ಅರಣ್ಯ ಇಲಾಖೆಯ ಯಶಸ್ವಿ ಕಾಯಾ೯ಚರಣೆಯೊಂದರಲ್ಲಿ , ನಾಣಚ್ಚಿ ಹಾಡಿ ವ್ಯಾಪ್ತಿಯಲ್ಲಿ ಮೇಯಲು ಬಿಟ್ಟಿದ್ದ 9 ಮೇಕೆಗಳನ್ನು ಬಲಿ ತೆಗೆದುಕೊಂಡಿದ್ದ ಹುಲಿಯನ್ನು ಸೆರೆ ಹಿಡಿಯಲಾಗಿದೆ. ಈ ವ್ಯಾಘ್ರ ಮೇಕೆಗಳನ್ನು ಮೇಯಿಸುತ್ತಿದ್ದ ವ್ಯಕ್ತಿಯ ಮೇಲೂ ದಾಳಿ ಮಾಡಲು ಮುಂದಾಗಿ ಗ್ರಾಮಸ್ಥರ ಜೀವಭಯಕ್ಕೆ ಕಾರಣವಾಗಿತ್ತು. ಹುಲಿಯನ್ನು ಸೆರೆಹಿಡಿಯುವಂತೆ ಒತ್ತಾಯಿಸಿ, ನಾಗರಹೊಳೆ ಅರಣ್ಯ ಕಚೇರಿ ಮುಂದೆ ನಾಗರಿಕರು ಪ್ರತಿಭಟನೆ ನಡೆಸಿದರು. ಗ್ರಾಮಸ್ಥರ ಪ್ರತಿಭಟನೆ ಹಿನ್ನಲೆಯಲ್ಲಿ ಸಾಕಾನೆಗಳ ಸಹಕಾರದಿಂದ ಅರಣ್ಯ ಇಲಾಖೆಯು ಗುರುವಾರ ಸಂಜೆ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಿತ್ತು.
ಮತ್ತಿಗೋಡು ಶಿಬಿರದ ಅಭಿಮನ್ಯು, ಭೀಮ ಸೇರಿದಂತೆ ಸಾಕಾನೆಗಳ ಮೂಲಕ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಆಡುಗಳನ್ನು ಬಲಿ ತೆಗೆದುಕೊಂಡಿದ್ದ ಸ್ಥಳದಲ್ಲೇ ಅಡಗಿದ್ದ ಹುಲಿಯನ್ನು ಪತ್ತೆ ಹಚ್ಚಿ ತಜ್ಞರ ನೆರವಿನಿಂದ ಅರಿವಳಿಕೆ ನೀಡಿ ಸೆರೆಹಿಡಿದರು.
ಸೆರೆಸಿಕ್ಕ ಹೆಣ್ಣು ಹುಲಿ ಅಂದಾಜು 10 ವಷ೯ ಪ್ರಾಯದ್ದಾಗಿದೆ. ವ್ಯಾಘ್ರ ಸೆರೆಯಾದ ಹಿನ್ನಲೆಯಲ್ಲಿ ನಾಣಚ್ಚಿ ಹಾಡಿ ವ್ಯಾಪ್ತಿಯ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದು ಸೆರೆಹಿಡಿಯಲಾದ ಹುಲಿಯನ್ನು ಮೈಸೂರು ಮೖಗಾಲಯಕ್ಕೆ ಸಾಗಿಸಲಾಗಿದೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