ಕರ್ನಾಟಕ ರಾಜ್ಯ ಸರಕಾರದ ಗಡಿ ಮತ್ತು ಜಲ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಶಿವರಾಜ ಪಾಟೀಲ ಅವರೊಂದಿಗೆ ದಿನಾಕ ೧೩ ರಂದು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ.ಮೆಟಗುಡ್ಡ ಇವರು ಬೆಳಗಾವಿ ಜಿಲ್ಲೆಯ ಗಡಿ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು.
ಮುಖ್ಯವಾಗಿ ಗಡಿಭಾಗದಲ್ಲಿರುವ ಪ್ರಾಥಮಿಕ ಶಾಲೆಗಳಿಗೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವ್ಯವಸ್ಥಿತವಾದ ಕಟ್ಟಡಗಳು ನಿರ್ಮಾಣವಾಗಬೇಕು. ವಿಷಯಾಧಾರಿತ ಶಿಕ್ಷಕರ ನೇಮಕಾತಿಯಾಗಬೇಕು. ಪ್ರತಿ ತಾಲೂಕಿಗೊಂದು ಕನ್ನಡ ಭವನ ನಿರ್ಮಾಣವಾಗಲು ಅಗತ್ಯ ಹಣಕಾಸಿನ ನೆರವು ನೀಡಬೇಕು. ತಾಲೂಕು ಮತ್ತು ಜಿಲ್ಲಾ ಸಮ್ಮೇಳನಗಳನ್ನು ನಡೆಸಲು ಅನುದಾನ ಬಿಡುಗಡೆಯಾಗಬೇಕು. ನಿಪ್ಪಾಣಿಯಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವಲ್ಲಿ ಗಮನಹರಿಸಬೇಕು, ಅಲ್ಲದೇ “ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ” ಎನ್ನುವ ಹೆಸರನ್ನು “ಕಿತ್ತೂರು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ” ಎಂದು ಬದಲಾವಣೆ ಮಾಡಬೇಕು ಎಂದು ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಿತ್ತೂರು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಸ್. ಬಿ ದಳವಾಯಿ, ಬೆಳಗಾವಿ ತಾಲೂಕಾ ಅಧ್ಯಕ್ಷರಾದ ಸುರೇಶ ಹಂಜಿ, ಯರಗಟ್ಟಿ ತಾಲೂಕಾ ಅಧ್ಯಕ್ಷರಾದ ವಾಯ್ ಬಿ.ತಮ್ಮಣ್ಣವರ, ಜಿಲ್ಲಾ ಗೌರವ ಕಾರ್ಯದರ್ಶಿಯಾದ ಎಂ. ವಾಯ್ ಮೆಣಸಿನಕಾಯಿ, ಸಂಘಟನಾ ಕಾರ್ಯದರ್ಶಿ ವೀ.ಮ. ಅಂಗಡಿ ಮುಂತಾದವರು ಉಪಸ್ಥಿತರಿದ್ದರು.