ಭಾರತ ಸರ್ಕಾರದ ಉನ್ನತ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ
ಬೆಂಗಳೂರು- ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು ಅಳವಡಿಸಿಕೊಂಡು ರಾಷ್ಟ್ರನಿರ್ಮಾಣಕ್ಕೆ ಶ್ರೇಷ್ಠ ಕೊಡುಗೆ ನೀಡುತ್ತಿರುವ ಬೆಂಗಳೂರಿನ ಕೆ.ನಾರಾಯಣಪುರದ ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ) ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಜುಲೈ 08, 2025ರಂದು “ಕ್ರಿಸ್ತು ಜಯಂತಿ ಡೀಮ್ಡ್ ಟು ಬಿ ಯೂನಿವರ್ಸಿಟಿ” ಸ್ಥಾನಮಾನದ ಮಾನ್ಯತೆಯನ್ನು ಪಡೆದುಕೊಂಡಿದೆ.
ಕ್ರಿಸ್ತು ಜಯಂತಿ ಕಾಲೇಜು 1999ರಲ್ಲಿ ಕಾರ್ಮೆಲೈಟ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (CMI) ನ ಬೋಧಿ ನಿಕೇತನ ಟ್ರಸ್ಟ್ ಅಡಿಯಲ್ಲಿ
ಸ್ಥಾಪನೆಗೊಂಡಿರುವ ಸಂಸ್ಥೆಯಾಗಿದೆ. ಇದುವರೆಗೆ ಉನ್ನತ ಶಿಕ್ಷಣದಲ್ಲಿ 26 ವರ್ಷಗಳ ಸಮರ್ಪಿತ ಸೇವೆ ಸಲ್ಲಿಸಿ, ನಿರಂತರ ನಾವೀನ್ಯತೆಯನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಯಶಸ್ಸನ್ನು ಸಾಧಿಸಿದೆ. ಇಂತಹ ಕಾಲೇಜಿಗೆ ವಿಶ್ವವಿದ್ಯಾಲಯದ ಹೊಸ ಸ್ಥಾನಮಾನ ದೊರೆತಿರುವುದು ಐತಿಹಾಸಿಕ ಸಾಧನೆಯ ಮೈಲುಗಲ್ಲಾಗಿದೆ. ಭವಿಷ್ಯದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯವು ತನ್ನ ಶೈಕ್ಷಣಿಕ ಪರಿಧಿಯನ್ನು ವಿಸ್ತರಿಸಿ, ಸರ್ವತೋಮುಖ ಅಧ್ಯಯನಶೀಲತೆಯನ್ನು ಅಳವಡಿಸಿಕೊಂಡು ಜಾಗತಿಕ ಶಿಕ್ಷಣ ಕ್ಷೇತ್ರಕ್ಕೆ ತನ್ನದೆ ಆದ ಸಮಾಜೋಪಯೋಗಿ ಕೊಡುಗೆ ನೀಡಲು ಅಣಿಯಾಗುತ್ತಿದೆ. ಜೊತೆಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಹಾಗೂ ವಿಕಸಿತ್ ಭಾರತ್ 2047ರ ಗುರಿಗಳು ಹಾಗೂ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಮುಂದುವರೆಸಲಿದೆ” ಎಂದು ಕಾಲೇಜಿನ ಪ್ರಾಂಶುಪಾಲರಾದ ರೆವರೆಂಡ್ ಫಾದರ್ ಡಾ. ಅಗಸ್ಟಿನ್ ಜಾರ್ಜ್ ಅವರು ಹರ್ಷಿಸಿದರು.
