ಅಂದು 60 ರ ದಶಕದಲ್ಲಿ ದಶವಾರದ ಹುಡುಗಿಯ ಖ್ಯಾತಿ ದಶ ದಿಕ್ಕಲ್ಲೂ ಮೊಳಗಿತ್ತು. 17ರ ವಯಸ್ಸಿಗೆ ಬಣ್ಣ ಹಚ್ಚಿದ ಈ ಶಾಕುಂತಲೆಯ ಮೊದಲ ಪಾದಾರ್ಪಣೆ “ಮಹಾಕವಿ ಕಾಳಿದಾಸ”
ಲೇಡಿ ಸೂಪರ್ ಸ್ಟಾರ್ ಎಂದೇ ಬಿರುದಾಂಕಿತೆ ಎಂ.ಜಿ.ಆರ್, ಎನ್.ಟಿ. ಆರ್, ನಾಗೇಶ್ವರರಾವ್,ರಾಜ್ ಕುಮಾರ್, ಕಲ್ಯಾಣ್ ಕುಮಾರ್ ದಿಗ್ಗಜರೊಡನೆ ನಟಿಸಿ ಸೈ ಎನ್ನಿಸಿಕೊಂಡರೂ, ಕನ್ನಡದ ಮೊಟ್ಟ ಮೊದಲ ಬಣ್ಣದ ಸಿನಿಮಾ “ಜಕಣಾಚಾರಿ” ಯ ನಾಯಕಿ ಎಂಬುದೊಂದು ಹೆಗ್ಗಳಿಕೆ.
ಈ ಪಂಚ ಭಾಷಾತಾರೆ, ನಾಡೋಡಿ ಮನ್ನನ್, ಕಲ್ಯಾಣಪರಿಸು, ಪಂಡಂಟಿಕಾಪುರಂ, ಶ್ರೀನಿವಾಸ ಕಲ್ಯಾಣ, ಬಬ್ರುವಾಹನನ ಚಿತ್ರಾಂಗದೆಯಾಗಿ ಚಿತ್ರ ರಸಿಕರ ಮನಕ್ಕೆ ಲಗ್ಗೆ ಹಾಕಿದ್ದ ಚೆಲುವಿನ ತಾರೆ.
200 ಚಿತ್ರಗಳಲ್ಲಿ ನಟಿಸಿದ್ದರೂ 160 ಚಿತ್ರಗಳಲ್ಲಿ ನಾಯಕನಷ್ಟೇ ಪ್ರಾಮುಖ್ಯತೆ ಪಡೆದ ಅಗ್ರಗಣ್ಯ ನಾಯಕಿ. ಈ “ಕನ್ನಡದ ಅರಗಿಣಿ” ಯನ್ನು ಅರಸಿ ಬಂದಿದ್ದು ಅಸಂಖ್ಯಾತ ಪ್ರಶಸ್ತಿ ಪುರಸ್ಕಾರ, ಪದ್ಮಭೂಷಣ, ಪದ್ಮಶ್ರೀ, ರಾಜಕುಮಾರ್, ಎನ್ಟಿಆರ್, ಕಲೈಮಾಮಣಿ, ಫಿಲಂಫೇರ್, ಜೀವಮಾನದ ಸಾಧನೆಗಾಗಿ ಪ್ರಶಸ್ತಿ, ಅಭಿನಯ ಸರಸ್ವತಿ ಪ್ರಶಸ್ತಿಗಳು ಧಕ್ಕಿದರೂ, ಈ ಕನ್ನಡಮ್ಮ ಕಿತ್ತೂರು ಚೆನ್ನಮ್ಮನಿಗೆ ಅಭಿಮಾನಿಗಳೇ ಸ್ಟಿರಾಸ್ತಿ.
ಜೀವಮಾನವಿಡಿ ನಿಷ್ಕಳಂಕ ಗೌರವಯುತ ತುಂಬು ಜೀವನ ನಡೆಸಿದ ಈ ದೇವಿ ಸರಳೇ ಸುಶೀಲೆ, ಪತಿ ಹರ್ಷನನ್ನು ಕಳೆದುಕೊಂಡು ಹರ್ಷಕ್ಕೆ ಕೊರತೆಯಾಗಿ, ಹಲವು ಏಳು ಬೀಳುಗಳನ್ನು ಕಂಡರೂ ಧೀಮಂತೆ, ಹೃದಯ ಶ್ರೀಮಂತೆ, ಪ್ರಭುದ್ದೆ, ಸ್ಥಿತಪ್ರಜ್ಞೆ.
ಹುಟ್ಟಿದ ಊರಿಗೆ ಶಾಲಾ ಕಟ್ಟಡ, ಕೋವಿಡ್ ಸಮಯದಲ್ಲಿ ಅಶಕ್ತರಿಗೆ ಧನಸಹಾಯ, ಸಾವಿನಲ್ಲೂ ನೇತ್ರದಾನ ಮಾಡಿದ ಕೊಡುಗೈ ದಾನಿ.
ಓ ದಾನ ಚಿಂತಾಮಣಿ, ನಿಮ್ಮಂತಹ ಮಾಣಿಕ್ಯವನ್ನು ಪಡೆದ ಭಾಗ್ಯವಂತರು ನಾವೇ ಭಾಗ್ಯವಂತರು.
ಶರಣೆಂಬೆ ನಾ ಶಶಿಭೂಷಣ ಎಂದು ಸದಾಶಿವನ ಪೂಜೆ ಮಾಡುತ್ತ ಮನೆಯಲ್ಲಿನ ಶಿವಾಲಯದಿಂದ ಹೊರ ಬಂದ ಈ ಮಲ್ಲಮ್ಮ ಪವಾಡವೆಂಬಂತೆ ಕ್ಷಣ ಮಾತ್ರದಲ್ಲಿ ಉಸಿರುಚೆಲ್ಲಿ ಶಿವನಪಾದ ಸೇರಿ ಪವಾಡವನ್ನೇ ಮೆರೆದು, ಸಾವಿನಲ್ಲೂ ಸಾರ್ಥಕತೆ ಪಡೆದನಂಥ ಅಮ್ಮಸರೋಜಮ್ಮ,
ಇದೋ ನಿಮಗೆ ನಮ್ಮೆಲ್ಲರ ಅಂತಿಮ ನಮನ.
ಕೆ. ವಿ.ರಮೇಶ್ ಕಟ್ಟೇಪುರ.
ಮೈಸೂರು