spot_img
spot_img

ಸಾಹಿತಿಗಳಿಗೆ ಸ್ಪೂರ್ತಿ ಶಿಕ್ಷಕ ಸಾಹಿತಿ ವೈ.ಬಿ.ಕಡಕೋಳ

Must Read

- Advertisement -

ವೈ.ಬಿ.ಕಡಕೋಳ ಸಹೃದಯ ಶಿಕ್ಷಕ ಸಾಹಿತಿ.ಕೇವಲ ಒಂದು ವರ್ಷದ ಹಿಂದಿನ ಅವರ ಪರಿಚಯ ನನ್ನಲ್ಲಿನ ಲೇಖಕಿಗೆ ಸಾಕಷ್ಟು ಬರವಣಿಗೆಗೆ ಕಾರಣವಾಯಿತು.ನನ್ನಂತಹ ಅನೇಕ ಬರಹಗಾರರಿಗೆ ಅವರ ಸ್ಪೂರ್ತಿದಾಯಕ ಸಲಹೆಗಳು ಸಾಹಿತ್ಯ ಕ್ಷೇತ್ರಕ್ಕೆ ನಮ್ಮನ್ನು ತೊಡಗಿಸುವಂತಾಗಿವೆ ಎಂದರೆ ಅತಿಶಯೋಕ್ತಿಯಾಗದು.ಇನ್ನೂ ಬರೆಯಬೇಕು ಎನ್ನುವವರಿಗೆ ಅವರ ಮಾರ್ಗದರ್ಶನ ಬಹಳ ಉಪಯುಕ್ತ.ಈ ದಿಸೆಯಲ್ಲಿ ವ್ಯಾಟ್ಸಪ ಮೂಲಕ ಪರಿಚಿತರಾದ ತುಮಕೂರು ಜಿಲ್ಲೆಯ ವೀಣಾ ನಾಗರಾಜು ಎಂಬ ಶಿಕ್ಷಕಿ ಕಾದಂಬರಿಕಾರರಾಗಿದ್ದು. ಹುಬ್ಬಳ್ಳಿಯ ಚಿತ್ರಕಲಾ ಶಿಕ್ಷಕಿ ರೇಖಾ ಮೊರಬ ಅವರ ಚಿತ್ರಗಳನ್ನು ತಮ್ಮ ಕವನ ಕಥೆಗಳಿಗೆ ಬಳಸಿಕೊಳ್ಳುವ ಮೂಲಕ ರೇಖಾ ಮೊರಬ ಅವರ ಚಿತ್ರಕಲೆಯನ್ನು ಪ್ರೋತ್ಸಾಹಿಸಿರುವರು.ಮುನವಳ್ಳಿಯ ಸಂಗೀತಾಸಕ್ತಿ ಗಾಯಕಿ ಮುಕ್ತಾ ಪಶುಪತಿಮಠ ಎಂಬುವವರನ್ನು ತಾವೇ ಬರೆದ ಹಾಡಿಗೆ ಗಾಯಕಿಯಾಗುವಂತೆ ಸ್ಪೂರ್ತಿ ನೀಡಿದ ವೈ.ಬಿ.ಕಡಕೋಳ ಅವರಿಗೆ ಇಂದು ೫೩ ನೆಯ ವರ್ಷದ ಜನ್ಮದಿನ.ಗುರುಗಳಿಗೆ ಮೊದಲು ಹುಟ್ಟು ಹಬ್ಬದ ಶುಭಾಶಯ ಕೋರುತ್ತ ಅವರ ವ್ಯಕ್ತಿತ್ವದ ಕುರಿತು ನನ್ನ ಬರಹ ರೂಪಿಸಿದೆ.

ಗಂಭೀರ ಸ್ವಭಾವ, ಯುವಕರನ್ನೇ ನಾಚಿಸುವ ಉಡುಗೆ– ತೊಡುಗೆ. ಮುಖದ ಮೇಲೆ ಹೊಳೆಯುವ ತೇಜಸ್ಸು, ಯವ ಸಾಹಿತಿಗಳಿಗೆ ಮಾದರಿ, ಸ್ಪಷ್ಟ ಮಾತುಗಾರಿಕೆ, ಮೃದು ಮನಸ್ಸು, ತಾಯಿಯ ಅಪರೂಪದ ಮಗ, ಸಹೋದರಿಯರ ಪ್ರೀತಿಯ ಅಣ್ಣ, ಮಕ್ಕಳ ಹೆಮ್ಮೆಯ ತಂದೆ, ಮಡದಿಯ ಆಪ್ತ, ಶಿಕ್ಷಣ ಕ್ಷೇತ್ರದ ನಿಷ್ಠಾವಂತ ಅಧಿಕಾರಿ, ಅಪರೂಪದ ಗೆಳೆಯ. ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ, ಪ್ರತಿಭಾವಂತ ಜನರ ಪರಿಚಯಿಸುವ ಅದ್ಭುತ ಬರಹಗಾರ.ಹೀಗೆ ಅವರನ್ನು ಕುರಿತು ಹೇಳಬಹುದು. ಇವರು ಮೂಲತಃ ಸವದತ್ತಿಯವರು. ವೈ.ಬಿ.ಕಡಕೋಳ ಅವರ ತಂದೆ ಬಸಪ್ಪ, ತಾಯಿ ಗಂಗವ್ವ ದಂಪತಿಗಳ ಚೊಚ್ಚಲ ಮಗ. ೨೨ನೇ ಜುಲೈ ೧೯೭೧ರಂದು ಜನಿಸಿದರು. ಇವರಿಗೆ ಮೂವರು ಸಹೋದರಿಯರು. ಕಳೆದ ಒಂಬತ್ತು ವರ್ಷದ ಹಿಂದೆ ಇವರಿಗೆ ಬೆಂಬಲವಾಗಿದ್ದ ತಂದೆಯ ನಿಧನದಿಂದ ಸಣ್ಣ ವಯಸ್ಸಿನಲ್ಲೇ ಕುಟುಂಬದ ಜವಾಬ್ದಾರಿ ಹೊತ್ತ ಇವರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.

