spot_img
spot_img

ಮುನವಳ್ಳಿ ಕೋಟೆ ಆಂಜನೇಯ

Must Read

spot_img
- Advertisement -

ವನದ ಹುಣ್ಣಿಮೆ ಹನುಮ ಜಯಂತಿಯ ಸಡಗರ. ನಾಡಿನ ಎಲ್ಲ ಹನುಮಾನ್ ಮಂದಿರಗಳಲ್ಲಿ ಹನುಮಾನ್ ಹುಟ್ಟಿದ ಕ್ಷಣ ಗಳನ್ನು ಅವನನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಪೂಜೆ ಕಾರ್ಯಗಳು ನಡೆಯುವುದನ್ನು ಗಮನಿಸಬಹುದು.

ಎಲ್ಲಿ ಹನುಮ ದೇವಾಲಯಗಳಿವೆಯೊ ಅಲ್ಲೆಲ್ಲ ಹನುಮ ಜಯಂತಿ ಆಚರಣೆ ಜರುಗುತ್ತದೆ.ಹನುಮಂತ ಹಿಂದೂ ಧರ್ಮಗ್ರಂಥಗಳಲ್ಲೊಂದಾದ ರಾಮಾಯಣದಲ್ಲಿನ ಪ್ರಮುಖ ಪಾತ್ರಗಳಲ್ಲೊಬ್ಬ.ಹನುಮಂತನು ಕಿಷ್ಕಿಂದೆ ಯಲ್ಲಿ ಸುಗ್ರೀವನ ಜೊತೆಯಲ್ಲಿರುವಾಗ ಸೀತೆಯನ್ನು ಹುಡುಕಿಕೊಂಡು ಶ್ರೀರಾಮ ಅಲ್ಲಿಗೆ ಬಂದಾಗ ತನ್ನ ಸ್ವಾಮಿಯೊಡನೆ ಬೇಟಿಯಾಗುತ್ತದೆ. ಅಲ್ಲಿಂದ ಮುಂದೆ ರಾಮಾಯಣದ ಅಂತ್ಯದವರೆಗೂ ಹನುಮಂತನ ಪಾತ್ರ ತುಂಬ ಮಹತ್ವವನ್ನು ಪಡೆಯುತ್ತ ಸಾಗುವುದನ್ನು ನಾವು ಕಾಣುತ್ತೇವೆ.

ರಾಮಾಯಣದ ಅಂಜನೇಯನ ಪ್ರವೇಶದ ಸಂದರ್ಭದಿಂದ ಬರುವ ಕಾಂಡವನ್ನು ಸುಂದರ ಕಾಂಡ ಎಂದು ಕರೆಯಲಾಗಿದೆ.ಸೀತಾಮಾತೆಯನ್ನು ಹುಡುಕುವ ಪ್ರತಿ ಸಂದರ್ಭಗಳೂ ಜೊತೆಗೆ ರಾಮ-ರಾವಣರ ಯುದ್ದ ಸಂದರ್ಭದಲ್ಲಿ ಮೂರ್ಛಿತನಾದ ಲಕ್ಷ್ಮಣನನನ್ನು ಬದುಕಿಸಲು ಸಂಜೀವಿನಿ ಪರ್ವತ ಹೊತ್ತು ತರುವಲ್ಲಿ, ಲಂಕೆಗೆ ಸೇತುವೆ ನಿರ್ಮಿಸುವಲ್ಲಿ, ಜೊತೆಗೆ ಯುದ್ದದಲ್ಲಿ ಗೆದ್ದಾಗ ಸುದ್ದಿಯನ್ನು ಹೊತ್ತು ಸೀತಾಮಾತೆಯಲ್ಲಿಗೆ ಹೋಗುವವರೆಗೂ ನಡೆಯುವ ಪ್ರತಿಯೊಂದು ಘಟನೆಯಲ್ಲಿಯೂ ಹನುಮಂತನ ಪಾತ್ರವಿದೆ. ಅಷ್ಟೇ ಅಲ್ಲ ಲಂಕೆಗೆ ಪ್ರವೇಶ ಮಾಡಿ ವಿಭೀಷಣನ ಮನಃಪರಿವರ್ತನೆ ಮಾಡಿ ಅವನನ್ನು ರಾಮಭಕ್ತನನ್ನಾಗಿ ಮಾಡುವಲ್ಲಿ ಹನುಮಂತನ ಪಾತ್ರ ಬಹುಮುಖ್ಯವಾದುದು.

