ಗದಗ ಜಿಲ್ಲೆಯ ಡೋಣಿ ಸಮೀಪದ ಕಪ್ಪತಗುಡ್ಡದ ಮಡಿಲಲ್ಲಿರುವ ಶ್ರೀ ನಂದಿವೇರಿ ಬಸವಣ್ಣನ ರಥೋತ್ಸವ, ಪಾಲಕಿ ಸೇವೆ ಹಾಗೂ ಪರಿಸರೋತ್ಸವವು ಯಶಸ್ವಿಯಾಗಿ ಜರುಗಿದವು.
ನಂದಿವೇರಿ ಸಂಸ್ಥಾನ ಮಠದ ಪೂಜ್ಯ ಶ್ರೀ ಶಿವಕುಮಾರ ಮಹಾಸ್ವಾಮಿಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತಸಾಗರದ ಜಯಘೋಷಗಳೊಂದಿಗೆ ಹಸಿರು ಕಾನನದ ಮಧ್ಯೆ ಯಶಸ್ವಿಯಾಗಿ ಜರುಗಿತು.
ಗದಗ, ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ, ಕೊಪ್ಪಳ, ವಿಜಯಪುರ, ಕಲಬುರ್ಗಿ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ಭಕ್ತಿಪರಾಕಾಷ್ಠೆಯನ್ನು ತಲುಪಿ ಪಾಲ್ಗೊಂಡಿದ್ದುದು ನೋಡುಗರ ಹೃನ್ಮನಗಳನ್ನು ಗೆಲ್ಲುವಲ್ಲಿ ಸಫಲವಾಯಿತು.
ಭಜನೆ, ಕರಡಿಮಜಲಿನ ಸುಶ್ರಾವ್ಯ ಇಂಪಿನ ಕಂಪು ಇಡೀ ಕಾನನದಲ್ಲಿ ರಣರಣಿಸಿ ಶಿವ ಪಾರ್ವತಿಯರನ್ನು ಹೊತ್ತು ಕರೆತಂದ ನಂದಿವೇರಿ ಬಸವಣ್ಣನ ಈ ಪುಣ್ಯಕ್ಷೇತ್ರದಲ್ಲಿ ಆಗಮಿಸಿದ ಭಕ್ತಗಣವೆಲ್ಲವೂ ಪುಳಕಿತಗೊಂಡಿತು.
ಪರಿಸರೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀ ನಂದಿವೇರಿ ಸಂಸ್ಥಾನ ಮಠವು ಭಕ್ತರ ಹಾಗೂ ಪರಿಸರಾಸಕ್ತರ ಸಹಾಯ ಸಹಕಾರದೊಂದಿಗೆ ಹಮ್ಮಿಕೊಂಡ ಹಾಗೂ ಅನುಷ್ಠಾನಗೊಳಿಸಿದ ಚಟುವಟಿಕೆಗಳ ಕುರಿತು ಭಾಲಚಂದ್ರ ಜಾಬಶೆಟ್ಟಿ ವಿವರಿಸಿದರು.
ಕಪ್ಪತಗುಡ್ಡ ಉತ್ಸವ, ಕಪ್ಪತಗುಡ್ಡ ಪ್ರದಕ್ಷಿಣೆ, ಸಾವಯವ, ನೈಸರ್ಗಿಕ, ಮತ್ತು ಪಾರಂಪರಿಕ, ಹಾಗೂ ಗೋ ಮತ್ತು ನಂದಿ ಆಧಾರಿತ ಕೃಷಿ, ಎರೆಹುಳು ಬಿತ್ತನೆ, ಭೂದೇವಿ ಹಾಗೂ ವನದೇವಿಗಳಿಗೆ ಬೀಜದುಂಡೆ ಚರಗ ನಮನ, ಗೋಕೃಪಾಮೃತ ಹಾಗೂ ನಂದಿವೇರಿ ಸೂಕ್ಷ್ಮಾಮೃತ, ಹುಬ್ಬಳ್ಳಿಯಲ್ಲಿ ಆಯೋಜಿಸಿದ ಔಷಧೀಯ ಸಸ್ಯಗಳ ರಾಜ್ಯಮಟ್ಟ ಕಾರ್ಯಾಗಾರ, ಪ್ರತಿ ತಿಂಗಳ ಎರಡನೇ ರವಿವಾರ ಆಯೋಜಿಸುತ್ತಿರುವ ಕಪ್ಪತಗುಡ್ಡ ಚಾರಣ ಹಾಗೂ ಸಸ್ಯಾನುಭವ, ಸಾಹಿತ್ಯಾವಲೋಕನ, ಕವಿಗೋಷ್ಠಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಮಠದ ಪರಿಸರ ಪೂರಕ, ಧಾರ್ಮಿಕ, ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಹಾಗೂ ಸಾಮಾಜಿಕ ಅಭ್ಯುದಯದ ಕೆಲಸ ಕಾರ್ಯಗಳಲ್ಲಿ ತನು ಮನ ಧನಗಳಿಂದ ಸಹಾಯ ಸಹಕಾರ ನೀಡಿದ ಎಲ್ಲ ಮಹನೀಯರ ಉಪಕಾರ ಸ್ಮರಿಸಿದರು.