ಶಿಕ್ಷಣ
ಇವರ ಪ್ರಾಥಮಿಕ ಶಿಕ್ಷಣವು ಸವದತ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿದರೆ, ಪ್ರೌಢಶಿಕ್ಷಣವು ಮುನವಳ್ಳಿಯ ಎಸ್.ಪಿ.ಜೆ.ಜಿ.ಪ್ರೌಢಶಾಲೆ, ಪದವಿ ಪೂರ್ವ ಶಿಕ್ಷಣವು ಅಜ್ಜಪ್ಪ ಗಡಮಿ ಸಂಯುಕ್ತ ಪದವಿ ಪೂರ್ವ ಕಾಲೇಜು ಮುನವಳ್ಳಿ ವ್ಯಾಸಂಗ ಪೂರೈಸಿರುವರು. ಶಿಕ್ಷಣ ಶಾಸ್ತ್ರದಲ್ಲಿ ಕಾಲೇಜಿಗೆ ಮೊದಲಿಗರಾಗಿ ತೇರ್ಗಡೆಯಾದರು. ನಂತರ ಧಾರವಾಡದ ಕೆ.ಎಲ್.ಇ ಸಂಸ್ಥೆಯ ಶ್ರೀ ಮೃತ್ಯುಂಜಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪದವಿ ಕಾಲೇಜಿಗೆ ಪ್ರಥಮ ಸ್ಥಾನ ಗಳಿಸುವ ಮೂಲಕ ಪದವಿ ಪೂರೈಸಿದರು.ಜೊತೆಗೆ ೧೯೯೨-೯೩ ನೆಯ ಸಾಲಿನ ಆದರ್ಶ ವಿದ್ಯಾರ್ಥಿ ಗೌರವಕ್ಕೂ ಪಾತ್ರರಾದರು. ಬಿ.ಎ.ದ್ವಿತೀಯ ವರ್ಷದ ವ್ಯಾಸಾಂಗ ಮಾಡುತ್ತಿರುವ ಸಂದರ್ಭದಲ್ಲಿ ಕಲಾ ವಿಭಾಗದಿಂದ ಸಾಂಸ್ಕೃತಿಕ ಚಟುವಟಿಕೆಗಳ ಸಂಘದ ಪದಾಧಿಕಾರಿಯಾಗಿ ಕೂಡ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಯಲ್ಲಿ ಪಾಲ್ಗೊಂಡಿರುವರು.
‘ಮುನವಳ್ಳಿ: ಒಂದು ಸಾಂಸ್ಕೃತಿಕ ಅಧ್ಯಯನ’ ಕುರಿತು ಕನ್ನಡ ವಿಶ್ವವಿದ್ಯಾಲಯದಲ್ಲಿ ಹಾರೂಗೇರಿಯ ಬಿ.ಆರ್.ದರೂರ ಸಂಶೋಧನಾ ಕೇಂದ್ರದಲ್ಲಿ ಡಾ.ವಿ.ಎಸ್.ಮಾಳಿಯವರ ಮಾರ್ಗದರ್ಶನದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವಿ ಪಡೆದಿದ್ದಾರೆ. ಜೊತೆಗೆ ಪದವಿ ಕಾಲೇಜಿನ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ‘ಕೆ–ಸೆಟ್’ ಅನ್ನೂ ಅವರು ಪಾಸ್ ಮಾಡಿದ್ದಾರೆ. ಸದ್ಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಡಾ.ಮಹೇಶ ಗಾಜಪ್ಪನವರ ಮಾರ್ಗದರ್ಶನದಲ್ಲಿ ‘ತಲ್ಲೂರು ರಾಯನಗೌಡರ ಸಮಗ್ರ ವ್ಯಕ್ತಿತ್ವ’ ಕುರಿತು ಪಿಎಚ್‌ಡಿ ಅಧ್ಯಯನ ಕೈಗೊಂಡಿರುವುದು ಕ್ಷೇತ್ರದಲ್ಲಿ

