಪಾಸ್ ಆಗಿ ಸೈನಿಕ ಶಾಲೆ ಸೇರಿದರು. ಆ ಶಾಲೆಯ ಶಿಸ್ತು ಸರ್ವತೋಮುಖ ಸ್ಪರ್ಧಾ ಜಗತ್ತು,ಯೋಚನೆಯ ವಿಸ್ತಾರ ಮತ್ತು ಸಾಮರ್ಥ್ಯವನ್ನು ದ್ವಿಗುಣಗೊಳಿಸಿತು.ಚೆನ್ನಾಗಿ ಓದಿ ದೊಡ್ಡ ಅಧಿಕಾರಿಯಾಗಬೇಕೆನ್ನುವ ಹಂಬಲ ಚಿಗುರೊಡೆಯಿತು. ಬಿಜಾಪುರ ಸೈನಿಕ ಶಾಲೆಯಲ್ಲಿ ಹೈಸ್ಕೂಲ್ ಮತ್ತು ಪಿ. ಯು. ಸಿ ಮುಗಿಸಿದರು.ಬಿ. ಎಸ್ಸಿ ಪದವಿ ಯನ್ನು ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜು, ಎಂ. ಎಸ್ಸಿ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾ ಲಯದಲ್ಲಿ, ಎಂ. ಎ. ಪದವಿಯನ್ನು ಹೈದ್ರಾಬಾದನಲ್ಲಿ ಮುಗಿಸಿದರು.
ಶಿವಾನಂದ ಅವರು ಭಾರತದ ಲೋಕ ಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ 347 ನೆಯ ಸ್ಥಾನ ಗಳಿಸಿ, ಭಾರತೀಯ ಸೇವೆಯ ಆದಾಯ ತೆರಿಗೆ ಇಲಾಖೆಯಲ್ಲಿ 2007 ನೆಯ ಬ್ಯಾಚಿನ ಅಧಿಕಾರಿಯಾಗಿ ಆಯ್ಕೆಯಾದರು. ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರದು ಸರಳ ಜೀವನ, ಉದಾತ್ತ ಚಿಂತನೆ,ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಲ್ಲಿ ಬಾಳಿ ಬದುಕಿದವರು. ಏನೆಲ್ಲಾ ಹುದ್ದೆಗಳು ಬಂದರೂ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರದು ಸರಳ ಸಜ್ಜನಿಕೆಯ ಕುಟುಂಬ. ಧರ್ಮಪತ್ನಿ ರೇಣುಕಾ ಶಿವಾನಂದ, ಸಾಫ್ಟ್ವೇರ್ ಇಂಜಿನಿಯರ್ ಮತ್ತು ಮಗಳು ಸಮನ್ವಿಯೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.
ಸಲ್ಲಿಸಿದ ಸೇವೆಗಳು – ತರಬೇತಿ ಮತ್ತು ಇತರ ಅಧ್ಯಯನಗಳು
1..ನ್ಯಾಷನಲ್ ಅಕ್ಯಾಡೆಮಿ ಆಫ್ ಡೈರೆಕ್ಟ್ ಟ್ಯಾಕ್ಸ್ ನಾಗಪುರ ದಲ್ಲಿ ವೃತ್ತಿ ಸಂಬಂಧಿ ತರಬೇತಿ.
2..ಸಿಂಗಾಪುರದ ತೆರಿಗೆ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದು
3..ಮುಂಬೈ ಸ್ಟಾಕ್ ಎಕ್ಸ್ಚೇಂಜ್, ಮುಂಬೈನಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅಧ್ಯಯನ ಮಾಡಲು ತರಬೇತಿ.
4..ಆಸ್ಟ್ರೇಲಿಯಾದ ಸಕ್ಕರೆ ಉದ್ಯಮವನ್ನು ಅಧ್ಯಯನ ಮಾಡಲು ಕರ್ನಾಟಕ ಸರ್ಕಾರದಿಂದ ನಿಯೋಜನೆ
5..ಮೈಸೂರು, ಬೆಂಗಳೂರು, ಸಾಂಗ್ಲಿ, ಕೊಲ್ಲಾಪುರ, ಈಚಲಕರಂಜಿ, ರತ್ನಾಗಿರಿ ಮತ್ತು ಪುಣೆಯಲ್ಲಿ ಆದಾಯ ತೆರಿಗೆ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸೇವೆ.
