spot_img
spot_img

ಕನ್ನಡದ ಬಾವುಟ ನಮ್ಮ ಸ್ವಾಭಿಮಾನದ ಸಂಕೇತ, ಕನ್ನಡ ಅಸ್ಮಿತೆಗೆ ದಕ್ಕೆಯಾದರೆ ಸಹಿಸಲ್ಲ : ಎಂಇಎಸ್ ಗೆ ನಾಡೋಜ ಮಹೇಶ ಜೋಶಿ ಎಚ್ಚರಿಕೆ

Must Read

- Advertisement -

ಬೆಳಗಾವಿ – ಕನ್ನಡ ️ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಗುರುವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಮಂಗಲ ಮೆಟಗುಡ್ ನಗರದ ಚನ್ನಮ್ಮ ವೃತ್ತದಲ್ಲಿ ನಾಡಧ್ವಜ ನೀಡಿ ಬರಮಾಡಿಕೊಂಡರು. ನಂತರ ರಾಣಿ ಚೆನ್ನಮ್ಮಳ ಪುತ್ಥಳಿಗೆ ಮಹೇಶ ಜೋಶಿಯವರು ಮಾಲಾರ್ಪಣೆ ಮಾಡಿದರು.

ನಗರದ ಶ್ರೀ ಕೃಷ್ಣದೇವರಾಯ ವೃತ್ತದಿಂದ ವಾದ್ಯ ಮೇಳದೊಂದಿಗೆ ಜಿಲ್ಲೆಯ ಸಾಹಿತಿಗಳು, ಕನ್ನಡ ಅಭಿಮಾನಿಗಳು ಮೆರವಣಿಗೆ ಮೂಲಕ ಮಹೇಶ ಜೋಶಿ ಅವರನ್ನು ಕುಮಾರ ಗಂಧರ್ವ ರಂಗಮಂದಿರದವರೆಗೆ ಕರೆದೊಯ್ಯಲಾಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಡಾ. ಮಹೇಶ ಜೋಶಿ ಯವರು ಬೆಳಗಾವಿ ಜಿಲ್ಲಾ ಕ.ಸಾ .ಪ ಅಧ್ಯಕ್ಷರಾಗಿ ಮರು ಆಯ್ಕೆ ಯಾಗಿರುವ ಮಂಗಲಾ ಮೆಟಗುಡ್ ರವರಿಗೆ ಪರಿಷತ್ತು ಧ್ವಜ ನೀಡುವ ಮೂಲಕ ಅವರಿಗೆ ಜಿಲ್ಲಾ ಪರಿಷತ್ ಜವಾಬ್ದಾರಿಯ ಅಧಿಕಾರ ನೀಡಿ ಮಾತನಾಡಿ, ಬೆಳಗಾವಿ ನೆಲ ಕನ್ನಡದ ಸ್ವಾಭಿಮಾನದ ಪ್ರತೀಕ. ಇದು ಪ್ರಾಚೀನ ಮಹಾಭಾರತದ ಕಾಲದಿಂದಲೂ ತನ್ನದೇ ಆದ ಚರಿತ್ರೆ ಹೊಂದಿದೆ. ಬೆಳಗಾವಿ ಪ್ರಕೃತಿಯ ಸೊಬಗು ನೋಡಲು ಚಂದ ಇಂತಹ ಸ್ವಾಭಿಮಾನದ ನಮ್ಮ ನೆಲದಲ್ಲಿ ಕನ್ನಡಕ್ಕೆ ಧಕ್ಕೆ ಬರುತ್ತಿರುವುದು ವಿಷಾದನೀಯ. ವರ್ಷಕ್ಕೆರಡು ಬಾರಿಯಾದರೂ ಕನ್ನಡಿಗರನ್ನು ಕೆಣಕುವ ಎಂಇಎಸ್ ಪುಂಡಾಟಿಕೆ ನಿಲ್ಲಬೇಕು. ನಮ್ಮ ಕನ್ನಡದ ಅಸ್ಮಿತೆಯ ಸ್ವಾಭಿಮಾನದ, ಸೌಭಾಗ್ಯದ ಸಂಕೇತವಾದ ನಾಡ ಧ್ವಜವನ್ನು ಸುಟ್ಟಿರುವದು ಇಡೀ ನಾಡಿನ ಕನ್ನಡಿಗರನ್ನು ಕೆರಳಿಸಿದೆ. ಹಾಗೆಯೇ ಕ್ರಾಂತಿವೀರ ರಾಯಣ್ಣ ಮತ್ತು ಬಸವೇಶ್ವರ ಪುತ್ಥಳಿ ಗಳಿಗೆ ಅವಮಾನ ಮಾಡಿದ ಪುಂಡರ ಪುಂಡಾಟಿಕೆ ತಡೆಯಬೇಕು. ತಪ್ಪಿತಸ್ಥರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಮತ್ತು ನಾಡದ್ರೋಹಿ ಚಟುವಟಿಕೆಗಳಿಗೆ ಸದಾ ಕುಮ್ಮಕ್ಕು ನೀಡುತ್ತಿರುವ ಎಂಇಎಸ್ ನಿಷೇಧಿಸಬೇಕು ಎಂದರು. ಹಾಗೆಯೇ ನಮ್ಮ ಸಾಹಿತ್ಯ ಪರಿಷತ್ತು ಸದಾ ಕನ್ನಡಕ್ಕಾಗಿ ದುಡಿಯುತ್ತಿದ್ದು ಇದು ಕೇವಲ ಸಾಹಿತಿಗಳ ಪರಿಷತ್ ಅಲ್ಲ ಇದನ್ನು ಅಭಿಮಾನಿಗಳ, ಸಹೃದಯಿಗಳ, ಕನ್ನಡ ಕಾವಲುಗಾರರ, ಪೋಷಕರ,ನಾಡಿನ ಹಿತಚಿಂತಕರ ಪರಿಷತ್ ಆಗಿ ಮಾಡೋಣ. ತಾವೆಲ್ಲ ಅತಿ ಗೌರವದಿಂದ ಪರಿಷತ್ತಿನ ಇತಿಹಾಸದಲ್ಲಿ ದಾಖಲೆ ಪ್ರಮಾಣದ ಮತನೀಡಿ ನನ್ನನ್ನು ಆಯ್ಕೆ ಮಾಡಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ದ್ರೋಹ ಬಗೆಯದೇ ಮುಂಬರುವ ದಿನಗಳಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದೆಲ್ಲೆಡೆ ವಿಶೇಷ ಕಾರ್ಯಗಳನ್ನು ಮಾಡೋಣ. ನಿಮ್ಮ ಊರುಗಳಲ್ಲಿ, ಗ್ರಾಮ, ತಾಲೂಕು,ಜಿಲ್ಲೆಗಳಲ್ಲಿ ಮರೆತುಹೋಗಿರುವ ಸಾಹಿತಿಗಳಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಮಾಡೋಣ, ಊರಿನ ಬಸ್ ನಿಲ್ದಾಣಗಳಿಗೆ ಸಾಹಿತಿಗಳ ಹೆಸರು ನಾಮಕರಣ ಮಾಡಿ ಅವರನ್ನು ನೆನೆಯೋಣ. ಕನ್ನಡದ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪರಿಷತ್ತಿನ ಸದಸ್ಯರ ಸಂಖ್ಯೆ 3.5 ಲಕ್ಷದಿಂದ ಒಂದು ಕೋಟಿಗೆ ಏರಿಸುವ ಗುರಿ ಹೊಂದಿದ್ದೇನೆ. ಒಟ್ಟಾರೆ ಗಡಿಭಾಗದಲ್ಲಿ ಕನ್ನಡ ಅಸ್ಮಿತೆಗೆ ಧಕ್ಕೆ ಬಾರದಂತೆ ಕಾರ್ಯ ಕೈಗೊಳ್ಳೋಣ ಎಂದರು.