- Advertisement -

ವೈವಾಹಿಕ ಬದುಕು
ಫೆಬ್ರುವರಿ ೧೬, ೧೯೯೭ರಲ್ಲಿ ಚಿಕ್ಕನರಗುಂದ ಗ್ರಾಮದ ನಿವೃತ್ತ ಶಿಕ್ಷಕ ದಿವಂಗತ ಶಿವಪುತ್ರಪ್ಪ ಕೋನನ್ನವರ ಅವರ ಸುಪುತ್ರಿ ಶಿವಲೀಲಾ ಅವರೊಂದಿಗೆ ಮದುವೆಯಾದರು.ಈ ದಂಪತಿಗಳಿಗೆ ಅಭಿನಂದನ, ಆತ್ಮಾನಂದ ಹಾಗೂ ಪ್ರಜ್ವಲ್ ಎಂಬ ಮೂವರು ಮಕ್ಕಳು .ಮೊದಲ ಮಗ ಅಭಿನಂದನ (ಕೆ.ಎಸ್.ಆರ್.ಪಿ ಪೋಲಿಸ್ ಆಗಿ ಸೇವೆ ಸಲ್ಲಿಸುತ್ತಿರುವನು) ಆತ್ಮಾನಂದ (ಬಿ.ಎಲ್.ಐ.ಸಿ). ಪ್ರಜ್ವಲ್ (ಪಿ.ಯು.ಸಿ) ಉತ್ತೀರ್ಣನಾಗಿರುವನು.ಸದ್ಯ ಪದವಿ ವ್ಯಾಸಂಗಕ್ಕೆ ದಾಖಲಾಗಿರುವನು

ವೃತ್ತಿ ಬದುಕು
ಇವರು ತೆಗ್ಗಿಹಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ೧೯-೮-೧೯೯೪ ರಲ್ಲಿ ಸೇವೆ ಪ್ರಾರಂಭಿಸಿದರು. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಪಾಠ ಮಡಿದ ಇವರು, ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರು. ಅನೇಕ ಬಡ ಮಕ್ಕಳ ಜೀವನ ರೂಪಿಸಿದರು. ನಂತರ ಅರ್ಟಗಲ್ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿಯಾಗಿ ಅವಧಿ ಪೂರೈಸಿದ ನಂತರ ಅರ್ಟಗಲ್ ಪ್ರಾಥಮಿಕ ಶಾಲೆಯ ಶಿಕ್ಷಕರಾದರು.ಈ ಅವಧಿಯಲ್ಲಿ ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಗೌರವ ದೊರಕುವ ಮೂಲಕ ಶಿಕ್ಷಣ ರಂಗದ ಇವರ ಸಾಧನೆಗೆ ಮುಕುಟವಾಯಿತು.

ಗ್ರಾಮಸ್ಥರ ಮೆಚ್ಚುಗೆಯ ಶಿಕ್ಷಕ ಇವರು. ಶಿಕ್ಷಣ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸಿದ ಇವರು, ಸಿಆರ್‌ಪಿ ಆಗಿ ಅರಟಗಲ್ ಕ್ಲಸ್ಟರ್‌ನಲ್ಲಿ ಸೇವೆ ಸಲ್ಲಿಸಿದ್ದಾರೆ. ನಿಯೋಜಿತ ಬಿಆರ್‌ಪಿ ಆಗಿ ಕಾರ್ಯನಿರ್ವಹಿಸಿದ ಇವರು ಸದ್ಯ ಸಮನ್ವಯ ಶಿಕ್ಷಣದ ಸಂಪನ್ಮೂಲ ಶಿಕ್ಷಕಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

- Advertisement -

ವೃತ್ತಿಯಲ್ಲಿ ಶಿಕ್ಷಕ ಪ್ರವೃತ್ತಿಯಲ್ಲಿ ಲೇಖಕ
ವೃತ್ತಿಯಲ್ಲಿ ಶಿಕ್ಷಕ, ಪ್ರವೃತ್ತಿಯಲ್ಲಿ ಲೇಖಕರಾಗಿವರು ಇವರು ಸಮಕಾಲೀನ ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಸದ್ದು ಗದ್ದಲ ಇಲ್ಲದೇ ಹಲವಾರು ರೀತಿಯ ಬರವಣಿಗೆಯಲ್ಲಿ ನಿರತರಾಗಿದ್ದಾರ. ಕಥೆ, ಕವನ, ಪ್ರವಾಸ ಕಥನ, ಮಕ್ಕಳ ಸಾಹಿತ್ಯ, ಶಿಕ್ಷಣ ಕ್ಷೇತ್ರದ ಸಾಹಿತ್ಯ ಕೃತಿ ಬರೆದು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ.