6..ಕರ್ನಾಟಕ ಸರ್ಕಾರದ ಕಬ್ಬು ಅಭಿವೃದ್ಧಿಯ ಆಯುಕ್ತರಾಗಿ ಮತ್ತು ಸಕ್ಕರೆ ನಿರ್ದೇಶಕರಾಗಿ ಸೇವೆ.
7..ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಎಂ. ಡಿ. ಯಾಗಿ ಸೇವೆ
8..ವಿಶೇಷ ಆಯುಕ್ತರು, ಹಣಕಾಸು, ಬೃಹತ್ ಬೆಂಗಳೂರು ಮಹಾನಗರಪಾಲಿಕೆ.
ಇತರ ಸಾಧನೆಗಳು
1..ಉನ್ನತ ರಾಜಕಾರಣಿಗಳನ್ನು ಒಳಗೊಂಡಿದ್ದ ಕರ್ನಾಟಕದ ಬಳ್ಳಾರಿಯಲ್ಲಿ ನಡೆದ ಅಕ್ರಮ ಗಣಿಗಾರಿಕೆಯ ತೆರಿಗೆ ವಂಚನೆ ಪ್ರಕರಣಗಳ ತನಿಖಾಧಿ ಕಾರಿಯಾಗಿ ಸಮರ್ಪಕ ಕಾರ್ಯ ನಿರ್ವಹಣೆ ಮತ್ತು ಇತರ ತನಿಖಾ ಸಂಸ್ಥೆಗಳಾದ ಸಿ. ಬಿ. ಐ, ಲೋಕಾಯುಕ್ತ ಮತ್ತು ಇ. ಡಿ ಯೊಂದಿಗೆ ಸಮನ್ವಯತೆ ಸಾಧಿಸಿದ್ದಾರೆ.
2..ಹಲವಾರು ಸೂಕ್ಷ್ಮ ಆದಾಯ ತೆರಿಗೆ ವಂಚನೆಗೆ ಸಂಬಂಧಪಟ್ಟ ದಾಳಿಗಳಲ್ಲಿ ಭಾಗವಹಿಸಿದ್ದಾರೆ. ವಿಶೇಷವಾಗಿ ವೈದ್ಯಕೀಯ ಕಾಲೇಜುಗಳು, ಶಿಕ್ಷಣಸಂಸ್ಥೆಗಳು, ರಿಯಲ್ ಎಸ್ಟೇಟ್, ಬಂಗಾರ ವ್ಯಾಪಾರ ಮತ್ತು ಇತರ ವ್ಯಾಪಾರ ವಹಿವಾಟಿಗೆ ಸಂಬಂಧಪಟ್ಟಂತೆ ಸೇರಿದಂತೆ ಹೆಚ್ಚಿನ ತೆರಿಗೆ ವಂಚನೆ ಪ್ರಕರಣೆಗಳನ್ನು ಪತ್ತೆ ಹಚ್ಚುವ ಕೆಲಸವನ್ನು ನಿಷ್ಠೆ ಹಾಗೂ ನಿರ್ಭೀತಿಯಿಂದ ನಿರ್ವಹಿಸಿದ್ದಾರೆ.
3..2014 ಮತ್ತು 2019 ರ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಸಮಯದಲ್ಲಿ ಕ್ರಮವಾಗಿ ಲಕ್ಷದ್ವೀಪ ಮತ್ತು ಗುಜರಾತನಲ್ಲಿ ಹಾಗೂ ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದ 2017 ಮತ್ತು 2020ರಲ್ಲಿ ಕ್ರಮವಾಗಿ ವಿಧಾನಸಭಾ ಚುನಾವಣೆಗಳಿಗೆ ಚುನಾವಣಾ ವೆಚ್ಚ ವೀಕ್ಷಕರಾಗಿ ಕೆಲಸವನ್ನು ಮಾಡಿದ್ದಾರೆ.
