ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಮೇಲೆ ಕ್ರಿಮಿನಲ್ ಮೊಕದ್ದಮೆ ಆಗ್ರಹ
ಬೀದರ – ಒಂದು ಕಡೆ ಬೀದರ ಪ್ರಮುಖ ರಸ್ತೆ ಸುಧಾರಣೆಯಾಗುತ್ತಿದ್ದರೆ ಇನ್ನೊಂದು ಕಡೆ ನಗರದ ಕೌಠಾ ಸೇತುವೆ ಕಾಮಗಾರಿಗೆ ಕೋಟಿ ಕೋಟಿ ಸುರಿದರೂ ದುರಸ್ತಿಯಾಗದೆ ಕಳಪೆ ಕಾಮಗಾರಿಯನ್ನು ಸಾರುತ್ತಿದೆ.
ಔರಾದ್ ತಾಲೂಕಿನ ಕೌಠಾ (ಬಿ) ಗ್ರಾಮದ ಹತ್ತಿರ ಮಾಂಜ್ರಾ ನದಿಗೆ ನಿರ್ಮಿಸಿದ ಸೇತುವೆ ದುರಸ್ತಿಗಾಗಿ ಅದೆಷ್ಟು ಕೋಟಿ ಸುರಿದು ಎಷ್ಟು ಸಲ ದುರಸ್ತಿ ಮಾಡಿದ್ದಾರೋ ಲೆಕ್ಕವಿಲ್ಲ. ಕೋಟಿ ಕೋಟಿ ಖರ್ಚು ಮಾಡಿರುವ ಮೊತ್ತವನ್ನು ನೋಡಿದರೆ ಇನ್ನೊಂದು ಹೊಸ ಸೇತುವೆ ನಿರ್ಮಿಸಬಹುದಿತ್ತು.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡದಿರುವುದಕ್ಕೆ ಜನರ ತೆರಿಗೆ ಹಣ ಈ ರೀತಿಯಲ್ಲಿ ಪೋಲಾಗುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ.
ಇತ್ತ ಔರಾದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕೌಠಾ ಗ್ರಾಮದ ಹತ್ತಿರ ಮಾಂಜ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆಯ ಎರಡೂ ಬದಿ ಪದೇ ಪದೇ ಭೂಕುಸಿತ ಉಂಟಾಗಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಇದರ ದುರಸ್ತಿಗಾಗಿ ಈ ಹಿಂದೆ ಕೋಟಿಗಳಲ್ಲಿ ಖರ್ಚಾಗಿದೆ, ಆದರೂ ಹಿಂದಿನಂತೆ ಮತ್ತೆ ಕುಸಿತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರ ಹಿಂದಿರುವ ಅಭಿಯಂತರು ಯಾವ ರೀತಿಯಾಗಿ ಭೂ ಪರೀಕ್ಷೆ ಮಾಡುತ್ತಿದ್ದಾರೋ ದೇವರೆ ಬಲ್ಲ ಭೂಮಿಯ ಲಕ್ಷಣ ಮಾತ್ರ ಯಾರ ಅಳತೆಗೂ ಸಿಗುತ್ತಿಲ್ಲ ಉದ್ದೇಶಪೂರ್ವಕ ಸೇತುವೆ ಕಾಮಗಾರಿಗೆ ದುಡ್ಡು ಸುರಿಯಲಾಗುತ್ತಿದೆಯೋ ಎಂಬ ಗುಮಾನಿ ಏಳುತ್ತಿದೆ.
ಮಹಾರಾಷ್ಟ್ರ- ತೆಲಂಗಾಣ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ, ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಕಾಟಾಚಾರಕ್ಕೆ ರಿಪೇರಿ ಮಾಡಿ ಕೈತೊಳೆದುಕೊಳ್ಳುತ್ತಾರೆ. ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತ ಗಮನಹರಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಂಜ್ರಾ ನದಿ ಮೇಲೆ ಹೊಸ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ, ಆದರೆ ಇದರ ಪಕ್ಕದಲ್ಲೇ ಇದೊಂದೇ ಸೇತುವೆ ಸದ್ಯ ವಾಹನ ಸಂಚಾರಕ್ಕಿದೆ. ವಾಹನದಟ್ಟಣೆ ಹೆಚ್ಚಾದ ಕಾರಣ ವಾಹನ ಸವಾರರು ಪರದಾಡುವಂತಾಗಿದೆ.
ಕೌಠಾ ಬ್ರಿಡ್ಜ್ ದುರಸ್ತಿ ಕಾಮಗಾರಿ ಕಳಪೆಯಿಂದಾಗಿ ಪದೇ ಪದೇ ಸೇತುವೆ ಬದಿ ಮಣ್ಣು ಕುಸಿತವಾಗುತ್ತಿದೆ. ಈ ಬಗ್ಗೆ ಔರಾದ ತಾಲೂಕಿನವರೇ ಆದ ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ರಾಜ್ಯ ಸಚಿವ ಪ್ರಭು ಚವ್ಹಾಣ ಅವರು ಇದೇ ಸೇತುವೆ ಮೇಲೆ ತಿರುಗಾಡುತ್ತಾರೆ. ಆದರೂ ಈ ಬಗ್ಗೆ ಗಮನಿಸುತ್ತಿಲ್ಲ. ಕಾಮಗಾರಿ ಕಳಪೆಯಾಗಿ ನಡೆಯುತ್ತಿದ್ದರೂ ಕ್ಯಾರೇ ಎನ್ನದ ಕಾರಣ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಯುವ ಘಟಕ ಜಿಲ್ಲಾಧ್ಯಕ್ಷ ನಿತೀಶ್ ಸಕ್ಪಾಲ್ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿಸಬೇಕು. ಸಾರ್ವಜನಿಕರ ಹಿತದೃಷ್ಟಿಯಿಂದ ಸೇತುವೆ ದುರಸ್ತಿ ಮಾಡಬೇಕು. ಈ ಹಿಂದೆ ಸೇತುವೆ ದುರಸ್ತಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹಾಳಾದ ಸೇತುವೆ ದುರಸ್ತಿ ಕಾಣದಿದ್ದರೆ ವಾಹನ ಸಂಚಾರಕ್ಕೆ ಅಡ್ಡಿಯಾಗುವುದು ಅಲ್ಲದೆ ಅಪಘಾತಗಳು ಸಂಭವಿಸಬಹುದು. ಇದರಿಂದ ಏನಾದರೂ ಅನಾಹುತ ಘಟನೆ ಜರುಗಿದರೆ ಜಿಲ್ಲಾಡಳಿತವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಂದಕುಮಾರ ಕರಂಜೆ, ಬೀದರ