ಸಾಹಿತ್ಯ ಕ್ಷೇತ್ರದಲ್ಲಿ
ಸಾವು– ಬದುಕಿನ ನಡುವೆ’,(ಕಥಾ ಸಂಕಲನ) ‘ಸಂಸ್ಕಾರಫಲ’. (ಮಕ್ಕಳ ಕಥಾ ಸಂಕಲನ) ‘ಚರಿತ್ರಗೊಂಡು ಕಿಟಕಿ’. (ಸ್ಥಳನಾಮಗಳ ಪರಿಚಯ), ‘ದೇಗುಲ ದರ್ಶನ’– (೩೪ ದೇಗುಲಗಳ ಪರಿಚಯ). ‘ಅಮೃತಧಾರೆ’ ಮತ್ತು ‘ಪಯಣಿಗ’ (ಸುಂದರವಾದ ಪ್ರವಾಸಿ ತಾಣಗಳ ಕೃತಿಗಳು.) ‘ಕಥೆಯಲ್ಲ ಜೀವನ’ (ಸಂಪಾದಿತ ಕೃತಿ), ‘ಸ್ವರ್ಗ– ನರಕ’ (ಮಕ್ಕಳ ತಥಾ ಸಂಕಲನ), ‘ತುಂಬಿದ ಹೊಳೆ’ (ಬಿಡಿಲೇಖನಗಳು), ‘ಮನೆ ಮದ್ದು’ (ಸಂಪಾದಿತ ಕೃತಿ), ‘ಒಂಟಿ ಪಯಣ’,(ಕವನ ಸಂಕಲನ) ‘ಅಡುಗೆ ವೈವಿದ್ಯ’ (ಸಂಪಾದಿತ ಕೃತಿ), ‘ಗುರು– ಶಿಷ್ಯ ಸಂಬಂಧ: (ಜೇವೂರ ಹಾಗೂ ಜಂಬಗಿ ಗುರುಗಳ ಸ್ಮರಣ ಸಂಚಿಕೆ ಸಂಪಾದಿತ ಕೃತಿ), ‘ವಚನ ದರ್ಪಣ’ (ಸಂಪಾದಿತ ಕೃತಿ), ‘ಅಭಿಪ್ರೇರಣೆ’ ( ಕಲಿಕಾ ಚಟುವಟಿಕೆಗಳ ಕುರಿತು ಸಂಪಾದಿತ), ‘ಹಬ್ಬಗಳ ಸಿರಿ’ ಮಾಸಗಳಿಗುಣವಾಗಿ ಹಬ್ಬಗಳ ಕುರಿತು), ‘ಇಳೆಗೆ ಹೊಸ ಕಳೆ’ (ಕವನ ಸಂಕಲನ), ‘ಹುಲಿಯು ಹುಟ್ಟಿತು ಕಿತ್ತೂರ ನಾಡಾಗ’ (ಚಂದ್ರಪ್ಪ ಛಲವಾದಿಯವರ ಭಜನಾ ಪದಗಳು ಸಂಪಾದಿತ ಕೃತಿ), ‘ಶಿಕ್ಷಣದ ಕೀರ್ತಿ ಕೀರ್ತಿವತಿ’– (ಸಂಪಾದಿತ ಕೃತಿ), ‘ಸ್ಪೂರ್ತಿ ಕಿರಣ’ (ಸಂಪಾದಿತ ಕೃತಿ), ‘ಬೆಳಕಿನೆಡೆಗೆ’ (ಸರ್ವಿ ಗುರುಗಳ ಕುರಿತು ಸಂಪಾದಿತ) ಭಾವಬಿಂದು. ಗಾಣಿಗರ ಹೆಜ್ಜೆಗಳು… ಹೀಗೆ ೩೦ ಕೃತಿಗಳನ್ನುಕನ್ನಡ ಸಾರಸ್ವತ ಲೋಕ್ಕೆ ನೀಡಿದ್ದಾರೆ.ಸದ್ಯ ಇವರ ಕವನ ಸಂಕಲನ ಕಥಾ ಸಂಕಲನ ಮುದ್ರಣ ಹಂತದಲ್ಲಿವೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಡಾ.ಮಹೇಶ ಗಾಜಪ್ಪನವರ ಇವರ ಮಾರ್ಗದರ್ಶನದಲ್ಲಿ ಇವರ ಸಂಶೋಧನೆ ತಲ್ಲೂರ ರಾಯನಗೌಡರು ಸಮಗ್ರ ಅಧ್ಯಯನ ಪಿಎಚ್‌ಡಿ ಸಾಗಿದೆ.ವೈ.ಬಿ.ಕಡಕೋಳ ಶೀಘ್ರವಾಗಿ ಡಾ.ವೈ.ಬಿ.ಕಡಕೋಳ ಆಗಲಿ ಎಂದು ಹಾರೈಸುವೆ.

ಪ್ರತಿನಿತ್ಯವೂ ಒಂದು ಭಾವಗೀತೆ. ಡಾ.ಗುರುರಾಜ ಕರ್ಜಗಿಯವರ ಉಪನ್ಯಾಸ ಒಂದು ನುಡಿಮುತ್ತು ಎಸ್‌ಎಂಎಸ್, ವ್ಯಾಟ್ಸಪ್ ಗಳಲ್ಲಿ ತಮ್ಮದೇ ಬಳಗದ ಗ್ರುಪ್ ಮಾಡಿಕೊಂಡು ಕಳಿಸುವ ಮೂಲಕ ಸದಭಿರುಚಿಯ ಸಂಗತಿಗಳನ್ನು ಕಳಿಸುವ ಇವರ ಹವ್ಯಾಸ ನಿಜಕ್ಕೂ ಅಭಿನಂದನಾರ್ಹ

