ದಕ್ಷಿಣ ಕನ್ನಡ ಜಿಲ್ಲೆಯ ನಿರ್ಮಿತಿ ಕೇಂದ್ರದಲ್ಲಿ ದಿನಾಂಕ ೩ ರಂದು ಆಯೋಜಿಸಲಾಗಿದ್ದ “Application of Biotechnology in Managing Municipal Solid and Liquid waste” ಕುರಿತಾದ Technical Talk” ನಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಬಾಲಚಂದ್ರ ಜಾಬಶೆಟ್ಟಿ ವಿಷಯ ಮಂಡನೆ ಮಾಡಿದರು.
ಪ್ರಚಲಿತ ತ್ಯಾಜ್ಯ ನಿರ್ವಹಣೆಯಲ್ಲಿನ ಸಮಸ್ಯೆಗಳ ಹಾಗೂ ಅವುಗಳ ಸಮರ್ಪಕ ನಿರ್ವಹಣೆಗಾಗಿ ಪರಿಸರ ಸ್ನೇಹಿ ಸೂಕ್ಷ್ಮಾಣು ಬಳಕೆ ತಂತ್ರಜ್ಞಾನಗಳ ಕುರಿತು ರಾಯಚೂರು ಮಾದರಿಯನ್ನು ಪರಿಚಯಿಸುವುದರೊಂದಿಗೆ ಅತೀ ಕಡಿಮೆ ವೆಚ್ಚದಲ್ಲಿ ತ್ಯಾಜ್ಯ ನಿರ್ವಹಣಾ ಕೌಶಲ್ಯಗಳನ್ನು ಅಳವಡಿಸುವ ಕುರಿತು ಮಾಹಿತಿ ನೀಡಿದರು.
ಅಂದಾಜು ನಾಲ್ಕು ವರ್ಷಗಳ ಅವಧಿಗೆ ರಾಯಚೂರು ನಗರಸಭೆಯ ಎಕ್ಲಾಸಪೂರದ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ದಿನಂಪ್ರತಿ 100 ಟನ್ ಗಳಷ್ಟು ತ್ಯಾಜ್ಯವನ್ನು ಶಕ್ತಿನಗರದ ಕ್ಯಾಷುಟೆಕ್ ನಿರ್ಮಿತಿ ಕೇಂದ್ರವು ಸದರೀ ತಂತ್ರಜ್ಞಾನವನ್ನು ಬಳಸಿ ನಿರ್ವಹಿಸಿದ ಯಶೋಗಾಥೆಯನ್ನು ಎಳೆ ಎಳೆಯಾಗಿ ಬಿಡಿಸಿ ವಿವರಣೆ ನೀಡಿದರು.
ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಬಂದು ಸೇರುವ ಎಲ್ಲ ತ್ಯಾಜ್ಯದ ಮೇಲೆ ಪರಿಸರ ಸ್ನೇಹಿ ಸೂಕ್ಷ್ಮಾಣು ದ್ರಾವಣವನ್ನು ಸಿಂಪರಣೆ ಮಾಡುವ ಮೂಲಕ (ಅಮೃತ ಸಿಂಚನ) ಸ್ಯಾನಿಟೈಝೇಷನ್, ಕಾಂಪೋಷ್ಟಿಂಗ್ ಮಾಡುವ ಸುಲಭ ತಂತ್ರಜ್ಞಾನವನ್ನು ಅವರು ಪರಿಚಯಿಸಿದರು.
ತ್ಯಾಜ್ಯದಿಂದ ಹೊರಹೊಮ್ಮುವ ದುರ್ವಾಸನೆಯನ್ನು ನಿವಾರಿಸುವ, ಆಕಸ್ಮಿಕ ಬೆಂಕಿಯಿಂದ ರಕ್ಷಣೆ ಮಾಡುವ ವಿಧಾನಗಳನ್ನೂ ಸಹ ವಿವರಿಸಿದರು.
