ಇಂದು ಅಂತಾರಾಷ್ಟ್ರೀಯ ಚಹಾ ದಿನ : ಆಹಾ..ಚಹಾ..!

Must Read

ಚಹಾ ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿದೆ. ಬೆಳಿಗ್ಗೆ ಎದ್ದ ತಕ್ಷಣ ಮೊದ್ಲು ಒಂದು ಕಪ್ ಚಹಾ ಬೇಕೆ ಬೇಕು ಮಾರಾಯಾ… ಚಹಾ ಇಲ್ಲಂದ್ರ ಏನೋ ಕಳಕೊಂಡಂಗ ಆಗತದ ಅನ್ನುವವರಿಂದ ಹಿಡಿದು; ಹೊತ್ತು ಮುಳುಗಿ ಕತ್ತಲಾದರೂ ಸಹಿತ ಚಹಾ ಹೀರುವವರು ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಬೆರಳೆಣಿಕೆಯಷ್ಟು ಜನ ಚಹಾದ ವಿರೋಧಿಗಳು ಇದ್ದಾರೆ, ಪಿತ್ತ ಆಗತದ,ಎಸಿಡಿಟಿ ಆಗತದ, ಸಕ್ಕರೆ ಕಾಯಿಲೆ,ಚಹಾ ಕುಡದ್ರ ಹಸಿವಾಗುದಿಲ್ಲಂತ ಹಿಂಗ ಹತ್ತಾರು ಆರೋಪಗಳು ಚಹಾದ ಮೇಲಿವೆ. ಇದನ್ನು ಸಹ ಅಲ್ಲಗಳೆಯುವಂತಿಲ್ಲ.

ಇಂದು ಚಹಾ ವಿರೋಧಿಸುವವರೆಲ್ಲರು ಒಂದಾನೊಂದು ಕಾಲದಲ್ಲಿ ಚಹಾ ಪ್ರಿಯರೇ,ಅದರ ದಾಸಾನುದಾಸರಾಗಿ ಬೆಳೆದು ಬಂದವರೆ ಇದ್ದಾರೆ. ಸಣ್ಣವರಿದ್ದಾಗ ನಾಲ್ಕೈದು ಪಾರ್ಲೆ ಒಂದ ಕಪ್ ಚಹಾದೊಂದಿಗೆ ಒಪ್ಪತ್ತಿನ ಊಟವನ್ನು ಮುಂದೆ ತಳ್ಳಿದ ಉದಾಹರಣೆಗಳು ಸಾಕಷ್ಟಿವೆ.

ನಮ್ಮ ಆತ್ಮೀಯರು,ಗೆಳೆಯರು,ಬಂಧು ಬಾಂಧವರು, ಸಹೋದ್ಯೋಗಿಗಳು, ಯಾರೇ ಭೆಟ್ಟಿಯಾಗಲಿ ಅಥವಾ ಮನೆಗೆ ಬರುವ ಅತಿಥಿಗಳೇ ಆಗಿರಲಿ ಮೊದಲಿಗೆ ಅವರ ಯೋಗಕ್ಷೇಮ ವಿಚಾರಿಸಿ ಒಂದು ಕಪ್ ಚಹಾ ಕುಡಿಸಿದಾಗಲೇ ಮನಸ್ಸಿಗೆ ಸಮಾಧಾನ.

ಒಂದರ್ಧ ಕಪ್ ಚಾ ಮಾಡ… ಯಾಕೋ, ತಲಿ ನೋವಾತೈತಿ ಅಂತ ಹೆಂಡತಿಗೆ ಹೇಳಿ ಬಿಸಿ ಬಿಸಿ ಒಂದು ಕಪ್ ಚಹಾ ಕುಡಿದಾಗ ತಲೆನೋವು ಮಟಮಾಯ!!

