ಹೊಸಗುಂದ ಉತ್ಸವ ಎರಡನೇ ದಿನದ ಕಾರ್ಯಕ್ರಮ:
ಸಾಗರ: ಪ್ರಾದೇಶಿಕ ಜಾನಪದ ಕಲೆಗಳಿಗೆ ಪ್ರಾಮುಖ್ಯತೆ ಸಿಗುವ ರೀತಿಯಲ್ಲಿ ಉತ್ಸವಗಳು ನಡೆಯುತ್ತಿರುವುದು ಅಭಿನಂದನೀಯ ಸಂಗತಿ. ಜಾನಪದ ಕಲೆಗಳಿಗೂ ಆದ್ಯತೆ ಸಿಗುವಂತಾಗಬೇಕು ಎಂದು ಹಿರಿಯ ಜಾನಪದ ಕಲಾವಿದ ಗುಡ್ಡಪ್ಪ ಜೋಗಿ ಹೇಳಿದರು.
ಸಾಗರ ತಾಲೂಕಿನ ಹೊಸಗುಂದದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಹೊಸಗುಂದ ಉತ್ಸವದ ಪ್ರಯುಕ್ತ ಎರಡನೇ ದಿನದಂದು ವಿವಿಧ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಜಾನಪದ ನೃತ್ಯ ಸ್ಪರ್ಧೆಯನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಕಲಾವಿದರಿಗೆ ಸರಿಯಾದ ರೀತಿಯಲ್ಲಿ ಅವಕಾಶಗಳು ಸಿಗುತ್ತಿಲ್ಲ. ಅವರಿಗೆ ಸೂಕ್ತ ರೀತಿಯ ವೇದಿಕೆಗಳು ಸಿಗುವಂತೆ ಗಮನ ವಹಿಸಬೇಕಾದ ಅವಶ್ಯಕತೆ ಇದೆ. ವಿಶ್ವವಿದ್ಯಾಲಯಗಳು ಜಾನಪದ ಕಲಾವಿದರ ಬಳಿಗೆ ಹೋಗುವ ಮೂಲಕ ಜಾನಪದ ಕಲೆಗಳ ಸಂಸ್ಕೃತಿ ಪರಂಪರೆ ಉಳಿಸಿ ಮುಂದುವರೆಸಬೇಕಾದ ಅವಶ್ಯಕತೆ ಇದೆ. ಜಾನಪದ ಕಲೆಗಳ ಕಲಿಕೆ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಮೂಲ ಜಾನಪದದ ಜ್ಞಾನ ಒದಗಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕಲೆ ಮತ್ತು ಕಲಾವಿದರು ಸಂಕಷ್ಟದ ಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ಸರ್ಕಾರ ಮತ್ತು ಸಂಘಟನೆಗಳು ವೇದಿಕೆ ನಿರ್ಮಿಸಿಕೊಡುವ ಮೂಲಕ ಸಹಕರಿಸಬೇಕು. ಕಲಾವಿದರು ಪರಸ್ಪರ ಸಂವಹನ ನಡೆಸುವ ಮೂಲಕ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ. ತಲೆಮಾರಿನಿಂದ ತಲೆಮಾರಿಗೆ ಜಾನಪದ ಸಂಸ್ಕೃತಿಯನ್ನು ತಲುಪಿಸುವ ಕೆಲಸ ಆಗಬೇಕು ಎಂದರು.
ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಸಂಸ್ಥಾಪಕ ಸಿ.ಎಂ.ಎನ್. ಶಾಸ್ತ್ರಿ ಮಾತನಾಡಿ, ನಮ್ಮ ಜಾನಪದ ಕಲೆಗಳ ಪರಿಚಯವು ವಿದ್ಯಾರ್ಥಿ ಹಂತದಿಂದಲೇ ಆಗಬೇಕು. ಇದರಿಂದ ಜಾನಪದ ಕಲೆಗಳ ಮಹತ್ವ ಅರಿತುಕೊಳ್ಳುವುದರ ಜತೆಯಲ್ಲಿ ಮುಂದಿನ ತಲೆಮಾರಿಗೂ ಜಾನಪದ ಸಂಸ್ಕೃತಿ ತಲುಪಿಸಿದಂತಾಗುತ್ತದೆ. ಹೊಸಗುಂದ ಉತ್ಸವದಲ್ಲಿ ಜಾನಪದ ಸ್ಪರ್ಧೆ ಆಯೋಜಿಸುವ ಮೂಲಕ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳನ್ನು ತಲುಪಲಾಗಿದೆ. ಮುಂದಿನ ವರ್ಷಗಳಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಸುವ ಆಲೋಚನೆ ಇದೆ ಎಂದು ತಿಳಿಸಿದರು.
ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಕಂಸಾಳೆ, ಜೋಗತಿ ನೃತ್ಯ, ಡೊಳ್ಳು ಕುಣಿತ, ಹಾಲಕ್ಕಿ ಕುಣಿತ ಸೇರಿದಂತೆ ಮುಂತಾದ ನೃತ್ಯಗಳನ್ನು ಪ್ರದರ್ಶಿಸಿದರು.
ಗಾಯನ ಕಾರ್ಯಕ್ರಮ
ಪ್ರಸಿದ್ಧ ಗಾಯಕ ಹೂಮಾಯೂನ್ ಹರ್ಲಾಪುರ ಮತ್ತು ತಂಡದವರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಸಾಗರದ ಕಲಾಸಿಂಚನ ತಂಡದಿಂದ ‘ಕೆರೆಗೆ ಹಾರ’ ನಾಟಕ ಪ್ರದರ್ಶಿಸಲಾಯಿತು.
ವನಶ್ರೀ ವಿದ್ಯಾಸಂಸ್ಥೆ ಸ್ಥಾಪಕ ಮಂಜಪ್ಪ, ಶೋಭಾ ಶಾಸ್ತ್ರಿ , ಜಯಮ್ಮ, ಭದ್ರಮ್ಮ, ಗಣಪತಿ ಶೆಟ್ಟಿ, ಅಕ್ಕಮಹಾದೇವಿ, ಮಧ್ವರಾಜ್, ರಾಘವೇಂದ್ರ ಕೋವಿ, ವಿನಾಯಕ ಭಟ್, ರಮೇಶ್ ಐಗಿನಬೈಲು, ಉಮೇಶ್ ಅಡಿಗ, ಎಂ.ಸಿ.ಮಹೇಶ್, ಶೇಖರಪ್ಪ ಶಿವಗಂಗೆ, ಲತಾ ಹೊಸಗುಂದ ಮತ್ತಿತರರು ಇದ್ದರು.
ಡಿಸೆಂಬರ್ 3ರಂದು ಹೊಸಗುಂದದಲ್ಲಿ ಲಕ್ಷದೀಪೋತ್ಸವ
ಸಾಗರದ ಹೊಸಗುಂದದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಉತ್ಸವದಲ್ಲಿ ಡಿಸೆಂಬರ್ 3ರಂದು ಸಂಜೆ 5.30ಕ್ಕೆ ವನಶ್ರೀ ಸಂಸ್ಥೆಯಿಂದ ಜಲಯೋಗ ನಡೆಯಲಿದೆ.
ಸಂಜೆ 6ಕ್ಕೆ ತೇಜಸ್ವಿ ತಬಲಾ ತಂಡ, ಸಾಗರ ಇವರಿಂದ ವಾದ್ಯ ವೈವಿಧ್ಯ, ನಂತರ ವಿದ್ವಾನ್ ಪ್ರದ್ಯುಮ್ನ ಮತ್ತು ತಂಡದವರಿಂದ ಶ್ರೀ ದುರ್ಗಾದೇವಿ ಭರತನಾಟ್ಯ ವೈಭವ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದೇ ವೇಳೆ ಕಾರ್ಯಕ್ರಮದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಾಧಕರನ್ನು ಸನ್ಮಾನಿಸಲಾಗುವುದು.
ರಾತ್ರಿ 8 ಕ್ಕೆ ಲಕ್ಷದೀಪೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಪದ್ಮಶ್ರೀ ಪುರಸ್ಕೃತ ಡಾ. ವಿ.ಆರ್. ಗೌರಿಶಂಕರ್, ಆಡಳಿತ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಶೃಂಗೇರಿ ಪೀಠ ಹಾಗೂ ಅಧ್ಯಕ್ಷರು, ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್, ಹೊಸಗುಂದ ಅವರು ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