ಗೋಕಾಕ- ಮಹಾರಾಷ್ಟ್ರ ಮತ್ತು ಹಿಡಕಲ್ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಘಟಪ್ರಭಾ ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಗಳು ಹೆಚ್ಚಾಗಿದ್ದು, ಕೂಡಲೇ ಅಧಿಕಾರಿಗಳು ಸಂತ್ರಸ್ತರಿಗೆ ಯಾವುದೇ ಸಮಸ್ಯೆಗಳು ಬಾರದಂತೆ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಸಂಜೆ ನಗರದ ನಾಕಾ ಬಳಿ ಇರುವ ಪ್ರವಾಸಿ ಮಂದಿರದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೂಡಲೇ ಅಧಿಕಾರಿಗಳು ಸಂತ್ರಸ್ತ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ವರದಿ ಮಾಡುವಂತೆ ಸೂಚನೆ ನೀಡಿದರು.
ಪಶ್ಚಿಮ ಘಟ್ಟದಲ್ಲಿ ಧಾರಾಕಾರವಾಗಿ ಮಳೆಯು ಸುರಿಯುತ್ತಿದೆ. ನಮ್ಮ ಭಾಗದಲ್ಲಿಯೂ ಮಳೆಯು ನಿಲ್ಲುತ್ತಿಲ್ಲ. ಈಗಾಗಲೇ ಘಟಪ್ರಭಾ ನದಿಗೆ 51 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. 62 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರು ಘಟಪ್ರಭಾ ನದಿಗೆ ಬಂದಿದ್ದಾದರೆ ಲೋಳಸೂರ ಸೇತುವೆಯು ಜಲಾವೃತಗೊಳ್ಳಲಿದೆ. ಇದರಿಂದ ಗೋಕಾಕ ಮತ್ತು ಮೂಡಲಗಿ ತಾಲ್ಲೂಕಿನ ಸುಮಾರು 28 ನದಿ ತೀರದ ಗ್ರಾಮಗಳಿಗೆ ಪ್ರವಾಹ ಭೀತಿ ಬರಲಿದೆ. ಹೀಗಾಗಿ ಈಗಿಂದಲೇ ಅಧಿಕಾರಿಗಳು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂತ್ರಸ್ತರಿಗೆ ಕೂಡಲೇ ಕಾಳಜಿ ಕೇಂದ್ರಗಳನ್ನು ತೆರೆಯಬೇಕು.ಉಪಾಹಾರ ಮತ್ತು ಊಟದ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಸ್ಥಳೀಯವಾಗಿ ಪಿಡಿಓ, ಗ್ರಾಮ ಆಡಳಿತಾಧಿಕಾರಿ ಮತ್ತು ಉಸ್ತುವಾರಿ ಅಧಿಕಾರಿಗಳು ಇದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು. ನೀರಿನ ಮಟ್ಟ ಹೆಚ್ಚುತ್ತಿರುವದರಿಂದ ಪರಿಸ್ಥಿತಿ ಕಡೆಗೆ ಗಮನ ನೀಡಬೇಕು. ಜನ ಮತ್ತು ಜಾನುವಾರುಗಳಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಕೂಡಲೇ ನದಿ ತೀರದ ಗ್ರಾಮಗಳಲ್ಲಿ ಮುಂಜಾಗ್ರತವಾಗಿ ಡಂಗುರ ಸಾರಿ ಸಂತ್ರಸ್ತರಿಗೆ ಪ್ರವಾಹದ ಸಂಬಂಧ ತಿಳಿವಳಿಕೆಯನ್ನು ನೀಡಿ ಅಗತ್ಯ ಬಿದ್ದರೆ ಅವರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಪ್ರವಾಹದಿಂದ ನೀರು ಮನೆಯ ಒಳಗಡೆ ನುಗ್ಗಬಹುದು. ಮನೆಗಳು ಕುಸಿಯಬಹುದು. ಕೃಷಿ ಮತ್ತು ತೋಟಗಾರಿಕೆಯ ಬೆಳೆಗಳು ಹಾನಿಯಾಗಬಹುದು. ವಿದ್ಯುತ್ ಕಂಬಗಳು ಸಹ ಬೀಳಬಹುದು. ಮನೆಗಳು ಮತ್ತು ಬೆಳೆಗಳ ಹಾನಿ ಬಗ್ಗೆ ವರದಿ ಮಾಡುವಾಗ ನಿಜವಾದ ಫಲಾನುಭವಿಗಳನ್ನು ಗುರುತಿಸಿ ನ್ಯಾಯ ಒದಗಿಸಬೇಕು. ಸಮೀಕ್ಷಾ ಕಾರ್ಯಗಳನ್ನು ಪ್ರಾಮಾಣಿಕವಾಗಿ ಕೈಕೊಳ್ಳಬೇಕು. ಸಂತ್ರಸ್ತ ಕುಟುಂಬಗಳಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡಬೇಡಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ನದಿ ತೀರದ 28 ಗ್ರಾಮಗಳಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ಈಗಾಗಲೇ ಉಸ್ತುವಾರಿ ಅಧಿಕಾರಿಗಳನ್ನಾಗಿ ನಿಯೋಜಿಸಲಾಗಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ಕೂಡಿಕೊಂಡು ಸಮನ್ವತೆಯಿಂದ ಕೆಲಸ ಮಾಡಲು ಸೂಚಿಸಲಾಗಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬುವ ಕೆಲಸವನ್ನು ನಮ್ಮ ಟೀಂ ಎನ್ಎಸ್ಎಫ್ ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಗೋಕಾಕ ತಹಶೀಲ್ದಾರ ಮೋಹನ್ ಭಸ್ಮೆ, ಮೂಡಲಗಿ ತಹಶೀಲ್ದಾರ ಶ್ರೀಶೈಲ ಗುಡುಮೆ, ಮೂಡಲಗಿ ತಾ.ಪಂ. ಇಓ ಎಫ್.ಜಿ.ಚಿನ್ನನ್ನವರ, ಗೋಕಾಕ ತಾ.ಪಂ.ಇಓ ಪರಶುರಾಮ ಗಸ್ತಿ, ಡಿವೈಎಸ್ಪಿ ರವಿ ನಾಯಿಕ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಧಿಕಾರಿಗಳ ಸಭೆಗೂ ಮುನ್ನ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಲೋಳಸೂರ ಸೇತುವೆಗೆ ತೆರಳಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು.