ಕಲ್ಲೋಳಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಗ್ರಾಮೀಣ ಪುನರ್ರಚನೆ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳಬೇಕೆಂದು ಒತ್ತಿ ಒತ್ತಿ ಹೇಳುತ್ತಿದ್ದರು. ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರಬೇಕೆನ್ನುವ ಉದ್ಧೇಶದಿಂದ ಗಾಂಧೀಜಿಯ ಜನ್ಮ ಶತಾಬ್ದಿಯ ನಿಮಿತ್ತ 1969ರಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ನುಡಿದರು.
ಅವರು ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಸೋಮವಾರ ಹಮ್ಮಿಕೊಂಡಿದ್ದ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನನಗಾಗಿ ಅಲ್ಲ ನಿನಗಾಗಿಯೇ ಎಲ್ಲ ಎಂಬ ಧ್ಯೇಯವಾಕ್ಯವನ್ನು ಹೊಂದಿದ ಈ ರಾಷ್ಟ್ರೀಯ ಸೇವಾ ಯೋಜನೆಯು ಪ್ರಜಾಪ್ರಭುತ್ವದ ಸಾರಾಂಶವನ್ನು ಸಾರುತ್ತದೆ. ವಿದ್ಯಾರ್ಥಿಗಳಲ್ಲಿ ನಿಸ್ವಾರ್ಥ ಸೇವೆ, ಪರಸ್ಪರರನ್ನು ಅರ್ಥೈಸಿಕೊಳ್ಳುವ, ಗೌರವಿಸುವ, ಸಮಸ್ಯೆಗಳಿಗೆ ಸ್ಪಂದಿಸುವ ಅವಶ್ಯಕತೆಯನ್ನು ಒತ್ತಿ ಹೇಳುತ್ತದೆ.
ವಿದ್ಯಾರ್ಥಿಗಳಲ್ಲಿ ಸಮಾಜದ ಬಗ್ಗೆ ಕಳಕಳಿಯನ್ನುಂಟುಮಾಡಿ ಶಿಕ್ಷಣ ಸಂಸ್ಥೆಗಳ ಸುತ್ತ-ಮುತ್ತಲಿರುವ ಜನರೊಂದಿಗೆ ಕಲೆತು, ಬೆರೆತು ಕ್ರಿಯಾತ್ಮಕ ಮತ್ತು ರಚನಾತ್ಮಕ ಕೆಲಸ ಮಾಡುವುದರ ಮೂಲಕ ಸಮಾಜದ ಉಪಯೋಗಕ್ಕಾಗಿ ತಮ್ಮ ಶಕ್ತಿಯನ್ನು ಬಳಸಿಕೊಳ್ಳುವಂತೆ ಎನ್.ಎಸ್.ಎಸ್. ಶಿಬಿರದ ಮೂಲಕ ತರಬೇತಿ ನೀಡುತ್ತದೆ ಎಂದರು.
ಸಹಕಾರ್ಯಕ್ರಮ ಅಧಿಕಾರಿ ಪ್ರೊ. ಡಿ.ಎಸ್.ಹುಗ್ಗಿ ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ, ವಿದ್ಯಾರ್ಥಿಗಳಲ್ಲಿ ಚಾರಿತ್ರ್ಯ, ಧೈರ್ಯ, ಆತ್ಮವಿಶ್ವಾಸ, ನಾಯಕತ್ವ, ಶಿಸ್ತು, ಸಮಯ ಪ್ರಜ್ಞೆ, ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವಿಕೆ, ಪ್ರಜಾಪ್ರಭುತ್ವದ ಮನೋಭಾವ, ಸಹಿಷ್ಣತಾ ಭಾವನೆ, ವ್ಯವಹಾರಿಕ ಕೌಶಲ್ಯ, ಪರಸ್ಪರ ಸಹಾಯ-ಸಹಕಾರ, ಸುಪ್ತವಾಗಿ ಅಡಗಿರುವ ಪ್ರತಿಭೆ ಹೊರಹಾಕುವಿಕೆಗೆ ವೇದಿಕೆ ಒದಗಿಸುವುದು ಎನ್.ಎಸ್.ಎಸ್. ಕಾರ್ಯಯೋಜನೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿ.ಬಿ.ವಾಲಿ, ವಸುಂದರಾ ಕಾಳೆ, ಪರ್ವೀಣ್ ಅತ್ತಾರ, ವಿಲಾಸ ಕೆಳಗಡೆ, ಎಂ.ಬಿ.ಜಾಲಗಾರ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಅಧಿಕಾರಿ ಪ್ರೊ. ಎಂ.ಬಿ.ಕುಲಮೂರ ನಿರೂಪಿಸಿದರು, ಸ್ವಯಂಸೇವಕಿ ಪೂಜಾ ಗುಡಗುಡಿ ಎನ್.ಎಸ್.ಎಸ್. ಗೀತೆ ಹಾಡಿದರು, ಪ್ರೊ. ಬಿ.ಸಿ.ಮಾಳಿ ವಂದಿಸಿದರು.