ಬೆಳಗಾವಿ: ಬೆಳಗಾವಿ-ರಾಯಚೂರು ರಾಷ್ಟ್ರೀಯ ಎಕ್ಸ ಪ್ರೆಸ್‌ವೇ ಮುಖಾಂತರ ಹುಬ್ಬಳಿ-ಧಾರವಾಡ, ಬಾಗಲಕೋಟ, ವಿಜಯಪುರ ಹಾಗೂ ರಾಯಚೂರದಿಂದ ಬರುವ ಜನರಿಗೆ ವಿಮಾನ ನಿಲ್ದಾಣಕ್ಕೆ ನೇರವಾಗಿ ಹೋಗಲು ಸುಮಾರು 4 ಕಿ.ಮೀ ಬೈಪಾಸ್ ರಸ್ತೆಯನ್ನು ನಿರ್ಮಿಸುವ ಸಲುವಾಗಿ ಯೋಜನೆಯಲ್ಲಿ ಬದಲಾವಣೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸೂಚಿಸಿದ್ದಾರೆ.
ಬುಧವಾರ ನಗರದ ಸಂಸದರ ಜನಸಂಪರ್ಕ ಕಾರ್ಯಾಲಯದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಬೆಳಗಾವಿಯಿಂದ ಮಹಾರಾಷ್ಟ್ರದ ಗಡಿಯವರೆಗೆ ರಾ.ಹೆ (ಸಂಖ್ಯೆ 748) ರಸ್ತೆ ಕಾಮಗಾರಿ, ಬೆಳಗಾವಿ ವರ್ತುಲ (ರಿಂಗ್) ರಸ್ತೆ ಮತ್ತು ಬೆಳಗಾವಿ ಬೈಪಾಸ್ ರಸ್ತೆ ಕಾಮಗಾರಿ, ಬೆಳಗಾವಿ ರಾಯಚೂರು ರಾಷ್ಟ್ರೀಯ ಹೆದ್ದಾರಿ ಎಕ್ಸ ಪ್ರೆಸ್ ವೇ ಯೋಜನೆ, ಬೆಳಗಾವಿ ವಾಯ್ಹಾ ರಾಮನಗರ ಗೋವಾ ರಸ್ತೆ, ಬೆಳಗಾವಿಯಿಂದ ವ್ಹಾಯಾ ಜಾಂಬೋಟಿ-ಚೋರ್ಲಾ-ಸಾಂಕ್ವೆಲಿಮ್ ಗೋವಾ ರಸ್ತೆ ರಾ.ಹೆ (ಸಂಖ್ಯೆ 748 ಎಎ), ಈ ಎಲ್ಲಾ ರಸ್ತೆಗಳ ಪ್ರಗತಿ ಪರೀಶೀಲನೆ ಮಾಡಿ, ಅಗತ್ಯ ಸೂಚನೆಗಳನ್ನು ನೀಡಿದರು.
ಬೆಳಗಾವಿ ಖಾನಾಪೂರ ರಾಷ್ಟ್ರೀಯ ಹೆದ್ದಾರಿಯ ಹಲಗಾದಿಂದ ಮಚ್ಛೆವರೆಗಿನ 9 ಕಿ.ಮೀ ಬೈಪಾಸ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಬೆಳಗಾವಿಯಿಂದ ವ್ಹಾಯಾ ರಾಮನಗರ ಗೋವಾ ರಸ್ತೆ 8 ಕಿ.ಮೀ ಬಾಕಿ ಉಳಿದಿದ್ದು ಅದನ್ನು ಆದಷ್ಟು ಬೇಗನೆ ಪೂರ್ಣಗೊಳಿಸಲು ತಿಳಿಸಿದರು. ಬೆಳಗಾವಿ ವಾಯ್ಹಾ ಜಾಂಬೋಟಿ, ಕಣಕುಂಬಿ ಗೋವಾವರೆಗಿನ ರಸ್ತೆಯ ಜಾಂಬೋಟಿ ಹತ್ತಿರ ಹೊಸದಾಗಿ ನಿರ್ಮಿಸುತ್ತಿರುವ ಬ್ರಿಡ್ಜ್ ಕಾಮಗಾರಿ ಪ್ರಗತಿಯಲ್ಲಿ ಇದೆ. ಈ ಕಾಮಗಾರಿಯನ್ನು ಮೇ ತಿಂಗಳ ಅಂತ್ಯದಲ್ಲಿ ಮುಕ್ತಾಯಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದರು.
ಬೆಳಗಾವಿ ರಾಯಚೂರು ರಾಷ್ಟ್ರೀಯ ಹೆದ್ದಾರಿ ಎಕ್ಸ ಪ್ರೆಸ್ ವೇ ನಿರ್ಮಿಸಲು ಶೇ 80 ರಷ್ಟು ಭೂಸ್ವಾಧಿನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಪ್ಯಾಕೇಜ್ ನಂ 2,3,5 ಹಾಗೂ 6 ರಲ್ಲಿನ ಕಾಮಗಾರಿಗಳು ಪ್ರಾರಂಭಗೊಂಡಿದೆ. ಉಳಿದ ಕಾಮಗಾರಿಗಳಿಗೆ ಟೆಂಡರ ಆಗಿದ್ದು ಆದಷ್ಟು ಬೇಗ ಆ ಕಾಮಗಾರಿಯನ್ನು ಪ್ರಾರಂಭಿಸಲು ಅಧಿಕಾರಿಗಳಿಗೆ ತಿಳಿಸಿದರು.
ಪ್ಯಾಕೇಜ್ ನಂ 1 ಮತ್ತು 4 ರಲ್ಲಿಯ ಕಾಮಗಾರಿಗಳನ್ನು ಈ ತಿಂಗಳ ಅಂತ್ಯದಲ್ಲಿ ಪ್ರಾರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದರು. ಬೆಳಗಾವಿಯಿಂದ ಮಹಾರಾಷ್ಟ್ರದ ಗಡಿಯವರೆಗೆ ರಾ.ಹೆ (ಸಂಖ್ಯೆ 748) ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಮುಕ್ತಾಯಗೊಳಿಸುವುದಾಗಿ ಅಧಿಕಾರಿಗಳು ಸಂಸದರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಖಾನಾಪೂರ ಶಾಸಕರಾದ ವಿಠ್ಠಲ ಹಲಗೇಕರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಧಾರವಾಡ ವಿಭಾಗದ ಯೋಜನಾ ನಿರ್ದೇಶಕ ಭುವನೇಶ್‌ಕುಮಾರ್, ಬಾಗಲಕೋಟ ವಿಭಾಗದ ಸೈಯದ್ ಅಮಾನುಲ್ಲಾ, ರಾಯಚೂರು ವಿಭಾಗದ ಎಂ.ಎಸ್. ವಾಬಲೆ, ಅಭಿಯಂತರರಾದ ರಾಜು ಅಂಗಡಿ, ಮಂಜುನಾಥ್ ನಾಯಕ್ ಹಾಗೂ ಅಜೀತ ಹೂಗಾರ ಉಪಸ್ಥಿತರಿದ್ದರು.