ಇ ಮೇಲ್, ಜಿ ಮೇಲ್ ಎಲ್ಲದರ ನಡುವೆಯೂ ಸಮನಾಗಿ ನಿಂತ ಸಾಹಿತಿಗಳು. ಸಾಹಿತಿಗಳು ಹೀಗೂ ಇದ್ದಾರೆ ಎಂಬ ಅಚ್ಚರಿ ಭಾವನೆ ವ್ಯಕ್ಯಪಡಿಸಬಹುದೇ ಎಂಬ ಪ್ರಶ್ನೆ ಎಲ್ಲರಲ್ಲೂ ಹರಿದಾಡುವಂತೆ ಮಾಡಿದವರು ಇವರು. ನಮ್ಮ ಸುತ್ತಣ ಬಾಳಿನಲ್ಲಿ ಹಲವು ವೈಷಮ್ಯಗಳನ್ನು ಗಮನಿಸುವುದಕ್ಕಿಂತ ಸಮನ್ವಯದ ಹಾದಿಯಲ್ಲಿ ಮಾನವೀಯ ಬದುಕು ಸಾಗಿಸಬೇಕು ಎಂಬ ಚಿಂತನೆಯುಳ್ಳ ಶಿಕ್ಷಕ, ಲೇಖಕರಾಗಿರುವ ವೈ.ಬಿ.ಕಡಕೋಳ ಅವರು ಬೋಧನೆ– ಚಿಂತನೆ– ಸಾಂಸ್ಕೃತಿಕ ಸಂಗಮ ವ್ಯಕ್ತಿತ್ವ ಉಳ್ಳವರಾಗಿದ್ದಾರೆ.
ಧಾರವಾಹಿ ರೂಪದಲ್ಲಿ ಅಂಕಣ ಬರಹಗಾರ ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕ, ಹವ್ಯಾಸಿ ಲೇಖಕರಾಗಿದ್ದು ನೌಕರಿ ಜೀವನಕ್ಕಿಂತ ಮೊದಲು ವಿದ್ಯಾರ್ಥಿ ದೆಸೆಯಿಂದಲೂ ಬರವಣಿಗೆ ರೂಪಿಸಿಕೊಂಡ ಇವರು ಬೆಳಗಾವಿಯಿಂದ ಪ್ರಕಟವಾಗುತ್ತಿರುವ ಕನ್ನಡಮ್ಮ ದಿನಪತ್ರಿಕೆಯಲ್ಲಿ, ಸಿನಿಮಾ ಪುರವಣಿಗಳಲ್ಲಿ “ಚಲನಚಿತ್ರ ರಂಗದ ಸಾಹಿತಿಗಳ” ಕುರಿತು ೪೦ ಕಂತುಗಳಲ್ಲಿ ಹಾಗೂ ಸಿನಿಮಾ ಹಾಡುಗಳ ಕುರಿತು, ಹಸಿರುಕ್ರಾಂತಿ ದಿನಪತ್ರಿಕೆಯಲ್ಲಿ, ಸಿನಿಮಾ ನಿರ್ದೇಶಕರ ಕುರಿತು, ಹಾಗೂ ಕನ್ನಡಪ್ರಭ ದಿನಪತ್ರಿಕೆಯಲ್ಲಿ, ಸಾಪ್ರಾಹಿಕ ಸೌರಭದಲ್ಲಿ ‘ಚರಿತ್ರೆಗೊಂದು ಕಿಟಕಿ’ ಅಂಕಣದಲ್ಲಿ ೫೦ ವಾರಗಳ ‘ಸ್ಥಳ ನಾಮ’ ಕುರಿತು ಬರಹವನ್ನು ಧಾರವಾಹಿ ರೂಪದಲ್ಲಿ ಬರೆದಿದ್ದಾರೆ.

ಹವ್ಯಾಸಿ ಉಪನ್ಯಾಸಕ

ಇವರು ಕೇವಲ ಬರಹಗಾರರಷ್ಟೇ ಅಲ್ಲದೇ ಸಾಂದರ್ಭಿಕವಾಗಿ ಉಪನ್ಯಾಸ ಒದಗಿ ಬಂದಾಗ ಉಪನ್ಯಾಸ ಕೂಡ ಮಾಡುವಲ್ಲಿ ಸಿದ್ದಹಸ್ತರು. ಇವರು ಗೋಕಾಕ ತಾಲ್ಲೂಕಿನ ಸಾವಳಗಿ ಮಠದಲ್ಲಿ ‘ದಾನ’ದ ವಿಷಯದಲ್ಲಿ ಮೊದಲ ಬಾರಿಗೆ ಉಪನ್ಯಾಸ ನೀಡಿರುವರು ನಂತರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕೂಡ ‘ತಲ್ಲೂರು ರಾಯನಗೌಡರ’ ಕುರಿತು. ರಾಜ್ಯ ಮಟ್ಟದ ಕಿತ್ತೂರು ಉತ್ಸವದಲ್ಲಿ ‘ಕಿತ್ತೂರು ಸಂಶೋಧನೆಗೆ ಕೊಡುಗೆ ನೀಡಿದ ಮಹನೀಯರು’ ಕುರಿತು ಉಪನ್ಯಾಸ ನೀಡಿದ್ದಾರೆ.