ನಂದಿವೇರಿ ಬಸವಣ್ಣನ ಎದುರಿನಲ್ಲಿನ ಶರಣ ಸಂಗಮದ ಬಂಗಾರ ಕೊಳದ ಉದ್ಭವ ನಂದೀ ತೀರ್ಥೋದ್ಭವದ ಜೀರ್ಣೋದ್ಧಾರ ಕಾರ್ಯವು ಭರದಿಂದ ಸಾಗಿದ್ದು, ಈಗಾಗಲೇ ಅನೇಕ ದಾನಿಗಳು ತಮ್ಮ ಭಕ್ತಿಸೇವೆ ಸಲ್ಲಿಸಿದ್ದು ಇನ್ನೂ ಹೆಚ್ಚಿನ ಭಕ್ಕಿ ಸೇವೆ ಹರಿದು ಬರಲಿದೆಯೆಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಬರುವ ನವಂಬರ ತಿಂಗಳ ಎರಡನೇ ರವಿವಾರ ದಿ.10/11/2024 ರಂದು ಜರುಗುವ ರಾಜ್ಯಮಟ್ಟದ ಕವಿಗೋಷ್ಠಿ ಸಂದರ್ಭದಲ್ಲಿ ನಂದಿವೇರಿ ತೀರ್ಥೋದ್ಭವವು ನಂದಿಮುಖಿಯಾಗಿ ನಿರಂತರ ಪ್ರವಹಿಸುವ ಪ್ರಕ್ರಿಯೆಯು ಲೋಕಾರ್ಪಣೆಗೊಳ್ಳಲಿದೆ.
ಈ ಉದ್ಭವ ನಂದೀತಿರ್ಥದ ಪ್ರೋಕ್ಷಣೆ ಮಾಡಿಕೊಂಡು ಶ್ರೀ ನಂದಿವೇರಿ ಬಸವಣ್ಣನ ದರ್ಶನಾಶೀರ್ವಾದ ಪಡೆಯುವದರಿಂದ ಸಕಲ ಇಷ್ಟಾರ್ಥಗಳು ಸಿದ್ಧಿಸುವವೆಂಬ ಪ್ರತೀತಿಯಿದೆಯೆಂದೂ ಸಹ ತಿಳಿಸಿದರು.
ಬದಾಮಿ ತಾಲೂಕಾ ಪಂಚಾಯರ ಮಾಜಿ ಅಧ್ಯಕ್ಷ ಬಸವರಾಜ ಅಂಟರಟಾಣಿಯವರು ಮಾತನಾಡುತ್ತಾ ನಂದಿವೇರಿ ಮಠವು ಪ್ರಕೃತಿ, ಆಧ್ಯಾತ್ಮ ಹಾಗೂ ಸಂಸ್ಕೃತಿ ಗಳ ಮೇಳೈಸಿದ ಶರಣ-ಸಂಗಮ ತಾಣವಾಗಿದೆಯೆಂದು ನುಡಿದರು.
ಈ ಸಂದರ್ಭದಲ್ಲಿ ಅನೇಕ ಗಣ್ಯರು ತಮ್ಮ ನುಡಿನಮನಗಳನ್ನು ಸಲ್ಲಿಸಿದರು. ಐಹೊಳೆಯ ಕರಡಿ ಮಜಲು ಹಾಗೂ ಸೊರಟೂರಿನ ಬಸವೇಶ್ವರ ಭಜನಾ ಮಂಡಳಿಗಳು ಭಕ್ತಭಾವವನ್ನು ಜಾಗೃತಗೊಳಿಸಿ ಇಡೀ ಗಿರಿ ಕಂದರಗಳಲ್ಲಿ ಮಾರ್ದನಿಸುವಂತೆ ಮಾಡಿದವು.
