ಮೂಡಲಗಿ:- ವೃತ್ತಿ ಬದುಕಿನಿಂದ ನಿವೃತ್ತಿ ಹೊಂದುವುದು ಅನಿವಾರ್ಯ,ಅದು ಒಂದು ಬದುಕಿನ ಘಟ್ಟ ಅಷ್ಟೇ,ಅರವತ್ತಕ್ಕೆ ಅರಳು ಮರಳು ಅನ್ನೋದಕ್ಕಿಂತ ಮನಸ್ಸು ಮರಳಿ ಅರಳಬೇಕು ಎಂದು ಕುಡಚಿ ವೈದ್ಯ ಯಾಕೂಬ್ ಸಣ್ಣಕ್ಕಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಚೈತನ್ಯ ಅರ್ಬನ್ ಸೊಸೈಟಿ ಸಭಾಭವನದಲ್ಲಿ ನಡೆದ ಸೇವಾ ನಿವೃತ್ತಿ ಹೊಂದಿದ ಮಲ್ಲಪ್ಪಾ ಮುರಗೋಡ ಅವರಿಗೆ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ವಯಸ್ಸು ಅನ್ನುವುದು ಕೇವಲ ನಂಬರ್ ಅಷ್ಟೇ.. ಸಂತಸದ ಜೀವನಕ್ಕೆ ಒಳ್ಳೆಯ ಮನಸ್ಸು ಬೇಕಷ್ಟೇ.. ಎಂದು ಹಾಸ್ಯ ಚಟಾಕಿ ಬೆರೆಸಿ,ವೃತ್ತಿಯಿಂದ ಮಾತ್ರ ನಿವೃತ್ತಿ, ಪ್ರವೃತ್ತಿಯಿಂದ ಅಲ್ಲ ಎಂಬುದನ್ನು ಅರಿತು ಉಳಿದ ಜೀವನದ ಅವಧಿಯನ್ನು ನಿಮ್ಮ ಬಾಳ ಸಂಗಾತಿಯೊಂದಿಗೆ ಸಂತೋಷದಿಂದ ಕಳೆಯಿರಿ. ಬದುಕಿನಲ್ಲಿ ವಾಸ್ತವಿಕತೆಗೆ ಒಪ್ಪಿ ಬದುಕು ಸಾಗಿಸಿ. ಸಂಸಾರದಲ್ಲಿ ಹೊಂದಾಣಿಕೆ ಎನ್ನುವುದು ಬಹಳ ಮುಖ್ಯವಾಗಿದೆ. ಜೀವನದಲ್ಲಿ ಸೋತು ಗೆಲ್ಲಬೇಕು ಗೆದ್ದು ಸೋಲಬಾರದು. ತ್ಯಾಗ ಮನೋಭಾವನೆ ಹೊಂದಿ ಉತ್ತಮ ಸಮಾಜ ನಿರ್ಮಾಣಕ್ಕೆ ಸೇವೆ ಸಲ್ಲಿಸುವ ಮೂಲಕವೂ ತೃಪ್ತಿ ಪಟ್ಟು ಆದರ್ಶ ಜೀವನ ಸಾಗಿಸುವುದೇ ನಿವೃತ್ತಿ ನಂತರದ ಜೀವನ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ ಯಲಗೌಡ ಪಾಟೀಲ ಅವರು ಮಾತನಾಡಿ, ವಯೋ ನಿವೃತ್ತಿ ಹೊಂದಿರುವ ಸ್ನೇಹಿತ ಮಲ್ಲಪ್ಪಾ ಮುರಗೋಡ ಅವರು ಮುಗ್ಧ ಮತ್ತು ಸರಳ ಜೀವಿ.ಜೀವನದಲ್ಲಿ ತುಂಬಾ ಕಷ್ಟ ಅನುಭವಿಸಿ ಹಗಲು ರಾತ್ರಿ ಎನ್ನದೆ ಶ್ರಮಪಟ್ಟು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಅವರು ಉನ್ನತ ಹುದ್ದೆ ಅಲಂಕರಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದು.ಅವರ ನಿವೃತ್ತಿ ಜೀವನ ಸುಖಮಯ ಸುಖಮಯ ಆಗಿರಲಿ ಎಂದು ಆಶಿಸಿದರು.
ನಿವೃತ್ತ ಶಿಕ್ಷಕ ಸಿ ಎಂ ಹಂಜಿ ಗುರುಗಳು ಮತ್ತು ಅಶೋಕ ಮೂಡಲಗಿ ಮಾತನಾಡಿದರು. ಗೆಳೆಯರ ಬಳಗದ ಅಧ್ಯಕ್ಷ ಗಂಗಾಧರ ಬಿಜಗುಪ್ಪಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಸಮೀರವಾಡಿ ಸಕ್ಕರೆ ಕಾರ್ಖಾನೆ ವೆಬ್ರೀಜ್ ವಿಭಾಗದಲ್ಲಿ ಸುಮಾರು 33 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಮಲ್ಲಪ್ಪಾ ಮುರಗೋಡ ಮತ್ತು ಅವರ ಧರ್ಮಪತ್ನಿ ಸುನಂದಾ ಮುರಗೋಡ ಅವರನ್ನು ಗೆಳೆಯರ ಬಳಗದ ವತಿಯಿಂದ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಪ್ರೊ. ಪ್ರದೀಪ ಲಂಕೆಪ್ಪನವರ, ಪಂಚಮಸಾಲಿ ಸಂಘದ ಅಧ್ಯಕ್ಷ ಬಸವರಾಜ ರಂಗಾಪೂರ, ಶ್ರೀಮತಿಪ್ರಭಾವತಿ ರಂಗಾಪೂರ,ಶ್ರೀಮತಿ ಕಾಶಿಬಾಯಿ ಬಿಜಗುಪ್ಪಿ,ಶ್ರೀಮತಿ ಮಹಾದೇವಿ ಸಣ್ಣಕ್ಕಿ, ಪ್ರಕಾಶ ನಿಡಗುಂದಿ, ಈರಪ್ಪ ಪತ್ತಾರ, ಮೀರಾಸಾಬ ಕಳ್ಳಿಮನಿ ಅಲ್ತಾಫ್ ಹವಾಲ್ದಾರ್, ಕಾಡಪ್ಪ ಮಗದುಮ್, ಬಸಪ್ಪ ನಾಗನೂರ, ಶಶಿಕಾಂತ ಬಾಗೋಜಿ, ಮುತ್ತಪ್ಪ ಹುಲ್ಯಾಳ ಇನ್ನು ಅನೇಕರು ಉಪಸ್ಥಿತರಿದ್ದರು.