ಬೀದರ – ಇಡೀ ದೇಶದಲ್ಲಿ ಹಿಜಾಬ್ ಕಿಚ್ಚು ಹೊತ್ತಿ ಉರಿಯುತ್ತಿರುವ ಹಿನ್ನೆಲೆಯಲ್ಲಿ ಬಸವಣ್ಣನವರ ಕರ್ಮಭೂಮಿ ಬೀದರ್ ನಲ್ಲಿ ಜಿಲ್ಲಾ ವರಿಷ್ಠಾಧಿಕಾರಿ ಕಿಶೋರ್ ಬಾಬು ಸೌಹಾರ್ದ ಸಭೆ ನಡೆಸಿ ಇಡೀ ರಾಜ್ಯ ಮತ್ತು ದೇಶಕ್ಕೆ ಒಂದು ಒಳ್ಳೆಯ ಸಂದೇಶ ಕಳಿಸಿದರು.
ಬೀದರ್ ಜಿಲ್ಲೆಯು ಬಸವಣ್ಣನವರು ನಡೆದಾಡಿದ ಭೂಮಿ ಇರುವುದರಿಂದ ಬೀದರ್ ನಲ್ಲಿ ಎಲ್ಲಾ ಸಮಾಜದ ಮುಖಂಡರು ಸೇರಿ ನಾವೆಲ್ಲರೂ ಒಂದೇ ಎಂಬುದನ್ನು ತೋರಿಸಿ ಕೊಟ್ಟರು.
ಹಿಜಾಬ್ ಪ್ರಕರಣದ ಬಗ್ಗೆ ಇನ್ನೂ ರಾಜ್ಯದ ಉಚ್ಛ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ನಡೆಸುತ್ತಿರುವ ಪರ ವಿರುದ್ಧದ ಪ್ರತಿಭಟನೆ ಜಿಲ್ಲೆಯಲ್ಲಿ ಬರದಂತೆ ತಡೆಯಲು ಸರ್ವ ಧರ್ಮೀಯ ಮುಖಂಡರನ್ನು ಒಳಗೊಂಡ ಸೌಹಾರ್ದ ಸಭೆ ನಡೆಸಲಾಯಿತು. ಸಭೆ ನಡೆಸಿದ ಬೀದರ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕಿಶೋರ್ ಬಾಬು ಮತ್ತು ಜಿಲ್ಲೆಯ ಎಲ್ಲಾ ಸಮಾಜದ ಹಿರಿಯ ಮುಖಂಡರು ಸೌಹಾರ್ದ ಸಭೆಯಲ್ಲಿ ಭಾಗವಹಿಸಿದ್ದರು.
ಬೀದರ್ ಜಿಲ್ಲೆಯ ಈ ಸೌಹಾರ್ದ ಸಭೆ ಇಡೀ ದೇಶಕ್ಕೆ ಮಾದರಿ ಆಗಬಹುದು ಎಂಬುದು ಬೀದರ್ ಸಾರ್ವಜನಿಕರ ಆಸೆಯಾಗಿದ್ದು ವರಿಷ್ಠಾಧಿಕಾರಿಗಳ ಈ ಪ್ರಯತ್ನದಿಂದ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ ಆಗುತ್ತಿದೆ. ಅಲ್ಲದೆ ಧರ್ಮೀಯರಲ್ಲಿ ಬಿರುಕು ತಂದು ದೇಶಕ್ಕೆ ಮಾರಕವಾಗುತ್ತಿರುವ ಕೆಲವು ಶಕ್ತಿಗಳ ಪ್ರಯತ್ನಗಳಿಗೆ ಈ ಸೌಹಾರ್ದ ಸಭೆಯು ತಣ್ಣೀರೆರಚಲಿದೆ ಎನ್ನಲಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