ಧಾರವಾಡ: ತಾಲೂಕಿನ ಉಪ್ಪಿನಬೆಟಗೇರಿ ಸಮೀಪದ ಐತಿಹಾಸಿಕ ಹಿನ್ನೆಲೆಯುಳ್ಳ ಮುಳಮುತ್ತಲ ಗ್ರಾಮದಲ್ಲಿ ಸೋಮವಾರದಂದು ವಿಜೃಂಭಣೆಯಿಂದ ಜರುಗಿದ ಕಾಮದೇವರ ಜಾತ್ರೆಯಲ್ಲಿ ನಾಡಿನಾದ್ಯಂತ ಆಗಮಿಸಿದ್ದ ಅಪಾರ ಜನಸ್ತೋಮ ಕಾಮದೇವರ ದರ್ಶನ ಪಡೆದು ಪುನೀತರಾದರು.
ಸೋಮವಾರ ಬೆಳಿಗ್ಗೆ ಕಾಮದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಿಗ್ಗೆಯಿಂದ ರಾತ್ರಿಯವರೆಗೂ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಸವದತ್ತಿ, ನರೇಂದ್ರ, ಉಪ್ಪಿನಬೆಟಗೇರಿ, ಕುರುಬಗಟ್ಟಿ, ಲೋಕೂರ, ಯಾದವಾಡ, ಮಂಗಳಗಟ್ಟಿ, ದೊಡವಾಡ, ಬೈಲಹೊಂಗಲ, ಬಾಗಲಕೋಟ,ವಿಜಯಪುರ,ಕೊಲ್ಲಾಪುರ ಹಾಗೂ ಪುಣೆ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಅಪಾರ ಜನಸ್ತೋಮ ಹಿಂದು ಮುಸ್ಲಿಂ, ಮೇಲು ಕೀಳು, ಬಡವ ಬಲ್ಲಿದ ಎಂಬ ಯಾವುದೇ ಭೇದ ಭಾವವಿಲ್ಲದೇ ಇಲ್ಲಿಗೆ ಆಗಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕಾಮದೇವರಲ್ಲಿ ಪ್ರಾರ್ಥಿಸಿದರು.
ಅನೇಕ ಭಕ್ತರು ತಮ್ಮ ಈಡೇರಿದ ಬಯಕೆಯ ಹರಕೆಯನ್ನು ಭಕ್ತಿಭಾವದಿಂದ ತೀರಿಸಿ ಕಾಮದೇವರ ಕೃಪೆಗೆ ಪಾತ್ರರಾದರು.ಮುಳಮುತ್ತಲ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳಿಂದ ಕಾಮದೇವರಿಗೆ ದೀಡ ನಮಸ್ಕಾರ ಮತ್ತು ಎತ್ತುಗಳ ಮೆರವಣಿಗೆಯ ಸೇವೆ ಮಾಡಿದರು.
ಸೋಮವಾರ ಸಂಜೆ ಜರುಗಿದ ಧರ್ಮ ಸಭೆಯಲ್ಲಿ ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ ಸ್ವಾಮೀಜಿ ಸೇರಿದಂತೆ ಅನೇಕ ಪೂಜ್ಯರು ಆಶೀರ್ವಚನ ನೀಡಿದರು.
ಜಾತ್ರೆಗೆ ಆಗಮಿಸಿದ ಎಲ್ಲ ಸದ್ಭಕ್ತರಿಗೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು. ರವಿವಾರದಂದು ಪ್ರತಿಷ್ಠಾಪನೆಗೊಂಡಿದ್ದ ಕಾಮದೇವನನ್ನು ಮಂಗಳವಾರ ಬೆಳಗಿನ ಜಾವ 5 ಘಂಟೆಗೆ ಹುಬ್ಬ ನಕ್ಷತ್ರದಲ್ಲಿ ದಹನ ಮಾಡಲಾಯಿತು.
ವರದಿ: ಗುರು ಅರಳಿಮರದ