- Advertisement -

ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಶ್ರೀ ಮ. ನಿ.ಪ್ರ ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ಕಳೆದ 5ವರ್ಷಗಳಲ್ಲಿ ಒಬ್ಬ ಮಹಿಳೆಯಾಗಿ ಅನೇಕ ಒಳ್ಳೆಯ ಕಾರ್ಯಕ್ರಮಗಳೊಂದಿಗೆ ಕನ್ನಡವನ್ನು ಕಟ್ಟುವ ಕೆಲಸ ಮೆಟಗುಡ್ ರವರು ಮಾಡಿದ್ದಾರೆ.ಮುಂಬರುವ ದಿನಗಳಲ್ಲಿ ಬೆಳಗಾವಿಯ ಅಭಿಮಾನ, ಗಡಿಭಾಗದ ಕನ್ನಡದ ಕಂಪು ರಾಜ್ಯದಲ್ಲೆಡೆ ಪಸರುವಂತೆ ಆಗಲಿ ಎಂದು ಹಾರೈಸಿದರು.

ಅಧಿಕಾರ ಸ್ವೀಕರಿಸಿ ಮಾತನಾಡಿದ ಮಂಗಲಾ ಮೆಟಗುಡ್ಡ, ಜಿಲ್ಲೆಯಲ್ಲಿ ಕನ್ನಡದ ಅಭಿಮಾನ ವೃದ್ಧಿಸಲು ತಾಲೂಕಿಗೊಂದು ಕನ್ನಡ ಭವನ ನಿರ್ಮಾಣವಾಗಬೇಕಿದೆ. ಅಪೂರ್ಣ ಕಟ್ಟಡಗಳನ್ನು ಪೂರ್ಣಗೊಳಿಸಲು ಮತ್ತು ಹಿರಿಯ ಸಾಹಿತಿಗಳ ವ್ಯಕ್ತಿಚಿತ್ರಣ ಮಾಡುವ, ಕನ್ನಡಕ್ಕಾಗಿ ಮತ್ತು ಸಾಹಿತ್ಯದ ಬೆಳವಣಿಗೆಗೆ ಎಲ್ಲರ ಸಹಾಯ ಸಹಕಾರದಿಂದ ಜವಾಬ್ದಾರಿಯಿಂದ ಕೆಲಸ ಮಾಡುವೆ ಎಂದರು.

