ಸಿಂದಗಿ: ಸಾಹಿತ್ಯ ಎನ್ನುವುದು ಮನುಷ್ಯನ ಪ್ರತಿಯೊಂದು ಹಂತದಲ್ಲಿ ಮಾರ್ಗದರ್ಶನ ಮಾಡುತ್ತದೆ. ಆದ್ದರಿಂದ ಸಾಹಿತ್ಯದ ಪುಸ್ತಕಗಳನ್ನು ಓದುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ಎಂದು ಸಾಹಿತಿಗಳಾದ ಡಾ. ಸಿ.ಕೆ. ಕಟ್ಟಿ ಹೇಳಿದರು.
ಪಟ್ಟಣದ ಪಿ.ಇ.ಎಸ್. ಸಂಸ್ಥೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಕೊಡಮಾಡುವ ಪುಸ್ತಕ ಬಹುಮಾನ ಪ್ರಶಸ್ತಿಗೆ ಅಮೋಘಸಿದ್ಧ ಜಾನಪದ ಮಹಾಕಾವ್ಯ ಆಯ್ಕೆಯಾಗಿದ್ದರ ಪ್ರಯುಕ್ತ ಹಮ್ಮಿಕೊಂಡಿರುವ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕೆ.ಪಿ.ಟಿ.ಸಿ.ಎಲ್. ನಿರ್ದೇಶಕ ಮಹೇಶ ಭೀ. ಕರ್ಜಗಿಯವರು ಮಾತನಾಡಿ, ನಮ್ಮ ನಾಡಿನಲ್ಲಿ ಸಾಹಿತ್ಯಕ್ಕೆ ಬರವಿಲ್ಲ, ಸಾಹಿತಿಗಳಿಗೆ ಬರವಿಲ್ಲ. ಆದರೆ ಸಾಹಿತ್ಯವನ್ನು ಪ್ರೀತಿಸುವವರು, ಸಾಹಿತ್ಯಾಭಿಮಾನಿಗಳು ಕಡಿಮೆಯಾಗಿದ್ದಾರೆ ಎಂದು ಹೇಳಿ, ಡಾ. ಸಿ.ಕೆ. ಕಟ್ಟಿಯವರು ನನ್ನ ವಿದ್ಯಾಗುರುಗಳು. ಅವರ ಸಾಹಿತ್ಯ ಕೃಷಿಯನ್ನು ಗುರ್ತಿಸಿ ಅವರಿಗೆ ಪ್ರಶಸ್ತಿ ನೀಡಿರುವುದು ಸಂತೋಷ ಮತ್ತು ಶ್ಲಾಘನೀಯ ಎಂದರು.
ಹಿರಿಯ ಸಾಹಿತಿ ಡಾ. ಎಂ.ಎಂ. ಪಡಶೆಟ್ಟಿ ಮಾತನಾಡಿ, ಮುಳುಗಿ ಹೋಗುತ್ತಿರುವ ಅಮೋಘಸಿದ್ಧ ಪರಂಪರೆ ದಾಖಲೆ ಮಾಡುವ ಕರ್ಮಸಾಹಸವನ್ನು ನನ್ನ ಸನ್ಮಿತ್ರನಾದ ಡಾ. ಸಿ.ಕೆ. ಕಟ್ಟಿಯವರು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಸಂತೋಷಕುಮಾರ ಭೀ. ಕರ್ಜಗಿ ಮಾತನಾಡಿ, ಸಾಹಿತ್ಯ ಕೃತಿಯ ಮೂಲಕ ಆಧ್ಯಾತ್ಮಿಕ ಶಕ್ತಿಯನ್ನು ಎತ್ತಿ ತೋರಿಸುವ ಮಹಾತ್ಕಾರ್ಯ ಗುರುಗಳಾದ ಡಾ. ಸಿ.ಕೆ. ಕಟ್ಟಿಯವರು ಮಾಡಿದ್ದಾರೆ ಎಂದರು.
ಸಿಂದಗಿ ತಾಲ್ಲೂಕಾ ಲಯನ್ಸ್ ಕ್ಲಬ್‍ನ ಅಧ್ಯಕ್ಷ ಕೆ.ಎಚ್. ಸೋಮಾಪೂರ, ಸಂಸ್ಥೆಯ ಆಡಳಿತಾಧಿಕಾರಿ ಆಯ್.ಬಿ. ಬಿರಾದಾರ, ಅಭಿಯಂತರ ವಿಜಯಕುಮಾರ ಭೀ. ಕರ್ಜಗಿ ಹಾಗೂ ಪ್ರಾಚಾರ್ಯ ಆರ್.ಬಿ. ಗೋಡಕರ ಉಪಸ್ಥಿತರಿದ್ದರು.
ಎಸ್.ಪಿ.ಬಿ.ಕೆ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಗುರು ಎಸ್. ಕಡಣಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಪರಮಾನಂದ ಎಸ್. ಬಿರಾದಾರ ನಿರೂಪಿಸಿ, ವಂದಿಸಿದರು.