ಚಹಾ ಕುಡಿಯಲಿಕ್ಕೆ ಇಂತಹದ್ದೆ ಕಾರಣಬೇಕಿಲ್ಲ!! ಸತ್ರೂ- ಕೆಟ್ರೂ, ಗೆದ್ರೂ-ಸೋತ್ರೂ, ಡ್ಯುಟಿಗೆ ಬಂದ್ರೂ- ರಜೆ ಹಾಕಿದ್ರೂ, ಲಾಭ-ನಷ್ಟಾದ್ರೂ,ಆರಾಮಿಲ್ಲಂದ್ರೂ ಚಹಾ ಬೇಕೆ ಬೇಕು. ಬಹುಶ ಈ ಚಹಾ ಸೃಷ್ಟಿಸಿದ ಅವಾಂತರ ಅಂತಿರೋ ಅಥವಾ ಅನುಬಂಧ ಅಂತಿರೋ ಅದು ನಿಮಗೆ ಬಿಟ್ಟಿದ್ದು.

ನಮ್ಮ ಸಹೋದ್ಯೋಗಿ ಮಿತ್ರರಲ್ಲೆ ಚಹಾದ ಸಲುವಾಗಿ ಎರಡು ಬಣಗಳಾಗಿವೆ ಮಾರ್ಪಟ್ಟಿವೆ!. ೧ ) ಅಣ್ತಮ್ಮರ ಬಣ ೨) ಬೀಗರ ಬಣ. ಅಣ್ಣತಮ್ಮರ ಪಕ್ಷದಲ್ಲಿ ಹತ್ತಾರು ಜನರಿದ್ದಾರೆ. ಆದರೆ ನಮ್ಮ ಬೀಗರ ಪಕ್ಷದಲ್ಲಿ ಮೂರೇ ಮೂರು ಜನ! ಉಮೇಶ, ಬಸಪ್ಪ, ವಿಠ್ಠಲ ಎನ್ನುವ ನಮ್ಮ ಎದುರಾಳಿ ಬಣದವರು ವಾರದಲ್ಲಿ ಕನಿಷ್ಠ ೨-೩ ಬಾರಿಯಾದರು ಪಾಪ,ಅವು ನಮಗೆ ಚಹಾ ಕುಡಿಸಲೇ ಬೇಕು. ಬೇರೆ ವಿಧಿಯಿಲ್ಲ!!. ನಮ್ಮ ಬಣಗಳ ಹಿರಿಮೆ, ಗರಿಮೆ, ಸಿರಿವಂತಿಕೆ,ಹೃದಯವಂತಿಕೆ, ಜಾಣತನ,ನಿಂತಿರುವುದೆ ಒಂದು ಕಪ್ ಚಹಾದ ಮೇಲೆ !.

ರೈತಾಪಿ ವರ್ಗ,ನೌಕರರು,ಅಧಿಕಾರಿ ವರ್ಗ,ರಾಜಕಾರಣಿಗಳು,ವ್ಯಾಪಾರಸ್ಥರು ಹೀಗೆ ಅವರಿವರೆನ್ನದೆ ಈ ಚಹಾ ಎಲ್ಲರನ್ನು ಆವರಿಸಿಕೊಂಡು ಬಿಟ್ಟಿದೆ.

“ನಮಸ್ಕಾರೀ… ಚಹಾ ಆತ ರೀ?”

“ನಮ್ದ ಚಹಾ ಆತ; ನಿಮ್ದ ಆತ ರೀ..?”

“ಬರ್ರಿ….ಚಹಾ ಕುಡಕೊಂತ ಮಾತಾಡುನಂತ. ”

“ಏ ಹಂಗ ಹೋಗಬ್ಯಾಡ್ರಿ ಒಂದ ಅರ್ಧಾ ಸಿಂಗಲ್ ಚಹಾ ಕುಡುದ ಹೋಗುವಿರಂತ”

” ಏ ಮಮ್ಮಿ ನಂಗ ಚಾ ಬೇಕ ನೋಡ”

“ಚಹಾ ಮಾಡಿರೋ ಇಲ್ಲೋ?”