- Advertisement -

ಯುದ್ದ ಗೆದ್ದ ಮೇಲೆ ಸಣ್ಣ ಮಗುವಾಗಿ ಸೀತಾಮಾತೆಯ ತೊಡೆಯ ಮೇಲೆ ಮಲಗಿ ಅವಳಲ್ಲಿ ಮಾತೃ ಸ್ವರೂಪವನ್ನು ಪಡೆದವನು ಹನುಮಂತ. ಕಿಷ್ಕಿಂದಾ ಕಾಂಡದಿಂದ ಹಿಡಿದು ಬಹುಕಾಲ ದೂರವಿದ್ದ ಸೀತಾ ರಾಮರನ್ನು ಒಂದು ಮಾಡಿ ಶ್ರೀರಾಮ ಪಟ್ಟಾಭಿಷೇಕವನ್ನು ಕಣ್ತುಂಬ ನೋಡಿ ಆನಂದಿಸಿದವನು ಹನುಮಂತ. ಆಗ ಸೀತಾ ಮಾತೆಯು ಇವನನ್ನು ಕರೆದು ನೀನು ನನ್ನನ್ನು ನನ್ನ ಪತಿಯ ಹತ್ತಿರ ಸೇರಿಸಿದೆ. ಇದರ ಫಲವಾಗಿ ಶ್ರೀರಾಮನ ಕೀರ್ತಿ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೂ ನೀನು ಚಿರಂಜೀವಿ ಎಂದು ಆಶೀರ್ವಾದವನ್ನು ಮಾಡಿರುವಳು. ರಾಮ ಕಥೆಯೂ ರಾಮಾಯಣದ ಕೀರ್ತಿಯೂ ಉಳಿಯುವವರೆಗೂ ಈ ಭೂಮಿಯ ಮೇಲೆ ಇರತಕ್ಕದ್ದೆಂದು ಹನುಮಂತನಿಗೆ ದೊರಕಿದ ವರದಿಂದ ಅವರನು ಚಿರಂಜೀವಿಗಳಲ್ಲಿ ಒಬ್ಬನು.

ಶ್ರೀ ಹನುಮಂತನನ್ನು ಭಕ್ತಿ ಶೃದ್ದೆಯಿಂದ ಆರಾಧಿಸಿ ಆಧ್ಯಾತ್ಮಿಕ ಶಕ್ತಿ ಸಾಮರ್ಥ್ಯ ಗಳನ್ನು ಉದಾತ್ತ ಗುಣಗಳನ್ನು ಪಡೆಯ ಬಹುದು. ಇತಿಹಾಸವನ್ನು ಅವಲೋಕಿಸಿ ದಾಗ 16ನೆಯ ಶತಮಾನದಲ್ಲಿ ವಿಜಯನಗರ ಅರಸರ ರಾಜಗುರುಗಳಾದ ಶ್ರೀ ವ್ಯಾಸ ಸಾರ್ವ ಭೌಮರು ನಾಡಿನೆಲ್ಲೆಡೆ 732 ಹನುಮನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅವನ ಆರಾಧನೆಯನ್ನು ಜನಪ್ರೀಯ ಗೊಳಿಸಿದರು ಎಂಬುದನ್ನು ಓದುತ್ತೇವೆ.


ಕೋಟೆ ಆಂಜನೇಯ

- Advertisement -

ನಮ್ಮ ಬದುಕಿನ ಭೌಗೋಳಿಕ ಪರಿಸರವು ಮಾನವನ ನಾಗರಿಕತೆಯ ಮತ್ತು ಸಂಸ್ಕೃತಿಯ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಸಾಮ್ರಾಜ್ಯ ಕಟ್ಟುವ ಗುರುತರ ಜವಾಬ್ದಾರಿ ವಹಿಸಿದ ಕನ್ನಡಿಗ ಅರಸರೆಲ್ಲ ಅನೇಕ ಕೋಟೆಗಳ ನಿರ್ಮಾಣದಲ್ಲೂ ತಮ್ಮದೇ ಕಲಾಕೌಶಲ್ಯವನ್ನು ಹೊಂದಿದ್ದಾರೆ.
ಒಂದು ಕೋಟೆಯೆಂದರೆ ತಮ್ಮ ಆಳ್ವಿಕೆಯ ಅವಧಿ ಬೇರಾರಿಗೂ ಅಷ್ಟು ಸುಲಭವಾಗಿ ಒಳನುಸುಳಲು ಅವಕಾಶ ನೀಡದಂತೆ ಎಲ್ಲ ಸೌಕರ್ಯಗಳನ್ನು ಒಳಗೊಂಡಂತೆ ನಿರ್ಮಾಣಗೊಂಡ ವ್ಯವಸ್ಥಿತ ಕೋಟೆಗಳು ಕರ್ನಾಟಕದಲ್ಲಿವೆ.