4..ಕೊರುಕುಂಡ ( ಆಂಧ್ರಪ್ರದೇಶ )ದಲ್ಲಿ ನಡೆದ ದಕ್ಷಿಣ ಭಾರತೀಯ ಸೈನಿಕ ಶಾಲೆಗಳ ಅಥ್ಲೇಟಿಕ್ಸನಲ್ಲಿ 400 ಮೀಟರ ಮತ್ತು 800 ಮೀಟರ್ ಓಟದಲ್ಲಿ ಚಿನ್ನದ ಪದಕ ವಿಜೇತರು.
5..ರಾಜ್ಯಮಟ್ಟದ ಮೈಸೂರು ದಸರಾ ಕ್ರೀಡೆಗಳಲ್ಲಿ 400 ಮೀಟರ್ ಓಟದಲ್ಲಿ ಕಂಚಿನ ಪದಕ ವಿಜೇತರು.
6..ವಿವಿಧ ಹಂತಗಳಲ್ಲಿ ಸುಮಾರು 45 ಓಟದ ಸ್ಪರ್ಧೆಗಳಲ್ಲಿ ಪದಕಗಳನ್ನು ಗೆದ್ದು ತಮ್ಮದಾಗಿಸಿಕೊಂಡ ಹೆಗ್ಗಳಿಕೆ.
7..ಸಂಸದೀಯ ಕಾರ್ಯವಿಧಾನದ ತರಬೇತಿ, ಬ್ಯುರೋ ಆಫ್ ಪಾರ್ಲಿಮೆಂಟರಿ ಸ್ಟಡೀಸ್, ಪಾರ್ಲಿಮೆಂಟ್ ಹೌಸ್, ನವದೆಹಲಿ.
ತಮ್ಮ ಪ್ರತಿಯೊಂದು ಕಾರ್ಯನಿರ್ವಹಿಸಿದ ಇಲಾಖೆ ಯಲ್ಲಿ ಏನಾದರೊಂದು ಅಪರೂಪದ ಮತ್ತು ಅತ್ಯಂತ ಗಮನಾರ್ಹವಾದ ಕಾರ್ಯ ಮಾಡುವ ಪರಿಪಾಠ ಶಿವಾನಂದ ಅವರದು. ಎಲ್ಲ ಕಡೆ ಐತಿಹಾಸಿಕ ಬದಲಾವಣೆ ತಂದು ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಇವರದು. ಅಂತಹ ಬಹಳಷ್ಟು ಶ್ರೇಷ್ಠ ಕಾರ್ಯಗಳಲ್ಲಿ ಇಲ್ಲಿ ಒಂದು ವಿಶಿಷ್ಟವಾದ ಕಾರ್ಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ಬೆಂಗಳೂರಿನ ಬಿ.ಬಿ.ಎಂ.ಪಿ ಯಲ್ಲಿ ಪೌರ ಕಾರ್ಮಿಕರ ಪ್ರಶಸ್ತಿ
ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಿಶೇಷ ಅಧಿಕಾರಿಯಾಗಿ ನಿಯುಕ್ತಗೊಂಡಾಗ ಶಿವಾನಂದ ಕಲಕೇರಿ ಅವರು ತಮ್ಮ ವಿಶೇಷ ಬಜೆಟ್ ಮಂಡನೆಯ ಸಂದರ್ಭದಲ್ಲಿ ಶ್ರೇಷ್ಠ ಪೌರ ಮಹಿಳಾ ಮತ್ತು ಪುರುಷ ಕಾರ್ಮಿಕರ ಸೇವೆ ಪರಿಗಣಿಸಿ ಪ್ರಶಸ್ತಿ ಕೊಡಬೇಕೆಂದು ಪುಣೆಯ ಬಸವ ತಿಳಿವಳಿಕೆ ಮತ್ತು ಸಂಶೋಧನಾ ಕೇಂದ್ರ ಡಾ ಶಶಿಕಾಂತ ಪಟ್ಟಣ ಇವರನ್ನು ಸಂಪರ್ಕಿಸಿದಾಗ ಅವರು ಸತ್ಯಕ್ಕನ ಹೆಸರಿನಲ್ಲಿ ಪ್ರಶಸ್ತಿ ಇಡಲು ಸೂಚಿಸಿದರು. ಅಲ್ಲದೆ ಅದಕ್ಕೆ ಬೇಕಾದ ವಚನ ಸಾಹಿತ್ಯವನ್ನು ಒದಗಿಸಿದರು. ಆ ಬಜೆಟ್ ಮಂಡನೆ ಇಡೀ ರಾಜ್ಯದ ಗಮನ ಸೆಳೆದಿತ್ತು. ಅಲ್ಲದೆ ನಾಡಿನ ಎಲ್ಲಾ ಪತ್ರಿಕೆ ಮತ್ತು ಟಿವಿ ಚಾನೆಲ್ ಗಳು ವರದಿ ಮಾಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದವು. ಇದೆಲ್ಲವೂ ಅವರ ತಂದೆ ತಾಯಿಗಳ ಶರಣ ಸಂಸ್ಕಾರದಿಂದ ಬಂದಿದೆ ಎಂದರೆ ತಪ್ಪಾಗಲಾರದು.
