ಭಾರತ ದೇಶವು 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಸಜ್ಜಾಗುತ್ತಿದೆ.
ಈ ಸಂದರ್ಭದಲ್ಲಿ ಸ್ವಾತಂತ್ರ್ಯಕ್ಕೆ ಕಾರಣೀಭೂತರಾದ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆಯವರನ್ನು ಸ್ಮರಿಸೋಣ.
ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಳು ನಡೆದಿವೆ, ಪ್ರತೀ ಹೋರಾಟಕ್ಕು ಒಂದೊಂದು ಘಟನೆಗಳು ಸಾಕ್ಷಿಯಾಗಿವೆ. ಆದರೆ ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲನೇ ಹೋರಾಟ ಇಡೀ ಭಾರತವನ್ನೇ ಬ್ರಿಟೀಷರ ವಿರುದ್ಧ ತಿರುಗಿ ಬೀಳುವಂತೆ ಮಾಡಿತು. ಚದುರಿ ಹೋಗಿದ್ದ ಭಾರತೀಯರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು. ಅನೇಕ ರಾಷ್ಟ್ರನಾಯಕರ ಜನನಕ್ಕೆ ಕಾರಣವಾಯಿತು.
ಸ್ವಾತಂತ್ರ್ಯ ಹೋರಾಟದ ಮೊದಲ ಸಂಗ್ರಾಮವೆಂದೇ ಹೇಳಲಾಗುವ 1857 ನೇ ಸಿಪಾಯಿದಂಗೆ ಬ್ರಿಟೀಷರ ವಿರುದ್ಧ ಮೊದಲ ಬಾರಿಗೆ ದೇಶಾದ್ಯಂತ ಹೋರಾಡಲು ಪ್ರೇರಣೆಯಾಯಿತು.
ಮೊದಲ ಸ್ವಾತಂತ್ರ್ಯ ಸಂಗ್ರಾಮ:
1857ರ ಹೊತ್ತಿಗೆ ಬ್ರಿಟೀಷರು ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ಭಾರತವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದರು. ಮೇ 10, 1857 ರಲ್ಲಿ ಮೀರತ್ ನ ಕಂಟೋನ್ಮೆಂಟ್ ಭಾಗದಲ್ಲಿ ಭಾರತೀಯ ಸಿಪಾಯಿಗಳಿಗೂ ಮತ್ತು ಬ್ರಿಟಿಷ್ ಸಿಪಾಯಿಗಳಿಗೂ ವ್ಯಾಜ್ಯವಾಗಿ, ಇದೇ ಸಂಗತಿ ‘ಸಿಪಾಯಿ ದಂಗೆ’ ಅಥವಾ ‘ಭಾರತೀಯ ದಂಗೆ’ಗೆ ನಾಂದಿಯಾಯಿತು.
ಮೊಟ್ಟ ಮೊದಲ ಹೋರಾಟಗಾರ ಮಂಗಲಪಾಂಡೆ:
ಮಂಗಲ್ ಪಾಂಡೆ ಒಂದು ಭೂಮಿಹಾರ್ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರು. ಅವರು 22 ನೇ ವಯಸ್ಸಿನಲ್ಲಿ 1849 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯನ್ನು ಸೇರಿದರು. ಪಾಂಡೆ 34 ನೇ ಬಂಗಾಳ ಸ್ಥಳೀಯ ಪದಾತಿದಳದ 6 ನೇ ಕಂಪನಿ ಭಾಗವಾಗಿದ್ದರು, ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷರ ಸೈನ್ಯದಲ್ಲಿ ಸಿಪಾಯಿಯಾಗಿದ್ದರು.
ಮಂಗಲ್ ಪಾಂಡೆ ಹೆಸರು ಇತಿಹಾಸದಲ್ಲಿ ಅಜರಾಮರವಾಗುವುದಕ್ಕೆ ಸಂದರ್ಭ ಸೃಷ್ಟಿಯಾಗಿದ್ದು, 1857, ಮಾರ್ಚ್ ನಲ್ಲಿ. ಆ ಸಂದರ್ಭದಲ್ಲಿ ಬ್ರಿಟೀಷ ಸರ್ಕಾರ ಹೊಸದಾಗಿ ಪರಿಚಯಿಸಿದ್ದ ಎನ್ಫೀಲ್ಡ್ ಪಿ-53 ರೈಫಲ್ ಗಳ ಬುಲೆಟ್ ಕಾರ್ಟ್ರಿಜ್ ಗೆ ಹಸು ಮತ್ತು ಹಂದಿಯ ಮಾಂಸವನ್ನು ಸವರಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಟ್ರಿಜ್ ನ ಹಿಂಭಾಗವನ್ನು ಬಾಯಿಯಿಂದ ಕಚ್ಚಬೇಕಿತ್ತು.
