ಗೋಕಾಕ : ಕ್ಷೇತ್ರದ ಜನರು, ಕೆಎಂಎಫ್ ಸಂಸ್ಥೆಯ ಪ್ರಗತಿ ಹಾಗೂ ಕುಟುಂಬಸ್ಥರ ಏಳ್ಗೆಗಾಗಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವ ಚಂಡಿಕಾ ಹೋಮ ನೆರವೇರಿಸಿದರು.
ಕಳೆದ ಭಾನುವಾರ ಮತ್ತು ಸೋಮವಾರದಂದು ಎರಡು ದಿನಗಳವರೆಗೆ ಉಡುಪಿ ಜಿಲ್ಲೆಯ ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಹೋಮ-ಹವನ ನೆರವೇರಿಸಿದರು.
ಕಳೆದ ಎರಡು ವರ್ಷಗಳಿಂದ ಕೋವಿಡ್ ಮಹಾಮಾರಿಗೆ ತತ್ತರಿಸಿರುವ ರಾಜ್ಯದ ಜನತೆಗೆ ಒಳ್ಳೆಯದಾಗಬೇಕು. ರೈತಾಪಿ ವರ್ಗದ ಕಷ್ಟ-ಕಾರ್ಪಣ್ಯಗಳು ದೂರವಾಗಬೇಕು. ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆಯಲ್ಲಿರುವ ರೈತರ ಜೀವನಾಡಿ ಕೆಎಂಎಫ್ ಅಭ್ಯುದಯ ಹಾಗೂ ಕುಟುಂಬದ ಶ್ರೇಯೋಭಿವೃದ್ಧಿಗಾಗಿ ನವ ಚಂಡಿಕಾ ಹೋಮ ನಡೆಸಿರುವ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ಧಿ ದೊರೆಯಬೇಕೆಂದು ಕೊಲ್ಲೂರು ಮೂಕಾಂಬಿಕಾ ದೇವಿಯ ಬಳಿ ಪ್ರಾರ್ಥಿಸಿಕೊಂಡರು.
ನವ ಚಂಡಿಕಾ ಹೋಮ ನೆರವೇರಿಸುವ ಸಂದರ್ಭದಲ್ಲಿ ಅದ್ಬುತವಾದ ದೃಶ್ಯವೊಂದು ದೇವಿ ರೂಪದಲ್ಲಿ ಮೂಡಿ ಬಂದಿದ್ದು, ಇದರಿಂದ ಕೊಲ್ಲೂರು ಮೂಕಾಂಬಿಕಾ ದೇವಿಯ ಅನುಗೃಹವು ಎಲ್ಲರ ಮೇಲಿದೆ. ಕ್ಷೇತ್ರದ ಜನರ ಒಳಿತು, ರೈತರ ಅಭಿವೃದ್ಧಿ ಸೇರಿದಂತೆ ಇಡೀ ನಾಡಿನ ಜನರಿಗೆ ಆ ದೇವರು ಒಳ್ಳೆಯದನ್ನು ಮಾಡಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಮುಖ್ಯ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದ ಆರು ಜನ ಅರ್ಚಕರು ನವ ಚಂಡಿಕಾ ಹೋಮದ ಧಾರ್ಮಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೇರಾಡಿ, ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ, ಕೆಎಂಎಫ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಉದ್ಯಮಿ ಜಯಶೀಲ ಶೆಟ್ಟಿ, ಮನೀಶ ಶೆಟ್ಟಿ, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ದೇವಸ್ಥಾನದ ಟ್ರಸ್ಟ್ ವತಿಯಿಂದ ಚಂದ್ರಶೇಖರ ಶೆಟ್ಟಿ ಮತ್ತು ಮಹೇಶ ಅವರು ಸತ್ಕರಿಸಿದರು.