ಬೀದರ – ಗಡಿ ಜಿಲ್ಲೆಯಾದ ಬೀದರನಲ್ಲಿ ಕಾನೂನು ವ್ಯವಸ್ಥೆ ಎನ್ನುವುದು ಗಾಳಿಗೆ ಹಾರಿಹೋಗಿದೆ ಎಂಬಂತೆ ತೋರುತ್ತಿದ್ದು ಇದಕ್ಕೆ ನಿದರ್ಶನವೆಂಬಂತೆ ಸಾರ್ವಜನಿಕರೇ ಪೊಲೀಸರ ಮೇಲೆ, ಅಬಕಾರಿ ಇಲಾಖೆಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಪ್ರಕರಣಗಳ ವಿಡಿಯೋಗಳು ವೈರಲ್ ಆಗಿವೆ.
ಇಷ್ಟೇ ಅಲ್ಲದೆ ರಾತ್ರಿ ಎಂಟು ಗಂಟೆಯ ಸುಮಾರಿಗೆ ಬೀದರನ ಗಾಂಧಿ ಗಂಜ್ ಪೊಲೀಸ್ ಠಾಣೆಯ ಮುಂದೆಯೇ ಯುವತಿಯೊಬ್ಬಳನ್ನು ನಾಲ್ಕು ಜನ ಕಾರಿನಲ್ಲಿ ಅಪಹರಿಸಿಕೊಂಡು ಹೋಗುವ ವಿಡಿಯೋ ಒಂದು ಫೇಸ್ ಬುಕ್ ನಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ.
ಇವನ್ನೆಲ್ಲ ನೋಡುತ್ತಿದ್ದರೆ ಬೀದರ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದ್ದು ಸ್ಪಷ್ಟವಾಗುತ್ತಿದೆ. ಜನರಿಗೆ ಪೊಲೀಸರ ಭಯವೇ ಇಲ್ಲದಂತಾಗಿದ್ದು ಸಾಮಾನ್ಯ ಜನರು, ಯುವತಿಯರು ಹೇಗೆ ಬದುಕು ಸಾಗಿಸುವುದೆಂಬ ಪ್ರಶ್ನೆ ಎದ್ದಿದೆ.
ಇಷ್ಟು ಪ್ರಮಾಣದಲ್ಲಿ ರಾಜಾರೋಷವಾಗಿ ಸಮಾಜ ವಿರೋಧಿ ಚಟುವಟಿಕೆಗಳು ನಡೆಯುತ್ತಿದ್ದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್. ನಾಗೇಶ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲವೆಂದರೆ ಅವರು ಹೆಸರಿಗೆ ಮಾತ್ರ ಎಸ್ ಪಿ ಎಂದು ಕಾಣುತ್ತಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