ಮೂಡಲಗಿ– ಸರ್ಕಾರಿ ಆಸ್ತಿಗಳ ಮೇಲೆ ಬಿಎಲ್ ಜೆ ಎಂದು ತಮ್ಮ ಹೆಸರು ಹಾಕಿಕೊಂಡಿರುವ ಜಾರಕಿಹೊಳಿಯವರಿಗೆ ಆ ಅಧಿಕಾರ ಕೊಟ್ಟವರಾರು ? ಇದೂ ಕೂಡ ಒಂದು ಚುನಾವಣೆ ಅಕ್ರಮ. ಜನರಿಗೆ ತಪ್ಪು ಮಾಹಿತಿ ಕೊಡುತ್ತಿರುವ ಬಾಲಚಂದ್ರ ಜಾರಕಿಹೊಳಿಯವರ ಈ ನಡೆಯ ಕುರಿತು ಸಮಗ್ರ ತನಿಖೆ ನಡೆಯಬೇಕೆಂಬುದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡಲಾಗುವುದು. ಜಿಲ್ಲಾಧಿಕಾರಿಗಳು ಶಾಸಕರ ಮೇಲೆ ಕ್ರಮ ಜರುಗಿಸಬೇಕು ಎಂದು ಅರಭಾವಿ ಕಾಂಗ್ರೆಸ್ ನಾಯಕ ಅರವಿಂದ ದಳವಾಯಿ ಹೇಳಿದರು.
ಇಲ್ಲಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಧರ್ಮಟ್ಟಿ, ಲಕ್ಷ್ಮೇಶ್ವರ, ತಿಗಡಿ ಅವರಾದಿಯಂಥ ಕೆಲವು ಹಳ್ಳಿಗಳಲ್ಲಿ ನೀರಿನ ಟಾಕಿ, ಮನೆ, ಬಸ್ ಸ್ಟ್ಯಾಂಡ್ ಗಳಂಥ ಸರ್ಕಾರಿ ಆಸ್ತಿಗಳಿಗೆ ಬಣ್ಣ ಬಳಿದು ಅದರ ಮೇಲೆ ಬಿಎಲ್ ಜೆ ಎಂದು ಬರೆಯುತ್ತಿದ್ದಾರೆ. ಬಿ ಅಂದ್ರೆ ಬಾಲಚಂದ್ರ, ಎಲ್ ಅಂದ್ರೆ ಲಕ್ಷ್ಮಣರಾವ್, ಜೆ ಅಂದ್ರೆ ಜಾರಕಿಹೊಳಿ ಎಂದು ಬರೆಸುತ್ತಿದ್ದಾರೆ ಇದು ಖಂಡನೀಯ. ಇಷ್ಟು ದಿನ ಇಲ್ಲದ ಕ್ಷೇತ್ರದ ಮೇಲಿನ ಪ್ರೀತಿ ಈಗ ಯಾಕೆ ಬಂದಿತು ಚುನಾವಣೆ ಹತ್ತಿರ ಬಂದಿರುವುದರಿಂದ ಸ್ವಂತ ಖರ್ಚು ಮಾಡಿ ಸರ್ಕಾರಿ ಕಟ್ಟಡಗಳನ್ನು ರಿಪೇರಿ ಮಾಡುವುದು, ಗಟಾರು ರಿಪೇರಿ ಮಾಡುವಂಥ ಕೆಲಸಗಳನ್ನು ಮಾಡುತ್ತಿದ್ದಾರೆ ಇದಕ್ಕೆಲ್ಲ ಹಣ ಎಲ್ಲಿಂದ ಬಂದಿದೆ ಎಂದು ಪ್ರಶ್ನಿಸಿದರು.
ಇನ್ನು ಕ್ಷೇತ್ರದಲ್ಲಿ ಶಾಸಕರಿಗಿಂತ ಹೆಚ್ಚಾಗಿ ಸರ್ವೋತ್ತಮ ಜಾರಕಿಹೊಳಿ ಎಂಬ ಅವರ ಸಂಬಂಧಿ, ಅವರ ಕಾರಕೂನರಾದ ನಾಗಪ್ಪ, ದಾಸಪ್ಪ ಅವರೇ ಆಡಳಿತ ಚಲಾಯಿಸುತ್ತಿದ್ದಾರೆ. ಉದ್ಘಾಟನೆಗಳನ್ನೂ ಇವರೇ ಮಾಡುತ್ತಾರೆ. ಇವರಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅಧಿಕಾರ ಇಲ್ಲ. ಇದು ಸರ್ಕಾರಿ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಕ್ಷೇತ್ರದಲ್ಲಿ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಂತೆ ಕಾಣುತ್ತಿದೆ. ತಹಶೀಲ್ದಾರರು ಕೂಡ ಎಲ್ಲ ಗೊತ್ತಿದ್ದೂ ಸುಮ್ಮನಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಹೊರತಾಗಿ ಬೇರೆ ಯಾರಾದರೂ ಸರ್ಕಾರಿ ಕಾರ್ಯಕ್ರಮ ಗಳಲ್ಲಿ ಬಂದರೆ ಗೋಕಾಕ ಹಾಗೂ ಮೂಡಲಗಿ ತಹಶೀಲ್ದಾರರ ಮೇಲೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಜಾರಕಿಹೊಳಿಯವರು ಕ್ಷೇತ್ರದಲ್ಲಿ ಜಾತಿ ಭೇದ ಮಾಡುತ್ತಿದ್ದಾರೆ ಎಂದ ಅರವಿಂದ ದಳವಾಯಿ, ರಾಜಾಪೂರದಲ್ಲಿ ನಡೆದ ಕನಕದಾಸ ಜಯಂತಿಯನ್ನು ತಮ್ಮ ಮನೆಯ ಕಾರ್ಯಕ್ರಮದಂತೆ ಮಾಡಿದರು, ಇಂಥ ಮಹನೀಯರ ಕಾರ್ಯಕ್ರಮಗಳಿಗೆ ಬೇರೆ ಯಾವ ನಾಯಕರಿಗೂ ಆಹ್ವಾನ ನೀಡಿಲ್ಲ.
ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಅವರು ವಾಮ ಮಾರ್ಗಗಳನ್ನು ಅನುಸರಿಸುತ್ತಿರುವುದು ಖಂಡನೀಯ ಎಂದರು.
ಆದ್ದರಿಂದ ಈ ಪತ್ರಿಕಾಗೋಷ್ಠಿಯ ಮೂಲಕ ನಾನು ಜಾರಕಿಹೊಳಿಯವರಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಸಮಾಜವನ್ನು ಒಡೆಯುವುದನ್ನು ನಿಲ್ಲಿಸಿ ಇಲ್ಲದಿದ್ದರೆ ಬರುವ ಚುನಾವಣೆಯಲ್ಲಿ ಜನತೆ ಪಾಠ ಕಲಿಸುತ್ತಾರೆ ಎಂದರು.
ಇತ್ತೀಚೆಗೆ ಕಾಂಗ್ರೆಸ್ ಕಾರ್ಯಕರ್ತ ಪ್ರಕಾಶ ಅರಳಿಯವರ ಮೇಲೆ ಗೋವಿಂದ ಕೊಪ್ಪದ ಹಾಗೂ ಹಲವು ಜನರು ಕುಲಿಗೋಡ ಗ್ರಾಮದಲ್ಲಿ ದೈಹಿಕ ಹಲ್ಲೆ ಮಾಡುವ ಪ್ರಯತ್ನ ಮಾಡಿದರು ಎಂದು ಆರೋಪಿಸಿದ ದಳವಾಯಿಯವರು, ಒಬ್ಬ ಕಾಂಗ್ರೆಸ್ ಅಧ್ಯಕ್ಷನ ಮೇಲೆ ಹಲ್ಲೆ ಪ್ರಯತ್ನ ಖಂಡನೀಯ. ಜಾರಕಿಹೊಳಿಯವರು ವಿರೋಧ ಪಕ್ಷದವರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಇವರ ಗೂಂಡಾಗಿರಿಗೆ ನಾವು ಹೆದರುವುದಿಲ್ಲ. ಈ ಬಗ್ಗೆ ಎಸ್ ಪಿ ಯವರಿಗೆ ಇಷ್ಟರಲ್ಲೇ ದೂರು ನೀಡಲಾಗುವುದು ಎಂದರು.
ಅರಭಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲರೂ ಟಿಕೆಟ್ ಆಕಾಂಕ್ಷಿಗಳಾಗುವುದು ಸ್ವಾಭಾವಿಕ. ಯಾರಿಗೇ ಟಿಕೆಟ್ ಸಿಕ್ಕರೂ ಒಂದಾಗಿ ಮಾಡುವುದಾಗಿ ಹೈಕಮಾಂಡ್ ಗೆ ನಾವು ಬರೆದು ಕೊಟ್ಟಿದ್ದೇವೆ. ಅದರಂತೆ ನಡೆಯುತ್ತೇವೆ. ಇವತ್ತಿನ ಭಾರತ ಜೋಡೋ ಕಾರ್ಯಕ್ರಮಕ್ಕೆ ಕೆಲವರು ಬರದೇ ಇರುವುದಕ್ಕೆ ಅವರದೇ ಕಾರಣಗಳಿವೆ. ಭೀಮಪ್ಪ ಗಡಾದ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ಗುಂಡಪ್ಪ ಕಮತೆ ಮಾತನಾಡಿ, ಚುನಾವಣೆ ನಡೆದು ನಾಲ್ಕೂವರೆ ವರ್ಷಗಳಾದರೂ ಅರಭಾವಿ ಕ್ಷೇತ್ರದಲ್ಲಿ ಇನ್ನೂವರೆಗೂ ಯಾವುದೇ ಕೆಲಸಗಳಾಗಿಲ್ಲ. ಈಗ ಅಲ್ಲಲ್ಲಿ ಮಾಡುತ್ತಿದ್ದಾರೆ ಸರ್ಕಾರದಿಂದ ಯಾಕೆ ಅನುದಾನ ತಂದಿಲ್ಲ. ತಮ್ಮ ಸ್ವಂತ ಹಣ ಯಾಕೆ ಹಾಕಬೇಕು. ಸ್ವಂತ ಹಣ ಹಾಕಿ ಕೆಲಸ ಮಾಡುವುದು ಚುನಾವಣಾ ಅಕ್ರಮ ಎಂದರು.
ಪ್ರಕಾಶ ಅರಳಿ, ಇಮಾಮಸಾಬ ಮೀ. ಹುನ್ನೂರ, ವಿಠ್ಠಲ ಖಾನಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.