ಮುನವಳ್ಳಿಯ ಕೋಟೆ ಕೂಡ ಹಾಳಾಗಿದ್ದರೂ ಕೂಡ ತನ್ನದೇ ಆದ ಐತಿಹ್ಯದೊಂದಿಗೆ ಭಗ್ನಾವಶೇಷಗಳಿಂದ ಚರಿತ್ರೆ ಹೇಳುವಂತಿದೆ. ಈ ಕೋಟೆ ಸಿಂಧೆ ಮಹಾರಾಜನ ಕಾಲಕ್ಕೆ ಕಟ್ಟಲ್ಪಟ್ಟಿತೆಂದು ಇಪ್ಪತ್ತೆರಡು ಎಕರೆಯಷ್ಟು ವಿಸ್ತಾರವಾಗಿರುವ ಈ ಕೋಟೆಯಲ್ಲಿ ದೇವಗಿರಿ ಯಾದವ ಕಾಲದ ಶಾಸನ ಹೊಂದಿದೆ. ಇಲ್ಲಿ ಉಡಚವ್ವ ದೇವಾಲಯ ಹಾಗೂ ಮಾರುತಿ ದೇವಾಲಯಗಳಿದ್ದು ಅರಮನೆ ಯ ಅವಶೇಷಗಳೆಲ್ಲ ಹಾಳಾಗಿವೆ.

ನದಿ ದಡದ ಸುತ್ತಲೂ ಎಲ್ಲೆಡೆ ಕೋಟೆಯ ಅವಶೇಷಗಳು ಕಾಣುತ್ತವೆ. ಮುನವಳ್ಳಿ ಗ್ರಾಮ ಈ ಕೋಟೆಯ ಮೂಲಕ ಎಲ್ಲ ಕಡೆಗೆ ಅಗಸಿ ಬಾಗಿಲು ಹೊಂದಿದ್ದು ಸೂಲಕಟ್ಟಿ ಅಗಸಿ ಹಾಗೂ ಹಿರೇ ಅಗಸಿ(ಮುಖ್ಯ ದ್ವಾರ) ತೊರಗಲ್ ಅಗಸಿಗಳಿದ್ದು ಮುಖ್ಯದ್ವಾರ ಅಗಸಿ ಬಾಗಿಲನ್ನು ತಗೆದು ಆಧುನಿಕ ಕಟ್ಟಡ ವಿನ್ಯಾಸದಲ್ಲಿ ನಿರ್ಮಿಸಲಾಗಿದ್ದು ಯಾವುದೇ ದಿಕ್ಕಿನಿಂದ ಪಯಣಿಸಿದರೂ ಬುರುಜುಗಳು ಹೊಂದಿದ್ದ ಕೋಟೆಯ ಅವಶೇಷಗಳು ಕಾಣುತ್ತವೆ.ಇದು ಎರಡು ಸುತ್ತಿನ ಕೋಟೆ.

ಕೋಟೆಯ ದಕ್ಷಿಣಕ್ಕೆ ಹರಿಯುವ ಮಲಪ್ರಭಾ ನದಿ ಹರಿದು ವೈರಿಗಳ ಆಕ್ರಮಣ ತಡೆಗಟ್ಟಿ ನೈಸರ್ಗಿಕ ರಕ್ಷಣೆ ನೀಡಿದೆ. ಸುಮಾರು 500 ಅಡಿ ಕೋಟೆಯ ಗೋಡೆ ಚಾಚಿಕೊಂಡಿದ್ದು ಮುಖ್ಯ ರಹದಾರಿ ಪೂರ್ವದ ಅಂಚಿನಲ್ಲಿ “ವಾಡೆ” ಅರಮನೆ ಭಗ್ನಾವಸ್ಥೆ ಹೊಂದಿದ್ದು ಅಚ್ಚುಕಟ್ಟಾದ ಕೆಂಪುಕಲ್ಲು, ನಚ್ಚುಗಾರೆಗಳಿಂದ ಸುವ್ಯವಸ್ಥಿತವಾಗಿ ಕಟ್ಟಲಾದ ಗೋಡೆ.ಅಲ್ಲಲ್ಲಿ ಜೋಡಿಸಿರುವ ಬುರುಜುಗಳು (15-20 ಅಡಿ ಎತ್ತರ, ಕೆಳಭಾಗದಲ್ಲಿ 10 ಅಡಿ ಅಗಲ) ಮಲಪ್ರಭಾ ನದಿಯಿಂದ ಒಳಸೇರುವ ನೀರಿನ ಕಂದಕವು ಪೂರ್ವ ದಕ್ಷಿಣ ಮತ್ತು ಉತ್ತರ ದಿಶೆಗಳಲ್ಲಿ ಅಳವಡಿಸಲ್ಪಟ್ಟಿದ್ದು ಕೋಟೆಗೆ ರಕ್ಷಣೆ ನೀಡಿದೆ.

