ಸಿಂದಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಹೊಸ ಸರಕಾರದಲ್ಲಿ ಗಾಣಿಗ ಸಮುದಾಯದ ಏಕೈಕ ನಾಯಕ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವದು ಇಡೀ ಸಮುದಾಯಕ್ಕೆ ನೋವುಂಟು ಮಾಡಿದೆ. ಇದು ಹೊಸ ಸರಕಾರದ ಸರಿಯಾದ ನಡೆಯಲ್ಲ ಈ ಕೂಡಲೆ ಈ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಗಾಣಿಗ ಸಮುದಾಯದ ಅಧ್ಯಕ್ಷ ಮಲ್ಲಣ್ಣ ಮನಗೂಳಿ ನೇತೃತ್ವದಲ್ಲಿ ಪದಾಧಿಕಾರಿಗಳು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗಾಣಿಗ ಸಮುದಾಯದಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಹಿಂದೆ ಬಿ.ಎಸ್.ವಾಯ್ ನೇತೃತ್ವದ ಸರಕಾರದಲ್ಲಿ ಲಕ್ಷ್ಮಣ ಸವದಿಯವರಿಗೆ ಸಚಿವ ಸ್ಥಾನದ ಜೊತೆಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದ್ದಕ್ಕೆ ಧನ್ಯವಾದಗಳು. ಉತ್ತಮ ಕೆಲಸ ಮಾಡಿರುವ ಅವರನ್ನು ಈ ಹೊಸ ಸರಕಾರದಲ್ಲಿ ಕೈ ಬಿಟ್ಟಿರುವದು ಖಂಡನೀಯ ಇದನ್ನು ಗಂಭೀರವಾಗಿ ಪರಿಗಣಿಸಿ ಕೂಡಲೆ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸೂಕ್ತ ಸ್ಥಾನಮಾನ ನೀಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ ಅವರಲ್ಲಿ ವಿನಂತಿಸಿಕೊಂಡರು.
ರಾಜ್ಯದಲ್ಲಿ ಸುಮಾರು 52 ಲಕ್ಷ ಜನಸಂಖ್ಯೆ ಹೊಂದಿರುವ ಗಾಣಿಗ ಸಮುದಾಯದ ಬಹುತೇಕ ಎಲ್ಲಾ ಮತಗಳು ಬಿಜೆಪಿ ಪರ ಇದ್ದು ಇಂತಹ ಸಮುದಾಯಕ್ಕೆ ಈ ಹೊಸ ಸರಕಾರದಲ್ಲಿ ಅನ್ಯಾಯವಾಗಿದೆ. ಸಾಮಾಜಿಕ ನ್ಯಾಯದಡಿ ನಮ್ಮ ಈ ಸಮಾಜಕ್ಕೆ ಮಂತ್ರಿ ಸ್ಥಾನ ನೀಡಲೇಬೇಕು ಒಂದು ವೇಳೆ ಈ ಸಮುದಾಯಕ್ಕೆ ಒಂದು ಸ್ಥಾನಮಾನ ನೀಡದೆ ಇದ್ದರೆ ಈ ಸಮುದಾಯದ ಎಲ್ಲಾ ಮುಖಂಡರು ಸೇರಿ ರಾಜ್ಯಾದ್ಯಂತ ಹೋರಾಟ ಕೈಗೊಳ್ಳಬೇಕಾಗುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜದ ತಾಲೂಕಾ ಉಪಧ್ಯಾಕ್ಷ ಸಂಗಣ್ಣ ಹಿಪ್ಪರಗಿ, ಪ್ರ.ಕಾರ್ಯದರ್ಶಿ ಶ್ರೀಶೈಲ ಪರಗೊಂಡ, ಮುಖಂಡರಾದ ಸುರೇಶ ಮಳಲಿ, ಶ್ರೀಶೈಲಗೌಡ ಬಿರಾದಾರ, ನಿಂಗರಾಜ ಬಗಲಿ, ಸಂಗನಗೌಡ ಪಾಟೀಲ, ಪ್ರಶಾಂತಗೌಡ ಪಾಟೀಲ ಕನ್ನೋಳಿ, ನಾಗೇಶ ಯಾತನೂರ, ಆನಂದ ಕಂಟಿಗೊಂಡ, ಸಿದ್ದು ಕುರನಳ್ಳಿ, ರವಿ ಬಿರಾದಾರ ಸೇರಿದಂತೆ ಮತ್ತಿತ್ತರು ಇದ್ದರು.