ಮೂಡಲಗಿ – ರಾಸಾಯನಿಕಯುಕ್ತ ಬಣ್ಣ, ಸುಟ್ಟ ಆಯಿಲ್ ಇಂಥ ಅಪಾಯಕಾರಿ ವಸ್ತುಗಳನ್ನು ಬಣ್ಣ ಆಡುವ ನೆಪದಲ್ಲಿ ಬಳಸಬಾರದು. ಹೋಳಿ ಬಣ್ಣದ ನಂತರ ಸ್ನಾನ ಮಾಡುವಲ್ಲಿ ಯಾವುದೇ ಅಪಘಾತಗಳು ಸಂಭವಿಸದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಮೊದಲಿನಿಂದ ಬಂದ ಈ ಹಬ್ಬವನ್ನು ಶಾಂತಿ, ಸಂಭ್ರಮಗಳಿಂದ ಸಂತೋಷದಿಂದ ಆಚರಿಸೋಣ ಎಂದು ಪಿಎಸ್ಐ ಹಾಲಪ್ಪ ಬಾಲದಂಡಿ ಹೇಳಿದರು.
ಬರಲಿರುವ ಹೋಳಿ ಹಬ್ಬದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹೋಳಿ ಹಬ್ಬ ವೆಂದರೆ ಸಂಭ್ರಮದಿಂದ ಆಚರಿಸಬೇಕು. ಆದರೆ ಅಪಾಯಕಾರಿಯಾಗಬಾರದು. ಬೇರೆ ಊರಿನ ಜನರಿಂದ ಹಣ ವಸೂಲಿ ಮಾಡುವುದಾಗಲಿ, ಅಪಾಯಕಾರಿ ಬಣ್ಣಗಳನ್ನು ಹಚ್ಚುವುದಾಗಲಿ ಮಾಡಬಾರದು. ಹಬ್ಬದ ಸಂತೋಷ ದುಃಖ ತರಬಾರದು. ಸಭೆಗೆ ಬಂದಿರುವ ಹಿರಿಯರು ತಮ್ಮ ಮಕ್ಕಳಿಗೂ ಸ್ನೇಹಿತರಿಗೂ ಹೇಳಬೇಕು ಶಾಂತಿಯಿಂದ ಹಬ್ಬ ಆಚರಿಸಲು ಸಹಕರಿಸಬೇಕು ಎಂದು ಹೇಳಿದರು.
ಕೊರೋನಾ ಇನ್ನೂ ಸಂಪೂರ್ಣವಾಗಿ ಹೋಗಿಲ್ಲವಾದ್ದರಿಂದ ಎಲ್ಲರೂ ಮಾಸ್ಕ ಧರಿಸಬೇಕು ಎಂದು ಬಾಲದಂಡಿ ಹೇಳಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಪುರಸಭೆಯ ಆರೋಗ್ಯಾಧಿಕಾರಿ ಚಿದಾನಂದ ಮುಗಳಖೋಡ ಮಾತನಾಡಿ, ರಾಸಾಯನಿಕ ಬಣ್ಣ ಉಪಯೋಗಿಸಿ ನಮ್ಮ ಆರೋಗ್ಯ ಹಾಳು ಮಾಡಿಕೊಳ್ಳುವುದು ಬೇಡ. ಹೋಳಿಯ ಸಂಭ್ರಮವನ್ನು ಆರೋಗ್ಯದಿಂದ ಆಚರಿಸೋಣ ಎಂದರು.
ಸಭೆಯಲ್ಲಿ ಪುರಸಭಾ ಸದಸ್ಯರಾದ ಶಿವು ಚಂಡಕಿ, ಅನ್ವರ ನದಾಫ ಅಲ್ಲದೆ ಮಾಜಿ ಅಧ್ಯಕ್ಷ ರವಿ ಸಣ್ಣಕ್ಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.