ಒಂದು ಕಡೆ ನೀರು, ಮೂರುಕಡೆ ನೆಲ ಇದ್ದು ಇದೊಂದು ಮಹತ್ವದ ಕೋಟೆಯಾಗಿದೆ. ಕೋಟೆಯೊಳಗೆ ಪ್ರವೇಶಿಸಲು ಕೂಡ ಮಹಾದ್ವಾರವಿದ್ದು ಕೋಟೆಯಲ್ಲಿ ಪುರಾತನ ಬಾವಿಯಿದೆ. ಶಿಲಾಶಾಸನದಲ್ಲಿ ಶಕೆ 1174 ಜೇಷ್ಟ ತಿಥಿಯಂದು ಲಾಕುಲ ಶೈವ ಪದ್ದತಿಯ ಉಡಚವ್ವ ದೇವಾಲಯ ನಿರ್ಮಾಣವಾಗಿತ್ತಂದು. ಈ ಕೋಟೆಯಲ್ಲಿ ಸುಂದರ ಹೂ ತೋಟವನ್ನು ನಿರ್ಮಿಸುವ ಮೂಲಕ ರಾಜರ ವಿಶ್ರಾಂತಿ ತಾಣವಾಗಿ ಇದನ್ನು ಬಳಸಲಾಗುತ್ತಿತ್ತು ಎಂಬ ವಿವರಗಳಿವೆ.

ಇಲ್ಲಿ ಪುರಾತನವಾದ ಬಾವಿಯಿದೆ.ಅದು ಈಗ ಶಿಥಿಲಾವಸ್ಥೆಯಲ್ಲಿದೆ.ಬಾವಿಯ ಹತ್ತಿರ ಅದ್ಬುತ ಶಿಲ್ಪಕಲೆ ಹೊಂದಿದ ಅಂಜನೇಯ ದೇವಾಲಯವಿದೆ.ಈ ದೇವಾಲಯ ಕೆತ್ತನೆ ಶಿಲ್ಪಕಲೆ ಎಂತಹವರನ್ನೂ ಬೆರಗಾಗಿಸುವಂತಿದೆ. ಇಲ್ಲಿನ ಹೂ ಗೊಂಚಲಾಕೃತಿ ಕೆತ್ತನೆ.ನುಣುಪಾದ ಕಂಬ.ಪ್ರದಕ್ಷಿಣ ಪಥದಲ್ಲಿ ಕಂಡು ಬರುವ ಗೋಡೆಯ ಮೇಲಿನ ಕೆತ್ತನೆ.ನಿಜಕ್ಕೂ ಮನಮೋಹಕ.ಇಲ್ಲಿರುವ ಅಂಜನೇಯ ವಿಗ್ರಹವೂ ಕೂಡ ಕಪ್ಪು ಶಿಲೆಯಿಂದ ಕೂಡಿದೆ.