” ತಡಿರೀ ಬಾಳ ದಿನದ ಮ್ಯಾಗ ಭೇಟ್ಟಿ ಆಗಿರೀ, ಒಂದ ಕಪ್ ಚಾ ಕುಡಿಯೋನಂತ”

“ಬಾ.. ಮಗಾ ಬೈಟೂ ಚಹಾ ಕುಡಿಯೋನು”
ಹಿಂಗ…ಬೆಳಿಗ್ಗೆಯಿಂದ ಶುರುವಾದ ಚಹಾದ ಮಹಿಮೆ ರಾತ್ರಿವರೆಗೂ ನಮಗೆ ಅರಿವಿಲ್ಲದಂತೆ ನಡೆಯುತ್ತಿರುತ್ತದೆ.

ಈಗಂತೂ, ಬೆಲ್ಲದ ಚಹಾದ ದೊಡ್ಡ ಹಾವಳಿ! ಎಲ್ಲಿ ನೋಡಿದ್ರೂ ಅನೇಕ ಹೆಸರಿನ ಚಹಾದ ಅಂಗಡಿಗಳು ತಲೆಯೆತ್ತಿ ನಿಂತಿವೆ. ಚಹಾ ಕುಡಿಯುವುದು ಈಗ ಒಂದು ರೀತಿಯ ಫ್ಯಾಶನ್ ಆಗಿ ಬಿಟ್ಟಿದೆ.

ಅಂದಂಗ…. ಇಂದು ನನ್ನ ಆತ್ಮೀಯರಲ್ಲಿ ಒಬ್ಬನಾದ ಜೀವದ ಗೆಳೆಯ. ನಾನೂ ಬಹಳೇ ಪ್ರೀತಿಸುವ ಮತ್ತು ಅಷ್ಟೇ ಪ್ರೀತಿಯಿಂದ ಶಿಷ್ಯಾ ಎಂದು ಕರೆದಾಗ ಓಗೊಡುವ ಶಿವಕುಮಾರ ಹೊಸಪೇಟದಿಂದ ನನ್ನ ಭೇಟಿಗೆಂದು ಬಂದಿದ್ದ‌. ಒಂದ ಕಪ್ ಚಹಾ ಕುಡಿಯುವ ಸಲುವಾಗಿ ಇಡೀ ಅರ್ಧಾ ಹುಬ್ಬಳ್ಳಿ ಸುತ್ತಾಡಿ ಕೊನೆಗೆ ಕಂಡದ್ದು, ಬೇಂದ್ರೆ ಚಹಾದಂಗಡಿ!.ನಮ್ಮ ಅಜ್ಜನ ಹೆಸರಿನ ಮ್ಯಾಲ ಚಹಾದಂಗಡಿ ನಡಸ್ತಿದ್ದಾರಂದ್ರ, ಆದಂಗಾಂತೂ ಇಲ್ಲೆ ಚಹಾ ಕುಡಿಯುವುದೆಂದು ತೀರ್ಮಾನಿಸಿ ಹಾಫ್ ಚಹಾ ಕುಡಿದು ಹೊರ ಬಂದಾಗ ಏನೋ ಒಂದು ಸಂತಸ. ಗೆಳೆತನಕ್ಕೊಂದು ತಾಜಾತನ ಬಂದಂತಾಯಿತು.
ಈ ಚಹಾದ ಅನುಭವ, ಅನುಬಂಧ ಇಷ್ಟೆಲ್ಲಾ ಬರೆಯಿಸಿತು.

ಮತ್ತ…ಲಗೂನ ಬಾ; ಇಲ್ಲೆ ಬೇಂದ್ರೆ ಚಹಾದಂಗಡಿಯೊಳಗ ಚಹಾ ಕುಡಿಯೋನಂತ ಹೇಳಿ ನಗೆ ಚಟಾಕೆಯೊಂದಿಗೆ ಆತನನ್ನು ರೈಲ್ವೆ ನಿಲ್ದಾಣದವರೆಗೂ ಕಳುಹಿಸಿ ಬಂದೆ…

ನಮಸ್ಕಾರೀ … ಮತ್ತೊಂದು ಚಹಾ ಪುರಾಣದೊಂದಿಗೆ ಭೆಟ್ಟಿಯಾಗೋನಂತ.

ಚನಬಸಪ್ಪ ಚೌಗಲಾ
ವಿಶ್ವಾರಾಧ್ಯಪ್ರಿಯ.
೮೮೬೭೬೬೫೦೪೪

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group