ಕವನಗಳು ಗೀತೆಗಳಾಗಿ
ಇವರು ಬರೆದ ಹಾಡುಗಳನ್ನು ಗೋಕಾಕದ ಕಾಡೇಶಕುಮಾರ ಅವರು ಸುಸ್ರಾವ್ಯವಾಗಿ ಹಾಡುವ ಮೂಲಕ ಇವರ ಕವನಗಳೂ ಭಾವಗೀತೆ ಆಗುತ್ತವೆ ಎಂಬುದನ್ನು ನಿರೂಪಿಸಿರುವರು. ‘ಹಚ್ಚು ದೀಪವ ಗೆಳತಿ’ ಹಾಗೂ ‘ಮಳೆ ಮಳೆ ಮಳೆ’ ಎಂಬ ಗೀತೆಗಳಿಗೆ ಸ್ವರ ಸಂಯೋಜನೆಯನ್ನು ಗೋಕಾಕದ ಕಾಡೇಶಕುಮಾರ ಹಾಡುವ ಮೂಲಕ ರಾಗಸಂಯೋಜನೆಗೆ ಇವರ ಕವನಗಳನ್ನು ಆಯ್ದುಕೊಂಡಿದ್ದು ಗಮನಾರ್ಹವಾಗಿದೆ.ಇತ್ತೀಚಿಗೆ ಚಿತ್ರೀಕರಣವಾಗಿರುವ ವೀಣಾ ಟೀಚರ ಕಿರು ಚಿತ್ರಕ್ಕೆ ವೀಣಾ ಟೀಚರ ವ್ಯಕ್ತಿತ್ವ ಕುರಿತು ಇವರು ರಚಿಸಿದ ಗೀತೆಯನ್ನು ಮುನವಳ್ಳಿಯ ಮುಕ್ತಾ ಪಶುಪತಿಮಠ ಅವರಿಂದ ಹಾಡಿಸಿದ್ದು ಇಷ್ಟರಲ್ಲೇ ವೀಣಾ ಟೀಚರ್ ಕಿರುಚಿತ್ರ ಬಿಡುಗಡೆಯಾಗಲಿದೆ.ಮುಂದಿನ ಕಿರುಚಿತ್ರ ಡಾ.ಬೋಯಿಯವರನ್ನು ಕುರಿತು ಕಥೆ ಬರೆದಿದ್ದು ನನಗೂ ಕೂಡ ಅದರಲ್ಲಿ ಪಾತ್ರ ನೀಡಿರುವುದು ನನ್ನ ಹೆಮ್ಮೆ.

ಸಂದಿರುವ ಪ್ರಶಸ್ತಿಗಳು
ಕರ್ನಾಟಕ ಸರ್ಕಾರದ ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಇವರಿಗೆ.
ಡಾ.ಸ.ಜ. ನಾಗಲೋಟಮಠ ಪ್ರತಿಷ್ಠಾನ, ಬೆಳಗಾವಿ ಇವರಿಂದ ಜಲ್ಲಾ ಹಾಗೂ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ
ನರಗುಂದ ಪತ್ರಿವನ ಮಠದ ‘ಬಿಲ್ವಶ್ರೀ’ ಪ್ರಶಸ್ತಿ
ಧಾರವಾಡ ಅಪ್ನಾ ದೇಶ ಬಳಗದಿಂದ ‘ಶಿಕ್ಷಕ ರತ್ನ’ ಪ್ರಶಸ್ತಿ
ಬೆಳಗಾವಿ ಜಿಲ್ಲೆಯ ಸಿರಿಗನ್ನಡ ವೇದಿಕೆಯಿಂದ ಹಚ್ಚು ದೀಪವ ಗೆಳತಿ ಕವನಕ್ಕೆ ‘ಕಾವ್ಯಶ್ರೀ’, ಪ್ರಶಸ್ತಿ
ಇವರ ಚರಿತ್ರೆಗೊಂದು ಕಿಟಕಿ ಕೃತಿಗೆ ‘ಅಕ್ಷರಲೋಕದ ನಕ್ಷತ್ರ’ ಪ್ರಶಸ್ತಿ
ಪಯಣಿಗ ಕೃತಿಗೆ ಬೆಳಗಾವಿ ಜಿಲ್ಲೆಯ ಹಾರೂಗೇರಿಯ ದರೂರು ಸಾಹಿತ್ಯ ಪ್ರತಿಷ್ಠಾನ ಪ್ರಶಸ್ತಿ
ಇಳೆಗೆ ಹೊಸ ಕಳೆ ಕವನ ಸಂಕಲನಕ್ಕೆ ಬೇಂದ್ರೆ ಕಾವ್ಯ ಪುರಸ್ಕಾರ.
ಧಾರವಾಡ ವಲಯದ ಶೈಕ್ಷಣಿಕ ಜಿಲ್ಲೆಗಳ ವಿಭಾಗ ಮಟ್ಟದ ಲೀಲಾ ಕಲಕೋಟಿ ದತ್ತಿ ನಿಧಿ ಶಿಕ್ಷಕ– ಸಾಹಿತಿ ಪ್ರಶಸ್ತಿ.
ಹೀಗೆ ಹತ್ತು ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಸನ್ಮಾನಗಳು ಲಭಿಸಿವೆ.