ಈ ವಿಷಯ ತಿಳಿಯುತ್ತಿದ್ದಂತೆಯೇ ಸೇನೆಯಲ್ಲಿದ್ದ ಹಿಂದು ಮತ್ತು ಮುಸ್ಲಿಂ ಸೈನಿಕರು ಉದ್ರಿಕ್ತರಾಗಿದ್ದರು. ಏಕೆಂದರೆ ಹಸು ಹಿಂದುಗಳಿಗೆ ಪೂಜನೀಯ. ಹಂದಿ ಎಂದರೆ ಮುಸ್ಲಿಮರಿಗೆ ವರ್ಜ್ಯ. ಎರಡು ಮತಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಇಂಥ ಕೆಲಸ ಸಾಧ್ಯವಿಲ್ಲ ಎಂದು ಸಿಪಾಯಿಗಳು ವಿರೋಧಿಸಿದ್ದರು.
ಬ್ರಿಟೀಷರ ಬಿಗುಮುಷ್ಟಿಯಿಂದ ಸ್ವಾತಂತ್ರ್ಯ ಪಡೆವ ಹುಮ್ಮಸ್ಸಿನಲ್ಲಿದ್ದ ಬಿಸಿರಕ್ತಕ್ಕೆ ನೆಪವೊಂದು ಬೇಕಿತ್ತು. ಇದೇ ವಿಷಯವನ್ನಿಟ್ಟುಕೊಂಡು ಮಂಗಲ್ ಪಾಂಡೆ, 1857, ಮಾರ್ಚ್ 29 ರಂದು ಬ್ರಿಟಿಷ ಅಧಿಕಾರಿ ಮೇಜರ್ ಹ್ಯೂಸನ್ ಮತ್ತು ಲೆಫ್ಟಿನಂಟ್ ಭಾಘ್ ಮೇಲೆ ಗುಂಡಿನ ದಾಳಿ ನಡೆಸಿ ಅವರಿಬ್ಬರನ್ನೂ ನೆಲಕ್ಕುರುಳಿಸಿದ್ದರು. ನಂತರ ಬ್ರಿಟೀಷ ಸೇನೆ ಮಂಗಲ್ ಪಾಂಡೆಯವರನ್ನು ಬಂಧಿಸಿತ್ತು.
ಈ ಸಂದರ್ಭದಲ್ಲಿ ಆತ್ಮಾರ್ಪಣೆ ಮಾಡಿಕೊಳ್ಳುವುದಕ್ಕೆ ಹೊರಟ ಪಾಂಡೆ ಪ್ರಯತ್ನವೂ ವಿಫಲವಾಗಿತ್ತು. ಗಾಯಗೊಂಡಿದ್ದ ಪಾಂಡೆಯವರನ್ನು ಬ್ರಿಟೀಷ ಸರ್ಕಾರದ ಆದೇಶದ ಮೇರೆಗೆ ಏಪ್ರಿಲ್ 8 (1857) ರಂದು ಬ್ಯಾರಕ್ಪುರ (ಕೋಲ್ಕತ್ತ) ದಲ್ಲಿ ಗಲ್ಲಿಗೇರಿಸಲಾಯಿತು.
ಇಂತಹ ಮಹಾನ್ ಚೇತನಕ್ಕೆ ಸಮಸ್ತ ಕರ್ನಾಟಕ ಶಿಕ್ಷಕರ ಬಳಗದ ವತಿಯಿಂದ ಕೋಟಿ ಕೋಟಿ ನಮನಗಳು.
ಹೇಮಂತ ಚಿನ್ನು, ಕರ್ನಾಟಕ ಶಿಕ್ಷಕರ ಬಳಗ