ಒಬ್ಬ ಮನೋಶಾಸ್ತ್ರದ ವಿದ್ಯಾರ್ಥಿ ಆಸ್ಪತ್ರೆಗೆ ಬಂದ. ಅಲ್ಲಿದ್ದ ವೈದ್ಯರು ಇಡೀ ಆಸ್ಪತ್ರೆಯನ್ನು ನೋಡಲು ಕರೆದೊಯ್ದರು. ಒಂದು ಬದಿಯಲ್ಲಿ ಒಬ್ಬ ರೋಗಿ ಒಂದು ಕುರ್ಚಿಯಲ್ಲಿ ಕುಳಿತು ಅದನ್ನು ಹಿಂದೆ ಮುಂದೆ ತೂಗುತ್ತ ‘ಆಶಾ, ಆಶಾ, ಆಶಾ’ ಎಂದು ಗೊಣುಗುತ್ತಿರುವುದನ್ನು ಕೇಳಿಸಿಕೊಂಡ.
‘ಈ ವ್ಯಕ್ತಿಯನ್ನು ಇಲ್ಲೇಕೆ ತರಲಾಯಿತು?’ ಎಂದು ವಿದ್ಯಾರ್ಥಿ ವೈದ್ಯರನ್ನು ಕೇಳಿದ. ‘ಅದೊಂದು ದುಃಖದ ಸಂಗತಿ ಈ ಯುವಕ ಆಶಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು. ಆಕೆ ಕೈ ಕೊಟ್ಟಳು.’ ಎಂದು ವಿವರಿಸಿದರು. ಆಗ ವಿದ್ಯಾರ್ಥಿ ಪ್ರೀತಿಯು ವಿಫಲವಾದರೆ ಹುಚ್ಚರಾಗುತ್ತಾರೆಂದು ನಿರ್ಣಯಿಸಿದ. ಆಸ್ಪತ್ರೆಯ ಇನ್ನೊಂದು ಕೊಠಡಿಯಲ್ಲಿ ಇನ್ನೊಬ್ಬ ರೋಗಿ ಆಶಾ, ಆಶಾ ಎಂದು ಪದೇ ಪದೇ ಹೇಳುತ್ತ ತನ್ನ ತಲೆಯನ್ನು ಗೋಡೆಗೆ ಅಪ್ಪಳಿಸುವುದನ್ನು ನೋಡಿದ.
ಮನೋಶಾಸ್ತ್ರದ ವಿದ್ಯಾರ್ಥಿಗೆ ಆಘಾತವಾಯಿತು. ಅವನು, ’ಬಡಪಾಯಿ, ಈತ ಆಶಾಳ ಇನ್ನೊಬ್ಬ ಬಲಿಪಶು.ಆಕೆ ಬಹಳ ಸುಂದರವಾಗಿದ್ದು ಬಹಳಷ್ಟು ಜನರಿಗೆ ಮೋಸ ಮಾಡಿರಬಹುದು.’ ಎಂದ. ಆಗ ವೈದ್ಯರು ಹೀಗೆಂದರು: ”ಓಹ್, ನಿಮ್ಮದು ತಪ್ಪು ಅಭಿಪ್ರಾಯ ಅವನು ಆಶಾಳನ್ನು ಮದುವೆಯಾದ ವ್ಯಕ್ತಿ ಈ ಪುಟ್ಟ ಕಥೆಯಲ್ಲಿನ ವಿಶೇಷ ಸಂಗತಿಯನ್ನು ಯುವ ಸಮೂಹ ಗಮನಿಸಬೇಕು. ಹದಿಹರೆಯದಲ್ಲಿ ಯೌವ್ವನದಲ್ಲಿ ದೈಹಿಕ ಆಕರ್ಷಣೆಗೆ ಒಳಗಾಗಿ ಪ್ರೀತಿಸುವುದು ಸಹಜ.
