ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹುಟ್ಟಿದ್ದು ಕನ್ನಡ ಭಾಷೆಗೆ, ಕನ್ನಡಿಗರಿಗೆ ಆಗುತ್ತಿದ್ದ ಅನ್ಯಾಯದ ವಿರುದ್ಧ ಯುವ ಸಮೂಹದ ಪ್ರತಿಭಟನೆಯಿಂದ. ಅನೇಕ ಸಂಘಟನೆಗಳ ಮುಖಂಡರೊಂದಿಗೆ ಸೇರಿ ಕರವೇ ಉದಯವಾಯಿತು. ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳಲ್ಲಿ ಸ್ಥಾನ ಸಿಗಬೇಕೆಂಬ ಹೋರಾಟದಲ್ಲಿ ಡಾ. ರಾಜಕುಮಾರ್ ಅವರೂ ಭಾಗವಹಿಸಿದ್ದರು. ನಂತರ ಕಾವೇರಿ ನದಿ ನೀರಿನ ಹಂಚಿಕೆಯ ಅನ್ಯಾಯದ ವಿರುದ್ಧ ನಡೆದ ಉಗ್ರ ಹೋರಾಟದಲ್ಲಿ ನೂರಾರು ಕಾರ್ಯಕರ್ತರು ಬಳ್ಳಾರಿ ಜೈಲು ಸೇರಿದ ಇತಿಹಾಸವಿದೆ.
ಕಾಡುಗಳ್ಳ ವೀರಪ್ಪನ್ ರಾಜಕುಮಾರ್ ಅವರನ್ನು ಅಪಹರಿಸಿದಾಗ ಅವರ ಬಿಡುಗಡೆಗಾಗಿ ನಡೆಸಿದ ಹಲವು ಹೋರಾಟಗಳ ನೆನಪುಗಳಿವೆ. ಮಹದಾಯಿ ನದಿ ನೀರಿನ ಹಂಚಿಕೆ, ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಉದ್ಯೋಗ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ, ಬೆಳಗಾವಿಯಲ್ಲಿ ಮರಾಠಿ ಭಾಷಿಕರ ದೌರ್ಜನ್ಯದ ವಿರುದ್ಧದ ಹೋರಾಟ, ನೂರಾರು ಕೇಸುಗಳು, ನೂರಾರು ಬಾರಿ ಜೈಲುವಾಸ – ಇವೆಲ್ಲವನ್ನೂ ಸಾಮಾಜಿಕ ಜಾಲತಾಣದ ಕೆಲವು ಬಂಧುಗಳು ಮರೆತಂತೆ ಕಾಣುತ್ತಿದೆ.
ಕರವೇ ಎಂದರೆ ಟಿ.ಎ. ನಾರಾಯಣಗೌಡರ ಶಕ್ತಿಯ ಪ್ರತಿರೂಪ. ರಾಜ್ಯದ ಎಲ್ಲ ಭಾಗಗಳಲ್ಲಿ – ಜಿಲ್ಲಾ ಕೇಂದ್ರಗಳಲ್ಲಿ, ತಾಲೂಕು ಕೇಂದ್ರಗಳಲ್ಲಿ – ಸ್ಥಳೀಯ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ನಡೆಸಿದ ಕರವೇಯ ಪಡೆಯನ್ನು ಅನೇಕರು ಮರೆತಂತೆ ಭಾಸವಾಗುತ್ತಿದೆ. *ಕರವೇ ಎಂದರೇನು ಎಂದು ನಿಜವಾಗಿಯೂ ತಿಳಿದುಕೊಂಡಿದ್ದೀರಾ?* ಇತಿಹಾಸದ ಜ್ಞಾನವಿರದ ಕೆಲವು ಯುವಕರು ಬಾಯಿಗೆ ಬಂದಂತೆ ಮಾತನಾಡುವುದು, ಬರೆಯುವುದನ್ನು ನೋಡಿದರೆ ನಮ್ಮಲ್ಲಿನ ತಿಳಿವಳಿಕೆ ಕಡಿಮೆಯಾಗುತ್ತಿದೆಯೇ ಎಂದು ಎನಿಸದಿರದು.