ವಿಶ್ವವಿದ್ಯಾಲಯ ಸ್ಥಾನಮಾನವನ್ನು ಬಳಸಿಕೊಂಡು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಭವಿಷ್ಯ ಭಾರತಕ್ಕೆ ಸಮರ್ಥ ನಾಯಕರು ಮತ್ತು ಹೊಸ ಸಂಶೋಧಕರನ್ನು ಸಮಾಜಕ್ಕೆ ನೀಡಲು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯವು ಪ್ರಯತ್ನಿಸಲಿದೆ. ಭಾರತ ಸರ್ಕಾರದಿಂದ ದೊರೆತ ಈ ಉನ್ನತ ಸ್ಥಾನಮಾನ ಕ್ರಿಸ್ತು ಜಯಂತಿ ಕಾಲೇಜಿನ ಗಮನಾರ್ಹ ಸಾಧನೆಗಳ ಅಡಿಪಾಯದ ಮೇಲೆ ನಿಂತಿದೆ. ಈಗಾಗಲೇ ಕ್ರಿಸ್ತು ಜಯಂತಿ ನ್ಯಾಕ್ ವತಿಯಿಂದ A++ ಅತ್ಯುನ್ನತ ಗ್ರೇಡ್ ನೊಂದಿಗೆ ಮಾನ್ಯತೆ ಪಡೆದಿದೆ. ನ್ಯಾಕ್ ಮೂರನೇ ಆವೃತ್ತಿಯಲ್ಲಿ 3.78 ರ CGPA ಅಂಕಗಳೊಂದಿಗೆ ದೇಶದ ಉನ್ನತ ಸಂಸ್ಥೆಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಅಲ್ಲದೇ 2024ರಲ್ಲಿ ಶಿಕ್ಷಣ ಸಚಿವಾಲಯದಿಂದ NIRF ಶ್ರೇಯಾಂಕದಲ್ಲಿ 60ನೇ ಸ್ಥಾನದಲ್ಲಿದೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಗೋಲ್ಡ್ ರೇಟಿಂಗ್ ಕ್ಯಾಂಪಸ್ ಸ್ಥಾನಮಾನವನ್ನು ಸಹ ಪಡೆದುಕೊಂಡಿದೆ. ಅತ್ಯುತ್ತಮ ಸ್ವಚ್ಛ ಮತ್ತು ಸ್ಮಾರ್ಟ್ ಕ್ಯಾಂಪಸ್ ಎಂದು ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಯನ್ನೂ ಗಳಿಸಿದೆ. ಇಂಡಿಯಾ ಟುಡೇ ಸಮೀಕ್ಷೆಯ ಪ್ರಕಾರ, ಕ್ರಿಸ್ತು ಜಯಂತಿ ಎಲ್ಲಾ ಸ್ಟ್ರೀಮ್ಗಳಲ್ಲಿ ಶತಮಾನದ ನಂ.1 ಉದಯೋನ್ಮುಖ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ತಿಳಿಸಿದರು.
ಶೈಕ್ಷಣಿಕ ಕ್ಷೇತ್ರವನ್ನು ಹೊರತುಪಡಿಸಿ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಅತ್ಯುತ್ತಮ ಸಾಧನೆಗಳನ್ನು ತನ್ನದಾಗಿಸಿಕೊಂಡಿದೆ. ಸತತ 17ನೇ ಬಾರಿಗೆ ದಕ್ಷಿಣ ಅಂತರ ವಿಶ್ವವಿದ್ಯಾಲಯ ಸಾಂಸ್ಕೃತಿಕ ಉತ್ಸವದಲ್ಲಿ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ. ಈಗ ಕ್ರಿಸ್ತು ಜಯಂತಿ ಡೀಮ್ಡ್ ವಿಶ್ವವಿದ್ಯಾಲಯವಾಗಿ ಪರಿವರ್ತನೆಗೊಂಡು, ಸಂಸ್ಥೆಯು ಹೊಸ ಅಧ್ಯಾಯದ ಹೊಸ್ತಿಲಲ್ಲಿ ನಿಂತಿದೆ. ಅತ್ಯಾಧುನಿಕ ಕ್ರಿಯಾಶೀಲ ಯೋಜನೆಗಳನ್ನು ಅಳವಡಿಸಿಕೊಂಡು ಜಾಗತಿಕ ಸಹಕಾರದೊಂದಿಗೆ ಸಮಾಜಕ್ಕೆ ನಿರಂತರ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವ ಮೂಲಕ ಮುನ್ನಡೆಯಲಿದೆ. ಕಾಲೇಜಿನ ಧ್ಯೇಯವಾಕ್ಯವಾದ “ಬೆಳಕು ಮತ್ತು ಸಮೃದ್ಧಿ”ಗೆ ನಿಷ್ಠರಾಗಿ ದುಡಿದು ವಿಶ್ವವಿದ್ಯಾಲಯದ ಸಾಧನೆಗೆ ಕಾರಣರಾದ ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಮತ್ತು ಈ ಕಾಲೇಜಿನ ಅವಿಭಾಜ್ಯ ಅಂಗವಾಗಿರುವ ಎಲ್ಲರಿಗೂ ಪ್ರಾಂಶುಪಾಲರು ಅಭಿನಂದನೆಗಳು ಹಾಗೂ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.