Homeಲೇಖನನಿವೃತ್ತಿ ಜೀವನವನ್ನು ಖುಷಿ- ಖುಷಿಯಾಗಿ ಕಳೆಯೋಣ

ನಿವೃತ್ತಿ ಜೀವನವನ್ನು ಖುಷಿ- ಖುಷಿಯಾಗಿ ಕಳೆಯೋಣ

ಇಂದು ವೈದ್ಯಕೀಯ ಸೇವೆಯಿಂದ ನಿವೃತ್ತಿ ಹೊಂದಲಿರುವ ಡಾ.ಅಶೋಕ ಜೀರಗ್ಯಾಳ ಅವರಿಗೆ ಪ್ರೀತಿಯ ಶುಭಾಶಯ ಅರ್ಪಿಸಿದ ಅವರ ಬಾಳ ಸಂಗಾತಿ ಅಮ್ಮಾಜೀ.

ಗೋಕಾಕ್– ನನ್ನ ಪ್ರೀತಿಯ ಬದುಕಿನ ಪಯಣಿಗನೇ… ನಿನಗೆ ಗೆಳೆಯನೆನ್ನಲೇ, ಅಣ್ಣನೆನ್ನಲೇ,ತಂದೆ ಎನ್ನಲೇ ದೇವರೆನ್ನಲೇ .ನನ್ನನ್ನ ಮದುವೆಯಾಗಿ ಗಂಡನೆನ್ನುವ ಲೇಬಲ್ಲಿನೊಳಗೆ (ಹಣೆಪಟ್ಟಿಯೊಡನೆ) ಈ ಎಲ್ಲ ಪಾತ್ರ ನಿರ್ವಹಿಸಿದವನು ನೀ…

ಎಷ್ಟೋ ಬಾರಿ ನನ್ನಷ್ಟು ಅದೃಷ್ಟ ವಂತಳು ಈ ಜಗದಲಿ ಯಾರಿಲ್ಲ ಅನ್ನುವ ಭಾವನೆ ಮೂಡಿಸಿದವನು ನೀ…

ನಿನ್ನ ಮುದ್ದಿನ ಮೌನದಿಂದಲೇ ನನ್ನನ್ನ ತಿದ್ದಿ ತೀಡಿದವ ನೀ…

ಭರ್ತಿ ಮೂವತ್ತು ವರುಷ ಆರು ತಿಂಗಳು ನಮಗಾಗಿ ಗಾಣದೆತ್ತಿನಂತೆ ದುಡಿದು ನಿವೃತ್ತಿ ಪಡೆಯುತ್ತಿದ್ದೀರಿ.

ನನಗೆ ತಿಳಿದಿದೆ ನಿವೃತ್ತಿ ಎನ್ನುವುದು ಒಂದು ಕಾಲಘಟ್ಟದಲ್ಲಿ ಎಲ್ಲರಿಗೂ ಬರುವ ಖುಷಿಯ ಸಮಯ,ಕೆಲವರಿಗೆ ಸಂಕಷ್ಟದ ಸಮಯ.

ಇದನ್ನ ಯಾಕೆ ಹೇಳ್ತಿನಿ ಅಂತಂದ್ರೆ ನಿಮ್ಮ ವೃತ್ತಿಯನ್ನ ನೀವು ದೇವರಿಗಿಂತ ಹೆಚ್ಚಾಗಿ ಪ್ರೀತಿಸಿದವರು ಒಬ್ಬ ವೈದ್ಯ ನಾಗಿ ಎಷ್ಟೋ ಜನರಿಗೆ ಜೀವದಾನ ನೀಡಿದಿರಿ‌. ಎಷ್ಟೋ ಬಾರಿ ಪೇಷಂಟಿಗೆ ತೊಂದರೆ ಆದರೆ ಅವರ ಮನೆಯವರಿಗಿಂತ ಹೆಚ್ಚಾಗಿ ನೀವು ನರಳಿದಿರಿ ಇದನ್ನ ಯಾರೂ ಅರ್ಥ ಮಾಡಿಕೊಳ್ಳಲೇ ಇಲ್ಲ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದೇ ಬದುಕಬೇಕೆಂಬ ನಿಮ್ಮ ಹೆಬ್ಬಯಕೆಗೆ ಕೆಲವೊಂದು ರಾಜಕಾರಣಿಗಳಿಂದ, ಕೆಲವೊಂದು ಹಿತ ಶತ್ರುಗಳಿಂದ ನೋವನ್ನ ಅನುಭವಿಸಿ ವಿಷವನ್ನುಂಡ ನಂಜುಂಡನಂತೆ ಎಲ್ಲವನ್ನೂ ನುಂಗಿ ಕರ್ತವ್ಯ ದೇವರೆನ್ನುವಂತೆ ನೀವು ದುಡಿದಿರಿ. ಹಗಲು ರಾತ್ರಿ ನಿಮ್ಮ ಅಂಗವೈಕಲ್ಯ ವನ್ನು ಮರೆತು…