ಪ್ರಸ್ತುತ ಬಿಗ್ ಬಾಸ್ ನೆಪದಲ್ಲಿ ಕರವೇಯನ್ನು ಟೀಕಿಸುವುದು, ನಮ್ಮ ನಾಯಕರ ಬಗ್ಗೆ ಗೇಲಿ ಮಾಡುವುದನ್ನು ನಾವು ಕಾಣುತ್ತಿದ್ದೇವೆ. ಬಿಗ್ ಬಾಸ್ ಒಂದು ಮನರಂಜನಾ ಕಾರ್ಯಕ್ರಮ ಮಾತ್ರ. ಅದನ್ನು ಅದೇ ರೀತಿ ಮನರಂಜನೆಯಾಗಿ ಸ್ವೀಕರಿಸಿ ತಮ್ಮ ಇಷ್ಟದ ವ್ಯಕ್ತಿಯನ್ನು ಬೆಂಬಲಿಸುವುದು ಪ್ರತಿಯೊಬ್ಬರ ವೈಯಕ್ತಿಕ ಹಕ್ಕು. ಅಶ್ವಿನಿ ಗೌಡ ಅವರು ನಮ್ಮ ಸಂಘಟನೆಯಲ್ಲಿ ಮಾಡಿದ ಹೋರಾಟಗಳ ಆಧಾರದ ಮೇಲೆ ಕೆಲವರು ಅವರನ್ನು ಬೆಂಬಲಿಸಿದ್ದಾರೆ. ಅಶ್ವಿನಿ ಗೌಡ ಕರವೇ ನಾಯಕಿಯರಲ್ಲಿ ಒಬ್ಬರಾದ್ದರಿಂದ ಅದು ಸಹಜವೇ ಅಲ್ಲವೇ?
ಕರವೇ ಕನ್ನಡ, ಕನ್ನಡಿಗ, ಕರ್ನಾಟಕದ ಪರವಾದ ಹೋರಾಟಗಳಿಗಾಗಿ ಹುಟ್ಟಿದ್ದು. “ಕನ್ನಡವೇ ಜಾತಿ, ಕನ್ನಡವೇ ಧರ್ಮ, ಕನ್ನಡವೇ ದೇವರು” ಎಂಬ ಮಂತ್ರವನ್ನು ಜಪಿಸುತ್ತಾ ಸಾಗಿದ ಇತಿಹಾಸವಿದೆ. ಈ ವಿಚಾರದಲ್ಲಿ ಜಾತಿಯ ವಿಷ ಬೆರೆಸುವವರಿಗೆ ನಾಚಿಕೆಯಾಗಬೇಕು.
ನಮ್ಮ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಕನ್ನಡಪರ ಹೋರಾಟಗಳನ್ನು ಪ್ರಶ್ನಿಸುವ ಮುನ್ನ ಒಮ್ಮೆ ಅವರು ಈ ನಾಡಿಗಾಗಿ ಮಾಡಿದ ತ್ಯಾಗಗಳನ್ನು ನೆನೆದುಕೊಳ್ಳಿ. ಜೈಲು, ಹೋರಾಟ, ಅವಮಾನ, ಬೆದರಿಕೆಗಳನ್ನೆಲ್ಲ ಎದುರಿಸಿ ನಿಂತ ಮಹಾನ್ ನಾಯಕತ್ವ ಅವರದ್ದು.
ಯಾವುದೋ ಒಂದು ರಿಯಾಲಿಟಿ ಶೋದ ವಿಚಾರದಿಂದ ಅವರ ವ್ಯಕ್ತಿತ್ವಕ್ಕೂ, ಕರವೇ ಎಂಬ ಬಲಿಷ್ಠ ಸಂಘಟನೆಯ ಘನತೆಗೂ ಕೆಟ್ಟ ಹೆಸರು ಬಳಿಯಬೇಡಿ. ಈ ನಾಡಿನಲ್ಲಿ ಇಂತಹ ಬಲಿಷ್ಠ ಹೋರಾಟದ ಸಂಘಟನೆಯನ್ನು ಮತ್ತೆ ಕಟ್ಟುವುದು ಸುಲಭವಲ್ಲ. ಇಂತಹ ಸಂಘಟನೆಯನ್ನು ಒಂದು ಮನರಂಜನಾ ಕಾರ್ಯಕ್ರಮದ ಏಳಿಗೆಗೆ ಬಲಿ ಕೊಡುವುದು ಕನ್ನಡಕ್ಕೆ ಮಾಡುವ ಬಹುದೊಡ್ಡ ದ್ರೋಹವಷ್ಟೇ.
ನೆನಪಿರಲಿ ಗೆಳೆಯರೇ – ಕರವೇ ಎಂಬುದು ಕನ್ನಡಿಗರ ಆತ್ಮಶಕ್ತಿ. ಟಿ.ಎ. ನಾರಾಯಣಗೌಡರು ಕರವೇಯ ಆತ್ಮಬಲ. ಕರವೇಯನ್ನು ಬೆಂಬಲಿಸಿ, ನಾಡನ್ನು ಉಳಿಸಿ ಎಂಬುದಷ್ಟೇ ನನ್ನ ಅಭಿಮತ.
ನೇ.ಭ.ರಾಮಲಿಂಗ ಶೆಟ್ಟಿ
ನಿಕಟ ಪೂರ್ವ
ಗೌರವ ಕಾರ್ಯದರ್ಶಿ
ಕನ್ನಡ ಸಾಹಿತ್ಯ ಪರಿಷತ್ತು
(ನಿಮ್ಮ ಅಭಿಪ್ರಾಯಗಳನ್ನು 9448863309 ಇಲ್ಲಿಗೆ ವಾಟ್ಸಪ್ ಮಾಡಿ )

