ಬೈಲಹೊಂಗಲ : 107 ವರ್ಷಗಳ ಇತಿಹಾಸವುಳ್ಳ ಕನ್ನಡ ಸಾಹಿತ್ಯ ಪರಿಷತ್ತಿನ ಆಶೋತ್ತರಗಳು ಎಲ್ಲರಿಗೂ ತಲುಪುವಂತಾಗಬೇಕು ಎಂದು ಕರ್ನಾಟಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶಂಕರ ರು. ದಂಡಿನ ಹೇಳಿದರು.
ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಶಿಕ್ಷಣ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬೈಲಹೊಂಗಲ ತಾಲ್ಲೂಕಾ ಘಟಕದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ 108 ನೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ‘ಕನ್ನಡ ಮನಸ್ಸುಗಳ ಮೇಲೆ ಕನ್ನಡ ಸಾಹಿತ್ಯ ಪರಿಷತ್ತು ಬೀರಿದ ಪ್ರಭಾವ’ ಎಂಬ ವಿಷಯದ ಮೇಲೆ ಉಪನ್ಯಾಸ ನೀಡುತ್ತ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯೋದ್ದೇಶಗಳನ್ನು ಅರಿಯುವ ಹಾಗೂ ಎಲ್ಲೆಡೆ ಪಸರಿಸುವ ಕೆಲಸವನ್ನು ಎಲ್ಲ ಕನ್ನಡ ಮನಸ್ಸುಗಳು ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಶಿಕ್ಷಕ-ಸಾಹಿತಿಗಳಾದ ರಾಜೇಂದ್ರಸ್ವಾಮಿ ಗು. ಹಿರೇಮಠ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದು ಅದರ ಇತಿಹಾಸವನ್ನು ತಿಳಿಯಬೇಕು ಎಂದರು. ಕನ್ನಡ ಪುಸ್ತಕಗಳನ್ನು ಓದುವುದರ ಮೂಲಕ ಕನ್ನಡ ಸಾಹಿತ್ಯದ ಬಗ್ಗೆ ಒಲವು ಬೆಳೆಸಿಕೊಳ್ಳಲು ಸಲಹೆ ನೀಡಿದರು. ಖ್ಯಾತ ಆಕಾಶವಾಣಿ-ದೂರದರ್ಶನ ಹಾಗೂ ರಂಗಭೂಮಿ ಕಲಾವಿದರಾದ ಸಿ.ಕೆ.ಮೆಕ್ಕೇದ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅನೇಕ ಉತ್ತಮ ಕೆಲಸಗಳು ನಡೆಯುತ್ತಿದ್ದು ಪ್ರತಿಯೊಬ್ಬರಿಗೂ ಪರಿಷತ್ತಿನ ಪರಿಚಯ ಇರಬೇಕು ಎಂದು ಹೇಳಿದರು.
ಬೈಲಹೊಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಪ್ರಸ್ತಾವಿಕವಾಗಿ ಮಾತನಾಡಿ, ಕನ್ನಡವನ್ನು ಬಳಸಿ, ಉಳಿಸಿ, ಬೆಳೆಸುವ ಮಹತ್ತರ ಜವಾಬ್ದಾರಿ ಎಲ್ಲ ಕನ್ನಡಿಗರದ್ದಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಆರ್.ಸಿ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಎಂ.ಬಿ. ತಲ್ಲೂರ ಮಾತನಾಡಿ ನಾವು ಪ್ರಪಂಚದ ಯಾವುದೇ ಮೂಲೆಯಲ್ಲಿದ್ದರೂ ಕನ್ನಡದ ಬಗ್ಗೆ ಅತ್ಯಂತ ಹೆಮ್ಮೆ ಇರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳಾದ ಬಿ.ಎನ್ ಕಸಾಳೆ, ಕೆ.ಆರ್.ಸಿ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಬಿ.ಎನ್.ಮುದೆನ್ನವರ, ಕಸಾಪ ಕೋಶಾಧ್ಯಕ್ಷರಾದ ಮಹೇಶ ಕೋಟಗಿ, ಗೌರವ ಕಾರ್ಯದರ್ಶಿಗಳಾದ ಮಂಜುಳಾ ಶೆಟ್ಟರ್, ಪದಾಧಿಕಾರಿಗಳಾದ ಪ್ರೇಮಕ್ಕ ಅಂಗಡಿ, ಲಕ್ಷ್ಮೀ ಮುಗಡ್ಲಿಮಠ, ದುಂಡಪ್ಪ ಗರಗದ, ರಾಮಕೃಷ್ಣ ಹೋಟಕರ, ಶ್ರೀಕಾಂತ ಉಳ್ಳೇಗಡ್ಡಿ ಹಾಗೂ ಕಾಲೇಜಿನ ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು, ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಸುಪ್ರಿಯಾ ತೋಟಗೇರ ಸ್ವಾಗತಿಸಿದರು. ನಿವೇದಿತಾ ಕುರುಬಗಟ್ಟಿ ಪ್ರಾರ್ಥಿಸಿದರು. ರಾಜೇಶ್ವರಿ ತಲ್ಲೂರ ನಿರೂಪಿಸಿದರು. ಶ್ರೀದೇವಿ ಖಣಗೌಡರ ವಂದಿಸಿದರು. ರಾಜು ಹಕ್ಕಿ ಕಾರ್ಯಕ್ರಮ ನಿರ್ವಹಿಸಿದರು.