ಇಷ್ಟೆಲ್ಲ ವೈಶಿಷ್ಟ್ಯ ಹೊಂದಿದ ಹನುಮಾನ ಮಂದಿರಗಳು ಮುನವಳ್ಳಿಯಲ್ಲಿ ಇರುವುದು ವಿಶೇಷ. ಬಾಲದಲ್ಲಿ ಗಂಟೆಯನ್ನು ಹೊಂದಿದ್ದರೆ ಅವುಗಳು ವ್ಯಾಸರಾಜರು ಪ್ರತಿಷ್ಠಾಪಿತ ಪ್ರಾಣದೇವರುಗಳು ಎಂಬ ಪ್ರತೀತಿ.
ಇಂದಿಗೂ ಮುನಿಪರಂಪರೆಯನ್ನು ಮಠ ಮಾನ್ಯಗಳನ್ನು ಮುನವಳ್ಳಿ ಹೊಂದಿದೆ. ಅದರಲ್ಲೂ ತಪೋನುಷ್ಠಾನಕ್ಕೆ ಹೇಳಿ ಮಾಡಿಸಿದ ಮಲಪ್ರಭಾ ನದಿ ದಡವೂ ಕೂಡ ಕಾರಣ. ವಿಷ್ಣುತೀರ್ಥರು ಅನುಷ್ಠಾನಗೈದ ತಪೋಭೂಮಿ ಮುನವಳ್ಳಿ.

ಈ ಹಿನ್ನೆಲೆಯಲ್ಲಿ ಮುನವಳ್ಳಿಯ ಕುರಿತು ಇನ್ನೂ ಹೆಚ್ಚಿನ ಸಂಶೋಧನೆಯ ಅಗತ್ಯವೂ ಇರುವುದು.ರಾಮನ ವನವಾಸಕ್ಕೆ ಕುರುಹಾಗಿ ಹತ್ತಿರದ ಶಭರಿಕೊಳ್ಳ ಐತಿಹಾಸಿಕ ಕುರುಹಾಗಿದೆ.ಸಮರ್ಥ ರಾಮದಾಸರು ಸಂಚರಿಸಿದ ಸ್ಥಳ ಮೂಡಲಗಿ ಸಮೀಪದ ಕಲ್ಲೋಳಿ ಅಂಜನೇಯನ ದೇವಾಲಯ ವನ್ನು ಹತ್ತಿರದಲ್ಲಿ ಮುನವಳ್ಳಿ ಹೊಂದಿದೆ.

ಕೊಲ್ಲಾಪುರದ ಸಿಂಧೆ ಮಹಾರಾಜರ ನಂಟನ್ನೂ ಕೂಡ ಮುನವಳ್ಳಿ ಹೊಂದಿರುವ ಕಾರಣ ಮರಾಠ ಸಾಮಂತರು ಭೇಟಿ ನೀಡುತ್ತಿದ್ದ ಸ್ಥಳ. ಹೀಗಾಗಿ ಸರ್ವಧರ್ಮಗಳ ಸಮನ್ವಯ ತಾಣದಲ್ಲಿ ವೈಶಿಷ್ಟ್ಯಪೂರ್ಣ ಹನುಮಾನ್ ಮಂದಿರಗಳು ಗಮನ ಸೆಳೆಯುತ್ತಿವೆ. ಎಲ್ಲ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ಇಂದು ವಿಶೇಷವಾಗಿ ಜರಗುವ ಮೂಲಕ ಇಂದಿಗೂ ಭಕ್ತಿ ಸಂಗಮದ ತಾಣವಾಗಿ ಮುನವಳ್ಳಿ ಕಂಗೊಳಿಸುತ್ತಿರುವುದು.
ಹನುಮ ಜಯಂತಿ ಸಂದರ್ಭದಲ್ಲಿ ಕೋಟೆ ಆಂಜನೇಯನ ನೆನಪು ಈ ಪುಟ್ಟ ಬರಹದ ಮೂಲಕ.

ವೈ.ಬಿ.ಕಡಕೋಳ
ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರು
ಮುನವಳ್ಳಿ
ತಾಲೂಕ;ಸವದತ್ತಿ,  ಜಿಲ್ಲೆ;ಬೆಳಗಾವಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಪೋಶೆಟ್ಟಿಹಳ್ಳಿಯಲ್ಲಿ ವೈಭವದ ಹನುಮ ಜಯಂತಿ ಆಚರಣೆ

  ಚಿಕ್ಕಬಳ್ಳಾಪುರ ಜಿಲ್ಲೆ ಮಂಚೇನಹಳ್ಳಿ ತಾಲ್ಲೂಕಿನ ಪಂಚ ಗಿರಿಗಳ ಮಧ್ಯೆ ಇರುವ ಉತ್ತರ ಪಿನಾಕಿನಿ ನದಿ ತೀರದ  ಪೋಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ವ್ಯಾಸರಾಜ ರಿಂದ ಪ್ರತಿಷ್ಠಿತ...
- Advertisement -

More Articles Like This

- Advertisement -
close
error: Content is protected !!
Join WhatsApp Group