ಕಿರುಚಿತ್ರಗಳಲ್ಲಿ ನಟನೆ
ಇವರು ದತ್ತಿದಾನಿ ನಿವೃತ್ತ ಗುರುಮಾತೆ ಲೂಸಿ ಸಾಲ್ಡಾನಾ ಅವರ ಜೀವನ ಚಿತ್ರವನ್ನು ಕುರಿತು ಕಥೆಯಲ್ಲ ಜೀವನ ಕೃತಿ ರೂಪಿಸಿದ್ದು ಇದನ್ನು ಆಧರಿಸಿ ಬಾಬಾಜಾನ್ ಮುಲ್ಲಾ ನಿರ್ದೇಶನದಲ್ಲಿ “ಬದುಕು ಬಂಡಿ” ಎಂಬ ಚಲನಚಿತ್ರ ಚಿತ್ರೀಕರಿಸುತ್ತಿದ್ದು ಈ ಚಲನಚಿತ್ರದ ಬಹುತೇಕ ಭಾಗ ಈಗಾಗಲೇ ಚಿತ್ರೀಕರಣಗೊಂಡಿದೆ.ಬೆಂಗಳೂರಿನ ಸಂತೋಷ ಅವರು ನಾನು ಲೂಸಿ ಎಂಬ ಟೆಲಿಚಿತ್ರ ನಿರ್ದೇಶನ ಮಾಡಿದ್ದು ಅದು ಬಿಡುಗಡೆಗೊಂಡು ಲಕ್ಷಾಂತರ ವೀಕ್ಷಕರ ಮನ ಗೆದ್ದಿದೆ.ಇವರದೇ ಕಥೆ ಆಧಾರಿತ ಆಕಾಶಬುಟ್ಟಿ ಕೂಡ ಲಕ್ಷಾಂತರ ವೀಕ್ಷಕರನ್ನು ಹೊಂದಿದೆ. ಸದ್ಯ ಇವರ ಕಥೆಯಾಧಾರಿತ ವೀಣಾ ಟೀಚರ್ ಕೂಡ ಚಿತ್ರೀಕರಣ ಮುಗಿದದ್ದು ಬಿಡುಗಡೆಗೆ ಅಣಿಯಾಗಿದೆ.. ಇವರು ‘ಅಮ್ಮ ನಾನು ಶಾಲೆಗೆ ಹೋಗುವೆ’ ಹಾಗೂ ‘ಅಪ್ಪ ನನ್ನ ಹೊಡೆಯಬೇಡಪ್ಪೋ’ “ಸರು” (ಹೆಳವನ ಮಗಳು) ನಾನು ಲೂಸಿ ಎಂಬ ನಾಲ್ಕು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾನು ಕೂಡ ಎರಡು ಕಿರು ಚಿತ್ರಗಳಲ್ಲಿ ಇವರ ಜೊತೆಗೆ ಅಭಿನಯಿಸಿದ್ದೇನೆ. ಇವರ ಕಥೆ ಆಧಾರಿತ ‘ಆಕಾಶ ಬುಟ್ಟಿ‘ ಎಂಬ ಕಥೆಯನ್ನು ಎಲ್.ಐ.ಲಕ್ಕಮ್ಮನವರ ಶಿಕ್ಷಕರು ಚಿತ್ರಕಥೆ ಬರೆದು ಚಿತ್ರೀಕರಣಕ್ಕೆ ಅಳವಡಿಸಿದ್ದು ಶೈಕ್ಷಣಿಕ ಕಿರುಚಿತ್ರವಾಗಿ ಚಿತ್ರೀಕರಣ ಮಾಡಲಾಗಿದೆ ಅದೂ ಕೂಡ ಅಪಾರ ಮನ್ನಣೆ ಗಳಿಸುವುದಷ್ಟೇ ಅಲ್ಲ ಉತ್ತಮ ಕಥೆಗಾಗಿ ವೈ.ಬಿ.ಕಡಕೋಳ ಅವರಿಗೆ ಪುನೀತ ಪ್ರಶಸ್ತಿ ಕೂಡ ಲಭಿಸಿದೆ.. ನಂತರ ನಾನು ಲೂಸಿ ಕಿರುಚಿತ್ರಕ್ಕೆ ಇವರ ಕಥೆ ಆರಿಸಿಕೊಂಡು ಬೆಂಗಳೂರಿನ ಸಂತೋಷ ಕಿರುಚಿತ್ರ ನಿರ್ದೇಶಿಸಿದರು ಅದು ಲಕ್ಷಾಂತರ ವೀಕ್ಷಕರನ್ನು ಹೊಂದುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿತು.. ಹೀಗೆ ಮೂರು ಕಿರುಚಿತ್ರಗಳು ಇವರ ಕಥೆಯನ್ನು ಹೊಂದುವ ಮೂಲಕ ಐದು ಕಿರುಚಿತ್ರಗಳು ಇವರ ಅಭಿನಯದ ಮೂಲಕ ಬಂದಿದ್ದು ಕಿರುತೆರೆಯ ನಟರಾಗಿ ಕಥಾ ರಚನೆಕಾರರಾಗಿ ಸಹ ನಿರ್ದೇಶಕರಾಗಿ ಬಹುಮುಖ ಪ್ರತಿಭೆಯನ್ನು ಇವರು ಹೊಂದಿದ್ದು ನಿಜಕ್ಕೂ ಇವರ ಬಹುಮುಖ ಪ್ರತಿಭೆಯ ಜೊತೆಗೆ ನನ್ನಂತಹ ಹಲವಾರು ಗುರುಗಳಿಗೆ ಗುರುಮಾತೆಯವರಿಗೆ ತಮ್ಮ ಕಿರುಚಿತ್ರದಲ್ಲಿ ನಟಿಸಲು ಅವಕಾಶ ನೀಡುವ ಮೂಲಕ ಇನ್ನೂ ಹತ್ತಾರು ಪ್ರತಿಭೆಗಳು ಬೆಳೆದು ಬರಲಿ ಎಂದು ಅವಕಾಶ ನೀಡುತ್ತಿರುವವರಲ್ಲಿ ಇವರದು ಬಹಳ ಪಾತ್ರವಿದೆ ಎಂದರೆ ಅತಿಶಯೋಕ್ತಿಯಾಗದು.