ಹೆಣ್ಮಕ್ಕಳೇ ಸ್ಟ್ರಾಂಗ್ ಗುರೂ…; ಗಡಿನಾಡ ‘ಅಕ್ಕ’ ಪಡೆ ಇನ್ನು ರಾಜ್ಯ ವ್ಯಾಪಿ

Must Read

ಬೀದರ : ಬೀದರ್ ಜಿಲ್ಲೆಯ ಮಹಿಳೆಯರ ರಕ್ಷಣೆಗಾಗಿ ವಿಶೇಷವಾಗಿ ರೂಪಿಸಲಾದ, ಅತ್ಯಾಧುನಿಕ ‘ಅಕ್ಕ’ ಪಡೆ ವಾಹನಕ್ಕೆ ಅರಣ್ಯ,‌ ಪರಿಸರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಬೀದರ್ ನಗರದ ಪೋಲಿಸ್ ಪರೇಡ್ ಮೈದಾನದಲ್ಲಿ ಅಕ್ಕ ಪಡೆ ವಾಹನ ಲೋಕಾರ್ಪಣೆಗೊಳಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಮತ್ತು ಮಹಿಳೆಯರಿಗೆ ರಕ್ಷಣೆ ನೀಡುವುದು. ಕಿರುಕುಳ ತಡೆಯುವುದು ಹಾಗೂ ತುರ್ತು ಸಂದರ್ಭದಲ್ಲಿ ತಕ್ಷಣವೇ ಸ್ಪಂದಿಸಲು ಈ ಪಡೆ ಸಿದ್ಧವಾಗಿದೆ‌.

ಅಕ್ಕ ಪಡೆಯ ಮಹಿಳಾ ಸಿಬ್ಬಂದಿಗಳು ರಕ್ಷಣೆ ಮಾಡಲು ಕರಾಟೆ ಸೇರಿದಂತೆ ಕೆಲವು ಪ್ರದರ್ಶನಗಳನ್ನು ಮಾಡಿ ಗಮನ ಸೆಳೆದರು. ವಿಶೇಷ ತರಬೇತಿ ಪಡೆದ ಈ ಅಕ್ಕ ಪಡೆಯು ಶಾಲಾ, ಕಾಲೇಜು, ವಸತಿ ನಿಲಯ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಪ್ರದೇಶಕ್ಕೆ ಗಸ್ತು ಹಾಕಲಿದೆ‌. ಅಕ್ಕ ಪಡೆಯು ಮಹಿಳೆಯರನ್ನು ಯಾವ ರೀತಿ ರಕ್ಷಣೆ ಮಾಡುತ್ತದೆ, ಮಹಿಳೆಯರು ಸಹಾಯವಾಣಿಗೆ ಸಂಪರ್ಕಿಸುವ ಬಗ್ಗೆ ಜಾಗೃತಿ ಮೂಡಿಸಲಾಯಿತು.

ನಂತರ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಅಕ್ಕ ಪಡೆ ಅಂದ್ರೆ ಅದೊಂದು ಭರವಸೆ, ಮಹಿಳೆಯರ ಪಾಲಿನ ಸಂಜೀವಿನಿ ಆಗಿದೆ. ಜಿಲ್ಲೆಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ನಿರ್ಭಯವಾಗಿ ಓಡಾಡಬೇಕು. ಯಾವುದೇ ಕಿರುಕುಳ ಅಥವಾ ಅಹಿತಕರ ಘಟನೆ ನಡೆದರೆ ತಕ್ಷಣ ಅಕ್ಕ ಪಡೆಗೆ ಸಂಪರ್ಕಿಸಿ, ಆಗ ನಿಮ್ಮ ನೆರವಿಗೆ ಬಂದು ರಕ್ಷಣೆ ಮಾಡಲಿದೆ ಎಂದು ಹೇಳಿದರು.