ಶಿವಾನಂದ ಕಲಕೇರಿ ಅವರು ಉತ್ತಮ ಬದುಕಿನ ನಿರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಸೇವೆಗೆ ಸೇರುವ ಮುನ್ನ ಶೈಕ್ಷಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ರೀತಿಯ ಬಗೆಗೆ ಅವರ ಮನದಾಳದ ಮಾತುಗಳನ್ನು ಹೀಗೆ ಬಿಚ್ಚಿಟ್ಟಿದ್ದಾರೆ
” ಉತ್ತಮ ಶಿಕ್ಷಣದ ಅಡಿಪಾಯಕ್ಕಾಗಿ ಆರನೆಯ ತರಗತಿಯಿಂದ 12ನೇ ತರಗತಿಯ ಎನ್ ಸಿ ಇ ಆರ್ ಟಿ ಪುಸ್ತಕಗಳಾದ ಇತಿಹಾಸ, ಭೂಗೋಳ,ರಾಜಕೀಯ, ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪುಸ್ತಕಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಪದವಿಯ ನಂತರ ಅಭಿರುಚಿರುವ ಯಾವುದಾದರೂ ಒಂದು ವಿಷಯವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿ ಆಳವಾದ ಅಧ್ಯಯನ ಮಾಡಬೇಕು.ಭೂಗೋಳ ಮತ್ತು ಕನ್ನಡ ಅವರ ಐಚ್ಚಿಕ ವಿಷಯಗಳಾಗಿದ್ದವು.ಅವರು ಪ್ರತಿನಿತ್ಯ ಇಂಗ್ಲೀಷ್, ಕನ್ನಡ ದಿನಪತ್ರಿಕೆಗಳ ಅಂಕಣಗಳು, ಸಂಪಾದಿತ ಸುದ್ಧಿಗಳನ್ನು ಓದುತ್ತಿದ್ದರು. ಸಿವಿಲ್ ಸರ್ವಿಸ್ ಕ್ರೊನಿಕಲ್ ಮಾಸ ಪತ್ರಿಕೆಗಳನ್ನು ಸಹ ಓದುತ್ತಿದ್ದರು ಮಾನಸಿಕ ಸಾಮರ್ಥ್ಯ ಸಾಮಾನ್ಯ ಜ್ಞಾನ, ಇತಿಹಾಸ, ಭೂಗೋಳ,ರಾಜಕೀಯ, ವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಪ್ರಚಲಿತ ದೇಶಿಯ ಮತ್ತು ಅಂತಾರಾಷ್ಟ್ರೀಯ ಜ್ಞಾನ ಅವಶ್ಯ. ಪ್ರತಿಭೆ ಕಠಿಣ ಪರಿಶ್ರಮ ಸತತ ಪ್ರಯತ್ನ ಆತ್ಮಸ್ಥೈರ್ಯ ಮತ್ತು ಸ್ಪಷ್ಟ ಗುರಿ ಇದ್ದರೆ ಗ್ರಾಮೀಣ ಪ್ರತಿಭೆಗಳು ಏನಾದರೂ ಸಾಧಿಸಬಹುದು ಎಂಬುದು ಶಿವಾನಂದ ಕಲಕೇರಿ ಅವರ ಅಭಿಪ್ರಾಯ.