ಸೊರಟೂರಿನ ವಿಶೇಷ ಚೇತನ ಗುರುಪಾದಪ್ಪ ದೊಡ್ಡಣ್ಣವರ (ಎಡಗೈ ಇಲ್ಲವೇ ಇಲ್ಲ, ಬಲಗೈನಲ್ಲಿ ಮುಂಗೈ ಹಾಗೂ ಬೆರಳುಗಳಿಲ್ಲ) ಆದರೂ ಇವರು ಸುಶ್ರವ್ಯವಾಗಿ ಹಾರ್ಮೋನಿಯಮ್ ನಡಿಸುತ್ತಾ ಶಾಸ್ತರೋಕ್ತವಾಗಿ ಭಜನಾಪದಗಳನ್ನು ಹಾಡಬಲ್ಲವರಾಗಿದ್ದು ವಿಸ್ಮಯಕಾರಿಯಾಗಿತ್ತು.
ಪೂಜ್ಯ ಶ್ರೀ ಶಿವಯೋಗೀಶ್ವರ ಮಹಾಸ್ವಾಮಿಗಳು, ಗುಡ್ಡದಾನ್ವೇರಿ ಮಠ ರವರು ತಮ್ಮ ಆಶೀರ್ವಚನದಲ್ಲಿ ನಂದಿವೇರಿ ಮಠವು ಪ್ರಕೃತಿಮಾತೆಯ ಸಂರಕ್ಷಣೆಯಲ್ಲಿ ತೊಡಗಿಕೊಂಡಿರುವ ವೈಶಿಷ್ಟ್ಯಪೂರ್ಣ ಮಠವಾಗಿದ್ದು ಏಳು ಕೋಟಿ ಕನ್ನಡಿಗರೊಂದಿಗೆ ಭಾವ ಬಂಧ ಬೆಸೆಯುವ ಕಾರ್ಯದಲ್ಲಿ ತೊಡಗಿಕೊಂಡಿರುವುದು ಸ್ಥುತ್ಯಾರ್ಹ ಕಾರ್ಯವಾಗಿದೆಯೆಂದರು.
ಪೂಜ್ಯ ಶ್ರೀ ಶಿವಕುಮಾರ ಸ್ವಾಮೀಜಿಗಳು ನೀಡಿದ ಆಶೀರ್ವಚನದಲ್ಲಿ ಕರ್ನಾಟಕದ ಏಳು ಕೋಟಿ ಜನರು ಕಪ್ಪತಗುಡ್ಡದ ಜೊತೆಗೆ ಭಾವಬಂಧ ಬೆಸೆದು ಇಲ್ಲಿ ಅಮೂಲ್ಯವಾದ ಔಷಧೀಯ ಸಸ್ಯಗಳನ್ನು ಉಳಿಸಿ, ಬಳಸಿ, ಬೆಳೆಸುವುದರ ಮೂಲಕ ಈ ಅಪರೂಪದ ಸಸ್ಯಕಾಶಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಇಂದಿನ ಅವಶ್ಯಕತೆಯಾಗಿದೆಯೆಂದರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್.ಪಾಟೀಲರು ಸರ್ವಾಲಂಕೃತ ನಂದಿವೇರಿ ಬಸವಣ್ಣನ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ಕೃಷಿ ಹಾಗೂ ಪರಿಸರ ಸಂರಕ್ಷಣೆಯ ಕೈಂಕರ್ಯದಲ್ಲಿ ತೊಡಗಿರುವ ಶ್ರೀ ನಂದಿವೇರಿ ಮಠದೊಂದಿಗೆ ಕೃಷಿ ವಿಜ್ಞಾನಿಗಳ ಬಳಗವೇ ನಿಂತಿದೆ, ರೈತರ ಏಳ್ಗೆಗಾಗಿ ಸ್ವಾಮಿಜಿಯವರು ಹಮ್ಮಿಕೊಳ್ಳುವ ಎಲ್ಲಾ ಕೆಲಸ ಕಾರ್ಯಗಳಲ್ಲಿ ನಾವೆಲ್ಲ ಕೃಷಿವಿಜ್ಞಾನಿಗಳು ಬೆಂಬಲ ಸೇವೆ ನೀಡುತ್ತೇವೆಂದು ಭರವಸೆ ನೀಡಿದರು.
ಅನೇಕ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು