ಬೆಳಗಾವಿ: ಸಾಹಿತ್ಯ ಮತ್ತು ಸಂಗೀತವು ಮನುಷ್ಯನ ಜೀವನ ಶೈಲಿಯನ್ನೇ ಬದಲಿಸುವ ತಾಕತ್ತು ಹೊಂದಿವೆ. ಸಾಹಿತ್ಯ ಮತ್ತು ಸಂಗೀತ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇವೆರಡುಗಳಿಗೆ ಜೀವನದಲ್ಲಿ ಮಾರು ಹೋದದ್ದೇ ಆದರೆ ಜೀವನದಲ್ಲಿ ಗುರುತರವಾದ ಬದಲಾವಣೆಗಳನ್ನು ಹೊಂದುವುದರೊಂದಿಗೆ ಮನುಷ್ಯನ ಜೀವನ ಶೈಲಿ, ಚಿಂತನೆಯಲ್ಲಿ ಉನ್ನತೀಕರಣವಾಗುತ್ತದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಕೆ.ಎಲ್.ಈ ಕಾರ‍್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ನಗರದ ಕನ್ನಡ ಭವನದಲ್ಲಿ ಏರ್ಪಟ್ಟಿದ್ದ ಸ್ವರ-ಸಾಹಿತ್ಯ-ಸಂಗಮ ಮತ್ತು “ಭಾವಮಂಗಳ” ಧ್ವನಿ ತಟ್ಟೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಇಂತಹ ಸಾಹಿತ್ಯಿಕ ಕಾರ‍್ಯಕ್ರಮಗಳು ಬೆಳಗಾವಿಯಲ್ಲಿ ಅತ್ಯಂತ ಅವಶ್ಯವಿದ್ದು ಆ ನಿಟ್ಟಿನಲ್ಲಿ ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ ಸಾಹಿತ್ಯವನ್ನು ರಚಿಸಿ ಸ್ವರ ಸಂಯೋಜನೆಗೊಳಿಸಿ ಸಿಡಿ ಮಾಡಿ ಬಿಡುಗಡೆ ಮಾಡುತ್ತಿರುವುದು ರಾಜ್ಯದಲ್ಲಿಯೇ ಪ್ರಪ್ರಥವಾಗಿದೆ. ಇದು ಎಲ್ಲರಿಗೂ ಮಾದರಿಯಾಗಲಿದೆ ಎಂದರು.
ಅತಿಥಿಯಾಗಿ ಉಪಸ್ಥಿತರಿದ್ದ ಕ್ರೈಂ ಮತ್ತು ಸಂಚಾರಿ ವಿಭಾಗದ ಡಿ.ಸಿ.ಪಿ ಶ್ರೀಮತಿ ಪಿ.ವಿ.ಸ್ನೇಹಾ ಮಾತನಾಡಿ, ಮಹಿಳೆಯರು ಸಾಹಿತ್ಯಿಕ ಕೃಷಿ ಚಟುವಟಿಕೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ಕನ್ನಡ ನಾಡು ನುಡಿ ಇನ್ನೂ ಹೆಚ್ಚಿನ ಶೀಮಂತಿಕೆಯನ್ನು ಹೊಂದಲು ಸಾಧ್ಯವೆಂದರು. ಕನ್ನಡ ಸಾಹಿತ್ಯ ಪರಿಷತ್ ಬೆಳಗಾವಿ ಜಿಲ್ಲೆಯ ಚುಕ್ಕಾಣಿ ಹಿಡಿದಿರುವ ಶ್ರೀಮತಿ ಮಂಗಲಾ ಮೆಟಗುಡ್ಡ ಸ್ವತ: ತಾವೇ ಸಾಹಿತ್ಯಿಕ ಸಾಧನೆ ಮಾಡುತ್ತಿರುವುದು ಇನ್ನುಳಿದ ಜಿಲ್ಲೆಯ ಮಹಿಳೆಯರಿಗೆ ಸ್ಪೂರ್ತಿದಾಯಕವಾಗಿದೆ ಎಂದರಲ್ಲದೇ ಇನ್ನೂ ಕೆಲವೇ ದಿನಗಳಲ್ಲಿ ತಾವೇ ಸ್ವರಚಿಸಿದ ಕವನ ಸಂಕಲನ ಬಿಡುಗಡೆಯಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ನಗರದ ಕಾರಂಜಿಮಠದ ಶ್ರೀ. ಮ. ನಿ. ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಮತ್ತು ಅಧ್ಯಕ್ಷತೆಯನ್ನು ವಹಿಸಿದ್ದ ಹುಕ್ಕೇರಿ ಹಿರೇಮಠದ ಶ್ರೀ ಷ .ಬ್ರ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡುತ್ತಾ ಒಬ್ಬ ಮಹಿಳೆಯಾಗಿ ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತ ತಮ್ಮ ಸಾಹಿತ್ಯದ ಕೃಷಿಯನ್ನು ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರಲ್ಲದೇ ಶ್ರೀಮತಿ ಮಂಗಲಾ ಮೆಟಗುಡ್ಡ ರವರು ಜಿಲ್ಲೆಯಲ್ಲಿ ಸಾಹಿತ್ಯಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಬಹಳಷ್ಟು ಪ್ರತಿಭಾನ್ವಿತರಿಗೆ ಅವಕಾಶ ನೀಡಿ ಮಂಚೂಣಿಗೆ ತರುವಲ್ಲಿ ಶ್ರಮಿಸುತ್ತಿರುವ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಮಂಗಲಾ ಮೆಟಗುಡ್ಡ ತಮ್ಮ ಸಾಹಿತ್ಯಕ್ಕೆ ಅಂದವಾಗಿ ಸಂಗೀತ ಸಂಯೋಜಿಸಿ ಸಾರ್ವಜನಿಕವಾಗಿ ಪ್ರದರ್ಶಿಸುವಲ್ಲಿ ಶ್ರಮಿಸಿದ ಮತ್ತು ಸಹಕರಿಸಿದವರನ್ನು ನೆನಪಿಸಿಕೊಂಡು ಭಾವುಕರಾದರು. ಈ ಕಾರ‍್ಯ ರಾಜ್ಯದಲ್ಲಿಯೇ ಹೊಸ ಮುನ್ನುಡಿಯನ್ನು ಬರೆಯಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು ಜಿಲ್ಲೆಯ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಿಕ ಮತ್ತು ಸಂಗೀತದ ಕ್ಷೇತ್ರಗಳಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು.
ಶ್ರೀಮತಿ ಆಶಾ ಕೋರೆ ಹಾಗೂ ಕೆ. ಎಲ್. ಇ. ನಿರ್ದೇಶಕರಾದ ಶ್ರೀ ಶ್ರೀಶೈಲ ಮೆಟಗುಡ್ಡ ಇವರು ಉಪಸ್ಥಿತರಿದ್ದರು.
ಮೊದಲಿಗೆ ಗಣೇಶ ಸ್ತುತಿಯನ್ನು ಶ್ರೀಮತಿ ವಿಜಯಲಕ್ಷ್ಮಿ ಹೊಸಮನಿ ಅವರು ಹಾಡಿದರು. ವೀರಭದ್ರ ಅಂಗಡಿ ಮತ್ತು ಶ್ರೀಮತಿ ಶೈಲಜಾ ಬಿಂಗೆ ಕಾರ‍್ಯಕ್ರಮ ನಿರ್ವಹಿಸಿದರು. ಎಂ ವಾಯ್ ಮೆಣಸಿನಕಾಯಿ ವಂದಿಸಿದರು. ಭಾವ ಮಂಗಳ ಸಂಗೀತ ಬಳಗ ಬೈಲಹೊಂಗಲ ಹಾಗೂ ಸಂಗೀತ ಮಹಾವಿದ್ಯಾಲಯ ಬೆಳಗಾವಿಯ ಕಲಾವಿದರು ಅದ್ಭುತವಾಗಿ ಸಂಗೀತವನ್ನು ಹಾಡಿ ರಂಜಿಸಿದರು.
ಮಾಹಿತಿ: ವರದಿ:
ಆಕಾಶ್ ಅರವಿಂದ ಥಬಾಜ
ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ,
ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ,
ಬೆಳಗಾವಿ
9448634208
9035419700