ತ್ಯಾಜ್ಯದಲ್ಲಿ ಹುದುಗಿರುವ ಸಂಪನ್ಮೂಲಗಳಾದ ಜೈವಿಕ ಗೊಬ್ಬರವನ್ನು ಪಡೆದು ಮೌಲ್ಯವರ್ಧನೆಮಾಡಿ ಕೃಷಿಯಲ್ಲಿ ಬಳಕೆ ಮಾಡುವ ಮತ್ತು ಹೈನುಗಾರಿಕೆ ತ್ಯಾಜ್ಯವನ್ನು ಸಂಸ್ಕರಿಸಿ/ಶುದ್ಧೀಕರಿಸಿ ಬಳಸುವುದರಿಂದ ಕೃಷಿ ಉತ್ಪಾದನೆ ಹೆಚ್ಚಿಸುವ ಕುರಿತು ಸಹ ವಿವರಿಸಿದರು.
ಪರಿಸರ ಪೂರಕ ಜೀವನ ಶೈಲಿ ಅಳವಡಿಸಿಕೊಳ್ಳಲು ಪ್ರಸ್ತಾಪಿಸಿದ ಬಾಲಚಂದ್ರ ಜಾಬಶೆಟ್ಟಿಯವರು, ಗೃಹೋಪಯೋಗಿ ರಾಸಾಯನಿಕಗಳಾದ ಬ್ಲೀಚಿಂಗ್ ಪಾವಡರ್, ಫಿನೈಲ್, ಹಾಗೂ ಶೌಚಾಲಯಗಳಲ್ಲಿ ಬಳಸುವ ಇತರೆ ರಾಸಾಯನಿಕಗಳ ಬದಲಿಗೆ ಪರಿಸರ ಸ್ನೇಹಿ ಸೂಕ್ಷ್ಮಾಣು ಬಳಕೆ ತಂತ್ರಜ್ಞಾನ ಅಳವಡಿಸುವುದರಿಂದ ಮನೆಯ ಸ್ವಚ್ಛತೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವೆಂದು ತೋರಿಸಿಕೊಟ್ಟರು.
ಕರ್ನಾಟಕದ ವಿವಿಧ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಗಳಲ್ಲಿ ಸಂಗ್ರಹಗೊಂಡಿರುವ 179 ಲಕ್ಷ ಟನ್ ಗಳಿಗಿಂತಲೂ ಹೆಚ್ಚಿರುವ ಪಾರಂಪರಿಕ ತ್ಯಾಜ್ಯ ನಿರ್ವಹಣೆ ಕುರಿತು ರಾಷ್ಟ್ರೀಯ ಹಸಿರು ಪೀಠವು (National Green Tribunal) ಇತ್ತೀಚಿಗೆ ಹೊರಡಿಸಿದ ಆದೇಶಗಳ ಕುರಿತು ಪ್ರಸ್ತಾಪಿಸಿದ ಜಾಬಶೆಟ್ಟಿಯವರು ೨೦೦೦ ನೇ ಇಸ್ವಿಯ ತ್ಯಾಜ್ಯ ನಿರ್ವಹಣಾ ಕಾನೂನು ಹಾಗೂ ನಿಯಮಗಳ ಕುರಿತು ಜೊತೆಗೆ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಕುರಿತು ಬೆಳಕು ಚೆಲ್ಲಿದರು.
ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲಭಾವಿಯವರು ತಮ್ಮ ಸಂಸ್ಥೆಯು ಕ್ರಮಿಸಿದ ಅಭಿವ್ರದ್ಧಿ ಪಥದ ಬಗ್ಗೆ ವಿವರಿಸುವುದರೊಂದಿಗೆ ಬಾಲಚಂದ್ರ ಜಾಬಶೆಟ್ಟಿ ಯವರ ಸಾಧನೆ ಬಗ್ಗೆ ಸಭೆಗೆ ಪರಿಚಯಿಸಿದರು.
ತ್ಯಾಜ್ಯ ನಿರ್ವಹಣೆ ಕುರಿತು ಚಿಂತನ ಮಂಥನ ನಡೆಸಲು ಆಯೋಜಿಸಲಾಗಿದ್ದ ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ನಿರ್ಮಿತಿಕೇಂದ್ರದ ಅಭಿಯಂತರರು ಹಾಗೂ National Institute of Technology (NITK) Suratkal ನಲ್ಲಿ M.Tech (Environment Engineering) ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಕೂಡ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.