ಸಿಂದಗಿ: ಕೃಷಿಕ ಸಮಾಜವು ರೈತರ ಮತ್ತು ಕೃಷಿ ಇಲಾಖೆಯ ನಡುವೆ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಿಂದಗಿ ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪಗೌಡ ಬಿರಾದಾರ ಹೇಳಿದರು.
ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡ ಸಿಂದಗಿ, ಆಲಮೇಲ ಹಾಗೂ ದೇವರಹಿಪ್ಪರಗಿ ತಾಲೂಕಿನ ಕೃಷಿಕ ಸಮಾಜದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿಕ ಸಮಾಜದಿಂದ ರೈತರಿಗೆ ಅಗತ್ಯ ನೆರವು ನೀಡುತ್ತೇವೆ ಮತ್ತು ಕೃಷಿ ಸಂಬಂಧಿತ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸುತ್ತೇವೆ. ಸರ್ಕಾರದ ಸೌಲಭ್ಯಗಳನ್ನು ಸಮಾಜದ ಕಟ್ಟ ಕಡೆಯ ರೈತನಿಗೂ ತಲುಪಿಸುವ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಹೇಳಿದರು.
ಕೃಷಿಕ ಸಮಾಜದ ಆಲಮೇಲ ತಾಲೂಕಿನ ಅಧ್ಯಕ್ಷ ನಿಂಗನಗೌಡ ಪಾಟೀಲ, ದೇವರಹಿಪ್ಪರಗಿ ತಾಲೂಕಾ ಅಧ್ಯಕ್ಷ ಸಿದ್ದಪ್ಪ ಆನಂದಿ ಮಾತನಾಡಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸೌಲಭ್ಯಗಳ ಕುರಿತು ಮಾಹಿತಿ ನೀಡಿದಲ್ಲಿ ರೈತರಿಗೆ ಮಾಹಿತಿ ನೀಡಲು ಸಹಕಾರಿ ಯಾಗುತ್ತದೆ ಎಂದು ಹೇಳಿದರು.
ತಾಲೂಕಿನ ಕೃಷಿಕ ಸಮಾಜದ ಆಢಳಿತ ಮಂಡಳಿಯ ನಿರ್ದೇಶಕರಾದ ಅಶೋಕ ಅಲ್ಲಾಪೂರ, ಬಿ.ಜಿ. ನೆಲ್ಲಗಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ರಮೇಶ ಪೂಜಾರ ಮಾತನಾಡಿ, ರೈತರ ಸಮಸ್ಯೆಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಸಂಪರ್ಕ ಕೊಂಡಿಯಾಗಿ ಕೃಷಿಕ ಸಮಾಜವು ಕೆಲಸ ನಿರ್ವಹಿಸುತ್ತಿದೆ. ಸ್ವತಂತ್ರ ಪೂರ್ವದಲ್ಲೇ ಪ್ರಾರಂಭವಾದ ಕೃಷಿಕ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ವೈಜ್ಞಾನಿಕ ಬೆಳೆ ಪದ್ಧತಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳುವುದರ ಕುರಿತು ರೈತರಿಗೆ ತರಬೇತಿ ನೀಡಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಪ್ರಶಾಂತ ಸಾಣಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಸಚಿನ ಉಟಗಿ, ತಾಂತ್ರಿಕ ಕೃಷಿ ಅಧಿಕಾರಿ ಶಿವಾನಂದ ಹೂವಿನಹಳ್ಳಿ ಅವರು ಇಲಾಖೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಸರ್ಕಾರದ ಪ್ರತಿಯೋಜನೆಗಳನ್ನು ಫಲಾನುಭವಿ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುತ್ತೇವೆ. ಹೊಲಗಳಿಗೆ ಹೋಗಿ ಅಲ್ಲಿ ರೈತರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಉಪಾಧ್ಯಕ್ಷ ಬಸಯ್ಯ ಹಿರೇಮಠ, ಗುರುಪಾದ ನೆಲ್ಲಗಿ, ದೇವೇಂದ್ರ ಬಡಿಗೇರ, ಗುರುಲಿಂಗಪ್ಪ ನವೆರಾಕ, ರಾಮನಗೌಡ ಬಿರಾದಾರ, ಶಶಿಕಲಾ ಬಿರಾದಾರ, ಬಿ.ಜಿ. ಪಾಟೀಲ, ಆರ್.ಜಿ. ಬಡಾನೂರ, ಆರ್.ಕೆ. ಪಾಟೀಲ, ಸಿದ್ದಯ್ಯ ಮಠ, ಸೋಮನಗೌಡ ಪಾಟೀಲ, ವಿ.ಎ. ಕನ್ನೊಳ್ಳಿ, ನಾಗಪ್ಪ ಬಿರಾದಾರ, ಸುರೇಶ ಬಿರಾದಾರ ಸಭೆಯಲ್ಲಿ ಭಾಗವಹಿಸಿದ್ದರು.