ಆದರೆ , ಅದನ್ನು ಯಾರೂ ಗುರ್ತಿಸಲಿಲ್ಲ ಅನ್ನುವ ನೋವು ಇಂದಿಗೂ ನನ್ನ ಕಾಡಿದೆ. ಯಾಕೆಂದರೆ ಪ್ರೈವೇಟ್ ಹಾಸ್ಪಿಟಲ್ ಮಾಡಿ ಅದರಲ್ಲಿ ಕೊಟ್ಯಂತರ ಹಣ ಗಳಿಸಬಹುದಿತ್ತು ಆದರೆ ನೀವು ಸರ್ಕಾರಿ ಆಸ್ಪತ್ರೆ ಯಲ್ಲಿಯೇ ನಿಮ್ಮ ಸೇವೆಯನ್ನು ಮಾಡಲು ಇಷ್ಟಪಟ್ಟಿರಿ, ಬಡವರ ಸೇವೆ ದೇವರ ಸೇವೆ ಅಂತ ಅದನ್ನು ಕೂಡ ಯಾರೂ ಗಮನಿಸಲಿಲ್ಲ ಅನ್ನುವುದೇ ನೋವಿನ ಸಂಗತಿ.

ಯಾರೂ ಗುರ್ತಿಸದಿದ್ದರೇನಂತೆ ನಿಮ್ಮ ಅರ್ಧಾಂಗಿಯಾಗಿ ನಾನು ಗುರ್ತಿಸಿರುವೆ.

ನಿವೃತ್ತಿ ಎನ್ನುವುದು ಕೂಡ ನಮ್ಮ ಜೀವನ ದಲ್ಲಿ ಅತ್ಯುತ್ತಮ ಪಾಠ ಕಲಿಸಿ ವೃತ್ತಿ ಯಿಂದ ಅಷ್ಟೇ ನಿವೃತ್ತಿ ಪಡೆಯುತ್ತಿದ್ದೀರಿ. ನನಗಂತೂ ತುಂಬಾ ಖುಷಿಯಾಗಿದೆ.ಇಂದಿನಿಂದ ನಮಗೊಂದು ಹೊಸ ಜೀವನ ಪ್ರಾರಂಭ. ನೀವು ಡಾಕ್ಟರ್ ಗಳಿಗೆ ನಿವೃತ್ತಿ ಅನ್ನೊದೇ ಗೊತ್ತಿಲ್ಲ ಅನ್ನೊದು ಗೊತ್ತು ಆದರೂ ಸ್ವಲ್ಪ ನಮಗಾಗಿ ಸಮಯ ಸಿಕ್ಕಿತಲ್ಲ ಅನ್ನೊ ಖುಷಿ. ನಗುನಗುತ್ತ ಈ ನಿವೃತ್ತಿ ಜೀವನವನ್ನು ಖುಷಿಯಿಂದ ಸ್ವೀಕರಿಸುತ್ತೀರಿ ಎಂಬ ನಂಬಿಕೆಯಿಂದ…

ನಿಮ್ಮ ಮುದ್ದಿನ ಹೆಂಡತಿ ಎನ್ನಲೇ.,ಪ್ರೇಮಿ ಎನ್ನಲೇ, ಅತ್ಯುತ್ತಮ ಬಾಳಸಂಗಾತಿ ಎನ್ನಲೇ.. ಏನಾದರೂ ಅಂದುಕೊಳ್ಳಿ. ಈ ನಿವೃತ್ತಿಯ ದಿನವನ್ನು ಹೆಮ್ಮೆಯಿಂದ ಪ್ರೀತಿಯಿಂದ ಸ್ವಾಗತಿಸೋಣ ಎಲ್ಲ ಪ್ರೀತಿ ಪಾತ್ರರ ಆಶೀರ್ವಾದ ನಿಮ್ಮ ಮೇಲಿರಲಿ.


ನಿಮ್ಮ– ರಜನಿ ಜೀರಗ್ಯಾಳ.

RELATED ARTICLES

Most Popular

error: Content is protected !!
Join WhatsApp Group