ಜಮಖಂಡಿ: ಕಣ್ಣಿಗೆ ಕಾಣುವುದು ನಿಜವಾದ ಜಗತ್ತಲ್ಲ. ಅದು ಮಾಯಾಲೋಕ. ಒಳಗೆ ಆಳಕ್ಕಿಳಿದು ನೋಡಿದರೆ ಜಗತ್ತಿನ ನಿಜವಾದ ದರ್ಶನ ಆಗುತ್ತದೆ. ಹಾಗೆಯೆ ಮಾಯೆಯ ಬೆನ್ನುಹತ್ತಿ ನಿಜವಾದ ಬದುಕನ್ನು ನರಕ ಮಾಡಿಕೊಂಡು ಎಲ್ಲಿಯೂ ಸಲ್ಲದಂತಾಗಬಾರದು ಎಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ.ವೈ.ವೈ. ಕೊಕ್ಕನವರ ಹೇಳಿದರು.
ಶ್ರಾವಣ ಮಾಸದ ನಿಮಿತ್ತ ಓಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಓಣಿಗೊಂದು ದಿನ ವಚನ ಶ್ರಾವಣ ಅಂಗವಾಗಿ ಇಲ್ಲಿನ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಸಂಜೆ ನಡೆದ ಹದಿನೈದನೆ ದಿನದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ‘ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುತ್ತಾರೆ’ ಎಂಬ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಮತ್ಸರ, ದ್ವೇಷ, ಆಕ್ರೋಶ, ಆಸೆ, ರೋಷಗಳನ್ನು ಅಳಿಯಬೇಕು. ಸಂಗ್ರಹ ಬುದ್ದಿಯನ್ನು ತ್ಯಜಿಸಬೇಕು. ಕಲುಷಿತ ಮನಸ್ಸುಗಳಿಗೆ ಸಾಂತ್ವನ ಹೇಳುವಂತ ಬಸವಾದಿ ಶಿವಶರಣರ ವಚನಗಳನ್ನು ಪಚನ ಮಾಡಿಕೊಂಡರೆ ಬದುಕು ಸುಂದರವಾಗಿ ಎಲ್ಲೆಡೆಯೂ, ಎಲ್ಲರಿಗೂ ಸಲ್ಲುವಂತಾಗಬಹುದು ಎಂದರು.
ಕಲ್ಯಾಣ ಮಠದ ಗೌರಿಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮನೆಗೆದ್ದು ಮಾರುಗೆಲ್ಲಬೇಕು. ಅದಕ್ಕಾಗಿ ಇಂದ್ರಿಯಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಪ್ರೀತಿ, ವಿಶ್ವಾಸ, ಸೌಹಾರ್ದತೆಯಿಂದ ಬದುಕಬೇಕು. ಪ್ರಸಂಗ ಬಂದರೆ ಆತ್ಮಾರ್ಪಣ ಮಾಡಲು ಸಿದ್ಧರಿರಬೇಕು. ಸತ್ಕರ್ಮಗಳನ್ನು ಮಾಡಿ ಎಲ್ಲರೂ ನೆನಪಿಡುವಂತ ಸಾಧನೆ ಮಾಡಬೇಕು. ಅಂದಾಗ ಮಾತ್ರ ನಾವು ಎಲ್ಲಿಯೂ ಸಲ್ಲಲು ಸಾಧ್ಯವಾಗುತ್ತದೆ ಎಂದು ಆಶೀರ್ವಚನ ನೀಡಿದರು.
ಓಲೆಮಠದ ಆನಂದ ದೇವರು ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಎಸ್.ವೈ. ಪಾಟೀಲ ಸ್ವಾಗತಿಸಿದರು. ಸುನಿತಾ ಜಂಬಗಿ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಸರಸ್ವತಿ ಸಬರದ(ಹೆಗಡಿ), ಗೋಪಾಲ ತುಳಜಾಪೂರ ಸಂಗೀತ ಸೇವೆ ಸಲ್ಲಿಸಿದರು. ಎಸ್.ಎಚ್. ಮಠಪತಿ ನಿರೂಪಿಸಿದರು.