ಆದರೆ ಪ್ರೀತಿಸಿದವರನ್ನು ಮದುವೆಯಾಗದಿದ್ದರೆ ಅದು ಬದುಕಿನ ಕೊನೆಯೆಂದು ಭಾವಿಸಿ ನೇಣಿಗೆ ಕೊರಳು ಕೊಡುವುದು ಶುದ್ಧ ತಪ್ಪು. ಪ್ರೀತಿ ಪ್ರೇಮದ ವಿಷಯಗಳಲ್ಲಿ ಬಿದ್ದು ತಮ್ಮನ್ನು ನೆಚ್ಚಿದ ಅವಲಂಬಿಸಿದ ಕುಟುಂಬವೊಂದಿದೆ ಎಂಬುದನ್ನು ಮರೆಯಬಾರದು. ಯೌವ್ವನದ ಪುಟಗಳಲ್ಲಿ ಬಂದವರನ್ನು ಮನಸ್ಸಿನಲ್ಲಿ ಮೆತ್ತಿಕೊಂಡು ಹಗಲಿರುಳು ನೆನೆಯುತ್ತ ಬದುಕನ್ನು ನೆನೆಗುದಿಗೆ ಹಾಕುವುದು ಉಚಿತವಲ್ಲ.
ಪ್ರೀತಿ ಪ್ರೇಮ ರಸಿಕತೆಗಿಂತ ಶ್ರೇಷ್ಠವಾದುದು ಬದುಕಿನಲ್ಲಿ ಸಾಕಷ್ಟಿದೆ ಸಾಧಿಸಬೇಕಾದುದು ಸಾಗರದಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಯಕಶ್ಚಿತ್ ಹುರುಳಿಲ್ಲದ ಕಾರಣಗಳಿಗಾಗಿ ಅಮೂಲ್ಯವಾದ ಬದುಕನ್ನು ಹತಾಶ ಮನೋಭಾವದಿಂದ ಕಳೆದುಕೊಳ್ಳಬಾರದು.
ಜೀವನವೆನ್ನುವುದು ಮೂರು ಗಂಟೆ ಸಿನಿಮಾ ಅಲ್ಲ. ಕತ್ತಲೆಯಲ್ಲಿ ಕಣ್ಣು ಬಿಟ್ಟು ನೋಡುವ ರೀಲು ಅಲ್ಲ ರಿಯಲ್ಲು. ಆಸೆ, ಕನಸು ಬಯಕೆಗಳಾಚೆಗೂ ಒಂದು ಬದುಕಿದೆ. ಅದು ವಾಸ್ತವದ ಬದುಕು. ಅಲ್ಲಿ ಒಮ್ಮೆಲೇ ಹಾರುವುದಕ್ಕೆ ಅವಕಾಶವಿಲ್ಲ. ಮೆಟ್ಟಿಲುಗಳನ್ನು ಹತ್ತಿಯೇ ಯಶೋಶಿಖರದ ನೆತ್ತಿಯ ಮೇಲೆ ನಿಲ್ಲಬೇಕು. ಹಿಂದೆ ಮುಂದೆ ತಿಳಿಯದೇ ಕಣ್ಣು ಮುಚ್ಚಿ ನಂಬಿದವರನ್ನು ಮೆಚ್ಚುವುದೇ ಪ್ರೀತಿ. ಏನೆಲ್ಲವೂ ಇರುವಾಗ ಪ್ರೀತಿ ಮರೆತು ಬದುಕಿಬಿಡಬಹುದೆಂದು ಅನಿಸುತ್ತದೆ.
ಆದರೆ ಜೀವನದ ಜೀವಸತ್ವ ಇರುವುದೇ ನಿಜವಾದ ಪ್ರೀತಿಯಲ್ಲಿ ಎಂಬುದು ಸತ್ಯವಾದರೂ ಪ್ರೀತಿಯೆನ್ನುವುದು ಕೇವಲ ಗಂಡು ಹೆಣ್ಣಿನ ನಡುವಿನ ಸರಸ ಸಲ್ಲಾಪವಲ್ಲ. ವಿಶಾಲ ಅರ್ಥದಲ್ಲಿ ಬದುಕಿನ ಉಸಿರು ಇದ್ದಂತೆ. ಅಪ್ಪ ಅವ್ವ ಅಕ್ಕ ತಂಗಿ ಅಣ್ಣ ತಮ್ಮಂದಿರ ಗೆಳೆಯರ ಆತ್ಮೀಯರ ಅಕ್ಕರೆಯಿಲ್ಲದಿದ್ದರೆ ಜೀವನದಲ್ಲಿ ಎಲ್ಲವೂ ಇದ್ದು ಏನೂ ಇಲ್ಲದಂತೆ ಭಾಸವಾಗುತ್ತದೆ.