ಯಾವುದೇ ಕೆಲಸದಲ್ಲಿ ಇರಲಿ, ಪ್ರಾಮಾಣಿಕತೆ ಸಾಮಾಜಿಕ ಭದ್ರತೆ ಪರಿಶ್ರಮ ಜೊತೆಗೆ ಶಿಸ್ತು ಅಗತ್ಯ ಇದರ ಜೊತೆಗೆ ನ್ಯಾಯ ನಿಷ್ಟುರತೆ, ನಿಶ್ಚಲತೆ,ಅನುಕಂಪ ಹಾಗೂ ಹೊಂದಾಣಿಕೆ ಸ್ವಭಾವಗಳು ಅತ್ಯಗತ್ಯವಾಗಿವೆ. ಐಟಿ ದಾಳಿ ಮಾಡುತ್ತಿದ್ದಾಗ ಆತಂಕ ಮತ್ತು ಭಯ ಇದ್ದರೂ ಕೆಲಸದಲ್ಲಿರುವ ಪ್ರಾಮಾಣಿಕತೆಯಿಂದ ಮಾನಸಿಕವಾಗಿ ಶಿವಾನಂದ ಅವರಲ್ಲಿ ಧೈರ್ಯ ಇದ್ದೇ ಇತ್ತು. ” ಧೈರ್ಯಂ ಸರ್ವತ್ರ ಸಾಧನಂ” ಎನ್ನುವಂತೆ ತಮ್ಮ ಧೈರ್ಯದ ಜೊತೆ ಸುತ್ತಲಿನ ಸಿಬ್ಬಂದಿಯು ಎದೆಗುಂದದಂತೆ ಇವರ ಜೊತೆಗೆ ಸೇವೆ ಸಲ್ಲಿಸುವಂತೆ ಮಾಡುತ್ತಿರುವುದು ಶಿವಾನಂದ ಅವರ ಪ್ರಾಬಲ್ಯತೆಯನ್ನು ಹೆಚ್ಚಿಸಿದೆ. ಇವರ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ನಾನಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇವರನ್ನು ಸನ್ಮಾನಿಸಿದ್ದಾರೆ.
ಶರಣ ಶಿವಾನಂದ ಕಲಕೇರಿ ಅವರಿಗೆ ಓದುವ ಮತ್ತು ಬರೆಯುವ ಹವ್ಯಾಸ ಹೆಚ್ಚು. ಶನಿವಾರ ಮತ್ತು ಭಾನುವಾರ ರಜೆ ಸಿಕ್ಕಾಗ ತಮ್ಮ ವೇಳೆಯನ್ನು ಸಂಪೂರ್ಣವಾಗಿ ತಮ್ಮ ಕುಟುಂಬಕ್ಕಾಗಿ ಮೀಸಲಿಡುತ್ತಾರೆ. ಮಕ್ಕಳಿಗೆ ತಾವೇ ಪಾಠವನ್ನು ಮಾಡುತ್ತಾರೆ.
ಶಿವಾನಂದ ಅವರು ತಮ್ಮ ” ತಂದೆ-ತಾಯಿ, ಮಾವನವರು, ಶಿಕ್ಷಕರು, ಕುಟುಂಬದ ಸದಸ್ಯರ ಪ್ರೇರಣೆಯೇ ತಮ್ಮ ಉನ್ನತ ಮಟ್ಟದ ಸಾಧನೆಗೆ ಮೆಟ್ಟಿಲು ” ಎನ್ನುವುದನ್ನು ಯಾವಾಗಲೂ ನೆನೆಪಿಸಿಕೊಳ್ಳುತ್ತಾರೆ.
ಸುಧಾ ಪಾಟೀಲ
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

