ಮೂಡಲಗಿ: ಗ್ರಾಮೀಣ ಪ್ರದೇಶದ ಜನತೆಯ ಮನರಂಜನೆಗೆ ಬಯಲು ರಂಗ ಮಂದಿರಗಳು ಕೇಂದ್ರ ಸ್ಥಾನವಾಗಿದೆ. ಸದಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಬಯಲು ರಂಗ ಮಂದಿರದ ಸದುಪಯೋಗ ಮಾಡಿಕೊಳ್ಳಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಗುರುವಾರ ಫೆ-15 ರಂದು ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನದಡಿ ಬನಸಿದ್ದೇಶ್ವರ ದೇವಸ್ಥಾನದ ಹತ್ತಿರ ರಂಗ ಮಂದಿರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು ವಡೇರಹಟ್ಟಿ ಮತ್ತು ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳಿಗೆ ಮದುವೆ ಸೇರಿದಂತೆ ಇನ್ನಿತರ ಧಾರ್ಮಿಕ, ಸಾಮಾಜಿಕ ಕಾರ್ಯಗಳಿಗೆ ಅನುಕೂಲವಾಗಬೇಕೆಂಬ ಸದುದ್ದೇಶದಿಂದ ರಂಗ ಮಂದಿರ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು.
ಹಿಂದೂಗಳ ಆರಾಧ್ಯದೈವ ಪ್ರಭು ಶ್ರೀರಾಮ ಮಂದಿರ ನಿರ್ಮಾಣವಾಗಿದೆ, ಕಾಶಿ ವಿಶ್ವನಾಥ ಮಂದಿರ, ಉಜ್ಜಯನಿಯ ಮಹಾಕಾಳೇಶ್ವರ ಮಂದಿರ, ಕೇದಾರಿನಾಥ, ಬದ್ರಿನಾಥ ದೇವಸ್ಥಾನದ ಅಭಿವೃದ್ಧಿ ಮಾಡುವ ಮೂಲಕ ಭಾರತೀಯರು ಹೆಮ್ಮೆ ಪಡುವಂತಹ ಕಾರ್ಯಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ. ಹಾಗೆಯೇ ಮೂಡಲಗಿ ತಾಲೂಕಿನಲ್ಲಿಯೂ ಕೂಡಾ ಮಠ, ಮಂದಿರಗಳ ಅಭಿವೃದ್ದಿಗೆ ವಿಶೇಷಶ್ರಮ ವಹಿಸಲಾಗುತ್ತದೆ ಎಂದರು.
ಮಾಜಿ ಜಿ.ಪಂ ಸದಸ್ಯ ಮಾರುತಿ ತೋಳಮರಡಿ, ಗ್ರಾ.ಪಂ ಸದಸ್ಯ ಮಾರುತಿ ಸೊಡ್ರಗೋಳ, ರಾಮಣ್ಣ ಕೋಳಿ, ಸಿದ್ದಪ್ಪ ತೋಳಮರಡಿ, ಕೆಂಪಣ್ಣ ನಂದಿ, ಭಗವಂತ ಧರ್ಮಟ್ಟಿ, ಬನಪ್ಪ ಸಿಂತ್ರೆ ಸೇರಿದಂತೆ ದೇವಸ್ಥಾನ ಕಮೀಟಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.