ಹಲವಾರು ರೀತಿಯಿಂದ ನಮ್ಮನ್ನು ಪ್ರೋತ್ಸಾಹಿಸುತ್ತ ಬಂದಿರುವ ಈ ಶ್ರೇಷ್ಠ ಸಾಹಿತಿ–. ಅವರು ಕರ್ನಾಟಕ ಇತಿಹಾಸ ಅಕಾಡೆಮಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು, ಜನಪದ ಸಾಹಿತ್ಯ ಪರಿಷತ್ತು ಮತ್ತು ಚುಟುಕು ಸಾಹಿತ್ಯ ಪರಿಷತ್ತು ಮಕ್ಕಳ.ಸಾಹಿತ್ಯ ವೇದಿಕೆ ಮುಂತಾದ ಸಂಘ-ಸಂಸ್ಥೆಗಳ ಸದಸ್ಯರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ ಕನ್ನಡ ಸಾಹಿತ್ಯ ಪರಿಷತ್ತು ಸವದತ್ತಿ ತಾಲೂಕಿನ ಗೌರವ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವರು
ಇವರು ನಾಡು,ನುಡಿ.ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹೀಗೆ ಅಪಾರ ಸೇವೆ ನೀಡಲಿ ಎಂದು ಹಾರೈಸುವೆ.ಇಂದು ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಮೋಹನ ದಂಡೀನ. ಕ್ಷೇತ್ರ ಸಮನ್ವಯಾಧಿಕಾರಿಗಳಾದ ಶ್ರೀ ಬಿ.ಎನ್.ಬ್ಯಾಳಿ ಕ್ಷೇತ್ರ ಸಂಪನ್ಮೂಲ ಕೇಂದ್ರದ ಎಲ್ಲ ಸಂಪನ್ಮೂಲ ವ್ಯಕ್ತಿಗಳು.ತಾಲೂಕಿನ ಎಲ್ಲ ಸಿ.ಆರ್.ಪಿಗಳು ಇವರ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಲ್ಲದೇ ನಾಡಿನಾದ್ಯಂತ ಸಾಹಿತಿಗಳು.ಶಿಕ್ಷಕರು.ವಿವಿಧ ಕ್ಷೇತ್ರಗಳ ಇವರ ಸನ್ಮಿತ್ರರು ಇವರಿಗೆ ಶುಭ ಕೋರುವುದನ್ನು ವ್ಯಾಟ್ಸಪ್ ಫೇಸ್ಬುಕ್ ನಲ್ಲಿ ಗಮನಸಿದಾಗ ಇಂತವರ ಒಟನಾಟದಲ್ಲಿರುವ ನಮಗೆ ಇವರ ಮಾರ್ಗದರ್ಶನ ಇರಬೇಕು ಎಂದು ಬಯಸುವೆನು.ದೇವರು ಇವರಿಗೆ ಆಯುರಾರೋಗ್ಯ ನೀಡಲಿ.ನಮ್ಮಂತಹ ಅನೇಕ ಶಿಕ್ಷಕ ಶಿಕ್ಷಕಿಯರಿಗೆ ಅವರಿಂದ ಮಾರ್ಗದರ್ಶನ ದೊರೆಯುವಂತಾಗಲಿ ಎಂದು ಆಶಿಸುವೆ.

ನಂದಿನಿ ಸನಬಾಳ್, ಶಿಕ್ಷಕಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾ
ಕಲಬುರ್ಗಿ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group