ಮೂಡಲಗಿ: -ಪಟ್ಟಣದಲ್ಲಿ ಹೊಸದಾಗಿ ನ್ಯಾಯಾಲಯ ಪ್ರಾರಂಭ ಆಗುವುದರಿಂದ ತಾಲೂಕಿನಲ್ಲಿರುವ ಜನರಿಗೆ ನ್ಯಾಯ ದೊರಕಿಸಿಕೊಳ್ಳಲು ಸಹಕಾರಿಯಾಗುವುದು ಎಂದು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಬೆಳಗಾವಿ ಜಿಲ್ಲಾ ನ್ಯಾಯಾಲಯದ ಆಡಳಿತಾತ್ಮಕ ನ್ಯಾಯಾಧೀ ಶರಾದ ಕೆ.ಎಸ್.ಮುದಗಲ್ಲ ಹೇಳಿದರು.
ಬೆಳಗಾವಿ ನ್ಯಾಯಾಂಗ ಇಲಾಖೆ ಹಾಗೂ ಮೂಡಲಗಿ ತಾಲೂಕಿನ ವಕೀಲರ ಸಂಘದ ಸಹಯೋಗದಲ್ಲಿ, ಮೂಡಲಗಿಯಲ್ಲಿ ಸೋಮವಾರ ವರ್ಚವಲ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲರು ಹಾಗೂ ನ್ಯಾಯಾಲಯದ ಸಿಬ್ಬಂದಿಯವರ ಉತ್ತಮ ಸಹಕಾರದಿಂದ ನ್ಯಾಯಾಲಯದ ಕಾರ್ಯ ಕಲಾಪಗಳು ಸುಗಮವಾಗಿ ನಡೆಯುತ್ತಿರುವವು ಎಂದರು.
ಕೇವಲ ಕಾನೂನು ಪದವಿ ಪಡೆದುಕೊಂಡು ವಕೀಲ ವೃತ್ತಿಗೆ ಬಂದರೆ ಸಾಲದು,ಕಾನೂನು ಬಗ್ಗೆ ನಿರಂತರವಾಗಿ ಅಧ್ಯಯನ ಹಾಗೂ ಹಿರಿಯ ಅನುಭವಿ ವಕೀಲರ ಮಾರ್ಗದರ್ಶನದಲ್ಲಿ ವ್ಯಾಜ್ಯ ನಡೆಸುವ ಮೂಲಕ ಕಾನೂನು ಮತ್ತು ನ್ಯಾಯಾಲಯದ ಗೌರವ ಹೆಚ್ಚಿಸಬೇಕೆಂದು ಅವರು ಸಲಹೆ ನೀಡಿದರು.
ಬೆಳಗಾವಿ ನ್ಯಾಯಾಧೀಶ ಮಂಜುನಾಥ ನಾಯಕ ಮಾತನಾಡಿ, ಮೂಡಲಗಿಯಲ್ಲಿ ನ್ಯಾಯಾಲಯ ಪ್ರಾರಂಭವಾಗುವಲ್ಲಿ ವಿವಿಧ ಅವಧಿಯ ವಕೀಲರ ಸಂಘದ ಪದಾಧಿಕಾರಿಗಳ ಪರಿಶ್ರಮ ಶ್ಲಾಘನೀಯ ಎಂದು ಬಣ್ಣಿಸಿದರು.
ಮೂಡಲಗಿಯ ನ್ಯಾಯಾಧೀಶೆ ಶಾಂತಮ್ಮ ಮಲ್ಲಿಕಾರ್ಜುನ ಪಿ. ಉಪಸ್ಥಿತರಿದ್ದರು. ವಕೀಲರ ಸಂಘದ ಅಧ್ಯಕ್ಷರಾದ ಆರ್.ಆರ್.ಬಾಗೋಜಿ, ಉಪಾಧ್ಯಕ್ಷರಾದ ಎಲ್.ಬಿ. ಒಡೆಯರ, ಪದಾಧಿಕಾರಿಗಳಾದ ಎಲ್.ಎಸ್. ಯಡ್ರಾಂವಿ, ಎಚ್.ವಾಯ್. ಸಣ್ಣಕ್ಕಿ, ಜ್ಯೋತಿ ಕುಡತೆ ಇದ್ದರು.
ಹಿರಿಯ ವಕೀಲರಾದ ಉದಯ ಆರ್.ಜೋಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಕೀಲರಾದ ಆರ್.ಎಸ್.ತೋಳಮರಡಿ ಸ್ವಾಗತಿಸಿದರು, ಲಕ್ಷ್ಮಣ ಅಡಿಹುಡಿ ಕಾರ್ಯಕ್ರಮ ನಿರೂಪಿಸಿದರು ಮತ್ತು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಎಸ್.ಕೌಜಲಗಿ ವಂದಿಸಿದರು.