ಆಕರ್ಷಣೆಗೊಳಗಾದ ಪ್ರೀತಿ ಹೊಟ್ಟೆ ತುಂಬಿಸುವುದಿಲ್ಲ. ಪ್ರೀತಿಯಿಂದ ಬೇಕಾದ್ದನ್ನು ಖರೀದಿಸಲಾಗುವುದಿಲ್ಲ. ಸಂತೋಷ ಬೇಕು ನಿಜ. ನಾವು ನಮಗಾಗಿ ಇರುವುದಕ್ಕಿಂತ ನಾವು ಬೇರೆಯ ಉದ್ದೇಶಕ್ಕೆ ಬದುಕಿದ್ದೇವೆಂಬ ಭಾವನೆ ಬೇಕು.. ಗುರಿಯನ್ನು ಗುರುತಿಸುವಲ್ಲಿ ಗಂಭೀರವಾದರೆ, ದುಡಿಯುವ ದಾರಿ ಕಂಡುಕೊಂಡರೆ ಅಂದುಕೊಂಡದ್ದಕ್ಕಿಂತ ಚೆನ್ನಾಗಿ ಬಾಳಬಹದು. ಹುಲುಸಾಗಿ ಬೆಳೆಯಬಹುದೆಂಬುದು ಸೂರ್ಯನಷ್ಟೇ ಸ್ಪಷ್ಟ. ಬೌದ್ಧ ಭಿಕ್ಷುಗಳು ಹೇಳಿದಂತೆ, ‘ಗುರಿಗೆ ತಾಕುವ ಪ್ರತಿಯೊಂದು ಬಾಣವು ಒಂದು ನೂರು ತಪ್ಪಿದ ಗುರಿಗಳ ಪ್ರತಿಫಲವಾಗಿದೆ.’
ಸಾಧಿಸಬೇಕೆನ್ನುವ ಅಚಲ ಸಂಕಲ್ಪ ಜೀವನದಲ್ಲಿ ಹೊಸ ಆನಂದದ ಭಾವವನ್ನು ತರಬಲ್ಲದು. ಅತ್ಯುತ್ತಮವಾದುದನ್ನು ಸ್ವೀಕರಿಸಲು ಮುಂದಾಗಬೇಕು. ಅತ್ಯುತ್ತಮವಾದುದನ್ನು ಪಡೆಯಲು ಪ್ರತಿಯೊಂದು ನಿಮಿಷವೂ ಕೂಡ ಹಾಜರಿರಬೇಕು. ಗುರಿಯುಳ್ಳವರಾಗಿರಬೇಕು. ಅಲ್ಬರ್ಟ್ ಕಾಮು ಹೇಳಿದಂತೆ ‘ಭವಿಷ್ಯದ ಕುರಿತ ನೈಜ ಉದಾರತೆಯು ವರ್ತಮಾನದಲ್ಲಿರುವ ಎಲ್ಲವನ್ನೂ ನೀಡುವುದರಲ್ಲಿದೆ.’
ಇದು ಬರಿಯ ಹೇಳಿಕೆಯಲ್ಲ. ಬದುಕು ಕಟ್ಟುವ ಹೇಳಿಕೆ ಅದ್ಭುತವಾದ ಉದ್ಧರಣ. ಥಳಕು ಬಳುಕಿನ ಮರೀಚಿಕೆಯನ್ನು ಬೆನ್ನು ಹತ್ತಿದರೆ ನಲುಗಿ ಪಾತಾಳ ಸೇರಬೇಕಾಗುತ್ತದೆ. ಅನುದಿನವೂ ಮಾಡುವ ಕಾಯಕದಲ್ಲಿ ಒಂದು ಜಾದೂ ಇದೆ. ಶ್ರೇಷ್ಠತೆಯತ್ತ ಸಾಗುವ ಮಂತ್ರವೂ ಇದೆ. ಅಷ್ಟೇ ಅಲ್ಲ ಬದುಕಿನ ಹೆಜ್ಜೆಗಳಾಗಿ ಮುಂದೆ ಸಾಗಿಸುವುದು ಅದೆ. ಬೇಡವಾದ ವಯಸ್ಸಿನಲ್ಲಿ ಪ್ರೀತಿ ಲಹರಿಯೆಂಬ ಹುಚ್ಚಿಗೆ ಎಳೆಯದಿದ್ದರೆ ಗುರಿಯ ಹಿಂದೆ ಬೆನ್ನು ಬಿದ್ದರೆ ಅಪ್ಯಾಯಮಾನವಾದ ಬದುಕು ಅಪ್ಪಿಕೊಳ್ಳುತ್ತದೆ.
ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ 9449234142