- Advertisement -

ಇದೇ ಸಂದರ್ಭದಲ್ಲಿ ಸಾಹಿತಿಗಳಾದ ಎಂ. ವೈ. ಮೆಣಸಿನಕಾಯಿ ಮತ್ತು ಸುನೀಲ ಸಾಣಿಕೊಪ್ಪ ರವರು ಬರೆದ ‘ನಮ್ಮ ರಾಷ್ಟ್ರೀಯ ಹಬ್ಬಗಳು’ ಮತ್ತು ‘ಬಯಲು ಗೀತ’ ಪುಸ್ತಕಗಳು ಲೋಕಾರ್ಪಣೆಗೊಂಡವು. ಅತಿಥಿಗಳಾಗಿ ಆಗಮಿಸಿದ್ದ ಗೋವಾ ಕನ್ನಡಿಗರ ಸಂಘದ ಜಯಶ್ರೀ ಹೊಸಮನಿ ಕನ್ನಡನಾಡಿನ ಹೊರಗೂ ಸಹ ಇರುವ ನಮ್ಮ ಕನ್ನಡಿಗರ ಹಿತರಕ್ಷಣೆ ಕಾಪಾಡಲು ಮತ್ತು ನಾಡು-ನುಡಿ ಬೆಳೆಸಲು ಗಡಿಯಾಚೆಯು ನಮ್ಮ ಸಂಘ ಶ್ರಮಿಸುತ್ತಿದೆ ಇದಕ್ಕೆ ತಮ್ಮೆಲ್ಲರ ಸಹಕಾರ ನಿರಂತರವಾಗಿರಲಿ ಎಂದರು. ಹಿರಿಯ ಸಾಹಿತಿ ಚಂದ್ರಶೇಖರ ಅಕ್ಕಿ ಮಾತನಾಡಿ ಗಡಿಭಾಗದಲ್ಲಿರುವ ಬೆಳಗಾವಿಯಲ್ಲಿ ಮುಂಬರುವ ದಿನಗಳಲ್ಲಿ ಮಂಗಲಾ ಮೆಟಗುಡ್ ರವರ ಅಧಿಕಾರವಧಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿ ಎಂದರು.

ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಯ.ರು. ಪಾಟೀಲ, ಮೋಹನ ಪಾಟೀಲ ಗುರುದೇವಿ ಹುಲೆಪ್ಪನವರಮಠ, ಸ. ರಾ. ಸುಳಕೂಡೆ, ಎಲ್. ವಿ. ಇಚ್ಚಂಗಿ ಸೇರಿದಂತೆ ಜಿಲ್ಲೆಯ ಸಾಹಿತಿಗಳು, ಲೇಖಕಿಯರು, ಮಹಿಳಾ ಮಂಡಲದ ಸದಸ್ಯರು, ಲಿಂಗಾಯತ ಸಂಘಟನೆ ಸದಸ್ಯರು, ಮಹೇಶ ಜೋಶಿ ಅಭಿಮಾನಿ ಬಳಗದವರು,ಕನ್ನಡ ಅಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಲಿಂಗಾಯತ ಮಹಿಳಾ ಬಳಗದವರು ನಾಡಗೀತೆ ಪ್ರಸ್ತುತಪಡಿಸಿದರು, ಶೈಲಜಾ ಭಿಂಗೆ ಅತಿಥಿಗಳನ್ನು ಪರಿಚಯಿಸಿದರು. ಪಾಂಡುರಂಗ ಜಟಗನ್ನವರ ಸ್ವಾಗತಿಸಿದರು, ಎಂ. ವೈ.ಮೆಣಸಿನಕಾಯಿ ವಂದಿಸಿದರು .ಪ್ರತಿಭಾ ಕಳ್ಳಿಮಠ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

- Advertisement -
- Advertisement -

Latest News

ಕೃತಿ ಪರಿಚಯ

ಕೃತಿ ಪರಿಚಯ: ಬೈಲಹೊಂಗಲ ಸಾಂಸ್ಕೃತಿಕ ಪರಂಪರೆ ಲೇಖಕ : ಸಿ. ವೈ. ಮೆಣಸಿನಕಾಯಿ ಪ್ರಕಾಶಕರು: —ಶೀರಾಮ್ ಬುಕ್ ಸೆಂಟರ್ ಮಂಡ್ಯ “ಬೈಲಹೊಂಗಲ ನಾಡ ಚಂದ, ಗಂಗಾಳ ಮಾಟ ಚಂದ ಗಂಗೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group