ಈ ಪಡೆಗಾಗಿ ಮಹಿಳಾ ಪೊಲೀಸರನ್ನು ಒಳಗೊಂಡ ತಂಡವನ್ನು ರಚಿಸಿ, ಅಗತ್ಯ ತರಬೇತಿಯೊಂದಿಗೆ ಸನ್ನದ್ಧಗೊಳಿಸಲಾಗುತ್ತಿದೆ. ಪುಡಾರಿಗಳು, ಬೀದಿ ಕಾಮಣ್ಣರಿಂದ ಮಹಿಳೆಯರು, ಮಕ್ಕಳ ರಕ್ಷಣೆ, ದೌರ್ಜನ್ಯ ತಡೆಗಟ್ಟುವ ನೀಡುವ ನಿಟ್ಟಿನಲ್ಲಿ ಬೀದರ ಜಿಲ್ಲಾ ಪೊಲೀಸ್‌ ಇಲಾಖೆ 2023ರಲ್ಲಿಈ ‘ಅಕ್ಕ ಪಡೆ’ಯನ್ನು ಅಸ್ತಿತ್ವಕ್ಕೆ ತಂದಿದೆ. ಚುನಾವಣೆ ಕರ್ತವ್ಯ, ಸರ್ಕಾರಿ ಮತ್ತು ರಾಜಕೀಯ ಸಮಾರಂಭಗಳಿಗೆ ಮಾತ್ರ ಬಳಸಿಕೊಳ್ಳುತ್ತಿದ್ದ ಮಹಿಳಾ ಪೊಲೀಸರನ್ನು ಮಹಿಳೆಯರ ರಕ್ಷಣೆಗೆ ಕರ್ತವ್ಯ ನಿರ್ವಹಣೆ ಪ್ರಯೋಗ ನಡೆಸಿತ್ತು.

ಈ ಪಡೆ ಕೆಲಸ ಜಿಲ್ಲೆ ಜನರ ಮನ ಗೆದ್ದಿದ್ದಲ್ಲದೇ ಜುಲೈನಲ್ಲಿ ಬೀದರಗೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳಕರ್‌ ಅವರ ಗಮನ ಸೆಳೆದಿತ್ತು. ಅಕ್ಕ ಪಡೆ ಮಾದರಿಯನ್ನು ರಾಜ್ಯಾದ್ಯಂತ ಆರಂಭಿಸುವುದಾಗಿ ಘೋಷಿಸಿದ್ದರು. ಮಹಿಳಾ- ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ರಾಜ್ಯದಲ್ಲಿ ಈ ಅಕ್ಕ ಪಡೆ ಕಾರ್ಯನಿರ್ವಹಿಸಲು ಯೋಜನೆ ರೂಪಿಸಲಾಗಿದೆ.

ಮೊದಲ ಹಂತದಲ್ಲಿ ಕಲಬುರ್ಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಸೇರಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ಜತೆಗೆ ಬೆಂಗಳೂರು, ಮೈಸೂರು, ಬೆಳಗಾವಿ, ಉಡುಪಿ, ಮೈಸೂರು, ಮಂಗಳೂರು ಸೇರಿದಂತೆ ಆಯ್ದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿದೆ. ನಂತರ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಮಹತ್ವಾಕಾಂಕ್ಷಿ ಯೋಜನೆಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನಕ್ಕೆ ಮನವಿ ಸಲ್ಲಿಸಲಾಗಿದೆ.

ಏನಿದು `ಅಕ್ಕ ಪಡೆ’?:  ಬೀದರನಲ್ಲಿ ಮಹಿಳಾ ಠಾಣೆಯ ಮೇಲುಸ್ತುವಾರಿಯಲ್ಲಿ ಕಾರ್ಯನಿರ್ವಹಿಸುವ ಅಕ್ಕ ಪಡೆಯಲ್ಲಿ ತಲಾ ಒಬ್ಬರು ಎಎಸ್‌ಐ, ಮುಖ್ಯ ಪೇದೆ ಮತ್ತು 8 ಜನ ಪೇದೆಗಳನ್ನು ಒಳಗೊಂಡಿದೆ. ಪಡೆಗಾಗಿ ಪ್ರತ್ಯೇಕ ವಾಹನವನ್ನು ನೀಡಲಾಗಿದ್ದು, ಇಬ್ಬರು ಚಾಲಕರನ್ನು ನೇಮಿಸಲಾಗಿದೆ. ಜತೆಗೆ ಕಮಾಂಡೋ ಸಮವಸ್ತ್ರ ವನ್ನು ನೀಡಲಾಗಿದೆ. ಬೆಳಿಗ್ಗೆ 7ರಿಂದ ಸಂಜೆ 8ರವರೆಗೆ ಎರಡು ಪಾಳಿಯಲ್ಲಿ ಈ ತಂಡ ಕೆಲಸ ನಿರ್ವಹಿಸುತ್ತಿದೆ. ಆದರೆ, ಈಗ ವಿಸ್ತರಣೆಯಾಗುತ್ತಿರುವ ಜಿಲ್ಲೆಗಳಲ್ಲಿ ಪೊಲೀಸ್‌ ಹಾಗೂ ಎನ್‌ಸಿಸಿ ಕೆಡೆಟ್‌ ಗಳ ಸಹಯೋಗದಲ್ಲಿ ಈ ಪಡೆ ಕೆಲಸ ಮಾಡಲಿದೆ.

ಎನ್‌ಸಿಸಿ “ಸಿ’ ಪ್ರಮಾಣ ಪತ್ರ ಹೊಂದಿರುವ ಮಹಿಳಾ ಕೆಡೆಟ್‌ಗಳಿಗೆ ಪ್ರತಿ ತಿಂಗಳು ಗೌರವಧನ ಮತ್ತು ಕಮಾಂಡೊ ಪಡೆಯ ವಸ್ತ್ರ ನೀಡಲು ನಿರ್ಧರಿಸಲಾಗಿದೆ. ಬೀದರ ನಗರ ಪ್ರದೇಶದ ಜತೆಗೆ ಸುತ್ತಲಿನ ಹೋಬಳಿ ವ್ಯಾಪ್ತಿಯಲ್ಲಿಯೂ ಈ ಪಡೆ ಸದಾ ಅಲರ್ಟ್‌ ಆಗಿರುತ್ತದೆ. ವಿಶೇಷವಾಗಿ ಶಾಲಾ- ಕಾಲೇಜು, ಬಸ್‌ ನಿಲ್ದಾಣ, ಮಾಲ್‌ಗ‌ಳು, ಉದ್ಯಾನವನ, ದೇವಸ್ಥಾನ ಸೇರಿದಂತೆ ಜನದಟ್ಟಣೆ ಪ್ರದೇಶಗಳಿಗೆ ಗಸ್ತು ಹೊಡೆದು, ಕಿಡಿಗೇಡಿಗಳ ಮೇಲೆ ನಿಗಾ ವಹಿಸುತ್ತದೆ. ಗಸ್ತು ವೇಳೆ ಯುವತಿಯರು, ವಿದ್ಯಾರ್ಥಿಗಳನ್ನು ಚುಡಾಯಿಸುವ, ಕೀಟಲೆ ಮಾಡುವ ಮತ್ತು ಅಸಭ್ಯ ವರ್ತನೆ ತೋರುವ ಪುಡಾರಿಗಳನ್ನು ಹಿಡಿದು ತಕ್ಕ ಪಾಠ ಕಲಿಸುತ್ತಾರೆ. ದೂರುಗಳು ಬಂದರೆ ತಕ್ಷಣಕ್ಕೆ ಕಾರ್ಯಾಚರಣೆಗೆ ಇಳಿಯುವ ಪೊಲೀಸರು ಬುದ್ದಿವಾದ ಹೇಳುತ್ತಾರೆ.

ಈ ಅಕ್ಕ ಪಡೆ ಇವಾಗ ರಾಜ್ಯಾದ್ಯಂತ ವ್ಯಾಪಿಸಿದೆ ..ಗಡಿ ಜಿಲ್ಲೆ ಪೊಲೀಸ್ ವರಿಷ್ಠ ಅಧಿಕಾರಿ ಪ್ರದೀಪ ಗುಂಟೆ ಅವರ ನೇತೃತ್ವದಲ್ಲಿ ಅಕ್ಕ ಪಡೆ ಕಾರ್ಯನಿರ್ವಹಿಸುತ್ತದೆ

ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group